spot_img
Monday, March 23, 2026
spot_img

ಹಿರಿಯ ಕಲಾವಿದ ಆಲೂರು ಸುರೇಂದ್ರ ಅವರಿಗೆ ಎಂ.ಎಂ ಹೆಗ್ಡೆ ಪ್ರಶಸ್ತಿ

ಕುಂದಾಪುರ: ಬಡುಗುತಿಟ್ಟು ಯಕ್ಷಗಾನ ಮೇಳಗಳ ಯಜಮಾನರಾಗಿ ಮಾರಣಕಟ್ಟೆ ಮೇಳವನ್ನು ದೀರ್ಘ ಕಾಲ ಮುನ್ನೆಡೆಸಿದ, ನ್ಯಾಯವಾದಿ ಎಂ. ಎಂ ಹೆಗ್ಡೆಯವರ ನೆನಪಿನಲ್ಲಿ ಕೊಡುವ ಈ ಸಾಲಿನ ಎಂ.ಎಂ ಹೆಗ್ಡೆ ಸಂಸ್ಮರಣಾ ಪ್ರಶಸ್ತಿಯನ್ನು ಹಿರಿಯ ಪುರುಷ ವೇಷಧಾರಿ, ಎಂ ಎಂ ಹೆಗ್ಡೆಯವರ ಯಜಮಾನಿಕೆಯ ಮಾರಣಕಟ್ಟೆ ಮೇಳದಲ್ಲಿ ದೀರ್ಘ ಕಾಲ ಕಲಾ ಸೇವೆ ಸಲ್ಲಿಸಿದ ಆಲೂರು ಸುರೇಂದ್ರ ಇವರಿಗೆ ನೀಡಲಾಗುತ್ತದೆ. ಪ್ರಶಸ್ತಿಯು 10,000 ನಗದು ಸನ್ಮಾನ ಪತ್ರವನ್ನೊಳಗೊಂಡಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜು. 23ರಂದುಆಲೂರಿನಲ್ಲಿರುವ ಸುರೇಂದ್ರ ಅವರ ಸ್ವಗೃಹದಲ್ಲಿ ನೆರವೇರಲಿದೆ.

ರಂಗಸ್ಥಳ ಸಾಂಸ್ಕೃತಿಕ ಸೇವಾ ಮತ್ತು ಸಂಶೋಧನಾ ಟ್ರಸ್ಟ್ ಉಡುಪಿ ಇವರ ಸಹಯೋಗದೊಂದಿಗೆ ಎಂ.ಎಂ ಹೆಗ್ಡೆ ಪ್ರತಿಷ್ಠಾನ ಕುಂದಾಪುರ ಇವರ ವತಿಯಿಂದ ಪ್ರಶಸ್ತಿ ಪ್ರದಾನ ನೆರವೇರಲಿದೆ.

ಯಕ್ಷ ಸಂವಿಧಾನದ ಚೌಕಟ್ಟಿನಲ್ಲಿಯೇ ಪ್ರಚಾರ ಬಯಸದೇ ಕಲಾಸೇವೆಯಲ್ಲಿಯೇ ಸಾರ್ಥಕತೆ ಕಾಣುವ ಬೆರಳೆಣಿಕೆಯ ಕಲಾವಿದರ ಪೈಕಿ ಒರ್ವ ಪುರುಷ ವೇಷಧಾರಿ ಆಲೂರು ಸುರೇಂದ್ರ ಅವರು.

ಆಲೂರು ಸುರೇಂದ್ರ ಎಂದರೆ ಯಕ್ಷರಂಗದ ಚಿರ ಯುವಕ. ಇಂದಿಗೂ ಕೂಡಾ ಅಭಿಮನ್ಯುವಾಗಬಲ್ಲರು. ಧರ್ಮಸಂಕಟಕ್ಕೆ ಸಿಲುಕುವ ಸುಧನ್ವನೂ ಆಗಬಲ್ಲರು. ವೃದ್ದಾಪ್ಯದಲ್ಲಿರುವ ಪಟ್ಟಾಭಿಷೇಕದ ದಶರಥನಾಗಬಲ್ಲರು. ಪಾತ್ರ ಹೇಗಿದ್ದರೆನು ಕಲಾವಿದನಾದವನ್ನು ಅದಕ್ಕೆ ಜೀವ ಕೊಡಬೇಕು ಎನ್ನುವುದು ಇವರ ಧ್ಯೇಯ. ಯಕ್ಷಗಾನ ಪ್ರಿಯರಿಗೆ ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ ನಿತ್ಯನೂತನ. ಬೆಳಗಿನ ಜಾವ ರಂಗದಲ್ಲಿ ಪ್ರತ್ಯಕ್ಷನಾಗುವ ಬ್ರಹ್ಮಲಿಂಗೇಶ್ವರ ಸ್ವಾಮಿ ಸಾಕ್ಷಾತ್ ಮಾರಣಕಟ್ಟೆ ದೇವಸ್ಥಾನದಲ್ಲಿ ಗರ್ಭಗುಡಿಯಲ್ಲಿ ಇರುವಂತೆ ಕಂಗೋಳಿಸುವ ಪರಿ ಅನನ್ಯ. ಅದೇ ಗಂಭೀರತೆ, ಅಚಲ ನಿಲುವು, ವಾಕ್ಷಿಗಳು ಪ್ರೇಕ್ಷಕರಲ್ಲಿ ಭಕ್ತಿಯ ಸಂಚಲನ ಉಂಟು ಮಾಡುತ್ತವೆ. ಇಂದಿಗೂ ಕೂಡಾ ಭಾವ ತೀವ್ರತೆಯಿಂದ ಭಕ್ತರು ಕೈ ಮುಗಿಯುವುದನ್ನು ಕಾಣಬಹುದು. ಈ ಪಾತ್ರ ಸುರೇಂದ್ರರಿಗೆ ಕಟ್ಟಿಟ್ಟ ಬುತ್ತಿ ಎನ್ನುವಷ್ಟು ಪ್ರಸಿದ್ಧಿ ತಂದುಕೊಟ್ಟಿದೆ.

ಅಂದಿನ ಪರಂಪರೆಯ ಘಟಾನುಘಟಿ ಕಲಾವಿದರ ಒಡನಾಟದಲ್ಲಿ ಸಿದ್ದಾಂತ ಮತ್ತು ಮೌಲ್ಯಗಳನ್ನು ತನ್ನೊಳಗೆ ಹುದುಗಿಸಿಕೊಂಡ ಇವರು ಕಲೆಯ ಚೌಕಟ್ಟು, ಪಾತ್ರದ ವ್ಯಾಪ್ತಿ ಅಷ್ಟರ ಪರೀಧಿಯಲ್ಲಿ ಪಾತ್ರ ನಿರ್ವಹಣೆ ಮಾಡುತ್ತಾರೆ. ಪ್ರೇಕ್ಷಕರಿಗೆ ಅತಿಯಾಗದ ಕುಣಿತ, ದೀರ್ಘವಾದ ಮಾತುಗಾರಿಕೆ, ಕಥೆಯ ಹೊರತಾದ ಸಂಭಾಷಣೆಗಳಿಂದ ಮುಕ್ತವಾಗಿ ಯಕ್ಷಸಾಹಿತ್ಯವನ್ನೇ ಹಿತವಾಗಿ, ಸುಸ್ಪಷ್ಟವಾಗಿ ಕಟ್ಟಿಕೊಡುವ ಇವರ ವಾಚಿಕ, ವೇಷಗಾರಿಕೆ, ಕುಣಿತ ಮತ್ತು ರಂಗ ನಡೆಯಲ್ಲಿ ಹಿಂದಿನ ಮೌಲಿಕ ಕ್ಷಣಗಳನ್ನು ಕಾಣಬಹುದು.

ಆಲೂರಿನ ದಿ|ಗೋಪಾಲ ಮತ್ತು ದಿ|ಸಿದ್ಧು ದಂಪತಿಗಳ ಎರಡನೇ ಪುತ್ರರಾಗಿ ೧೯೬೧ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ಆರನೇ ತರಗತಿಯಲ್ಲಿರುವಾಗಲೇ ದಿ. ಕೊಪ್ಪಟೆ ಮುತ್ತ ಗೌಡ ಅವರೊಂದಿಗೆ ಹೂವಿನಕೂಲುವಿಗೆ ಅರ್ಥ ಹೇಳಲು ಹೋದ ಇವರು ಮುಂದೆ ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಗುರು ವೀರಭದ್ರ ನಾಯಕ ಹಾಗೂ ಕರ್ಜೆ ಹೆಬ್ಬಾರ್ ಅವರಲ್ಲಿ ಹೆಜ್ಜೆ ಕಲಿತರು. ಆಲೂರು ಉಗ್ರಾಣಿ ಮನೆ ಅನಂತ ಮಾಸ್ತರ್ ಅರ್ಥಗಾರಿಕೆ ಹೇಳಿ ಕೊಟ್ಟರು.

ಮಾರಣಕಟ್ಟೆ ಮೇಳದ ಸುವರ್ಣ ಯುಗವೆಂದೇ ಹೇಳಬಹುದಾದ ದಿ|ಎಂ.ಎಂ.ಹೆಗ್ಡೆ ಅವರು ಯಜಮಾನಿಕೆ ನಡೆಸುತ್ತಿದ್ದ ಸಂದರ್ಭ ಮೇಳಕ್ಕೆ ಸೇರಿದ ಸುರೇಂದ್ರ ಅಲ್ಲಿ ಎರಡು ವರ್ಷ ಸೇವೆ ಸಲ್ಲಿಸಿ, ಮುಂದೆ ಎಂಟು ವರ್ಷಗಳ ಕಾಲ ಕಮಲಶಿಲೆ ಮೇಳದಲ್ಲಿ, ಸೌಕೂರು ಮೇಳದಲ್ಲಿ ಮೂರು ವರ್ಷ ಕಲಾಸೇವೆ ಸಲ್ಲಿಸಿದರು. ಬಳಿಕ ಮಾರಣಕಟ್ಟೆ ಮೇಳಕ್ಕೆ ಮರಳಿದ ಅವರು ಕಳೆದ 36 ವರ್ಷಗಳಿಂದ ಮಾರಣಕಟ್ಟೆ ಮೇಳದಲ್ಲಿಯೇ ಸೇವೆ ಸಲ್ಲಿಸುತ್ತಿರುವ ಇವರದ್ದು ಒಟ್ಟು 47 ವರ್ಷಗಳ ಯಕ್ಷಗಾನ ತಿರುಗಾಟ ಅನುಭವ.

ಸಾತ್ವಿಕ ವರ್ಚಸ್ಸಿನ ಪಾತ್ರಗಳ ಮೂಲಕವೇ ಬೆಳೆದು ಬಂದ ಇವರ ವಿಷ್ಣು, ಕೃಷ್ಣ ನಂತಹ ಪಾತ್ರಗಳಲ್ಲಿ ಹೆಚ್ಚು ತಾದಾತ್ಮಕತೆ ಕಾಣಬಹುದು. ವಾಕ್ ಚಕಮಕಿ ಇರುವ ಪಾತ್ರಗಳಲ್ಲಿಯೂ ಕೂಡಾ ತನ್ನ ಮಾತಿನ ಪ್ರಬುದ್ಧತೆಯನ್ನು ತೋರಿಸಬಲ್ಲರು. ಕುಣಿತವೇ ಪ್ರಧಾನವೆನಿಸುವ ಪಾತ್ರವನ್ನು ಕೂಡಾ ಸ್ಪರ್ಧಾತ್ಮಕವಾಗಿ ಮಾಡಬಲ್ಲರು. ನವ ರಸವನ್ನು ರಂಗದ ಮೇಲೆ ನಾಜೂಕಾಗಿ ಕಡೆದಿಡುವ ನೈಪುಣ್ಯತೆ ಇವರಿಗಿದೆ.
ಯಕ್ಷಗಾನ ಧ್ರುವತಾರೆಗಳಾದ ನಾರ್ಣಪ್ಪ ಉಪ್ಪೂರರು, ನರಸಿಂಹ ದಾಸ್, ಶೀನದಾಸ್, ಮದ್ದಲೆಗಾರ ತಿಮ್ಮಪ್ಪ ನಾಯ್ಕ ಹುಂಚದಕಟ್ಟೆ, ಶ್ರೀನಿವಾಸ ಆಚಾರ್, ಕೆಮ್ಮಣ್ಣು ಆನಂದ, ಶೃಂಗೇರಿ ಗೋಪಾಲ ಕೃಷ್ಣಯ್ಯ, ವಂಡಾರು ಬಸವ, ಪೆರ್ಡೂರು ರಾಮ, ವೀರಭದ್ರ ನಾಯಕ, ಮೊರ್ಗೋಳಿ ಗೋವಿಂದ ಸೇರುಗಾರ, ಕೊಪ್ಪಾಟೆ ಮುತ್ತ, ರಾಮಕೃಷ್ಣ ಪ್ರಭು ಹಳ್ಳಾಡಿ, ಹಳ್ಳಾಡಿ ಕುಷ್ಟ, ಮರಿಯಪ್ಪ ಆಚಾರ್, ಸಾಸ್ತಾನ ಪುಟ್ಟಯ್ಯ ಆಚಾರ್ಯ, ಗುಂಡ್ಮಿ ಬಸವ, ಅರಾಟೆ ಮಂಜು, ಎಂ.ಎ ನಾಯ್ಕ್, ಕೋಟ ವೈಕುಂಠ ಹೀಗೆ ಅಂದಿನ ಕಲಾವಿದರ ಗರಡಿಯಲ್ಲಿ ಪಳಗಿದ ಸುರೇಂದ್ರರು ಇಂದಿಗೂ ಕೂಡಾ ಚೌಕಿ ಹಾಗೂ ರಂಗದ ಶಿಸ್ತನ್ನು ಪಾಲಿಸಿಕೊಂಡು ಬರುತ್ತಿದ್ದಾರೆ.

ಸಾಕಷ್ಟು ಯುವ ಕಲಾವಿದರನ್ನು ನೇರ್ಪುಗೊಳಿಸಿದ ಸಂತಷ ಹೊಂದಿರುವ ಇವರು, ಶಿಷ್ಯರಲ್ಲಿಯೂ ಯಕ್ಷಗಾನದ ಮೌಲ್ಯಗಳನ್ನು ತುಂಬಿರುವುದನ್ನು ಕಾಣುತ್ತಾರೆ. ಕಲಾವಿದ ಕಲೆಗೆ ದ್ರೋಹ ಎಸಗಬಾರದು. ಕಲಾ ಸೇವೆ ಅದೊಂದು ಸೌಭಾಗ್ಯ ಎನ್ನುವ ಇವರು ಯಾವುದೇ ಪ್ರಚಾರ, ಸನ್ಮಾನಗಳತ್ತ ಆಸಕ್ತಿ ಹೊಂದಿದವರಲ್ಲ. ಪತ್ನಿ ಸಿಂಗಾರಿ, ಮಕ್ಕಳಾದ ಹೇಮಾವತಿ, ಚಂದ್ರಕಾಂತ, ಮಧುಕೇಶ್ವರ, ಜೀವನ್, ಅಳಿಯ, ಮೊಮ್ಮಕ್ಕಳೊಂದಿನ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.

ದಿ|ಎಂ.ಎಂ.ಹೆಗ್ಡೆ ಅವರ ಮಾರ್ಗದರ್ಶನ, ಶಿಸ್ತಿನ ಕೂಟ, ಆವತ್ತಿನ ತಿರುಗಾಟ ಸುವರ್ಣ ನೆನಪುಗಳನ್ನು ಸದಾ ಮೆಲುಕು ಹಾಕುವ ಆಲೂರು ಸುರೇಂದ್ರರವರಿಗೆ ಆರ್ಹವಾಗಿ ದಿ|ಎಂ.ಎಂ.ಹೆಗ್ಡೆ ಪ್ರಶಸ್ತಿ ಲಭಿಸಿದೆ.

(ನಾಗರಾಜ್ ವಂಡ್ಸೆ)

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!