spot_img
Wednesday, January 22, 2025
spot_img

ನವದೆಹಲಿಯ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಕುಂದಾಪುರದ ಚಪ್ಪಲಿ ರಿಪೇರಿ ಅಂಗಡಿ ಮಣಿಕಂಠ ಅವರಿಗೆ ಆಹ್ವಾನ


ಕುಂದಾಪುರ: (ಜನಪ್ರತಿನಿಧಿ ವಾರ್ತೆ) ನವದೆಹಲಿಯಲ್ಲಿ 2024 ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕುಂದಾಪುರ ಚಪ್ಪಲಿ ರಿಪೇರಿ ಮಾಡುವ ಮಣಿಕಂಠ ಅವರನ್ನು ಆಯ್ಕೆ ಮಾಡಲಾಗಿದೆ.

ಮಣಿಕಂಠ ಅವರು ತಲೆತಲಾಂತರದಿಂದ ಕುಂದಾಪುರದಲ್ಲಿ ಚಪ್ಪಲಿ ದುರಸ್ತಿ ಮಾಡುವ ಕಾಯಕವನ್ನು ಕೈಲಾಸ ಎನ್ನುವಂತೆ ನಿರ್ವಹಿಸಿಕೊಂಡು ಬರುತ್ತಿದೆ. ಕುಂದಾಪುರ ಶಾಸ್ತ್ರೀ ವೃತ್ತದ ಹತ್ತಿರ ಚರ್ಮ ಕುಟೀರ ಚಪ್ಪಲಿ ರಿಪೇರಿ ಅಂಗಡಿ ಹೊಂದಿರುವ ಇವರು ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಫಲಾನುಭವಿ. ಈ ಯೋಜನೆಯ ಮೂಲಕ ಕುಲಕಸುಬನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಮೂರು ಬಾರಿ ಸಾಲ ಪಡೆದಿದ್ದು ಸದ್ವಿನಿಯೋಗ ಮಾಡಿದ್ದಾರೆ. ಸಾಲ ಸದ್ವಿನಿಯೋಗ, ವೃತ್ತಿ ಬದ್ದತೆ, ಸೇವೆ ಇತ್ಯಾದಿಗಳನ್ನು ಗಮನಿಸಿ ಇವರನ್ನು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ.
ಈಗಾಗಲೇ ಮೊದಲ ಹಂತದಲ್ಲಿ ಆಯ್ಕೆ ಪ್ರಕ್ರಿಯೆಗಳು ನಡೆದಿದ್ದು ಮಣಿಕಂಠ ಅವರ ಹೆಸರು ದೆಹಲಿಗೆ ಹೋಗಿದೆ. ಇನ್ನೂ ಅಧಿಕೃತ ಪತ್ರ ಬರುವುದು ಮಾತ್ರ ಬಾಕಿ ಇದೆ.

ಮಣಿಕಂಠ ಅವರ ಅಜ್ಜ ಮುನಿಸ್ವಾಮಿ ಸುಮಾರು 70 ವರ್ಷಗಳ ಇಲ್ಲಿ ಚಪ್ಪಲಿ ರಿಪೇರಿ ಅಂಗಡಿಯನ್ನು ಆರಂಭಿಸಿದ್ದರು. ಬಳಿಕ ಮಣಿಕಂಠ ಅವರ ತಂದೆ ಇದನ್ನು ಮುಂದುವರಿಸಿದರು, ಕಳೆದ 23 ವರ್ಷಗಳಿಂದ ಮಣಿಕಂಠ ಅವರು ಈ ಕಸುಬವನ್ನು ಅತ್ಯಂತ ಶ್ರದ್ದೆಯಿಂದ ನಿರ್ವಹಿಸುತ್ತಿದ್ದಾರೆ. ಸೌಮ್ಯ ಸ್ವಾಭಾವದ ಮಣಿಕಂಠ ಅವರು ಸಜ್ಜನಿಕೆಯ ಉತ್ಸಾಹಿ ಯುವಕ. ವೃತ್ತಿ ಕಸುಬನ್ನು ಶ್ರದ್ದೆಯಿಂದ ನಿರ್ವಹಿಸುವುದರೊಂದಿಗೆ ಚಪ್ಪಲಿ ರಿಪೇರಿ ಜೊತೆಯಲ್ಲಿ ಕೊಡೆ ದುರಸಿ, ಬ್ಯಾಗ್ ದುರಸ್ತಿಗಳನ್ನು ಮಾಡುತ್ತಾರೆ. ಅವರ ಸೋದರ ವಿಷ್ಣು ಕೂಡಾ ಇಲ್ಲಿ ಕುಶನ್ ಕೆಲಸ ಮಾಡುತ್ತಾರೆ. ಚಪ್ಪಲಿ ದುರಸ್ತಿ ಅಂಗಡಿ ಅವರಿಗೆ ಬದುಕು ಕಲ್ಪಿಸಿದೆ. ಅವರ ವೃತ್ತಿ ನೈಪುಣ್ಯತೆಗೆ ಬೇರೆ ಬೇರೆ ಭಾಗದಿಂದ ಗ್ರಾಹಕರು ಹುಡುಕಿಕೊಂಡು ಬರುತ್ತಿದ್ದಾರೆ. ಕುಂದಾಪುರದಲ್ಲಿ ಮಣಿಕಂಠರ ಚಪ್ಪಲಿ ರಿಪೇರಿ ಅಂಗಡಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಅವರ ಸೇವೆಯನ್ನು ರೋಟರಿಯಂತಹ ಸೇವಾ ಸಂಸ್ಥೆಗಳು ಗುರುತಿಸಿ ಗೌರವಿಸಿವೆ.

ತಂದೆಯ ಬಳಿಕ ಲಿಡ್ಕರ್ ಮಳಿಗೆ ಹಾಕಿಕೊಂಡು ವೃತ್ತಿ ಮುಂದುವರಿಸಿದ ಮಣಿಕಂಠ ಅವರ ಸ್ವುದ್ಯೋಗ ಅಭಿವೃದ್ದಿ ಪಡಿಸಲು ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಅನುಕೂಲಕ್ಕೆ ಬಂತು. ಲೇವಾದೇವಿದಾರರ ಮುಂದೆ ಹಣಕ್ಕಾಗಿ ಕೈಚಾಚುವ ಪರಿಸ್ಥಿತಿಗೆ ಇದು ಕಡಿವಾಣ ಹಾಕಿತು. ಮೊದಲ ಸಲ 10ಸಾವಿರ, ಎರಡನೇ ಬಾರಿ 20 ಸಾವಿರ, ಮೂರನೇ ಬಾರಿ 50 ಸಾವಿರ ಸಾಲ ಪಡೆದು ಕ್ಲಪ್ತ ಸಮಯಕ್ಕೆ ಮರುಪಾವತಿ ಮಾಡುತ್ತಾ ಸಾಲದ ಸದ್ವಿನಿಯೋಗ ಪಡಿಸಿಕೊಂಡಿದ್ದಾರೆ.

ಮಣಿಕಂಠ 5ನೇ ತರಗತಿ ತನಕ ಓದಿದ್ದಾರೆ. ಆದರೆ ಮಕ್ಕಳಿಬ್ಬರು ಈಗ ಕಾಲೇಜು ವ್ಯಾಸಂಗ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯ ಶಿಕ್ಷಣ ನೀಡಿ ಅವರ ಕನಸಿನಂತೆ ಉನ್ನತ ಹುದ್ದೆಗೆ ಕಳುಹಿಸಬೇಕು. ಮಕ್ಕಳ ಆಸಕ್ತಿಯ ಕ್ಷೇತ್ರದಲ್ಲಿ ಓದಿಸುತ್ತೇನೆ ಎನ್ನುವ ಮಣಿಕಂಠರ ಚಿಂತನೆ ಮಾದರಿಯಂತಿದೆ.

“ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಭಾಗವಹಿಸುವ ಬಗ್ಗೆ ಪುರಸಭೆ ಅಧಿಕಾರಿ ಗಣೇಶ ಅವರು ತಿಳಿಸಿದರು. ಖುಷಿಯಾಯಿತು. ನನ್ನಂತೆ ಎಷ್ಟೋ ಜನರು ಈ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ. ಅವರನ್ನು ಗುರುತಿಸುವಂತಾಗಬೇಕು. ಅವರೆಲ್ಲರ ಪ್ರತಿನಿಧಿಯಾಗಿ ನನಗೆ ಭಾಗವಹಿಸಲಿ ಹೆಮ್ಮೆಯಾಗುತ್ತಿದೆ. ನಮ್ಮ ವೃತ್ತಿಯನ್ನು ಸರಕಾರ ಗುರುತಿಸಿದೆ. ಇದೇ ಮೊದಲ ಬಾರಿ ವಿಮಾನ ಪ್ರಯಾಣ ಮಾಡುತ್ತಿದ್ದೇನೆ. ನನಗೆ ಸಾಲ ಸೌಲಭ್ಯ ಕಲ್ಪಿಸಿ ಬ್ಯಾಂಕ್ ಅಧಿಕಾರಿಗಳಿಗೂ, ಮೂಲಭೂತ ಅವಶ್ಯಕತೆಗೆ ಸ್ಪಂದಿಸಿದ ಸ್ಥಳೀಯ ಪುರಸಭಾ ಸದಸ್ಯ ಪ್ರಭಾಕರ ಹಾಗೂ ಪುರಸಭಾ ಅಧಿಕಾರಿಗಳಿಗೂ ಕೃತಜ್ಞತೆ ಸಲ್ಲಿಸುತ್ತೇನೆ”-ಮಣಿಕಂಠ ಕುಂದಾಪುರ

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!