spot_img
Wednesday, January 22, 2025
spot_img

ತೆಂಗಿನ ಮೌಲ್ಯವರ್ದಿತ ಉತ್ಪನ್ನಗಳಿಗೆ ವಿದೇಶಗಳಲ್ಲಿ ವ್ಯಾಪಕ ಬೇಡಿಕೆ-ಸಚಿವೆ ಶೋಭಾ ಕರಂದ್ಲಾಜೆ

ಕುಂದಾಪುರ: ತೆಂಗು ವಾಣಿಜ್ಯ ಬೆಳೆಗಿಂತ ಮುಖ್ಯವಾಗಿ ಆಧ್ಯಾತ್ಮಿಕವಾಗಿ ಹೆಚ್ಚು ಮಹತ್ವ ಪಡೆದಿದೆ. ಆದರೆ ಇವತ್ತು ತೆಂಗಿನ ಉತ್ಪನ್ನವನ್ನು ಮೌಲ್ಯವರ್ಧನಗೊಳಿಸಿ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಪರಿಚಯಿಸುವಲ್ಲಿ ವಿಫಲವಾಗಿದ್ದೇವೆ. ತೆಂಗಿನ ಬೇರೆ ಬೇರೆ ಉತ್ಪನ್ನಗಳಿಗೆ ವಿದೇಶಗಳಲ್ಲಿ ಉತ್ತಮ ಬೇಡಿಕೆ ಇದೆ. ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಸಂಬಂಧಪಟ್ಟ ಇಲಾಖೆ, ತಂತ್ರಜ್ಞಾನಗಳನ್ನು ಬಳಸಿಕೊಂಡು ತೆಂಗು ಬೆಳೆ ಲಾಭದಾಯವನ್ನಾಗಿ ರೂಪಿಸಬೇಕಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ತಲ್ಲೂರಿನ ಶೇಷಕೃಷ್ಣ ಕನ್ವಕ್ಷನ್ ಹಾಲ್‌ನಲ್ಲಿ ತೆಂಗು ಅಭಿವೃದ್ದಿ ಮಂಡಳಿ ಕೊಚ್ಚಿ, ತೋಟಗಾರಿಕಾ ಇಲಾಖೆ, ಜಿ.ಪಂ. ಉಡುಪಿ ಮತ್ತು ಉಕಾಸ ಉತ್ಪಾದಕರ ಕಂಪನಿ ಲಿ., ಕುಂದಾಪುರ ಇವರ ಸಹಯೋಗದಲ್ಲಿ ನಡೆದ ತೆಂಗು ಅಭಿವೃದ್ದಿ ಮಂಡಳಿಯ ಸಂಸ್ಥಾಪನಾ ದಿನಾಚರಣೆ ಮತ್ತು ರೈತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ತೆಂಗು ಬೆಳೆಗಾರರು ಅಂತರಾಷ್ಟ್ರೀಯ ಮಾರುಕಟ್ಟೆಗೆ ತಮ್ಮ ಉತ್ಪನ್ನಗಳನ್ನು ರಪ್ತು ಮಾಡಲು ವಿಫುಲವಾದ ಅವಕಾಶವಿದೆ. ತೆಂಗಿನ ಹಾಲು, ಕೋಕೊಪೀಟ್, ಎಣ್ಣೆ, ಚಿಪ್ಸ್ ಹೀಗೆ ಮೌಲ್ಯವರ್ಧನೆಗೊಳಿಸಿ ವಿದೇಶಗಳಿಗೆ ರಪ್ತು ಮಾಡಿದರೆ ಒಳ್ಳೆಯ ಆದಾಯ ಗಳಿಸಬಹುದು. ತೆಂಗಿಗೆ ಕಡಿಮೆ ರಾಸಾಯನಿಕ, ಕೀಟನಾಶಕ ಬಳಕೆ ಮಾಡುವುದರಿಂದ ವಿದೇಶಗಳಲ್ಲಿ ಆಹಾರ ಪರೀಕ್ಷೆಗಳಲ್ಲಿಯೂ ಸಮಸ್ಯೆಯಾಗುವುದಿಲ್ಲ. ತೆಂಗು ಬೆಳೆಗಾರರು ಈ ದಿಕ್ಕಿನಲ್ಲಿ ಆಲೋಚನೆ ಮಾಡಬೇಕು. ಅದಕ್ಕೆ ತೆಂಗು ಅಭಿವೃದ್ದಿ ಮಂಡಳಿ ಪೂರಕ ಕಾರ್ಯಕ್ರಮಗಳನ್ನು ಜೋಡಣೆ ಮಾಡಿಕೊಳ್ಳಬೇಕು ಎಂದರು.

ಕಲ್ಪರಸಕ್ಕೆ ಇವತ್ತು ಒಳ್ಳೆಯ ಬೇಡಿಕೆ ಬಂದಿದೆ. ಆದರೆ ಮರ ಏರುವವರ ಸಮಸ್ಯೆಯಾಗುತ್ತಿದೆ ಎನ್ನುವ ವಿಷಯವೂ ತಿಳಿದಿದೆ. ಮರ ಹತ್ತಲು ಸೂಕ್ತ ತರಬೇತಿ ನೀಡಲು ಕೌಶಲ್ಯ ಅಭಿವೃದ್ಧಿ ಯಡಿಯಲ್ಲಿ ಅವಕಾಶ ನೀಡಬೇಕು ಎಂದು ಸೂಚನೆ ನೀಡಲಾಗಿದೆ. ತೆಂಗಿನ ಹಾಲು ತಾಯಿಯ ಎದೆಹಾಲಿಗೆ ಸಮಾನಾದುದು ಎಂದು ಅಮೇರಿಕಾದ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿ, ತೆಂಗಿನ ಕಾಯಿಗೆ ಸೂಕ್ತ ಬೆಲೆ ಇಲ್ಲ. ಒಂದು ಟೀಗೆ ಇರುವ ಬೆಲೆ ಇವತ್ತು ಒಂದು ತೆಂಗಿನ ಕಾಯಿಗೆ ಇದೆ. ಒಂದು ತೆಂಗಿನ ಮರ ಏರಲು ೧೦೦ ರೂ. ಕೊಡಬೇಕು. ೯೦% ರಷ್ಟು ತೆಂಗು ಮಂಗಗಳ ಪಾಲಾಗುತ್ತದೆ. ಒಟ್ಟಾರೆಯಾಗಿ ತೆಂಗು ಬೆಳೆಗಾರರು ಅತಂತ್ರರಾಗಿರುವುದು ಸ್ಪಷ್ಟ ಎಂದರು.

ಉಡುಪಿ ಕಲ್ಪರಸ ಕೊಕೊನಟ್ ಮತ್ತು ಅಲ್ ಸ್ಪೈಸಸ್ ಪ್ರೊಡ್ಯೂಸರ್ ಕಂಪನಿ ಲಿ., ಕುಂದಾಪುರ ಇದರ ಸತ್ಯನಾರಾಯಣ ಉಡುಪ ಮಾತನಾಡಿ, ಕೊಬ್ಬರಿಗೆ ನೀಡುವಂತೆ ತೆಂಗಿನ ಕಾಯಿಗೂ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಕೋತಿಗಳ ಉಪಟಳ, ಹಂದಿಯ ಕಾಟದಿಂದ ತೆಂಗು ಬೆಳೆಗಾರರು ತುಂಬಾ ನಷ್ಟ ಅನುಭವಿಸುತ್ತಿದ್ದಾರೆ. ತೆಂಗು ಬೆಳೆಗಾರರ ಪ್ರೋತ್ಸಾಹಿಸಲು ಕಾರ್ಯಕ್ರಮಗಳ ರೂಪಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾಸರಗೋಡು ಸಿಪಿಸಿ‌ಆರ್‌ಐಯ ಸಸ್ಯ ರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ವಿನಾಯಕ ಹೆಗ್ಡೆ, ಬ್ರಹ್ಮಾವರ ಕೆವಿಕೆಯ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ.ಧನಂಜಯ್, ಕಾಸರಗೋಡು ಸಿಪಿಸಿ‌ಆರ್‌ಐಯ ಸಸ್ಯ ಶರೀರ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಹೆಬ್ಬಾರ್ ಕೆ.ಬಿ, ಕಾಸರಗೋಡು ಸಿಪಿಸಿ‌ಆರ್‌ಐಯ ಬೇಸಾಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ರವಿ ಭಟ್, ಎಚ್.ಎಂ ನಾಯಕ್, ನವೀನಚಂದ್ರ ಜೈನ್, ಸೀತಾರಾಮ ಗಾಣಿಗ, ನಾರಾಯಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ತೆಂಗು ಅಭಿವೃದ್ಧಿ ಮಂಡಳಿ ಕೊಚ್ಚಿ ಇಲ್ಲಿನ ಅಭಿವೃದ್ದಿ ಅಧಿಕಾರಿ ಡಾ.ಬಿ.ಹನುಮಂತೇ ಗೌಡ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಡುಪಿ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ವಂದಿಸಿದರು. ನಿವೃತ್ತ ತೋಟಗಾರಿಕಾ ಅಧಿಕಾರಿ ಸಂಜೀವ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!