spot_img
Wednesday, January 22, 2025
spot_img

ಮದ್ಯ ವ್ಯಸನಿ ಅಪ್ಪಂದಿರೆ ಗಮನಿಸಿ…. ನಿಮ್ಮ ಕುಡಿತ ನಿಮ್ಮ ಮಗುವಿಗೆ ಸಮಸ್ಯೆ ಆಗಬಹುದು

(ಲೇಖನ: ಡಾ.ಪಿ.ವಿ.ಭಂಡಾರಿ
ಮನೋವೈದ್ಯರು, ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ

ಅಮೆರಿಕ ದೇಶದಲ್ಲಿ ಪ್ರತಿ ವರ್ಷ ಫೆಬ್ರವರಿ ಎರಡನೆಯ ವಾರವನ್ನು ,”ಮದ್ಯ ವ್ಯಸನಿಯ ಮಕ್ಕಳ ವಾರ “ಎಂದು ಆಚರಿಸಲಾಗುತ್ತದೆ. ಅಪ್ಪ ಅಥವಾ ಅಮ್ಮ ಅತಿಯಾದ ಮದ್ಯ ಸೇವನೆ ಮಾಡಿದರೆ ಇದರಿಂದ ಮಕ್ಕಳ ಮೇಲೆ ಸಾಕಷ್ಟು ಪರಿಣಾಮಗಳು ಉಂಟಾಗುತ್ತವೆ , ಅದು ಕೇವಲ ಬಾಲ್ಯದಲ್ಲಿ ಅಷ್ಟೇ ಅಲ್ಲ ಈ ಮಕ್ಕಳು ದೊಡ್ಡವರಾದ ಮೇಲೆ ಕೂಡ ಹಲವು ಸಮಸ್ಯೆಗಳಿಂದ ಬಳಲುತ್ತಾರೆ. ಜೀವನದಲ್ಲಿ ಹಲವು ಗೊಂದಲಗಳು ಮತ್ತು ನೋವುಗಳು ಈ ಮಕ್ಕಳ ಜೀವನವನ್ನೇ ಹಾಳು ಮಾಡುತ್ತದೆ. ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ತೀವ್ರ ಮದ್ಯಪಾನ ಮಾಡುವ ತಾಯಿಯ ಅಥವಾ ತಂದೆಗೆ ಹುಟ್ಟಿದ ಮಕ್ಕಳು ಅನುವಂಶಿಕ ಮತ್ತು ಪರಿಸರದ ಕಾರಣಗಳಿಂದ ತಮ್ಮ ಮೆದುಳು ನಡವಳಿಕೆ ಮತ್ತು ಸಂಬಂಧಗಳು ಇಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಇಂತಹ ಕುಟುಂಬದಲ್ಲಿ ಬೆಳೆದ ಮಕ್ಕಳಲ್ಲಿ ಖಿನ್ನತೆ, ಆತಂಕ ,ಆತ್ಮಹತ್ಯ ಆಲೋಚನೆಗಳು, ಮಾದಕ ವ್ಯಸನ ಮತ್ತು ಇತರರೊಂದಿಗೆ ಹೊಂದಾಣಿಕೆಯ ಕೊರತೆ ಇವುಗಳನ್ನು ಸಾಮಾನ್ಯವಾಗಿ ನೋಡುತ್ತೇವೆ.

ಅಪ್ಪ ಅಥವಾ ಅಮ್ಮ ಮದ್ಯ ವ್ಯಸನಿಗಳಾಗಿದ್ದರೆ ಅಂತಹ ಮನೆಗಳಲ್ಲಿ ಅಸ್ತವ್ಯಸ್ತ ವಾತಾವರಣ , ಅನಿಶ್ಚಿತತೆ, ಅಸ್ಥಿರತೆ, ಶಿಸ್ತಿನ ಕೊರತೆ, ಅಪ್ಪ ಅಮ್ಮಂದಿರ ನಡುವೆ ಜಗಳಗಳು ಇವುಗಳು  ಸಹಜವಾಗಿರುತ್ತದೆ. ಇಂತಹ ಮಕ್ಕಳ ಮೇಲೆ ದೈಹಿಕ ಹಾಗೂ ಮಾನಸಿಕ ದೌರ್ಜನ್ಯ ಮನೆಯವರಿಂದಲೂ ಅಥವಾ ಅಕ್ಕಪಕ್ಕದವರಿಂದಲೂ ನಡೆಯುತ್ತದೆ.

ಕುಡಿಯುತ್ತಿರುವ ಅಪ್ಪಂದಿರೆ ಸ್ವಲ್ಪ ಯೋಚಿಸಿ ನೋಡಿ..

ನಿಮ್ಮ ಮಗು ಶಾಲೆಯಿಂದ ಮನೆಗೆ ಬರುತ್ತದೆ, ಬರುವಾಗ ಒಂದೆರಡು ಮಿತ್ರರನ್ನು ಕರೆದುಕೊಂಡು ಮನೆಗೆ ಬರುತ್ತದೆ, ಆದರೆ ಇಲ್ಲಿ ಕುಡಿತದ ಅಮಲಿನಲ್ಲಿ ಮಲಗಿರುವ ನೀವು.. ಮಗುವಿನ ಮಾನಸಿಕ ಅಘಾತದ ಬಗ್ಗೆ ಯೋಚಿಸಿ.

ನಿಮ್ಮ ಮಕ್ಕಳು ಸ್ನೇಹಿತರನ್ನು ಹೊಂದಲು ಭಯಪಡಬಹುದು ಏಕೆಂದರೆ ಮನೆಗೆ ಬಂದಾಗ ನೀವು ಹೇಗೆ ವರ್ತಿಸುತ್ತೀರಿ ಎಂದು ಅವರು ಊಹಿಸಲು ಸಾಧ್ಯವಿಲ್ಲ. ಅವರಿಗೆ ಶಾಲೆಯಲ್ಲಿ ನಡೆಯುವ ತಮ್ಮ ಕ್ರೀಡಾಕೂಟ ಅಥವಾ ಸ್ಕೂಲ್ ಡೇ ಗೆ ಕೂಡ ಹೋಗಲು ಹೆದರಿಕೆ ಏಕೆಂದರೆ ನೀವು ಅಲ್ಲಿ ಬಂದು ಏನಾದರೂ ಗಲಾಟೆ ಮಾಡಬಹುದು ಎಂದು ಅವರಿಗನಿಸುತ್ತದೆ.

ಬೇರೆ ಮಕ್ಕಳಂತೆ ನಿಮ್ಮ ಮಕ್ಕಳು ಹೊಸ ಬಟ್ಟೆಗಳನ್ನು ಹಾಕುವುದಿಲ್ಲ, ಯಾಕೆಂದರೆ ನೀವು ಅದನ್ನು ಅವರಿಗೆ ಕೊಡಿಸಲು ಆಗುವುದಿಲ್ಲ”.

ಫೀಸ್ ಕಟ್ಟುವ ದಿನಾಂಕ ಮುಗಿದು ಹೋಗಿರುತ್ತದೆ ನಿಮ್ಮ ಮಗು ಪರೀಕ್ಷೆಗೆ ಕುಳಿತುಕೊಳ್ಳಲಾಗುವುದಿಲ್ಲ. ಚೆನ್ನಾಗಿ ಓದುತ್ತಿರುವ ಮಗುವಿಗೆ ಪರೀಕ್ಷೆ ಸಮಯದಲ್ಲಿ ಆತಂಕ ಸೃಷ್ಟಿಯಾಗುತ್ತದೆ.

“ನಿಮ್ಮ ಕುಡಿತದಿಂದ ಮನೆಯಲ್ಲಿ ನಿರ್ಮಾಣವಾಗಿರುವ ಭಯಾನಕ ವಾತಾವರಣದ ಬಗ್ಗೆ ಯೋಚಿಸಿ”ಒಟ್ಟಾರೆಯಾಗಿ ನೋಡಿದರೆ ನಿಮ್ಮ ಕುಡಿತ ನಿಮ್ಮ ಮಗುವಿನ ಮೇಲೆ ಬಹಳಷ್ಟು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಮಕ್ಕಳಲ್ಲಿ ಒಂದು ರೀತಿಯ ತಪ್ಪಿತಸ್ಥ ಭಾವನೆ, ಆತಂಕ, ಸಿಟ್ಟು ,ಖಿನ್ನತೆ ,ಸಂಬಂಧಗಳನ್ನು ಬೆಳೆಸಲು ಸಮಸ್ಯೆ ,ಮಿತ್ರರೇ ಇಲ್ಲದಂತೆ ಇರುವ ವಾತಾವರಣ ಹೀಗೆ ಹಲವಾರು ಸಮಸ್ಯೆಗಳು ಉಂಟಾಗುತ್ತವೆ.

ಅದರಿಂದ ಕುಡಿತದ ಸಮಸ್ಯೆ ಇರುವವರು ದಯವಿಟ್ಟು ಯೋಚಿಸಿ ನಿಮ್ಮ ಕುಡಿತ ತ್ಯಜಿಸಲು ಒಂದು ದಿನಾಂಕ ನಿರ್ಧಾರ ಮಾಡಿ. ಕುಡಿತ ಬಿಡಲು ನಿಮಗೇನು ಸಹಾಯ ಸಿಗಬಹುದು ಎನ್ನುವುದನ್ನು ಸ್ವಲ್ಪ ಯೋಚಿಸಿ.

ನಿಮ್ಮ ಊರುಗಳ ಮನೋವೈದ್ಯರು ಹೆಚ್ಚಿನವರು ಮದ್ಯ ವ್ಯಸನ ವಿಮುಕ್ತಿ ಚಿಕಿತ್ಸೆಯ ಬಗ್ಗೆ ಪರಿಣಿತರಾಗಿರುತ್ತಾರೆ. ಅವರನ್ನು ಸಂಪರ್ಕಿಸಬಹುದು.

ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಇದರ ಅನುದಾನದಿಂದ ನಡೆಯುತ್ತಿರುವ ಉಚಿತ ಚಿಕಿತ್ಸಾಲಯಗಳು (ವೃತ್ತಿಪರ ವೈದ್ಯರುಗಳ ಉಸ್ತುವಾರಿಯಲ್ಲಿ ನಡೆಯುತ್ತಿದೆಯ ನೋಡಿಕೊಳ್ಳಿ) ಅಲ್ಲಿ ಭರ್ತಿಯಾಗಿ  ಚಿಕಿತ್ಸೆ ಪಡೆದುಕೊಳ್ಳಬಹುದು. ಹಾಗೆಯೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಇದರ ಉಚಿತ ಶಿಬಿರಗಳು ಕರ್ನಾಟಕದ ಆದ್ಯಂತ ನಡೆಯುತ್ತಿವೆ ಇವುಗಳ ಬಗ್ಗೆ ಯೋಚಿಸಿ. ಮದ್ಯ ವ್ಯಸನ ಬಿಡಲು ಹಲವಾರು ಸ್ಥಳಗಳಲ್ಲಿ ಅನಾಮಿಕ ಅಮಲಿಗಳ ಒಕ್ಕೂಟ ನಡೆಯುತ್ತಿದೆ ಅದರ ಸಹಾಯವನ್ನು ಪಡೆಯಿರಿ.

ಹೆಚ್ಚಿನ ಮನೆಗಳಲ್ಲಿ ಯಾರಿಗಾದರೂ ಕುಡಿತದ ಸಮಸ್ಯೆ ಇರುವಾಗ ಆ ಬಗ್ಗೆ ಚರ್ಚೆಗಳು ನಡೆಯುವುದಿಲ್ಲ ಕುಡಿತ ದಿನವಿಡೀ ಸಮಸ್ಯೆ ಮಾಡುತ್ತಿದ್ದರು ಅದರ ಬಗ್ಗೆ ಯಾರು ಗಮನ ಕೊಡುವುದಿಲ್ಲ. ಒಂದು ರೀತಿಯ “ಮೌನದ ಪಿತೂರಿ “ಕುಟುಂಬಗಳನ್ನು ಆವರಿಸಿಕೊಂಡು ಬಿಡುತ್ತದೆ. ಮನೆಯ ಮಕ್ಕಳು, ಮಹಿಳೆಯರು ಮನೆಯ ವಾತಾವರಣದ ಬಗ್ಗೆ ಯಾರೊಂದಿಗೂ ಹೇಳಿಕೊಳ್ಳದೆ ಗೌಪ್ಯತೆಯನ್ನು ಪಾಲಿಸಿಕೊಂಡು ಬರುತ್ತಾರೆ ಮತ್ತು ಇದರಿಂದ ಹಲವು ಸಮಸ್ಯೆಗಳನ್ನು ಅನುಭವಿಸುತ್ತಾರೆ. ಈ ಬಾರಿ ಮದ್ಯ ವ್ಯಸನಿಗಳ ಮಕ್ಕಳ ಸಪ್ತಾಹದ ಧ್ಯೇಯ ವಾಕ್ಯವೇ ಇಂತಹ ಕೌಟುಂಬಿಕ ರಹಸ್ಯವನ್ನು ಮುರಿಯುವುದು ಮತ್ತು ಈ ಬಗ್ಗೆ ಚರ್ಚಿಸುವುದು ಹೇಗೆ ಎಂಬುದರ ಬಗ್ಗೆ ವೃತ್ತಿಪರರು ಸಮಾಜ ಯೋಚಿಸಬೇಕು ಮತ್ತು ಮಕ್ಕಳು ಮಹಿಳೆಯರು ತಮ್ಮ ಮನೆಯವರ ಈ ಅಭ್ಯಾಸದಿಂದ ಪಡುತ್ತಿರುವ ಬವಣೆಗಳ ಬಗ್ಗೆ ಸಮಾಜ ಯೋಚಿಸಬೇಕು ಎಂಬುದರ ಬಗ್ಗೆ ಆಗಿದೆ. ಸಮಾಜದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯಬೇಕು ಮತ್ತು ಮದ್ಯ ವ್ಯಸನ ಅನ್ನುವುದು ಒಂದು ಕಾಯಿಲೆ ಅದರ ಬಗ್ಗೆ ಕಳಂಕ ಹರಡುಬಾರದು ಹಾಗೂ ಬಳಲುತ್ತಿರುವವರಿಗೆ ಚಿಕಿತ್ಸೆ ಸಿಗಬೇಕು ಎನ್ನುವುದು ಈ ವರ್ಷದ ಧ್ಯೇಯದ ಆಶಯ.

ನಮ್ಮ ದೇಶದಲ್ಲಿ ಮದ್ಯಪಾನದ ಹಾವಳಿ ಅಗಾಧವಾಗಿ ಬೆಳೆಯುತ್ತಾ ಬರುತ್ತಿದೆ. ಇಂದು ಇದೊಂದು ಸಾರ್ವಜನಿಕ ಆರೋಗ್ಯ ಸಮಸ್ಯೆ ಅಂದರೆ ತಪ್ಪಾಗಲಾರದು. ಹಾಗಿದ್ದರೂ ಕೂಡ ಸರ್ಕಾರವಾಗಲಿ ಸರ್ಕಾರೇತರ ಸಂಸ್ಥೆಗಳಾಗಲಿ ಮದ್ಯಪಾನಿಗಳ ಮಕ್ಕಳ ಕಡೆ ಗಮನ ಕೊಡದೆ ಇರುವುದು ವಿಷಾದನೀಯ. ಈ ಮಕ್ಕಳ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು, ಬಾಲ್ಯದಲ್ಲಿ ಪ್ರೀತಿಯಿಂದ ವಂಚಿತರಾಗಿ ಶಾಲೆಯಲ್ಲಿ ಅವಮಾನಕ್ಕೆ ತುತ್ತಾಗಿ ಹಲವು ಮಕ್ಕಳು ಭಾವನಾತ್ಮಕ ಸಮಸ್ಯೆಗೆ ಒಳಗಾಗುತ್ತಾರೆ. ಇವರ ಸಮಸ್ಯೆಗಳ ಬಗ್ಗೆ ಶಾಲಾ ಶಿಕ್ಷಕರಿಗೆ, ಸಮುದಾಯದ ವರಿಷ್ಠರಿಗೆ ಹಾಗೂ ಸರ್ಕಾರಕ್ಕೆ ತಿಳಿ ಹೇಳುವುದು ನಮ್ಮ ಕರ್ತವ್ಯ.

ಅದರಲ್ಲಿಯೂ ಈ ಮಕ್ಕಳ ಜೀವನದಲ್ಲಿ ಶಿಕ್ಷಕರ ಪಾತ್ರ ಬಹಳಷ್ಟು ಇದೆ. ಈ ಮಕ್ಕಳಿಗೆ ಮಾನಸಿಕ ಬೆಂಬಲವನ್ನು ನೀಡುವುದಲ್ಲದೆ ಅವರಲ್ಲಿರುವ ಕಲಿಕಾ ತೊಂದರೆಗಳನ್ನು ಗುರುತಿಸುವುದು ಮತ್ತು ಪರಿಹರಿಸುವುದು ಅತಿ ಅಗತ್ಯ. ಈ ಮಕ್ಕಳಲ್ಲಿ ಭಾವನಾತ್ಮಕ ಸಮಸ್ಯೆಗಳಿದ್ದರೆ ಅವುಗಳನ್ನು ಶಾಲಾ ಕೌನ್ಸಿಲರ್ ಗಳ ಗಮನಕ್ಕೆ ತಂದು ಅಗತ್ಯ ಚಿಕಿತ್ಸೆ ಬೇಗ ಸಿಗುವಂತೆ ಮಾಡಬಹುದು. ಸಮಸ್ಯೆಗಳ ನಡುವೆಯೇ ಬದುಕಿರುವ ಈ ಮಕ್ಕಳಿಗೆ “ಸಕಾರಾತ್ಮಕ ರೋಲ್ ಮಾಡೆಲ್” ಗಳಾಗಿ ಮಕ್ಕಳು ತಮಗಿರುವ ಕೌಶಲ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಹೊಂದಲು ಸಹಾಯ ಮಾಡಬಹುದು. ಮಗುವಿನ ಆತ್ಮಸ್ಥೈರ್ಯವನ್ನು ಹೆಚ್ಚಿಸುವುದು ಮತ್ತು ಸಂಕಷ್ಟದ ನಡುವೆ ಕುಗ್ಗಿ ಹೋದ ಮಗು ಪುಟಿದು ಏಳಲು ಸಹಾಯ ಮಾಡುವುದು ಶಾಲಾ ಶಿಕ್ಷಕರಿಂದ ಮಾತ್ರ ಸಾಧ್ಯ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!