spot_img
Wednesday, January 22, 2025
spot_img

ಕುಂದಾಪ್ರ ಕನ್ನಡ ಅಕಾಡೆಮಿ ಸ್ಥಾಪನೆಗೆ ನಿರಾಕರಣೆ: ಸಚಿವ ಸುನಿಲ್ ಕುಮಾರ್ ಉತ್ತರ ಖಂಡನಾರ್ಹ-ಬಿ.ಅಪ್ಪಣ್ಣ ಹೆಗ್ಡೆ

ಕುಂದಾಪುರ: ಸಾವಿರಾರು ವರ್ಷಗಳಿಂದ ತನ್ನ ಅಸ್ತಿತ್ವ ಉಳಿಸಿಕೊಂಡಿರುವ ಕುಂದಾಪ್ರ ಕನ್ನಡ ಭಾಷೆಯ ವೈಶಿಷ್ಟ್ಯ ಮತ್ತು ಚೆಲುವಿಗೆ ಇನ್ನೊಂದರ ಹೋಲಿಕೆ ಸಾಧ್ಯವಿಲ್ಲ. ಈ ನೆಲದ ಶ್ರೇಷ್ಠತೆಯಾಗಿರುವ ಕುಂದಾಪ್ರ ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆ ಬಗ್ಗೆ ವಿವಿಧ ವಿದ್ವಾಂಸರಿಂದ ಮಾಹಿತಿ ಸಂಗ್ರಹಿಸಿ ವಿಧಾನ ಪರಿಷತ್‌ನಲ್ಲಿ ಮಂಜುನಾಥ ಭಂಡಾರಿಯವರು ಪ್ರಸ್ತಾಪ ಮಾಡಿ ಸರಕಾರದಿಂದ ಉತ್ತರ ಬಯಸಿದ್ದರು. ಅದಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಸುನಿಲ್ ಕುಮಾರ್ ಅವರು ಈ ಬಗ್ಗೆ ನಿರಾಶಾದಾಯಕ ಉತ್ತರ ನೀಡಿ ಕುಂದಾಪ್ರ ಕನ್ನಡ ಅಕಾಡೆಮಿ ಪ್ರಸ್ತಾಪವನ್ನು ತಳ್ಳಿ ಹಾಕಿದ್ದಾರೆ. ಕನ್ನಡ ಭಾಷಾ ಸಮಗ್ರತೆಯ ದೃಷ್ಟಿಯಿಂದ ಇದು ಸೂಕ್ತವಲ್ಲ ಎಂಬ ಅವರು ಅಸಮರ್ಪಕ ಹೇಳಿಕೆ ನೀಡಿರುವುದು ಖಂಡನೀಯ. ಕೂಡಲೇ ಅವರು ತಮ್ಮ ಹೇಳಿಕೆಯನ್ನು ಮರು ಪರಿಶೀಲಿಸಿ, ಕುಂದಾಪ್ರ ಕನ್ನಡ ಅಕಾಡೆಮಿ ಸ್ಥಾಪನೆ ಮಾಡಬೇಕು ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.

ಅವರು ಕುಂದಾಪುರದ ಹೋಟೆಲ್ ಹರಿಪ್ರಸಾದ್‌ನ ಅಕ್ಷತಾ ಸಭಾಂಗಣದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

ವಿರೋಧ ಪಕ್ಷದವರ ಪ್ರಶ್ನೆಗೆ ವಿರೋಧವಾದ ಉತ್ತರವನ್ನೇ ನೀಡುತ್ತಿರುವುದು ದುರ್ದೈವ. ಯಾರೊಂದಿಗೂ ಸಮಾಲೋಚಿಸದೇ, ಅಧ್ಯಯನ ಮಾಡದೇ ಕರ್ನಾಟಕದಲ್ಲಿ ವಿವಿಧ ರೀತಿಯ ಕನ್ನಡ ಮಾತನಾಡುವುದು ಸಾಮಾನ್ಯ ಎಂಬಂತೆ ಉತ್ತರ ನೀಡಿರುವುದು ತಿಳುವಳಿಕೆ ಇಲ್ಲದವರ ಉತ್ತರ ಎಂದೇ ತಿಳಿಯಬೇಕಾಗುತ್ತದೆ. ಧಾರವಾಡ ಕನ್ನಡದ ಮೇಲೆ ಮರಾಠಿ ಪ್ರಭಾವ, ಗುಲ್ಬರ್ಗ ಕನ್ನಡದ ಮೇಲೆ ತೆಲುಗಿನ ಪ್ರಭಾವ, ಕೋಲಾರ ಕನ್ನಡದ ಮೇಲೆ ತಮಿಳು ಪ್ರಭಾವ, ಮಂಗಳೂರು ಕನ್ನಡದ ಮೇಲೆ ಮಲೆಯಾಳ ಪ್ರಭಾವ ಕಾಣಬಹುದು. ಆದರೆ ಕುಂದಾಪ್ರ ಕನ್ನಡದ ಮೇಲೆ ಯಾವುದೇ ಭಾಷೆಯ ಪ್ರಭಾವ ಬೀರಿಲ್ಲ. ಶಾಸನಗಳು, ನೃಪತುಂಗನ ಕಾಲದಲ್ಲಿ ಕುಂದಾಪ್ರ ಕನ್ನಡವನ್ನು ಗುರುತಿಸಬಹುದು. ಕಾರಂತರ ಕಾದಂಬರಿಗಳಲ್ಲಿ, ಅಡಿಗರ ಬರಗಳಲ್ಲಿ, ಮುದ್ದಣ್ಣನ ಕಾವ್ಯದಲ್ಲಿ ಕುಂದಾಪ್ರ ಕನ್ನಡದ ಶ್ರೀಮಂತಿಕೆ ಗಮನಿಸಬಹುದು. ಕುಂದಾಪ್ರ ಕನ್ನಡ ಈ ಭಾಗದ ಬದುಕು. ಕುಂದಾಪ್ರ ಕನ್ನಡ ಅಕಾಡೆಮಿ ಸ್ಥಾಪನೆ ಹಾಗೂ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಕುಂದಾಪ್ರ ಕನ್ನಡ ಪೀಠಕ್ಕೆ ಅನುದಾನ ಮಂಜೂರಾತಿ ಬಗ್ಗೆ ಮುಖ್ಯಮಂತ್ರಿಗಳನ್ನು ಒತ್ತಾಯಿಸುವ ಹೋರಾಟ ಅನಿವಾರ್ಯವಾಗಿದೆ ಎಂದರು.

ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ಡಾ.ಉಮೇಶ ಪುತ್ರನ್ ಮಾತನಾಡಿ, ಕುಂದಾಪ್ರ ಕನ್ನಡ ಕೇವಲ ಭಾಷೆಯಲ್ಲ. ಅದು ಈ ಭಾಗದ ಬದುಕು. ಸುಮಾರು ೩೦ ಲಕ್ಷಕ್ಕೂ ಅಧಿಕ ಮಂದಿ ಕುಂದಾಪ್ರ ಕನ್ನಡ ಭಾಷೆ ಮಾತನಾಡುತ್ತಾರೆ. ಸಾಕಷ್ಟು ಸಂಶೋಧಕರು ಈ ಭಾಷೆಯ ಆಳದ ಬಗ್ಗೆ ಅಧ್ಯಯನ ಮಾಡಿದರೂ ಇನ್ನೂ ಅದು ಪರಿಪೂರ್ಣವಾಗಿಲ್ಲ. ಕುಂದಾಪ್ರ ಕನ್ನಡ ಅಕಾಡೆಮಿ ಆದರೆ ಸಮಗ್ರ ಅಧ್ಯಯನ ಸಾಧ್ಯವಾಗುತ್ತದೆ. ಈ ಬಗ್ಗೆ ಮಂಜುನಾಥ ಭಂಡಾರಿಯವರು ಅಧ್ಯಯನ ಮಾಡಿ ತನ್ನ ವರದಿಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಆದರೆ ಸಚಿವರು ನೀಡಿದ ಉತ್ತರ ಕುಂದಾಪ್ರ ಕನ್ನಡ ಭಾಷಿಗರಿಗೆ ಅಚ್ಛರಿಯಾಗಿದೆ. ಸಚಿವರು ತಕ್ಷಣ ಈ ಬಗ್ಗೆ ಮರು ಪರಿಶೀಲನೆ ನಡೆಸಬೇಕು. ಕುಂದಾಪ್ರ ಕನ್ನಡ ಭಾಷೆಯ ಸಮಗ್ರ ಅಧ್ಯಯನ, ಸಂಶೋಧನೆಗೆ ಪೂರಕವಾಗುವ ನಿಟ್ಟಿನಲ್ಲಿ ಕುಂದಾಪ್ರ ಕನ್ನಡ ಅಕಾಡೆಮಿ ಸ್ಥಾಪನೆ ಮಾಡಬೇಕು ಎಂದರು.

ಕುಂದಾಪುರ ಜಿಲ್ಲಾ ಹೋರಾಟ ಸಮಿತಿ ಸಂಚಾಲಕ ದಿನಕರ ಶೆಟ್ಟಿ ಮುಂಬಾರು ಮಾತನಾಡಿ, ಕುಂದಾಪ್ರ ಕನ್ನಡವನ್ನು ಯಾರೂ ಕಡೆಗಣಿಸುವಂತಿಲ್ಲ. ಗುಬ್ಬಿ ವೀರಣ್ಣನ ನಾಟಕ ಕಂಪೆನಿಗಿಂತಲೂ ಮೊದಲು ಬಸ್ರೂರಲ್ಲಿ ನಾಟಕ ಕಂಪೆನಿ ಅಸ್ತಿತ್ವದಲ್ಲಿತ್ತು. ಹೀಗೆ ಸಾಕಷ್ಟು ಹಿರಿಮೆ ಈ ಭಾಗಕ್ಕಿದೆ. ಭಾಷಾವಾರು ವಿಚಾರವಾಗಿ, ಇಲ್ಲಿನ ನೆಲದ ಸಂಸ್ಕೃತಿಯನ್ನು ಅಧ್ಯಯನ ಮಾಡದೇ ಹೇಳಿಕೆ ಕೊಡುವುದು ಖಂಡನೀಯ ಎಂದರು.

ಕುಂದಾಪುರ ಜಿಲ್ಲಾ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಗಣಪತಿ ಶ್ರೀಯಾನ್ ಮಾತನಾಡಿ, ಕುಂದಾಪುರ ಭಾಷೆಗೆ ವಿಶೇಷವಾದ ಆಕರ್ಷಣೆ ಇದೆ. ಕುಂದಾಪ್ರ ಭಾಷೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾತನಾಡುತ್ತಾರೆ. ಕುಂದಾಪ್ರ ಕನ್ನಡ ಬಿಟ್ಟು ಬದುಕು ಸಾಧ್ಯವೇ ಇಲ್ಲ. ಕುಂದಾಪುರ ಭಾಗವನ್ನು ಮೆಟ್ಟುವ ಕೆಲಸ ಬೇಡ ಅಕಾಡೆಮಿಗೆ ಬೆಂಬಲ ಕೊಡುವ ಕೆಲಸ ಆಗಬೇಕು ಎಂದರು.

ಈ ಸಂದರ್ಭದಲ್ಲಿ ಪತ್ರಕರ್ತ ಯು.ಎಸ್ ಶೆಣೈ, ಸುಧಾಕರ ಶೆಟ್ಟಿ ಆವರ್ಸೆ, ವಕೀಲರಾದ ಆವರ್ಸೆ ರತ್ನಾಕರ ಶೆಟ್ಟಿ, ವೆಂಕಟೇಶ್ ಪೈ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!