spot_img
Wednesday, January 22, 2025
spot_img

ಬಿಲ್ಲವ ಸಮಾಜದ ಉಪ ಪಂಗಡಗಳು ಐಕ್ಯತೆಯಿಂದ ಒಂದಾದರೆ ಅಭಿವೃದ್ದಿ ಸುಲಭಸಾಧ್ಯ-ರವಿಕುಮಾರ್ ಎಚ್.ಆರ್

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘ: 31ನೇ ವರ್ಷದ ವಿದ್ಯಾರ್ಥಿವೇತನ ವಿತರಣೆ ಮತ್ತು ವಿಶೇಷ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ


ಕುಂದಾಪುರ, ನ.26: (ಜನಪ್ರತಿನಿಧಿ ವಾರ್ತೆ) ಶಿಕ್ಷಣಕ್ಕೆ ಬ್ರಹ್ಮಶ್ರೀ ನಾರಾಯಣಗುರುಗಳ ಪ್ರೇರಣೆ ಅಗಾಧವಾದುದು. ನಾರಾಯಣ ಗುರುಗಳಿಂದ ಕೇರಳದಲ್ಲಿ ಆದ ಶಿಕ್ಷಣ ಕ್ರಾಂತಿಯಿಂದ ಇಂದಿಗೂ ಕೂಡಾ ಕೇರಳ ರಾಜ್ಯ ಶಿಕ್ಷಣದಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಅವರು ಸಂಚಾರ ಮಾಡಿದ ಕರ್ನಾಟಕದ ಕರಾವಳಿ ಭಾಗದಲ್ಲಿಯೂ ಶೈಕ್ಷಣಿಕವಾಗಿ ಸದೃಢತೆ ಕಾಣುತ್ತೇವೆ. ಗುರುಗಳ ತತ್ವ ಸಿದ್ಧಾಂತವನ್ನು ಪಾಲಿಸಿಕೊಂಡು ಸಮಾಜ ಐಕ್ಯತೆಯಿಂದ ಸಮಗ್ರ ಅಭಿವೃದ್ಧಿಯ ಕಡೆಗೆ ಹೆಜ್ಜೆ ಇಡಬೇಕಾಗಿದೆ ಎಂದು ಶ್ರೀ ಕ್ಷೇತ್ರ ಸಿಗಂದೂರು ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದ ಕಾರ್ಯದರ್ಶಿಗಳಾದ ರವಿಕುಮಾರ್ ಎಚ್.ಆರ್ ಹೇಳಿದರು.

ಅವರು ನ.26ರಂದು ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ, ಶ್ರೀ ನಾರಾಯಣ ಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆ ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರದ ಶ್ರೀ ನಾರಾಯಣ ಗುರು ಹವಾನಿಯಂತ್ರಿತ ಸಭಾಭವನದಲ್ಲಿ ನಡೆದ 31ನೇ ವರ್ಷದ ವಿದ್ಯಾರ್ಥಿವೇತನ ವಿತರಣೆ ಮತ್ತು ವಿಶೇಷ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಿಲ್ಲವ ಸಮಾಜ 26 ಉಪ ಪಂಗಡಗಳನ್ನು ಹೊಂದಿದ್ದು ಹರಿದು ಹಂಚಿಹೋಗಿದೆ. ಈ ಎಲ್ಲ ಉಪಪಂಗಡಗಳು ಒಂದಾದರೆ ರಾಜ್ಯದಲ್ಲಿ ಬಲಿಷ್ಠವಾಗಿ ಬೆಳೆಯಲು ಸಾಧ್ಯವಿದೆ. ರಾಜಕೀಯವಾಗಿ ಸಮಾಜದ ಪ್ರಾಬಲ್ಯತೆ ಕಾಣಬೇಕು. ವೈಷಮ್ಯಗಳ ಮರೆತು ಸಮಾಜದ ಪರವಾಗಿ ನಿಲ್ಲಬೇಕು. ಯಾವುದೇ ಅಧಿಕಾರ, ಹುದ್ದೆಗಳು ಬಂದರೂ ಕೂಡಾ ಸಮಾಜದ ಬಗ್ಗೆ ಕಳಕಳಿಯನ್ನು ಮರೆಯಬಾರದು. ಸಮಾಜದ ವಿದ್ಯಾರ್ಥಿಗಳು ಐ‌ಎ‌ಎಸ್, ಕೆ‌ಎ‌ಎಸ್ ನಂತಹ ಉನ್ನತ ವ್ಯಾಸಂಗದ ಗುರಿ ಹೊಂದಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಮಾತನಾಡಿ, ಬಿಲ್ಲವ ಸಮಾಜದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಕಳೆದ 31 ವರ್ಷಗಳಿಂದ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಈ ವರ್ಷ 214 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ನಮ್ಮ ಹಿರಿಯರು ಎರಡು ಕಲ್ಯಾಣ ಮಂಟಪಗಳನ್ನು ನಿರ್ಮಿಸಿದ್ದಾರೆ. ಇದರಿಂದ ಬರುವ ಆದಾಯದ ಉಳಿಕೆಯನ್ನು ವಿದ್ಯಾರ್ಥಿವೇತನಕ್ಕೆ ಬಳಸಲಾಗುತ್ತಿದೆ. ಸಮಾಜಕ್ಕೆ ಕಷ್ಟಬಂದಾಗ ಸಮಾಜದ ಪರ ರಾಜಕಾರಣವನ್ನು ಮರೆತು ನಿಲ್ಲುವ ನಾಯಕತ್ವ ನಮಗೆ ಬೇಕಾಗುತ್ತದೆ. ಶೈಕ್ಷಣಿಕ, ಆರ್ಥಿಕವಾಗಿ ಸಮಾಜವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ನಾವು ಯೋಚನೆ ಮಾಡಬೇಕಾಗುತ್ತದೆ. ನಮ್ಮ ವಿದ್ಯಾರ್ಥಿಗಳು ಸರಕಾರದ ಉನ್ನತ ಹುದ್ದೆಗಳನ್ನು ಪಡೆಯಬೇಕು. ಸಮಾಜದ ಬಗ್ಗೆಯೂ ಕಾಳಜಿಯನ್ನು ವಹಿಸಬೇಕಾಗುತ್ತದೆ ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಪ್ರೇಮಾನಂದ, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ರಾಮ ಪೂಜಾರಿ ಮುಲ್ಲಿಮನೆ, ಶಿವರಾಮ ಪೂಜಾರಿ ಬಸ್ರೂರು, ಶ್ರೀ ನಾರಾಯಣ ಗುರು ಮಹಿಳಾ ಕೋ-ಆಪರೇಟಿವ್ ಸೊಸೈಟಿ ನಿ., ಕುಂದಾಪುರ ಇದರ ಅಧ್ಯಕ್ಷೆ ಗುಣರತ್ನ ರಾಮ ಪೂಜಾರಿ, ಶ್ರೀ ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಯೋಗೀಶ್ ಪೂಜಾರಿ ಕೋಡಿ, ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಸುಮನಾ ಬಿದ್ಕಲ್‌ಕಟ್ಟೆ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ, ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ, ಪೊಲೀಸ್ ಇಲಾಖೆಯಲ್ಲಿ ವಿವಿಧ ಪದಕಗಳನ್ನು ಪಡೆದ ಶಂಕರ ಪೂಜಾರಿ ಕಾಡಿನತಾರು, ದೇಹದಾರ್ಡ್ಯ ಪಟು ಸುರೇಶ ಬಿ.ಪಾಂಡೇಶ್ವರ, ಪಿ‌ಎಚ್‌ಡಿ ಪದವಿಧರರಾದ ಡಾ.ಸೌಮ್ಯ ಕುಮಾರಿ ಉಪ್ಲಾಡಿ, ಡಾ.ಸಚಿನ್ ಉಪ್ಲಾಡಿ,ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಚೆನ್ನಯ್ಯ ಪೂಜಾರಿ ಬೈಂದೂರು, ನ್ಯಾಯವಾದಿ ನಯನ ಅಸೋಡು, ಸಮಾಜಸೇವಕ ರಾಜು ಪೂಜಾರಿ ಜಡ್ಕಲ್, ಮಹಿಳಾ ಪ್ರಸಂಗಕರ್ತೆ ಶಾಂತಾ ವಾಸುದೇವ ಪೂಜಾರಿ ಅನಗಳ್ಳಿ ಅವರನ್ನು ಸನ್ಮಾನಿಸಲಾಯಿತು.

ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ದೀಕ್ಷಾ, ಛಾಯಾ ಸಿ ಪೂಜಾರಿ, ಅಮೂಲ್ಯ ಹಟ್ಟಿಯಂಗಡಿ, ಅಮೂಲ್ಯ ಮಾವಿನಕೊಂಬೆ, ಶ್ರಾವ್ಯ ಕಂಡ್ಲೂರು, ನಿರೀಕ್ಷಾ, ಧನ್ಯ ಮಾವಿನಕೊಂಬೆ, ಚಂದ್ರ ಎಸ್.ಕೆ ಸಿದ್ಧಾಪುರ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ ಪೂಜಾರಿ ವಿಠಲವಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘ ಅಮೃತಮಹೋತ್ಸವದ ಸನ್ನಹದಲ್ಲಿದೆ. 1949ರ ಮೇ 29೯ರಂದು ಸ್ಥಾಪನೆಯಾದ ಈ ಸಂಘ ಅಂದಿನ ಅಧ್ಯಕ್ಷರಾಗಿದ್ದ ದಿ.ಹೇರಿಕುದ್ರು ಮಂಜ ಪೂಜಾರಿ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ನಿವೇಶನ ಖರೀದಿಸಿ ಸಂಘಕ್ಕೆ ಸಮರ್ಪಿಸಿತು. ಬಳಿಕ ನಾರಾಯಣ ಗುರು ಕಲ್ಯಾಣ ಮಂಟಪ, ಸಿದ್ಧಿವಿನಾಯಕ ದೇವಸ್ಥಾನ, ಹವಾನಿಯಂತ್ರಿತ ಸಭಾಭವನ ನಿರ್ಮಾಣವಾಯಿತು. ಪ್ರಸ್ತುತ ಅಧ್ಯಕ್ಷರಾಗಿರುವ ಅಶೋಕ್ ಪೂಜಾರಿ ಬೀಜಾಡಿಯ ದೂರದೃಷ್ಟಿಯಂತೆ ನಾರಾಯಣ ಗುರು ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡುವ ಗುರಿ ಹೊಂದಿದ್ದೇವೆ. ಹೆಮ್ಮಾಡಿಯಲ್ಲಿ 2 ಎಕ್ರೆ ನಿವೇಶನವನ್ನು ಸಂಘ ಹೊಂದಿದ್ದು ಅಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪನೆ ಯೋಜನೆ ಹೊಂದಿದ್ದೇವೆ ಎಂದರು.

ಮಹಿಳಾ ಘಟಕದ ಕಾರ್ಯದರ್ಶಿ ಗುಲಾಬಿ ಜಯಸೂರ್ಯ ಪೂಜಾರಿ ಪ್ರಾರ್ಥನೆ ನೆರವೇರಿಸಿದರು. ಸತೀಶ ಕಾರ್ಯಕ್ರಮ ನಿರ್ವಹಿಸಿದರು.

ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಕಾರ್ಯಕ್ರಮ ಆರಂಭಕ್ಕೆ ಪೂರ್ವದಲ್ಲಿ ಆಗಮಿಸಿ ಶುಭಕೋರಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!