spot_img
Wednesday, January 22, 2025
spot_img

ಪುರಸ್ಕಾರಗಳು ಬೆಳೆಯುವುದಕ್ಕೆ ತೋರುದೀಪ : ಪ್ರದೀಪ್‌ ಸಾಮಗ

ಡಾ. ಹೆಚ್. ಶಾಂತಾರಾಮ್ ಯಕ್ಷಗಾನ ಪುರಸ್ಕಾರ -2023 ಪ್ರದಾನ ಕಾರ್ಯಕ್ರಮ

ಜನಪ್ರತಿನಿಧಿ ವಾರ್ತೆ : ಯಕ್ಷಗಾನಕ್ಕೆ ಕೊಟ್ಟಿರುವುದಕ್ಕಿಂತ, ಯಕ್ಷಗಾನದಿಂದ ನಾನು ಪಡೆದಿರುವುದೇ ಹೆಚ್ಚು. ಯಕ್ಷಗಾನ ಕ್ಷೇತ್ರದ ಫಲಾನುಭವಿ ನಾನು ಎಂದರೆ ಅದು ಸೂಕ್ತ. ಪರಿಸ್ಥಿತಿಯಿಂದಾಗಿ ಯಕ್ಷಗಾನಕ್ಕೆ ಬಂದಿದ್ದೇ ಹೊರತು, ಯಕ್ಷಗಾನವೇ ನನ್ನ ಆಯ್ಕೆ ಆಗಿರಲಿಲ್ಲ. ಈ ಕ್ಷೇತ್ರದಲ್ಲಿ ಬೆಳೆಯುವುದಕ್ಕೆ ತೋರುದೀಪದಂತೆ ಇಂತಹ ಪುರಸ್ಕಾರ ನೀಡಿರುವುದು ಸಂತಸ ಹೆಚ್ಚಿಸಿದೆ ಎಂದು ಯಕ್ಷಗಾನ ಕಲಾವಿದ, ತಾಳಮದ್ದಲೆ ಅರ್ಥಧಾರಿ ಡಾ. ಪ್ರದೀಪ್‌ ವಿ. ಸಾಮಗ ಹೇಳಿದರು.

ಭಂಡಾರ್ಕಾರ್ಸ್  ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರದ ೪೮ನೇ ರಾಜ್ಯೋತ್ಸವ ತಾಳಮದ್ದಲೆ ಕಾರ್ಯಕ್ರಮದ ಸಂದರ್ಭದಲ್ಲಿ ಕೊಡಮಾಡಿದ ʼಡಾ. ಹೆಚ್. ಶಾಂತಾರಾಮ್ ಯಕ್ಷಗಾನ ಪುರಸ್ಕಾರ -2023ʼನ್ನು ಸ್ವೀಕರಿಸಿ ಅವರು ಮಾತನಾಡಿದರು.

ಇದು ಪುರಸ್ಕಾರ ಆಗಿರುವುದರಿಂದ ಸಮಾಧಾನವಿದೆ. ಜವಾಬ್ದಾರಿ ಇನ್ನೂ ಹೆಚ್ಚಿದೆ ಎಂದು ಹೇಳುವುದಕ್ಕೆ ಪುರಸ್ಕಾರ ನೀಡುವುದು. ಈ ಪುರಸ್ಕಾರ ಸ್ವೀಕಾರ ಮಾಡುವುದರ ಮೂಲಕ ಯಕ್ಷಗಾನ ಕ್ಷೇತ್ರದಲ್ಲಿ ನನಗೆ ಹೆಚ್ಚಿನ ಜವಾಬ್ದಾರಿ ಇದೆ ಎನ್ನುವುದನ್ನು ಇನ್ನೂ ಚೆನ್ನಾಗಿ ಅರಿತುಕೊಂಡಿದ್ದೇನೆ ಎಂದು ಅವರು ಅಭಿಪ್ರಾಯ ಪಟ್ಟರು.    

ಪುರಸ್ಕಾರ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಡಾ. ಹೆಚ್. ಶಾಂತಾರಾಮ್, ಯಕ್ಷಗಾನ ಕ್ಷೇತ್ರದ ಮೇರು ಮನೆತನದ ಒಬ್ಬ ಕಲಾವಿದನಿಗೆ ಈ ಪುರಸ್ಕಾರ ನೀಡುತ್ತಿರುವುದು ಸಂತಸದ ವಿಷಯ. ಪುರಸ್ಕೃತರ ಪ್ರತಿಭೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದು ಅವರು ಶುಭ ಹಾರೈಸಿದರು.   

ಈ ಸಂದರ್ಭದಲ್ಲಿ ಪುರಸ್ಕಾರ ಆಯ್ಕೆ ಸಮಿತಿಯ ಸದಸ್ಯ, ಬಹುಮೇಳಗಳ ಯಜಮಾನರಾದ ಪಿ. ಕಿಶನ್ ಹೆಗ್ಡೆ, ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಶಾಂತಾರಾಮ್ ಪ್ರಭು, ರಾಜೇಂದ್ರ ತೋಳಾರ್, ದೇವದಾಸ್ ಕಾಮತ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಸತ್ಯನಾರಾಯಣ ಉಪಸ್ಥಿತರಿದ್ದರು.

ಕಾಲೇಜಿನ ಯಕ್ಷಗಾನ ಸಂಘದ ಸಂಚಾಲಕ, ಉಪನ್ಯಾಸಕ ಶಶಾಂಕ್ ಪಟೇಲ್ ಕೆಳಮನೆ ಪ್ರಸ್ತಾವಿಸಿ, ಸ್ವಾಗತಿಸಿದರು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಶುಭಕರಾಚಾರಿ ಆಶಯ ನುಡಿಯನ್ನಾಡಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಂ ಗೊಂಡ ವಂದಿಸಿ, ಜ್ಯೋತಿ‌ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.

ಪುರಸ್ಕಾರ ಪ್ರದಾನ ಕಾರ್ಯಕ್ರಮದ ಬಳಿಕ ʼಕೃಷ್ಣಾರ್ಜುನ ಕಾಳಗʼ ಯಕ್ಷಗಾನ ತಾಳಮದ್ದಲೆ ನಡೆಯಿತು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!