spot_img
Wednesday, January 22, 2025
spot_img

ಗ್ರಾಮಸಭಾ ಅಧಿಕಾರ ಹರಣ: ಕರುಣಾಕರ ಶೆಟ್ಟಿ ಒಬ್ಬರೇ ಕಸ ಗುಡಿಸಿದರೆ ಸಾಕೇ?

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮುಡುಗೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ ತಾಲೂಕು ಪಂಚಾಯಿತಿ ಕಚೇರಿಯ ಕಸ ಗುಡಿಸುತ್ತಿರುವ ಸಚಿತ್ರ ಸುದ್ದಿಯನ್ನು ’ದ ಹಿಂದೂ’ ಪತ್ರಿಕೆ ಮೇ 7ರ ಸಂಚಿಕೆಯಲ್ಲಿ ಪ್ರಕಟಿಸಿದೆ. ಇದು ಈಗ ಹಲವರ ಗಮನ ಸೆಳೆದುದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
’ತಾಲೂಕು ಪಂಚಾಯಿತಿ ಅಧಿಕಾರಿಗಳು ಗ್ರಾಮಸಭಾದ ಅಧಿಕಾರ ಹರಣ ಮಾಡಿರುವುದರ ವಿರುದ್ಧ ಪ್ರತಿಭಟನೆಗಾಗಿ ಈ ವಿನೂತನ ಕ್ರಮ; ಈ ಕ್ರಮ ಕೇವಲ ಒಂದು ದಿನಕ್ಕೆ ಸೀಮಿತ ಅಲ್ಲ; ಅಧಿಕಾರಿಗಳು ಕಿತ್ತುಕೊಳ್ಳಲು ಹವಣಿಸಿರುವ ಗ್ರಾಮಸಭಾದ ಅಧಿಕಾರದ ಮರುಸ್ಥಾಪನೆಯವರೆಗೆ ಈ ಪ್ರತಿಭಟನೆ ಮುಂದುವರಿಯಲಿದೆ’ ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.

ಶೆಟ್ಟರ ಆರೋಪ ಏನು? : ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಭರವಸೆ ಯೋಜನೆಯಡಿ ಒಂದು ಎಕ್ರೆ ಜಮೀನಿನಲ್ಲಿ ಅಡಿಕೆ ಬೆಳೆಸಲು ಇಚ್ಚಿಸುವ ರೈತರಿಗೆ ಒಂದು ಲಕ್ಷ ರೂಪಾಯಿ ಮೊತ್ತದ ಕಾಮಗಾರಿ ಕೈಗೊಳ್ಳಲು ಅವಕಾಶ ಇದೆ. ಇದಕ್ಕೆ ಆರ್ಹರಾದ ಫಲಾನುಭವಿಗಳನ್ನು ಆಯ್ಕೆ ಮಾಡುವುದು ಗ್ರಾಮಸಭಾದ ಅಧಿಕಾರ. ಆದರೆ ಹೊಸನಗರ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಇದನ್ನು ಉಲ್ಲಂಘಿಸಿ ತಾವೇ ಮುಡುಗೊಪ್ಪ ಗ್ರಾಮ ಪಂಚಾಯಿತಿಯ ರೈತರನ್ನು ನೇರವಾಗಿ ಸಂಪರ್ಕಿಸಿ, ಅವರಿಂದ ಲಂಚಪಡೆದು ೩೫ ಫಲಾನುಭವಿಗಳನ್ನು ಈ ಯೋಜನೆಗಾಗಿ ಆಯ್ಕೆ ಮಾಡಿದ್ದಾರೆ. ಆ ಮೂಲಕ ಅವರು ಗ್ರಾಮ ಪಂಚಾಯಿತಿ ಮತ್ತು ಗ್ರಾಮಸಭಾದ ಶಾಸನಬದ್ಧ ಅಧಿಕಾರವನ್ನು ಕಸಿದುಕೊಂಡುದಲ್ಲದೆ, ಭ್ರಷ್ಟಾಚಾರ ಎಸಗಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಶೆಟ್ಟರು ಇದರ ವಿರುದ್ಧ ಇಲಾಖೆಯ ಉನ್ನತ ಅಧಿಕಾರಿಗಳಿಗೆ ತಮ್ಮ ಪ್ರತಿರೋಧ ದಾಖಲಿಸಿ ದೂರು ಸಲ್ಲಿಸಿದ್ದಾರೆ ಕೂಡ.
ಒಬ್ಬರು ಪ್ರತಿಭಟಿಸಿದರೆ ಸಾಕೇ ? : ಕರುಣಾಕರ ಶೆಟ್ಟರ ಬದ್ಧತೆ ಮತ್ತು ಉದಾತ್ತ ಕ್ರಮವನ್ನು ಎಲ್ಲರೂ ಶ್ಲಾಘಿಸೋಣ. ಅದೇ ವೇಳೆ ಇಂತಹುದೇ ಅತಿಕ್ರಮಕ್ಕೆ ಬಲಿಯಾಗುತ್ತಿರುವ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಡವೇ? ಈ ಪ್ರಕರಣದಲ್ಲಿ ಶೆಟ್ಟರ ಪ್ರತಿಭಟನೆಗೆ ಯಶಸ್ಸು ದೊರೆಯುವುದೇ ಅಥವಾ ಇಲ್ಲವೇ ಎನ್ನುವುದು ತತ್ಕಾಲೀನ ಪ್ರಶ್ನೆ. ಆದರೆ ಅಧಿಕಾರಿಗಳಿಂದ ಮತ್ತು ಮೇಲಿನ ಸ್ತರದ ಪ್ರತಿನಿಧಿಗಳಿಂದ ರಾಜ್ಯವ್ಯಾಪಿಯಾಗಿ ನಿರಂತರ ನಡೆಯುವ ಪಂಚಾಯತ್ ರಾಜ್ ಕಾಯಿದೆಯ ಉಲ್ಲಂಘನೆಯನ್ನು ತಡೆಯಲು ಒಂದು ಲಕ್ಷದಷ್ಟಿರುವ ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ಒಬ್ಬರು ಪ್ರತಿಭಟಿಸಿದರೆ ಸಾಕೇ; ಕಾಲಾಂತರದಲ್ಲಿ ರೂಢಮೂಲವಾಗಿ ಹೋದ ಇಂತಹ ಅಪ್ರಜಾತಾಂತ್ರಿಕ ಕೃತ್ಯ ಹಾಗೂ ಕಾಯಿದೆಯ ಸಾರಾಸಗಟು ಉಲ್ಲಂಘನೆ ಇದರ ಫಲವಾಗಿ ನಿಂತುಹೋಗುವುದೇ ಎನ್ನುವ ಪ್ರಶ್ನೆಗೆ ಉಳಿದವರು ಉತ್ತರ ಕಂಡುಕೊಳ್ಳಬೇಡವೆ? ಸಂವಿಧಾನದ ತಿದ್ದುಪಡಿಯ ಫಲವಾಗಿ ರಾಜ್ಯದ ಶಾಸನ ಸಭೆಗಳಿಂದ ರೂಪುಗೊಂಡ ಕಾಯಿದೆಯು, ಅದು ಜಾರಿಗೊಂಡ ಬಳಿಕದ ೩೦ ವರ್ಷಗಳಿಂದಲೂ ಕಾಯಿದೆಯ ನಿರ್ಮಾತೃಗಳಿಂದ ಮತ್ತು ಅದನ್ನು ಸಂರಕ್ಷಿಸಬೇಕಾದ ಅಧಿಕಾರಿಗಳಿಂದ ಬಲಾತ್ಕಾರಕ್ಕೆ ಒಳಗಾಗುತ್ತಿರುವುದರ ವಿರುದ್ಧ ಗಂಭೀರ ಕ್ರಮ ಕೈಗೊಂಡು ತಡೆಗಟ್ಟಬೇಕಾದ ಹೊಣೆ ಜನರಿಂದ ಆಯ್ಕೆಯಾದ ಎಲ್ಲ ಸದಸ್ಯರ ಮೇಲಿದೆಯಲ್ಲವೇ? ಗ್ರಾಮಸಭೆಯ ಅಧಿಕಾರ ಹರಣದ ವಿರುದ್ಧ ಅದರ ಶಾಸನಬದ್ಧ ಸದಸ್ಯರಾದ ಮತದಾರರೂ ಸಿಡಿದೇಳಬೇಡವೇ?

ಗ್ರಾಮಸಭೆಯ ಅಧಿಕಾರ ಏನು? : ರಾಜ್ಯದ ಪಂಚಾಯತ್ ರಾಜ್ ಕಾಯಿದೆಯ 3-ಎ(2)ಎಫ್ ಪ್ರಕರಣವು ವಿವಿಧ ಫಲಾನುಭವಿ ಆಧರಿತ ಯೋಜನೆಗಳ ಕುರಿತು ಗ್ರಾಮಸಭಾದ ಅಧಿಕಾರವನ್ನು ಹೀಗೆ ನಿರೂಪಿಸಿದೆ : ’ಬಡತನ ನಿವಾರಣೆಯ ನಿಟ್ಟಿನಲ್ಲಿ ನಿಗದಿಪಡಿಸಿದ ಮಾನದಂಡಗಳ ಆಧಾರದ ಮೇಲೆ ಪಿಂಚಣಿಗಳು ಮತ್ತು ಸಬ್ಸಿಡಿಗಳು ಮುಂತಾದುವು ಒಳಗೊಂಡಂತೆ ಬಡತನ ನಿವಾರಣೆ ಮತ್ತು ಇತರ ಕಲ್ಯಾಣ ಕಾರ್ಯಕ್ರಮಗಳಿಗೆ, ಗ್ರಾಮ ಪ್ರದೇಶದಿಂದ ಅತ್ಯಂತ ಸೂಕ್ತ ಅರ್ಹ ಫಲಾನುಭವಿಗಳನ್ನು ಗುರುತಿಸಲು ಮತ್ತು ಆಯ್ಕೆ ಮಾಡಲು ಮತ್ತು ಜನವಸತಿ ಸಭಾಗಳ ಮತ್ತು ವಾರ್ಡ್ ಸಭಾಗಳ ಅಗತ್ಯಗಳನ್ನು, ಶಿಫಾರಸ್ಸುಗಳನ್ನು ಹಾಗೂ ಸಲಹೆಗಳನ್ನು ಪರಿಶೀಲಿಸಿದ ನಂತರ ಆದ್ಯತಾ ರ್‍ಯಾಂಕಿಂಗ್ ವಿಧಾನದ ಪ್ರಕಾರ ಆದ್ಯತೆಯ ಕ್ರಮದಲ್ಲಿ ಇರುವಂಥ ಒಂದು ಪಟ್ಟಿಯನ್ನು ಸಿದ್ಧಪಡಿಸಲು ಜನವಸತಿ ಸಭಾಗಳು ಮತ್ತು ವಾರ್ಡ್‌ಸಭಾಗಳು ಕಳುಹಿಸಿದ ಆದ್ಯತೆಯ ಕ್ರಮದಂತೆಯೇ ಗ್ರಾಮಸಭಾವು ಅವುಗಳನ್ನು ತನ್ನ ಅಭಿವೃದ್ಧಿ ಯೋಜನೆಯಲ್ಲಿ ಸೇರಿಸಿಕೊಳ್ಳುವುದಕ್ಕಾಗಿ ಗ್ರಾಮ ಪಂಚಾಯಿತಿಗೆ ಕಳುಹಿಸಲು ಜವಾಬ್ದಾರಿಯಾಗಿರತಕ್ಕದ್ದು. ಅಂತಹ ಪಟ್ಟಿಗೆ, ಸಂಬಂಧಪಟ್ಟ ಗ್ರಾಮ ಪಂಚಾಯಿತಿಯು, ಜಿಲ್ಲಾ ಪಂಚಾಯಿತಿಯು ಹಾಗೂ ಸರ್ಕಾರಗಳು ಬದ್ಧವಾಗಿರತಕ್ಕದ್ದು.’

ಗ್ರಾಮಸಭಾದ ಪರಮಾಧಿಕಾರದ ಉಲ್ಲಂಘನೆ : ಕಾಯಿದೆಯ ಈ ಪ್ರಕರಣವು ಫಲಾನುಭವಿ ಆಧರಿತ ಎಲ್ಲ ಯೋಜನೆಗಳಿಗೆ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ಗ್ರಾಮಸಭಾದ ಪರಮಾಧಿಕಾರ ಎನ್ನುವುದನ್ನು ಅತ್ಯಂತ ನಿಸ್ಸಂದಿಗ್ಧವಾಗಿ ಸಾರಿದೆ. ಹಿಂದೆ ಸರಕಾರದಿಂದ ಇದರ ಉಲ್ಲಂಘನೆಯಾದಾಗ ರಾಜ್ಯ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಸದಸ್ಯರನ್ನು ಸಂಘಟಿಸಿ ಹೋರಾಡಿದೆ; ನ್ಯಾಯಾಲಯ ಮತ್ತು ರಾಜ್ಯಪಾಲರ ಮೊರೆಹೋಗಿದೆ. ಕಸಿದುಕೊಳ್ಳಲಾದ ಅಂತಹ ಒಂದು ಅಧಿಕಾರವನ್ನು ಗ್ರಾಮಸಭೆಗೆ ದಕ್ಕಿಸಿಕೊಟ್ಟಿದೆ. ಆದರೆ ಕೆಳಸ್ತರದ ವ್ಯವಸ್ಥೆಯ ಅಧಿಕಾರಗಳನ್ನು ಕಿತ್ತುಕೊಳ್ಳುವುದು, ಆ ಮೂಲಕ ಕಾಯಿದೆಯನ್ನು ಮತ್ತು ಪ್ರಜಾತಾಂತ್ರಿಕ ಕ್ರಮಗಳನ್ನು ಅಲ್ಲಗಳೆಯುವುದು ನಮ್ಮ ಆಡಳಿತಕ್ಕೆ ಚಾಳಿಯಾಗಿರುವುದರಿಂದ ಅಂತಹ ಉಲ್ಲಂಘನೆ ಮತ್ತು ಕಸಿದುಕೊಳ್ಳುವಿಕೆ ಮರುಕಳಿಸುತ್ತಲೇ ಇರುತ್ತದೆ. ಆದರೆ ಮತದಾರರಿಂದ ಶಾಸನಬದ್ಧ ಕರ್ತವ್ಯ ನಿರ್ವಹಣೆಯ ಆಣತಿ ಪಡೆದಿರುವ ಗ್ರಾಮ ಪಂಚಾಯಿತಿ ಸದಸ್ಯರಿಗೂ ಇದು ಸಹನೀಯವಾಗುವುದು ವ್ಯವಸ್ಥೆಯ ದೊಡ್ಡ ದುರಂತವಲ್ಲವೇ? ಸದಸ್ಯರು ಸದಾಕಾಲವೂ ಇದನ್ನು ತಮಗಾಗಿ ಯಾರೋ ಮಾಡಬೇಕು ಎಂದು ಕೈಕಟ್ಟಿ ಕುಳಿತುಕೊಳ್ಳುವುದು ಸಲ್ಲದು ಎನ್ನುವುದನ್ನು ಕರುಣಾಕರ ಶೆಟ್ಟರು ಏಕಾಂಗಿಯಾಗಿ ತೋರಿಸಿಕೊಟ್ಟಿದ್ದಾರೆ. ಈಗ ಉಳಿದ ಸದಸ್ಯರೂ ತಮ್ಮ ನೆಲೆಯಲ್ಲಿ ಪ್ರತಿರೋಧ ದಾಖಲಿಸಬೇಕು ಎಂಬ ಸಂದೇಶ ನೀಡಿದ್ದಾರೆ.

ಇದಲ್ಲದೆ ಗ್ರಾಮ ಪಂಚಾಯಿತಿಯು ಪೂರ್ಣಪ್ರಮಾಣದಲ್ಲಿ ಗ್ರಾಮ ಸರಕಾರವಾಗಿ ಕರ್ತವ್ಯ ನಿರ್ವಹಿಸಲು ಕಾಯಿದೆ ಅವಕಾಶ ಕಲ್ಪಿಸಿದ ಮಹತ್ವದ ಹಲವು ಅಧಿಕಾರಗಳನ್ನು ಸರಕಾರ ಹಸ್ತಾಂತರಿಸದೆ ಕಾಯಿದೆಯ ನಿರ್ದೇಶನಗಳನ್ನು ಉಲ್ಲಂಘಿಸುತ್ತಿದೆ. ಅದರ ವಿರುದ್ಧವೂ ಸದಸ್ಯರು ಹೋರಾಟ ಕೈಗೆತ್ತಿಕೊಳ್ಳಬೇಕಾಗಿದೆ. ರಾಜ್ಯಾಧಿಕಾರದ ಮೂಲ ಸೆಲೆಯಾಗಿರುವ ಜನರ ಹಕ್ಕು ಮತ್ತು ಅಧಿಕಾರಗಳೂ ಪಂಚಾಯತ್ ರಾಜ್‌ನ ಹಲವು ವಿಚಾರಗಳಲ್ಲಿ ನಿರಾಕೃತವಾಗುತ್ತಿವೆ. ಅದಕ್ಕಾಗಿ ತಮ್ಮತಮ್ಮ ಮತದಾರರನ್ನು ಎಚ್ಚರಿಸಿ ಅವರನ್ನು ಹೋರಾಟಕ್ಕೆ ಅಣಿಗೊಳಿಸುವ ಕೆಲಸವನ್ನೂ ಸದಸ್ಯರು ಮಾಡಬೇಕಾಗಿದೆ.


-ಎಸ್. ಜನಾರ್ದನ ಮರವಂತೆ
(ಜನಪ್ರತಿನಿಧಿ ಪ್ರಕಟಿಸಿದ ’ಜನಾಧಿಕಾರ’- ಗ್ರಾಮ ಪಂಚಾಯಿತಿ ಮಾರ್ಗದರ್ಶಿ ಪುಸ್ತಕದ ಲೇಖಕರು)

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!