Thursday, November 21, 2024

ಹೆಮ್ಮಾಡಿ ಮೂರ್ತೆದಾರರ ಸೇವಾ ಸಹಕಾರ ಸಂಘ ಮೂರ್ತೆದಾರ ಕುಟುಂಬಗಳಿಗೆ ಆರ್ಥಿಕ ಶಕ್ತಿ ನೀಡಿದೆ-ಬಿ.ಎಂ.ಸುಕುಮಾರ ಶೆಟ್ಟಿ

ಹೆಮ್ಮಾಡಿ ಮೂರ್ತೆದಾರರ ಸೇವಾ ಸಹಕಾರ ಸಂಘದ ನಾಡಾ ಶಾಖೆ ಸ್ವಂತ ಕಟ್ಟಡ ಉದ್ಘಾಟನೆ, ಸ್ವ ಸಹಾಯ ಗುಂಪುಗಳ ಸಮಾವೇಶ

ನಾಡ, ಜ.28: ಹೋರಾಟದ ಮೂಲಕ ಮೂರ್ತೆದಾರಿಕೆಯನ್ನು ಉಳಿಸಿಕೊಂಡರೂ ಇವತ್ತಿನ ದಿನ ಮೂರ್ತೆದಾರಿಕೆ ನಶಿಸುತ್ತಿದೆ. ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಶೇಂದಿ ಮತ್ತೆ ಬೇಡಿಕೆ ಪಡೆದುಕೊಳ್ಳಲಿದೆ. ಪ್ರಸ್ತುತ ಸಹಕಾರ ತತ್ವದಡಿ ಮೂರ್ತೆದಾರರು ಬಲಿಷ್ಠರಾಗಿ ಬೆಳೆಯುತ್ತಿದ್ದಾರೆ. ಹೆಮ್ಮಾಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮೂಲಕ ೩೦೦ಕ್ಕೂ ಹೆಚ್ಚು ಸ್ವಸಹಾಯ ಸಂಘಗಳ ರಚಿಸಿ, ಮಹಿಳೆಯರಿಗೆ ಸ್ವಾವಲಂಬನೆಗೆ ಅವಕಾಶ ಮಾಡಿಕೊಟ್ಟಿರುವುದು ಶ್ಲಾಘನೀಯ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.

ಅವರು ಹೆಮ್ಮಾಡಿ ಮೂರ್ತೆದಾರರ ಸೇವಾ ಸಹಕಾರ ಸಂಘದ ನಾಡಾ ಶಾಖೆ ಸ್ವಂತ ಕಟ್ಟಡ ಉದ್ಘಾಟಿಸಿ, ಸ್ವ ಸಹಾಯ ಗುಂಪುಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಮೂರ್ತೆದಾರಿಕೆಗೆ ಒತ್ತು ದೊರೆತರೆ ತೆಂಗು ಬೆಳೆಗೂ ಮೌಲ್ಯ ಬರುತ್ತಿದೆ. ಇವತ್ತು ತೆಂಗು ಧಾರಣೆ ಕುಸಿದಿದೆ. ಮೂರ್ತೆದಾರಿಕೆ ಮತ್ತೆ ಜೀವಪಡೆದರೆ ತೆಂಗುಬೆಳೆಗಾರರಿಗೂ ಅನುಕೂಲವಾಗುತ್ತದೆ ಎಂದು ಹೇಳಿದ ಅವರು, 32 ವರ್ಷಗಳ ಹಿಂದೆ ಆರಂಭವಾದ ಈ ಸಂಘ ಸ್ವಂತ ಕಟ್ಟಡ ನಿರ್ಮಾಣದ ಜೊತೆಯಲ್ಲಿ ಮೂರ್ತೆದಾರರ ಕುಟುಂಬಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಆರಂಭವಾದ ಈ ಸಹಕಾರ ಸಂಘ ಇವತ್ತು ಸ್ವಸಹಾಯ ಸಂಘಗಳ ರಚನೆಯ ಮೂಲಕ ಸಮಾಜಕ್ಕೆ ಆರ್ಥಿಕ ಶಕ್ತಿ ನೀಡುವ ಕೆಲಸ ಮಾಡಿದೆ. ಮಾತೃಪ್ರಧಾನ ವ್ಯವಸ್ಥೆಯ ಅಳಿಯ ಸಂತಾನ ಕಟ್ಟುಕಟ್ಟಳೆ ಹೊಂದಿರುವ ಈ ಪ್ರದೇಶದಲ್ಲಿ ಸ್ತ್ರೀ ಸಮರ್ಥವಾಗಿ ಜವಬ್ದಾರಿ ನಿರ್ವಹಿಸಿ ಸ್ತ್ರೀ ಕುಟುಂಬವನ್ನು ಮುನ್ನೆಡೆಸುತ್ತಿದ್ದಾಳೆ. ಸ್ವಸಹಾಯ ಸಂಘಗಳ ಮೂಲಕ ಉಳಿತಾಯ, ಸ್ವಾವಲಂಬನೆಗೆ ಪಡೆದ ಸಾಲದ ಸದ್ವಿನಿಯೋಗ, ಮರುಪಾವತಿಯ ಮೂಲಕ ಜವಬ್ದಾರಿಯನ್ನು ನಿರ್ವಹಿಸುತ್ತಿದ್ದಾಳೆ ಎಂದರು.

ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮನವಿಯನ್ನು ಸರ್ಕಾರಕ್ಕೆ ತಲುಪಿಸುತ್ತೇನೆ. ಮೂರ್ತೆದಾರರ ಸಂಘದ ಒಂದು ನಿಯೋಗವನ್ನು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಹೆಮ್ಮಾಡಿ ಮೂರ್ತೆದಾರರ ಸೇವಾ ಸಹಕಾರ ಸಂಘದ ಅಧ್ಯಕ್ಷ ಉದಯ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಭದ್ರತಾ ಕೊಠಡಿಯನ್ನು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಉದ್ಘಾಟಿಸಿ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದ ಶೇಂದಿ ನಿಷೇಧ ಕಾಯ್ದೆ ಜ್ಯಾರಿಗೊಳಿಸಿದಾಗ ಅವಿಭಜಿತ ದ.ಕ ಜಿಲ್ಲೆಯ ಮೂರ್ತೆದಾರ ನಾಯಕರುಗಳ ಹೋರಾಟದ ಫಲವಾಗಿ ಎಸ್.ಬಂಗಾರಪ್ಪ ಮುಖ್ಯಮಂತ್ರಿಯಾದ ಸಂದರ್ಭ ಸಹಕಾರ ಸಂಘಗಳ ನಿಯಮದಡಿ ಮೂರ್ತೆದಾರರ ಸಹಕಾರ ಸಂಘಗಳ ಆರಂಭಕ್ಕೆ ಅವಕಾಶ ದೊರಕಿಸಿಕೊಟ್ಟರು. ಪರಿಣಾಮ ಇವತ್ತು ಹೆಮ್ಮಾಡಿ ಮೂರ್ತೆದಾರರ ಸಹಕಾರ ಸಂಘ ಹೆಮ್ಮರವಾಗಿ ಬೆಳೆದಿದೆ. ಸ್ವಸಹಾಯ ಸಂಘಗಳ ರಚನೆಯ ಮೂಲಕ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಕೆಲಸ ಆಗುತ್ತಿದೆ. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಪೂಜಾರಿ ಅವರ ನೇತೃತ್ವದಲ್ಲಿ ಸಂಘ ಯಶಸ್ವಿಯಾಗಿ ಮುನ್ನೆಡೆಯುತ್ತಿದೆ. ಈ ಸಂಘ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಗ್ರಾಹಕರ ಭದ್ರತಾ ಪೆಟ್ಟಿಗೆಯನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿ, ಉಡುಪಿ ಜಿಲ್ಲೆಯಲ್ಲಿ 700ಸಹಕಾರಿ ಸಂಘಗಳು ಇವೆ. 4200 ಕೋಟಿ ಠೇವಣಿ ಸಹಕಾರಿ ಕ್ಷೇತ್ರದಲ್ಲಿ ಇರಿಸಿದ್ದಾರೆ. ಇದಕ್ಕೆ ಕಾರಣ ಜನ ಸಹಕಾರ ವ್ಯವಸ್ಥೆಯಲ್ಲಿ ಇರಿಸಿರುವ ನಂಬಿಕೆ. ಅದೇ ರೀತಿ ಸಹಕಾರ ಸಂಘಗಳ ಕಟ್ಟಡ ನಿರ್ಮಾಣ, ಲಾಭ ಗಳಿಕೆ ಮಾತ್ರವಲ್ಲ ಆರ್ಥಿಕ ಸ್ವಾವಲಂಬನೆಗೆ ಒತ್ತು, ಸಮಾಜದ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದನೆ ನೀಡುವ ಕೆಲಸ ಮಾಡುತ್ತಿವೆ ಎಂದರು.

ಸ್ವಸಹಾಯ ಗುಂಪುಗಳ ಲಾಭಾಂಶ ವಿತರಣೆಯನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಎಸ್.ರಾಜು ಪೂಜಾರಿ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ನಾಡ ಗ್ರಾ.ಪಂ.ಅಧ್ಯಕ್ಷ ದಿನೇಶ ಶೆಟ್ಟಿ, ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ, ನಾಡಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಶಂಕರ ಶೆಟ್ಟಿ ಬೆಳ್ಳಾಡಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಉಡುಪಿ ಇದರ ಅಂಕಿತ ಅಧಿಕಾರಿ ಡಾ|ಪ್ರೇಮಾನಂದ ಕೆ., ಮೂರ್ತೆದಾರರ ಮಹಾಮಂಡಲ ಬ್ರಹ್ಮಾವರ ಇದರ ಅಧ್ಯಕ್ಷ ಕೊರಗ ಪೂಜಾರಿ, ಮರವಂತೆ ಮಹಾರಾಜಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಂ.ನಾಯಕ್, ಕೋಣ್ಕಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರಾಜು ಶೆಟ್ಟಿ ಕೋಣ್ಕಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ನಾಡಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಿಕ್ಮರಿ, ನಾಡಾ ಉಷಾ ಕ್ಲಿನಿಕ್‌ನ ವೈದ್ಯ ಡಾ.ಸುರೇಶ ಕುಮಾರ್ ಶೆಟ್ಟಿ, ಹಿಂದಿನ ಶಾಖಾ ಕಟ್ಟದ ಮಾಲೀಕರಾದ ಶ್ರೀಧರ್ ಶೇಟ್ ಅವರನ್ನು ಗೌರವಿಸಲಾಯಿತು.

ಹಿರಿಯ ಮೂರ್ತೆದಾರ ಸದಸ್ಯರಾದ ಅಣ್ಣಪ್ಪ ಪೂಜಾರಿ ಹಿತ್ಲುಮನೆ ಬಡಾಕೆರೆ, ಪಂಜು ಪೂಜಾರಿ, ವಿಠ್ಠಲ ಪೂಜಾರಿ, ಚಿಕ್ಕಯ್ಯ ಪೂಜಾರಿ, ಸುಬ್ಬ ಪೂಜಾರಿ, ತಿಮ್ಮಪ್ಪ ಪೂಜಾರಿ, ಕರಿಯ ಪೂಜಾರಿ, ನಾಣು ಪೂಜಾರಿ ಇವರುಗಳಿಗೆ ರೂ.10 ಸಾವಿರ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮೂರ್ತೆದಾರರ ಸಂಘದ ವತಿಯಿಂದ ಸಂಘದ ಕಲ್ಪತರು ಸ್ವಸಹಾಯ ಸಂಘದ ಗುಂಪುಗಳ ಸದಸ್ಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸುವಂತೆ ಸರ್ಕಾರಕ್ಕೆ ಶಾಸಕರ ಮೂಲಕ ಮನವಿ ಸಲ್ಲಿಸಲಾಯಿತು. ಹೆಮ್ಮಾಡಿ ಮೂರ್ತೆದಾರರ ಸಹಕಾರಿ ಸಂಘದ ಕೊಡುಗೆಯಾಗಿ ನಾಡಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶವ ಶೀತಲೀಕರಣ ಯಂತ್ರವನ್ನು ಹಸ್ತಾಂತರ ಮಾಡಲಾಯಿತು. ಕಲ್ಪತರು ಸ್ವಸಹಾಯ ಗುಂಪಿನ ಸದಸ್ಯರುಗಳಿಗೆ ಲಾಭಾಂಶದ ಚೆಕ್ ವಿತರಿಸಲಾಯಿತು.

ಸಂಘದ ಉಪಾಧ್ಯಕ್ಷರಾದ ನರಸಿಂಹ ಪೂಜಾರಿ, ನಿರ್ದೇಶಕರಾದ ಕೃಷ್ಣ ಎಂ.ಪೂಜಾರಿ, ಶಂಕರ ಪೂಜಾರಿ, ರಘು ಪೂಜಾರಿ, ನಾರಾಯಣ ಪೂಜಾರಿ, ಶ್ರೀನಿವಾಸ ಪೂಜಾರಿ, ಶ್ರೀಮತಿ ಜಯಪದ್ಮ, ಶೇಖರ ಪೂಜಾರಿ, ಶ್ರೀಮತಿ ಸರೋಜ, ಶಾಖಾ ವ್ಯವಸ್ಥಾಪಕಿ ನಾಗರತ್ನ ಉಪಸ್ಥಿತರಿದ್ದರು.

ಹೆಮ್ಮಾಡಿ ಮೂರ್ತೆದಾರರ ಸೇವಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಬಿ.ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆರ್.ಜೆ.ರೇವತಿ ಶೆಟ್ಟಿ, ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

ಬೃಹತ್ ಸಮಾವೇಶ:
ಕಲ್ಪತರು ಸ್ವಸಹಾಯ ಗುಂಪುಗಳ ಸಮಾವೇಶದಲ್ಲಿ ಸಾವಿರಾರು ಮಹಿಳೆಯರು ಭಾಗವಹಿಸಿದ್ದರು. ಸಂಘದ ವ್ಯಾಪ್ತಿಯ ಎಲ್ಲಾ ಸ್ವಸಹಾಯ ಸಂಘಗಳ ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸ್ವಸಹಾಯ ಗುಂಪುಗಳಿಗೆ ಲಾಭಾಂಶವನ್ನು ಸಭೆಯಲ್ಲಿ ಘೋಷಣೆ ಮಾಡಿ, ಚೆಕ್ ವಿತರಣೆ ಮಾಡಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮ:
ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮವಾಗಿ ನೃತ್ಯ ವೈಭವ, ಮಂಜುನಾಥ ಕುಂದೇಶ್ವರ ಅವರಿಂದ ಮಿಮಿಕ್ರಿ ಕಾರ್ಯಕ್ರಮ, ಗೆಜ್ಜೆಗಿರಿ ಮೇಳದವರಿಂದ ಯಕ್ಷಗಾನ ವಿಶ್ವವ್ಯಾಪಕ ನಾಮ ಶ್ರೀರಾಮ ಪ್ರದರ್ಶನಗೊಂಡಿತು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!