spot_img
Wednesday, January 22, 2025
spot_img

ನನ್ನ ಸೇವಾ ಕೈಂಕರ್ಯ ನಿರಂತರ-ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣಮೂರ್ತಿ ಮಂಜರಿಗೆ ಬೆಳ್ಳಿ ಕಿರೀಟ ತೊಡಿಸಿ ಹುಟ್ಟೂರಿನಲ್ಲಿ ಅದ್ದೂರಿಯ ಅಭಿನಂದನೆ
ಕುಂದಾಪುರ: ಹಣ ಅಶಾಶ್ವತ. ದಾನಧರ್ಮ ಮಾಡಿದರೆ ಆಪತ್ಕಾಲದಲ್ಲಿ ಕೈ ಹಿಡಿಯುತ್ತದೆ. ಪ್ರತಿಯೊಬ್ಬ ವ್ಯಕ್ತಿ ಕೂಡಾ ತನ್ನ ಗಳಿಕೆಯ 16%ದಾನ ಮಾಡಬೇಕು ಎಂದು ಧರ್ಮ ಹೇಳುತ್ತದೆ. ನಾನು ಯಾವುದೇ ಪ್ರತಿಫಲಾಪೇಕ್ಷೆಯಿಂದ ಈ ಕಾರ್ಯ ಮಾಡುತ್ತಿಲ್ಲ. ಯಾವುದೇ ರಾಜಕೀಯಕ್ಕೆ ಹೋಗುವ ಉದ್ದೇಶ ನನಗಿಲ್ಲ. ನನ್ನ ಜೀವನದ ಪರ್ಯಂತ ಇದೇ ರೀತಿ ಸೇವೆ ಮಾಡುತ್ತಾ ಇರುತ್ತೇನೆ ಎಂದು ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಹೋಟೆಲ್ ಉದ್ಯಮಿ, ಕೊಡುಗೈದಾನಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಅಭಿಪ್ರಾಯ ಪಟ್ಟರು.

ನ.5ರಂದು ಸಂಜೆ ಚಿತ್ತೂರು ಸ.ಹಿ.ಪ್ರಾ.ಶಾಲಾ ವಠಾರದಲ್ಲಿ ಸಾರ್ವಜನಿಕ ಅಭಿನಂದನಾ ಸಮಿತಿ ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರಿಗೆ ಹುಟ್ಟೂರ ಸಮ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಜವಾಬ್ದಾರಿ ನನ್ನಲ್ಲಿ ಇನ್ನಷ್ಟು ಹೆಚ್ಚಿಸಿದೆ. ನನ್ನ ಸೇವೆಯನ್ನು ರಾಜ್ಯಮಟ್ಟದಲ್ಲಿ ಗುರುತಿಸಿದ ಸರ್ಕಾರಕ್ಕೆ ಕೃತಜ್ಣತೆ ಸಲ್ಲಿಸುತ್ತೇನೆ. ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದಾಗ ಆದ ಸಂತೋಷಕ್ಕಿಂತ ಇಂದು ಹುಟ್ಟೂರಿನಲ್ಲಿ ನೀವು ನೀಡಿದ ಸನ್ಮಾನ ಹೆಚ್ಚಿನ ಸಂತೋಷನ್ನುಂಟು ಮಾಡಿದೆ. ನಿಮ್ಮ ಪ್ರೀತಿ ಅಭಿಮಾನಕ್ಕೆ ಸದಾ ನಾನು ಚಿರ‌ಋಣಿ ಎಂದರು.

ತಂದೆ ಮಾಡಿಟ್ಟ ಸಂಪತ್ತಿನ ಮೇಲೆಯೇ ಮಕ್ಕಳು ಅವಲಂಬಿತರಾದರೆ ಅವರು ಸೋಮಾರಿಗಳಾಗುತ್ತಾರೆ. ಮಕ್ಕಳು ಕೂಡಾ ದುಡಿಯಬೇಕು. ಕೂಡಿಟ್ಟ ಸಂಪತ್ತು ಎಂದಿಗೂ ಶಾಶ್ವತವಾಗಿರುವುದಿಲ್ಲ. ದುಡಿಯಬೇಕು, ಗಳಿಕೆಯ ಸ್ವಲ್ಪ ಭಾಗವನ್ನು ಸಮಾಜಕ್ಕೂ ನೀಡಬೇಕು ಎಂದು ಹೇಳಿದ ಮಂಜರು, ಮಾರಣಕಟ್ಟೆಯಲ್ಲಿ ಜನಿಸಿದ್ದಕ್ಕೆ ಹೆಮ್ಮೆ ಪಡುತ್ತೇನೆ. ಬ್ರಹ್ಮಲಿಂಗೇಶ್ವರ ಸ್ವಾಮಿಯ ಅನುಗ್ರಹ, ಹುಟ್ಟೂರ ಜನತೆಯ ಅಭಿಮಾನ, ಕುಟುಂಬಿಕರ ಪ್ರೀತಿ ನನ್ನ ಈ ಹಂತಕ್ಕೆ ಬೆಳೆಸಿದೆ ಎಂದರು.

ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿ, ದಾನವನ್ನು ಬಹಳ ಜನ ಮಾಡುತ್ತಾರೆ. ಸ್ವಾರ್ಥ ಇಲ್ಲದೇ ಸದ್ವಿನಿಯೋಗದ ಉದ್ದೇಶದಿಂದ ಮಾಡುವ ದಾನ ಸಾರ್ಥಕತೆ ತಂದುಕೊಡುತ್ತದೆ. ಕೃಷ್ಣಮೂರ್ತಿ ಮಂಜರು ಮಾಡುತ್ತಿರುವ ದಾನ ಧರ್ಮ ಪ್ರಕ್ರಿಯೆ ಎಲ್ಲೆ ಇಲ್ಲದ್ದು. ನಮ್ಮೂರ ಕರ್ಣ ಎಂದು ಅವರನ್ನು ಪರಿಭಾವಿಸಬಹುದು. ಧರ್ಮನಿಷ್ಠೆಯೊಂದಿಗೆ, ದೈವಭಕ್ತರು ಆಗಿರುವ, ಧರ್ಮಿಷ್ಟರಾದ ಕೃಷ್ಣಮೂರ್ತಿ ಮಂಜರ ಸೇವೆಗೆ ರಾಷ್ಟ್ರ ಪ್ರಶಸ್ತಿ ಲಭಿಸಿದರೂ ಆಶ್ಚರ್ಯ ಪಡುವಂತಿಲ್ಲ. ಕೃಷ್ಣಮೂರ್ತಿ ಮಂಜರು ಪರಿಪೂರ್ಣ ವ್ಯಕ್ತಿ ಎಂದ ಅವರು, ಮಂಜರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದರಿಂದ ಪ್ರಶಸ್ತಿಯ ಮೌಲ್ಯವೂ ಹೆಚ್ಚಿದೆ ಎಂದರು.

ಕರ್ನಾಟಕ ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಅಭಿನಂದನೆಯ ಮಾತುಗಳನ್ನಾಡಿ, ಶಿಕ್ಷಣ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಿಗೆ ಸಾಕಷ್ಟು ಕೊಡುಗೆಗಳನ್ನು ನೀಡುವುದರೊಂದಿಗೆ ಹೈದರಬಾದ್‌ನಲ್ಲಿ ಕಲಾಕ್ಷೇತ್ರದಲ್ಲಿಯೂ ತನ್ನದೇಯಾದ ಛಾಪು ಮೂಡಿಸಿದ್ದಾರೆ. ನಿಸ್ವಾರ್ಥ ಸೇವೆಗೆ ಕೃಷ್ಣಮೂರ್ತಿ ಮಂಜರು ಹೆಚ್ಚು ಸೂಕ್ತರೆನಿಸುತ್ತಾರೆ. ಅವರ ಸೇವಾಕೈಂಕರ್ಯಕ್ಕೆ ಆರ್ಹವಾಗಿಯೇ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ ಎಂದರು.

ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ, ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಸದಾಶಿವ ಶೆಟ್ಟಿ, ಮಾರಣಕಟ್ಟೆ ದೇವಳದ ಅರ್ಚಕ ಎಂ.ಶ್ರೀಧರ ಮಂಜರು, ಶಾಂತಿ ಕೃಷ್ಣಮೂರ್ತಿ ಮಂಜರು, ಅಭಿನಂದನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಹುಟ್ಟೂರ ಜನತೆಯ ಪರವಾಗಿ ಆಭಿನಂದನಾ ಸಮಿತಿ ಬೆಳ್ಳಿಯ ಕಿರೀಟ ತೊಡಿಸಿ ಅದ್ದೂರಿಯಾಗಿ ಸನ್ಮಾನಿಸಲಾಯಿತು. ದೊಡ್ಡ ಸಂಖ್ಯೆಯಲ್ಲಿ ವಿವಿಧ ಸಂಘಸಂಸ್ಥೆಗಳು, ಶಿಕ್ಷಣ ಸಂಸ್ಥೆ, ದೇವಸ್ಥಾನಗಳ ವತಿಯಿಂದ ಅಭಿನಂದಿಸಿದರು.
ಅಭಿನಂದನಾ ಸಮಿತಿಯ ಡಾ.ಅತುಲ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಭಾಗವತ ರಾಘವೇಂದ್ರ ಮಯ್ಯ ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥಿಸಿ, ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ಸನ್ಮಾನ ಪತ್ರ ವಾಚಿಸಿದರು. ವಂಡಬಳ್ಳಿ ಜಯರಾಮ ಶೆಟ್ಟಿ ವಂದಿಸಿದರು. ದಾಮೋದರ ಶರ್ಮ ಕಾರ್ಯಕ್ರಮ ನಿರ್ವಹಿಸಿದರು.

ಸಭಾಕಾರ್ಯಕ್ರಮಕ್ಕೆ ಪೂರ್ವದಲ್ಲಿ ಮಾರಣಕಟ್ಟೆ ದೇವಸ್ಥಾನದಿಂದ ವೈಭವದ ಮೆರವಣಿಗೆಯಲ್ಲಿ ಮಂಜರನ್ನು ಬರಮಾಡಿಕೊಳ್ಳಲಾಯಿತು. ವೈಭವದ ಮೆರವಣಿಗೆಯಲ್ಲಿ ವಿವಿಧ ವೇಷಗಳು, ಕೊಂಬು ಕಹಳೆ, ಚಂಡೆ ವಾದನ, ಪೂರ್ಣಕುಂಭದೊಂದಿಗೆ ತೆರೆದ ವಾಹನದಲ್ಲಿ ಮಂಜರನ್ನು ಸನ್ಮಾನ ವೇದಿಕೆಗೆ ಕರೆತರಲಾಯಿತು.

ಪುಟಾಣಿಗಳಿಂದ ಅಭಿನಂದನೆ
ಸುಮಾರು 7 ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿದ್ದು ಮಾತ್ರವಲ್ಲದೆ ಹಲವಾರು ಶಾಲೆಗಳಿಗೆ ಉದಾರವಾಗಿ ಕೊಡುಗೆ ನೀಡುತ್ತಿರುವ ಮಂಜರ ಸೇವೆಗೆ ಪುಟಾಣಿ ಮಕ್ಕಳು ಗುಲಾಬಿ ಹೂವನ್ನು ನೀಡುವ ಮೂಲಕ ಅಭಿನಂದನೆ ಸಲ್ಲಿಸಿದ್ದು ವಿಶೇಷವಾಗಿತ್ತು. ಛಂದೋಬದ್ದವಾಗಿ ಪದಪುಂಜಗಳ ಜೋಡಿಸಿ ರೂಪಿಸಿದ ಅಭಿನಂದನಾ ಪತ್ರ, ಅತ್ಯಂತ ಆಕರ್ಷಣೀಯ ಸ್ಮರಣೀಕೆ, ರಜತ ಕಿರೀಟದೊಂದಿಗೆ ಅಭಿಮಾನಪೂರ್ವಕ ಸನ್ಮಾನ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.

ಅಶೋಕ ಸಾರಂಗ ಬಳಗದವರಿಂದ ಸಂಗೀತ ರಸಮಂಜರಿ, ಮಂಜುನಾಥ ಕುಂದೇಶ್ವರ ಅವರಿಂದ ಮಿಮಿಕ್ರಿ ಕಾರ್ಯಕ್ರಮ ನಡೆಯಿತು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!