spot_img
Friday, May 8, 2026
spot_img

NDPS act ಮಾದಕ ದ್ರವ್ಯ ಉಪಯೋಗ ಕಾನೂನು, ನಮ್ಮ ಯುವಕರು ಏನು ತಿಳಿದುಕೊಳ್ಳಬೇಕು ?


ಮಾದಕ ದ್ರವ್ಯ ಸೇವನೆ ಮತ್ತು ಮಾರಾಟ ಯುವಜನತೆ ಏನು ತಿಳಿದಿರಬೇಕು?
ಇತ್ತೀಚೆಗೆ ಮಂಗಳೂರಿನಲ್ಲಿ ವೈದ್ಯರುಗಳನ್ನು ಸೇರಿ ಹಲವು ಯುವಕರನ್ನು ಪೊಲೀಸ್‌ನವರು ಗಾಂಜಾ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಕಾರಣ ಬಂಧಿಸಿದ್ದಾರೆ. ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಈ ಜಾಲದಲ್ಲಿ ಸಿಕ್ಕಿಹಾಕಿಕೊಂಡಿರುವುದು ವಿಷಾದನೀಯ ವಿಷಯ. ಮದ್ಯ ಮಾದಕ ದ್ರವ್ಯ ವ್ಯಸನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವೈದ್ಯನಾಗಿ ನಾನು ನೋಡುತ್ತಿರುವುದೇನೆಂದರೆ ಇತ್ತೀಚೆಗೆ ಗಾಂಜಾ, ಎಂ ಡಿ ಎಂ ಎಮ್ ಎ, ಅಂಫಿತಮಿನ್ ಈ ಮಾದಕ ದ್ರವ್ಯಗಳ ಹಾವಳಿ ಬೆಳೆಯುತ್ತಿದೆ. ಹಿಂದೆ ಕಾಲೇಜು ಯುವಕರ ಬರ್ತಡೇ ಪಾರ್ಟಿಗಳಲ್ಲಿ ಧೂಮಪಾನ, ಮದ್ಯಪಾನ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿತ್ತು, ಆದರೆ ಈಗ ಈ ಮಾದಕ ದ್ರವ್ಯಗಳು ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಇದು ಕೇವಲ ವೃತ್ತಿಪರ ಕಾಲೇಜುಗಳ ಯುವಕರಲ್ಲಿ ಮಾತ್ರ ಅಲ್ಲ ನಮ್ಮ ಸುತ್ತಮುತ್ತಲಿನ ಫಸ್ಟ್ ಗ್ರೇಡ್ ಕಾಲೇಜ್‌ಗಳಿಗೂ ಕೂಡ ಹಬ್ಬಿದೆ. ನಮ್ಮ ಯುವಕರು ಈ ಪದಾರ್ಥಗಳ ಸೇವನೆ ಕಾನೂನಿನಂತೆ ಅಪರಾಧ ಹಾಗೂ ಅದಕ್ಕೆ ಸಂಬಂಧಪಟ್ಟ ಕಾನೂನಿನ ಬಗ್ಗೆ ತಿಳುವಳಿಕೆ ಮೂಡಿಸಿಕೊಳ್ಳಬೇಕು. ಇವತ್ತಿನ ಈ ಅಂಕಣದ ಆಶಯ.

ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (NDPS) ಕಾಯಿದೆಯು ಭಾರತದಲ್ಲಿ ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ ಸ್ವಾಧೀನ, ಉತ್ಪಾದನೆ, ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸುತ್ತದೆ. ಇದು ಅಪರಾಧಿಗಳಿಗೆ ಶಿಕ್ಷೆ ಮತ್ತು ಈ ವಸ್ತುಗಳಿಗೆ ಸಂಬಂಧಿಸಿದ ಕಾನೂನುಬಾಹಿರ ಚಟುವಟಿಕೆಗಳಿಂದ ಪಡೆದ ಆಸ್ತಿಗಳನ್ನು ಮುಟ್ಟುಗೋಲು ಹಾಕುವ ನಿಬಂಧನೆಗಳನ್ನು ಒಳಗೊಂಡಿದೆ.
ಈ ಕಾಯಿದೆಯಡಿಯಲ್ಲಿ ಈ ವಸ್ತುಗಳ ಸ್ವಾಧೀನ, ಮಾರಾಟ ಮತ್ತು ವಿತರಣೆಯು ಕ್ರಿಮಿನಲ್ ಅಪರಾಧವಾಗಿದೆ ಮತ್ತು ಜೈಲು ಶಿಕ್ಷೆ ಮತ್ತು ದಂಡ ಸೇರಿದಂತೆ ಕಠಿಣ ಶಿಕ್ಷೆಗೆ ಕಾರಣವಾಗಬಹುದು ಎಂದು ಯುವಕರು ತಿಳಿದಿರಬೇಕು. ಹೆಚ್ಚುವರಿಯಾಗಿ, ಈ ಪದಾರ್ಥಗಳನ್ನು ಸೇವಿಸುವುದರಿಂದ ಗಂಭೀರವಾದ ಆರೋಗ್ಯ ಪರಿಣಾಮಗಳನ್ನು ಈ ಪದಾರ್ಥಗಳು ಉಂಟುಮಾಡಬಹುದು ಮತ್ತು ಅದನ್ನು ಉಪಯೋಗಿಸುವುದನ್ನು ತಪ್ಪಿಸಬೇಕು ಎಂದು ಯುವಕರು ತಿಳಿದಿರಬೇಕು. ಮಾದಕ ವ್ಯಸನದ ಅಪಾಯಗಳ ಬಗ್ಗೆ ಯುವಕರಿಗೆ ತಿಳಿಸುವುದು ಮತ್ತು ಜವಾಬ್ದಾರಿಯುತ ಆಯ್ಕೆಗಳನ್ನು ಮಾಡುವುದು ಸಮಾಜದಲ್ಲಿ ಮುಖ್ಯವಾಗಿದೆ.

ಎನ್ಡಿಪಿ‌ಎಸ್ ಕಾಯಿದೆಯಡಿಯಲ್ಲಿ ಅಪರಾಧಗಳಿಗೆ ಯಾವ ಪದಾರ್ಥಕ್ಕೆ ಎಷ್ಟು ಸ್ವಾಧೀನ ಮಿತಿ ಇದೆ ಮತ್ತು ದಂಡಗಳನ್ನು ಪ್ರಶ್ನೆಯಲ್ಲಿರುವ ಈ ನಿರ್ದಿಷ್ಟ ವಸ್ತು ಮತ್ತು ಹೊಂದಿರುವ ಪ್ರಮಾಣದ ಮೇಲೆ ನಿರ್ಧರಿಸಲಾಗುತ್ತದೆ. ಉದಾಹರಣೆಗೆ, ಕೆಲವು ಔಷಧಿಗಳ ಸಣ್ಣ ಪ್ರಮಾಣದ ಸ್ವಾಧೀನವನ್ನು ವೈಯಕ್ತಿಕ ಬಳಕೆಗಾಗಿ ಪರಿಗಣಿಸಬಹುದು ಮತ್ತು ಕಡಿಮೆ ದಂಡವನ್ನುವಿಧಿಸಬಹುದು. ಆದರೆ ಗಾಂಜಾ 100 ಗ್ರಾಂ ಒಳಗೆ ಇದ್ದರೆ ವೈಯಕ್ತಿಕ ಬಳಕೆಗೆ ಎಂದು ಒಪ್ಪಬಹುದಾದರೂ ಅದು ಯಾರದೇ ಬಳಿಯಲ್ಲಿ ಸಿಕ್ಕರು ಕಾನೂನಿನಂತೆ ಅದು ಈ ಅಪರಾಧಕ್ಕೆ ರೂ.10,000 ದಂಡ ಅಥವಾ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ದೊಡ್ಡ ಪ್ರಮಾಣದ ಸ್ವಾಧಿನವನ್ನು ಮಾರಾಟ ಅಥವಾ ವಿತರಣೆಯ ಉದ್ದೇಶಕ್ಕಾಗಿ ಎಂದು ಪರಿಗಣಿಸಲಾಗುತ್ತದೆ ಮತ್ತು 20 ವರ್ಷಗಳ ಜೈಲುವಾಸ ಅಥವಾ ಎರಡು ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ.

NDPS ಕಾಯಿದೆಯ ಅಡಿಯಲ್ಲಿ ಅಪರಾಧಗಳಿಗೆ ಶಿಕ್ಷೆಯು ಯಾವ ಪದಾರ್ಥ ಎಷ್ಟು ಪರಿಮಾಣದಲ್ಲಿ ಸಿಕ್ಕಿದೆ ಹಾಗೂ ಅಪರಾಧದ ಸ್ವರೂಪ ಮತ್ತು ತೀವ್ರತೆಯನ್ನು ಅವಲಂಬಿಸಿ ವಿವಿಧ ಅವಧಿಗಳವರೆಗೆ ದಂಡದಿಂದ ಸೆರೆವಾಸದವರೆಗೆ ಇರುತ್ತದೆ. ಪದೇ ಪದೇ ಸಿಕ್ಕಿ ಬೀಳುವ ಅಪರಾಧಿಗಳಿಗೆ ಮತ್ತು ಶಿಕ್ಷಣ ಸಂಸ್ಥೆಗಳ ಬಳಿ ಇಂತಹ ನಿಗದಿತ ಪ್ರದೇಶಗಳಲ್ಲೀ ಕೆಲವು ಸಂದರ್ಭಗಳಲ್ಲಿ ಮಾಡಿದ ಅಪರಾಧಗಳಿಗೆ ಜಾಸ್ತಿ ದಂಡವನ್ನು ಸಹ ಕಾಯಿದೆ ಒದಗಿಸುತ್ತದೆ.
ಈ ಕಾನೂನಿನ ವಿಶೇಷತೆ ಎಂದರೆ ಪ್ರಶ್ನಾರ್ಹ ವಸ್ತುವು ಕಾನೂನುಬಾಹಿರವಾಗಿದೆ ಎಂಬ ಜ್ಞಾನವನ್ನು ಹೊಂದಿರದಿದ್ದರೂ ಒಬ್ಬ ವ್ಯಕ್ತಿಯನ್ನು ಅಪರಾಧಕ್ಕೆ ಹೊಣೆಗಾರರನ್ನಾಗಿ ಮಾಡಬಹುದು. ಆದ್ದರಿಂದ, ಯುವಕರು ಮಾದಕ ದ್ರವ್ಯಗಳಿಗೆ ಸಂಬಂಧಿಸಿದ ಕಾನೂನುಗಳು ಮತ್ತು ನಿಬಂಧನೆಗಳ ಬಗ್ಗೆ ತಿಳಿದಿರುವುದು ಮತ್ತು ಉದ್ದೇಶಪೂರ್ವಕವಾಗಿ ಕಾನೂನನ್ನು ಮುರಿಯುವುದನ್ನು ತಪ್ಪಿಸಲು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ.

ಈ ಕಾನೂನಿನಲ್ಲಿ ಯುವಕರು ಈ ಮಾದಕ ದ್ರವ್ಯಗಳೊಂದಿಗೆ ಸಿಕ್ಕಿಬಿದ್ದರೆ ಅವರಿಗೆ ಪುನರ್ವಸತಿ ಚಿಕಿತ್ಸೆಗೆ ಕಳಿಸುವ ಅವಕಾಶ ಕೂಡ ಇದೆ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮದ್ಯ ಮಾದಕ ದ್ರವ್ಯ ವ್ಯಸನ ಚಿಕಿತ್ಸಾ ಮತ್ತು ಪುನರ್ವಸತಿ ಕೇಂದ್ರಗಳನ್ನು ನಡೆಸಬೇಕು ಎಂಬ ಕಟ್ಟುನಿಟ್ಟಾದ ಕಾನೂನು ಕೂಡ ಇದೆ. ಈ ಯುವಕರು ಸಿಕ್ಕಿ ಬಿದ್ದಾಗ ಅವರಲ್ಲಿ ಅಪರಾಧಿ ಮನೋಭಾವ ಇಲ್ಲ ಹಾಗೂ ಅವರು ಈ ಪದಾರ್ಥಗಳ ಮಾರಾಟದಲ್ಲಿ ಭಾಗವಹಿಸಿಲ್ಲ ಎಂದು ಕೋರ್ಟಿಗೆ ಖಚಿತವಾದಲ್ಲಿ ಅಂತವರನ್ನು ಈ ಪುನರ್ವಸತಿ ಮತ್ತು ಚಿಕಿತ್ಸೆಗೆ ವರ್ಗಾಯಿಸಿ ಅವರಿಗೆ ಯಾವುದೇ ದಂಡ ಅಥವಾ ಶಿಕ್ಷೆ ಕೊಡದೆ ಚಿಕಿತ್ಸೆಗೆ ಅವಕಾಶ ಮಾಡುವ ಸದ್ದುದ್ದೇಶ ಈ ಕಾಯ್ದೆಯಲ್ಲಿದೆ.

ಈ ಲೇಖನ ಬರೆಯುವ ಮುಖ್ಯ ಉದ್ದೇಶ ಏನೆಂದರೆ, ಮಾದಕ ದ್ರವ್ಯ ಸೇವನೆಯ ಬಗ್ಗೆ ನಮ್ಮ ಯುವಕರಲ್ಲಿ ಸರಿಯಾದ ಮಾಹಿತಿ ಹಾಗೂ ಕಾನೂನು ಅರಿವಿನ ಅಗತ್ಯತೆ ಇದೆ. ಈ ಕೆಲಸವನ್ನು ಅಗತ್ಯವಾಗಿ ಯುವಕ ಮಂಡಲಗಳು ಹಾಗೂ ಶಾಲಾ ಕಾಲೇಜುಗಳು ಮಾಡಬೇಕಾಗಿದೆ.

ವೈದ್ಯರುಗಳು, ವಕೀಲರು, ಪೊಲೀಸ ಅಧಿಕಾರಿಗಳು ಅಲ್ಲಲ್ಲಿ ಈ ವ್ಯಸನಗಳ ವಿರುದ್ಧ, ಹಾಗೆಯೇ ಈ ಕಾನೂನಿನ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಮಾಡುವ ಅಗತ್ಯತೆ ಇದೆ.

ಶಿಕ್ಷಣ ಸಂಸ್ಥೆಗಳು ಕೂಡ ಈ ಪದಾರ್ಥಗಳನ್ನು ಉಪಯೋಗಿಸುತ್ತಿರುವ ವಿದ್ಯಾರ್ಥಿಗಳು ಅವರನ್ನು ಕಂಡುಹಿಡಿದು ಅವರಿಗೆ ಸರಿಯಾದ ಕೌನ್ಸಿಲಿಂಗ್ ವ್ಯವಸ್ಥೆ ಮಾಡುವುದು ಹಾಗೂ ಅದರಲ್ಲಿ ಅಪರಾಧಿ ಮನೋಭಾವ ಇದ್ದು ಬೇರೆ ಮಕ್ಕಳಿಗೆ ಅದನ್ನು ಮಾರುವುದು, ಒತ್ತಾಯಪೂರ್ವಕವಾಗಿ ಉಪಯೋಗಿಸುವಂತೆ ಮಾಡುವುದು ಮುಂತಾದವನ್ನು ಮಾಡುತ್ತಿರುವ ವಿದ್ಯಾರ್ಥಿಗಳನ್ನು ಕಾನೂನಿನ ಗಮನಕ್ಕೆ ತಂದು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸಬೇಕಾದ ಅಗತ್ಯತೆ ಇದೆ. ಒಂದು ಹಣ್ಣಿನ ಬುಟ್ಟಿಯಲ್ಲಿ ಒಂದೆರಡು ಕೊಳೆತ ಆಪಲ್ ಗಳಿರುತವೆ, ಅವುಗಳನ್ನು ನಿರ್ಲಕ್ಷಿಸಬೇಕು ಎಂಬ ಧೋರಣೆ ನಿಲ್ಲಬೇಕು ಯಾಕೆಂದರೆ ಈ ಆಪಲ್ ನಮ್ಮ ಮನೆಯದೇ ಇರಬಹುದು.

ಹಾಗೆಯೇ ನಮ್ಮ ಕಾಯಾಂಗ ಮತ್ತು ನ್ಯಾಯಾಂಗ ಈ ಪದಾರ್ಥ ಉಪಯೋಗಿಸುವವರು ಮತ್ತು ಅಪರಾಧಿ ಮನೋಭಾವ ಉಳ್ಳವರು ಇವರನ್ನು ವಿಂಗಡಿಸಿ ಅಪರಾಧಿ ಮನೋಭಾವದವರಿಗೆ ಶಿಕ್ಷೆ ವಿಧಿಸಿ ಇದೊಂದು ನಿಜವಾಗಲೂ ಅಪರಾಧ ಅನ್ನುವುದನ್ನು ಹಾಗೂ ತಪ್ಪು ಎಸಗಿದವರನ್ನು ತ್ವರಿತವಾಗಿ ಕಾನೂನಿನಂತೆ ಶಿಕ್ಷಿಸಲಾಗುವುದು ಎಂಬುದನ್ನು ತೋರಿಸುವ ಸಮಯ ಕೂಡ ಬಂದಿದೆ.

ಡಾ| ಪಿ.ವಿ ಭಂಡಾರಿ
ಮನೋವೈದ್ಯರು,
ಎ.ವಿ ಬಾಳಿಗ ಸ್ಮಾರಕ ಆಸ್ಮತ್ರೆ ಉಡುಪಿ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!