Sunday, September 8, 2024

ನ.11: ಬೆಂಗಳೂರಿನಲ್ಲಿ ‘ಮಂದರ್ತಿ ಕ್ಷೇತ್ರ ಮಹಾತ್ಮೆ’ ಅದ್ದೂರಿಯ ಯಕ್ಷಗಾನ ಪ್ರದರ್ಶನ

ಬೆಂಗಳೂರು: ಪ್ರಥಮ ಬಾರಿಗೆ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನ.11 ಶನಿವಾರ ರಾತ್ರಿ 9.30ಕ್ಕೆ ಮಂದರ್ತಿ ಮೇಳದ ಆಯ್ದ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ಮಂದರ್ತಿ ಕ್ಷೇತ್ರ ಮಹಾತ್ಮೆಯ ಅದ್ದೂರಿಯ ಪ್ರದರ್ಶನ ನಡೆಯಲಿದೆ.
ಮಂದರ್ತಿ ಕ್ಷೇತ್ರ ಮಹಾತ್ಮೆ ನವರಸಭರಿತ ಭಕ್ತಿಪ್ರಧಾನ ಆಖ್ಯಾನ. ನಿತ್ಯನೂತನವಾಗಿರುವ ಕಥಾನಕ ಇದು.

ರಾಜಧಾನಿಯಲ್ಲಿ ಮಂದರ್ತಿಯ ಭಕ್ತರು ಹಾಗೂ ಯಕ್ಷಗಾನ ಅಭಿಮಾನಿಗಳಿಗೆ ಮಂದರ್ತಿಮೇಳದ ಪ್ರಸಿದ್ಧ ಕಲಾವಿದರ ಮೂಲಕ ಮಂದರ್ತಿಯ ಪುಣ್ಯ ಚರಿತೆಯನ್ನು ಆಡಿ ತೋರಿಸುವ ಹೊಸ ಸಾಹಸಕ್ಕೆ ಯಕ್ಷಪ್ರೇಮಿ ಜಯರಾಮ ಶೆಟ್ಟಿ ಹೊಸೂರು ಮುಂದಾಗಿದ್ದಾರೆ.

ಮಂದರ್ತಿ ಕ್ಷೇತ್ರ ಮಹಾತ್ಮೆಯನ್ನು ಅತ್ಯಂತ ಪರಿಣಾಮಕಾರಿಯಾಗಿ, ಅಷ್ಟೇ ಪ್ರಬುದ್ಧವಾಗಿ ಪ್ರೇಕ್ಷಕರ ಮುಂದಿಡುವ ಪ್ರಯತ್ನ ಇದಾಗಿದೆ. ಈಗಾಗಲೇ ರಾಜಧಾನಿಯಲ್ಲಿ ಮಂದರ್ತಿ ಕ್ಷೇತ್ರ ಮಹಾತ್ಮೆಯ ಕ್ಷಣಗಣನೆ ಆರಂಭವಾಗಿದೆ.

ಕಾರ್ಯಕ್ರಮ ಸಂಘಟಕರಾಗಿರುವ ಯಕ್ಷಪ್ರೇಮಿ ಜಯರಾಮ ಶೆಟ್ಟರು ಈಗಾಗಲೇ ಯಕ್ಷಪ್ರೇಮಿಗಳ ಪರಿಚಿತರು. ಮಾರಣಕಟ್ಟೆ ಸಮೀಪದ ಮೇಲ್ ಹೊಸೂರು ಎನ್ನುವ ಅಪ್ಪಟ ಯಕ್ಷಗಾನ ಆಡಂಬೊಲದವರು. ಬಯಲಾಟ ಮೇಳಗಳ ಆಟ ಕಾಣುತ್ತಾ ಬೆಳೆದ ಬಾಲಕ ಮುಂದೆ ಕಲಾವಿದರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಬಯಲಾಟ ಮೇಳಗಳ ಪ್ರತಿಭಾನ್ವಿತ ಕಲಾವಿದರನ್ನು ಸನ್ಮಾನಿಸುವ ಮೂಲಕ ಸುಪ್ತ ಪ್ರತಿಭೆಗಳನ್ನು ಸಮಾಜಕ್ಕೆ ಪರಿಚಯಿಸುತ್ತಾ ಬಂದರು. 2022ರಿಂದ ಆರಂಭವಾದ ಬಯಲಾಟ ಮೇಳದ ಹಿಮ್ಮೇಳ-ಮುಮ್ಮೇಳ-ನೇಪಥ್ಯ ಕಲಾವಿದರನ್ನು ಸನ್ಮಾನಿಸುವ ಅಭಿಯಾನ ಈಗಲೂ ಮುಂದುವರಿಯುತ್ತಿದೆ. ಸುಮಾರು 57 ಪ್ರತಿಭಾನ್ವಿತ ಕಲಾವಿದರನ್ನು ಇವರ ನೇತೃತ್ವ, ಸಾರಥ್ಯದಲ್ಲಿ ಸನ್ಮಾನಿಸಲಾಗಿದೆ. ನ.11ರ ಯಕ್ಷಗಾನದಲ್ಲಿಯೂ ಈ ಸನ್ಮಾನ ಕಾರ್ಯಕ್ರಮ ಮುಂದುವರಿಯಲಿದೆ.

ರಸ್ತೆ ಅಪಘಾತದಿಂದ ಒಂದೆರಡು ವರ್ಷ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರೂ ಕೂಡಾ ಕಲಾವಿದರ ಬಗ್ಗೆ ಅಭಿಮಾನ ಕುಗ್ಗಲಿಲ್ಲ. ಆ ಸಮಯದಲ್ಲಿ ಮನೆಯಿಂದಲೇ ತನ್ನ ಸ್ನೇಹಿತ ವರ್ಗದ ಮೂಲಕ ಕಲಾವಿದರನ್ನು ಗುರುತಿಸುವ ನಿರ್ದೇಶನ ಸಲಹೆ ನೀಡುತ್ತಾ ಬಂದವರು. ಅದಕ್ಕೆ ಬೇಕಾದ ಪರಿಕರಗಳನ್ನು ದೂರವಾಣಿಯ ಮೂಲಕವೇ ತಿಳಿಸುತ್ತಾ ಬಂದವರು.
ಕಳೆದ 13 ವರ್ಷಗಳಿಂದ ಯಾವುದೇ ಸ್ವಾರ್ಥ ಬಯಸದೇ ಕಲೆ-ಕಲಾವಿದರನ್ನು ಗೌರವಿಸುತ್ತಾ ಬಂದಿರುವ ಜಯರಾಮ ಶೆಟ್ಟರು ಈ ಬಾರಿ ಒಂದು ವಿಭಿನ್ನ ಪ್ರಯತ್ನದ ಯಕ್ಷಗಾನ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಅವರ ಸ್ನೇಹಿತ ವರ್ಗ, ಕಲಾವಿದರ ಒತ್ತಾಯಕ್ಕೆ ರಾಜಧಾನಿಯಲ್ಲಿ ಮಂದರ್ತಿ ಕ್ಷೇತ್ರ ಮಹಾತ್ಮೆ ಸಂಘಟಿಸುತ್ತಿದ್ದಾರೆ. ಇದು ಪ್ರಸ್ತುತ ಅವರಿಗೆ ಅತಿ ಅನಿವಾರ್ಯವೂ ಆಗಿದೆ. ಕಲೆ-ಕಲಾವಿದರಿಗಾಗಿ ತುಡಿಯುವ ಈ ಕಲಾಭಿಮಾನಿಯ ಕಾರ್ಯಕ್ರಮವನ್ನು ಯಕ್ಷಗಾನ ಪ್ರೇಮಿಗಳು ತುಂಬು ಮನಸ್ಸಿನಿಂದ ಗೆಲ್ಲಿಸಿಕೊಡಬೇಕಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!