spot_img
Wednesday, January 22, 2025
spot_img

ಕೊಲ್ಲೂರು ವಿದ್ಯುತ್ ಉಪಕೇಂದ್ರ ಉದ್ಘಾಟನೆ

ಕೊಲ್ಲೂರು: ನಿರಂತರ 24 ಗಂಟೆ ಗುಣಮಟ್ಟದ ವಿದ್ಯುತ್ ನೀಡುವ ಸಲುವಾಗಿ ರಾಜ್ಯದಲ್ಲಿ ೨೦೦ ಟ್ರಾನ್ಸ್‌ಪಾರ್ಮರ್ ಬ್ಯಾಂಕ್‌ಗಳ ನಿರ್ಮಾಣ ಮಾಡಲಾಗಿದೆ. ಕೆಟ್ಟು ಹೋದ ಟಿ.ಸಿಗಳನ್ನು ತಕ್ಷಣ ಬದಲಾಯಿಸುವ ವ್ಯವಸ್ಥೆ ಇದೆ. ಜನಸ್ನೇಹಿಯಾಗಿ ಇಂಧನ ಇಲಾಖೆಯನ್ನು ಪರಿವರ್ತಿಸಲಾಗಿದೆ. ಕೊಲ್ಲೂರು ಭಾಗದ ಬಹುದಿನದ ಬೇಡಿಕೆ, ಸುಮಾರು 14.5 ಕೋಟಿ ವೆಚ್ಚದ ವಿದ್ಯುತ್ ಉಪಕೇಂದ್ರಕ್ಕೆ ಇದ್ದ ತೊಡಕುಗಳನ್ನು ನಿವಾರಿಸಿಕೊಂಡು ಕಾರ್ಯರಂಭಗೊಳಿಸಲಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಕುಂದಾಪುರದ ಮೆಸ್ಕಾಂ ವಿಭಾಗದ ಹಾಲ್ಕಲ್‌ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ೩೩/೧೧ ಕೆವಿ ಸಾಮರ್ಥ್ಯದ ಕೊಲ್ಲೂರು ವಿದ್ಯುತ್ ಉಪ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಸರ್ಕಾರ ಜನಾನುಕೂಲಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಬೆಳಕು ಯೋಜನೆಯ ಮೂಲಕ ನಿಯಮದಲ್ಲಿ ಸಡಿಲೀಕರಣ ಮಾಡಿ ಪಂಚಾಯಿತಿ ನಿರಪೇಕ್ಷಣ ಪತ್ರ ಇಲ್ಲದೇ ಆಧಾರ್ ಕಾರ್ಡ್, ರೇಷನ್ ಕಾರ್ಡ್‌ನ ಆಧಾರದಲ್ಲಿ ವಿದ್ಯುತ್ ಸಂಪರ್ಕ ನೀಡಲಾಗಿದೆ. ಒಂದು ವರ್ಷದಲ್ಲಿ ೨.೫ಲಕ್ಷ ಮನೆಗೆ ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದರು.

ತಿಂಗಳ ಮೂರನೇ ಶನಿವಾರ ವಿದ್ಯುತ್ ಅದಾಲತ್ ಮೂಲಕ ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಜನರ ಅಹವಾಲುಗಳನ್ನು ಆಲಿಸಿ ಸಮಸ್ಯೆ ಪರಿಹಾರ ಮಾಡುತ್ತಿದ್ದಾರೆ ಎಂದು ಹೇಳಿದ ಸಚಿವರು, ರಾಜ್ಯ ಸರ್ಕಾರ ಇವತ್ತು ವಿದ್ಯಾನಿಧಿ ಯೋಜನೆ ಮೂಲಕ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಕೆಲಸ ಮಾಡುತ್ತಿದೆ. ಗ್ರಾಮ ಒನ್ ಕೇಂದ್ರಗಳ ಮೂಲಕ ಜನರಿಗೆ ಹತ್ತಿರದಲ್ಲಿ ಸರ್ಕಾರದ ಸೇವೆಗಳು ಲಭ್ಯವಾಗುತ್ತಿವೆ. ಕಂದಾಯ ಇಲಾಖೆಯ ಮೂಲಕ ೭೨ ಗಂಟೆಗಳಲ್ಲಿ ಮನೆ ಬಾಗಿಲಿಗೆ ಪಿಂಚಣಿ ಸಿಗುವಂತಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಎಂ ಸುಕುಮಾರ ಶೆಟ್ಟಿ ಮಾತನಾಡಿ, ಇಂಧನ ಸಚಿವ ವಿ.ಸುನಿಲಕುಮಾರ್, ಸಂಸದ ಬಿ.ವೈ ರಾಘವೇಂದ್ರ ಹಾಗೂ ರಾಜ್ಯದ ಸರ್ಕಾರದ ಇಚ್ಛಾ ಶಕ್ತಿಯಿಂದಾಗಿ, ಕೊಲ್ಲೂರು ಹಾಗೂ ಸುತ್ತ-ಮುತ್ತಲಿನ ಗ್ರಾಮಸ್ಥರಿಗೆ ಈ ದಿನವೇ ನಿಜವಾದ ದೀಪಾವಳಿ ಸಂಭ್ರಮವನ್ನು ತಂದಿದೆ. ಕೊಲ್ಲೂರಿನಲ್ಲಿ ವಿದ್ಯುತ್ ಸರಬರಾಜು ಉಪ ಕೇಂದ್ರ ಆರಂಭವಾಗುವ ಮೂಲಕ ಈ ಭಾಗದ ಜನರ ದಶಕಗಳ ಬೇಡಿಕೆ ಈಡೇರಿದಂತಾಗಿದೆ. ಬೈಂದೂರಿನಂತಹ ಹಿಂದುಳಿದ ಕ್ಷೇತ್ರಗಳ ಜನರಿಗೆ ಬೆಳಕು ಯೋಜನೆ ಅವಕಾಶವನ್ನು ತೆರೆದಿಟ್ಟಿದೆ. ಈ ಉಪ ಕೇಂದ್ರದಿಂದ ೧೭೫೦ ಪಂಪ್ ಸೆಟ್‌ಗಳಿಗೆ ಅನೂಕೂಲವಾಗಲಿದೆ. ಕರ್ಕುಂಜೆ ಹಾಗೂ ಸುತ್ತ-ಮುತ್ತಲಿನ ಪರಿಸರದವರಿಗೆ ಅನೂಕೂಲವಾಗಲು ಕರ್ಕುಂಜೆಯಲ್ಲಿ ವಿದ್ಯುತ್ ಉಪ ವಿಭಾಗ ಕೇಂದ್ರ ಹಾಗೂ ಕೊಲ್ಲೂರು ಕ್ಷೇತ್ರದ ಅಭಿವೃದ್ಧಿಗಾಗಿ ಕೊಲ್ಲೂರಿನಲ್ಲಿ ಯು.ಜಿ ಕೇಬಲ್ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು,

ಈ ಸಂದರ್ಭದಲ್ಲಿ ಬಸ್ರೂರು ಮಹಾಲಿಂಗೇಶ್ವರ ದೇವಳದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ, ಗುತ್ತಿಗೆದಾರರಾದ ಜ್ಯೋತಿ ಇಲೆಕ್ಟ್ರಿಕಲ್ ಮಂಗಳೂರು ಇದರ ಡಾ.ಉದಯಚಂದ್ರ ಸುವರ್ಣ ಇವರನ್ನು ಸನ್ಮಾನಿಸಲಾಯಿತು.

ಮೆಸ್ಕಾಂ ತಾಂತ್ರಿಕಾ ವಿಭಾಗದ ನಿರ್ದೇಶಕಿ ಡಿ.ಪದ್ಮಾವತಿ, ಗೋಳಿಹೊಳೆ ಗ್ರಾ.ಪಂ ಅಧ್ಯಕ್ಷೆ ಇಂದಿರಾ, ಕೊಲ್ಲೂರು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಭಟ್, ಜಡ್ಕಲ್ ಗ್ರಾ.ಪಂ ಅಧ್ಯಕ್ಷೆ ವನಜಾಕ್ಷಿ ಎಸ್.ಶೆಟ್ಟಿ, ಇಡೂರು-ಕುಂಜ್ಞಾಡಿ ಗ್ರಾ.ಪಂ.ಅಧ್ಯಕ್ಷ ಅಮೀನ್ ಶೆಟ್ಟಿ, ಕೆರಾಡಿ ಗ್ರಾ.ಪಂ.ಅಧ್ಯಕ್ಷೆ ಗಿರಿಜಾ ಶೆಡ್ತಿ, ಕಾಲ್ತೋಡು ಗ್ರಾ.ಪಂ. ಅಧ್ಯಕ್ಷೆ ನೇತ್ರಾವತಿ ಆಚಾರ್ ಉಪಸ್ಥಿತರಿದ್ದರು.

ಸೌಕೂರುವಿನಲ್ಲಿ ಇತ್ತೀಚೆಗೆ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಪ್ರಶಾಂತ್ ದೇವಾಡಿಗ ಕುಟುಂಬಕ್ಕೆ ೧ ಲಕ್ಷ ಪರಿಹಾರ ನೀಡಲಾಯಿತು. ಅಧೀಕ್ಷಕ ಇಂಜಿನಿಯರ್ ಪಿ.ದಿನೇಶ್ ಉಪಾಧ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯನಿರ್ವಹಕ ಇಂಜಿನಿಯರ್ ರಾಕೇಶ ಬಿ ವಂದಿಸಿದರು. ಶಿಕ್ಷಕ ವಿಶ್ವನಾಥ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!