spot_img
Wednesday, January 22, 2025
spot_img

ದೇವೇಗೌಡರು ಜಾತ್ಯತೀತ ಎಂದು ಪಕ್ಷದ ಹೆಸರಿಟ್ಟುಕೊಂಡು ಈಗ ಕೋಮುವಾದಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ : ಸಿಎಂ ಸಿದ್ದರಾಮಯ್ಯ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಪಿರಿಯಾಪಟ್ಟಣದ ಜನ, ಜಾನವಾರು, ಕೃಷಿಯ ಅನುಕೂಲಕ್ಕಾಗಿ ಮತ್ತು ಇಲ್ಲಿನ ಅಂತರ್ಜಲ ಹೆಚ್ಚಳಕ್ಕೆ ನಾನೇ ಶಂಕುಸ್ಥಾಪನೆ ಮಾಡಿ ನಾನೇ ಈಗ ಈ ಯೋಜನೆಯನ್ನು ಉದ್ಘಾಟಿಸಿದ್ದೇನೆ. 79 ಹಳ್ಳಿ 93 ಸಾವಿರ ಜನರಿಗೆ ಇದರಿಂದ ಲಾಭ ಆಗುತ್ತಿದೆ. ಇದು ನಮ್ಮ ಸರ್ಕಾರ ಪಿರಿಯಾಪಟ್ಟಣದಲ್ಲಿ ನಿರ್ವಹಿಸಿದ ಜವಾಬ್ದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅವರು ಪಿರಿಯಾಪಟ್ಟಣ ತಾಲ್ಲೂಕಿನ 79 ಗ್ರಾಮಗಳ 150 ಕೆರೆ – ಕಟ್ಟೆಗಳಿಗೆ ಕಾವೇರಿ ನದಿಯ ನೀರು ತುಂಬಿಸುವ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಸರ್ಕಾರದ ಒಂದು ಯೋಜನೆ ಕೋಲಾರ, ಚಿಕ್ಕಬಳ್ಳಾಪುರದ ಕೆರೆಗಳಿಗೆ ಮರು ಹುಟ್ಟು ನೀಡಿದೆ. ಇದೇ ರೀತಿ ಪಿರಿಯಾಪಟ್ಟಣದ ಕೆರೆಗಳಿಗೆ ಮರು ಜೀವ ನೀಡಿ ಇಲ್ಲಿನ ಅಂತರ್ಜಲ ವೃದ್ಧಿಗೆ ಈ ಯೋಜನೆ ಜೀವದಾನವಾಗಲಿದೆ. ನುಡಿದಂತೆ ನಡೆಯೋದು, ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ನಮ್ಮ ಸರ್ಕಾರದ ಸಂಸ್ಕಾರ. ಬಿಜೆಪಿ ಕೊಟ್ಟ ಮಾತುಗಳಲ್ಲಿ ಯಾವುದನ್ನೂ ಈಡೇರಿಸಿಲ್ಲ. ರಾಜ್ಯದಲ್ಲಿ ತೀವ್ರ ಬರಗಾಲ ಇದ್ದರೂ ಜನ ಜಾನವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಆಗದಂತೆ, ಜನರು ಗುಳೆ ಹೋಗದಂತೆ ತಡೆದಿದ್ದೇವೆ. ಇದು ನಮ್ಮ ಸಾಧನೆ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ ನಿಂದ ಇವತ್ತಿನವರೆಗೂ ನಾವು ರಾಜ್ಯದ ಪಾಲಿನ ಬರ ಪರಿಹಾರದ ಹಣವನ್ನು ಕೊಡಿ ಎಂದು ಪತ್ರ ಬರೆಯುತ್ತಿದ್ದೇವೆ. ನಾವೇ ಖುದ್ದಾಗಿ ಹೋಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು ಭೇಟಿ ಮಾಡಿದರೂ ಕೇಂದ್ರ ಸರ್ಕಾರ ಒಂದೇ ಒಂದು ರೂಪಾಯಿಯನ್ನು ರಾಜ್ಯಕ್ಕೆ ನೀಡಿಲ್ಲ.  ರಾಜ್ಯದ ಜನ ಪ್ರತಾಪ್ ಸಿಂಹ ಸೇರಿ 25 ಮಂದಿ ಎಂಪಿಗಳನ್ನು ಗೆಲ್ಲಿಸಿದರು. ಒಬ್ಬೇ ಒಬ್ಬ ಬಿಜೆಪಿ ಸಂಸದರು ರಾಜ್ಯಕ್ಕೆ ಒಂದೇ ಒಂದು ರೂಪಾಯಿ ಬರ ಪರಿಹಾರ ತರಲಿಲ್ಲ, “ಮಿಸ್ಟರ್ ಪ್ರತಾಪ್ ಸಿಂಹ ಏಕೆ ಒಂದೇ ಒಂದು ರೂಪಾಯಿ ತರಲಿಲ್ಲ. ಇಷ್ಟು ಎಂಪಿಗಳಿದ್ದು ನಾಚಿಕೆ ಆಗುವುದಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ದೇವೇಗೌಡರು ಈಗ ಪ್ರದಾನಿ ಮೋದಿ ಮತ್ತು ಬಿಜೆಪಿ ಜತೆ ತಮ್ಮ ಅಸ್ತಿತ್ವಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಪ್ರಧಾನಿಗಳಿಗೆ ಹೇಳಿ ರಾಜ್ಯಕ್ಕೆ ಬರಬೇಕಾದ ರಾಜ್ಯದ ಪಾಲಿನ ಬರ ಪರಿಹಾರವನ್ನು ದೊರಕಿಸಿ ಕೊಡಲಿ. ಜಾತ್ಯತೀತ ಎಂದು ಪಕ್ಷದ ಹೆಸರಿಟ್ಟುಕೊಂಡು ಈಗ ಕೋಮುವಾದಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.  

ರಾಜ್ಯದ ಒಂದು ಕೋಟಿ 30 ಲಕ್ಷ ಕುಟುಂಬಗಳ ನಾಲ್ಕೂವರೆ ಕೋಟಿ ಜನರಿಗೆ ಪ್ರತೀ ತಿಂಗಳು 4 ರಿಂದ 6 ಸಾವಿರ ರೂಪಾಯಿ ಕೈ ಸೇರುವ ರೀತಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ರೂಪಿಸಿದ್ದೇವೆ. ಇಲ್ಲಿಯವರೆಗೂ 139 ಕೋಟಿ ಮಹಿಳೆಯರು ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಹಣ ಮನೆಯ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು ಜಮೆ ಆಗುತ್ತಿದೆ. ನಾವು ನುಡಿದಂತೆ ನಡೆಯುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೀವಿ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಅದರಲ್ಲಿ ವಿಫಲರಾದರು. ಹತ್ತು ವರ್ಷದಲ್ಲಿ 20 ಕೋಟಿ ಉದ್ಯೋಗ ಕೊಡಬೇಕಿತ್ತು‌. ಆಗಲಿಲ್ಲ, ಈ ವೈಫಲ್ಯ ಮುಚ್ಚಿಕೊಳ್ಳಲು ಶ್ರೀರಾಮನನ್ನು ಮುಂದಿಡುತ್ತಿದ್ದಾರೆ. ಮಹಾತ್ಮಗಾಂಧಿ ಹೇಳಿದ ರಘು ಪತಿ ರಾಘವ ರಾಜಾರಾಮನನ್ನು ನಾವು ಪೂಜಿಸುತ್ತೇವೆ, ನಾವೂ ರಾಮನನ್ನು ಭಜಿಸುತ್ತೇವೆ‌. ಜನದ್ರೋಹವನ್ನು ಬಚ್ಚಿಟ್ಟುಕೊಳ್ಳಲು ಶ್ರೀರಾಮನನ್ನು ಮುಂದಿಟ್ಟು ರಾಜಕೀಯ ಮಾಡುತ್ತಿರುವ ಬಿಜೆಪಿಯನ್ನು ಕ್ಷಮಿಸಬೇಡಿ, ಬೆಂಬಲಿಸಬೇಡಿ ಎಂದು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!