spot_img
Wednesday, January 22, 2025
spot_img

ಜಗದ ಚಿಂತೆಯಾಚೆಗೆ ಬದುಕುವವನೇ ಕಲಾವಿದ

-ಯಶು ಬೆಳ್ತಂಗಡಿ
ಆಸ್ಪತ್ರೆಯ ಮೂರನೇ ಮಹಡಿಯ ರೂಮ್ ನಂಬರ್ 236ರಲ್ಲಿ ಮುಂಜಾನೆ ಆರರ ಆಸುಪಾಸಿನಲ್ಲಿ ನಿದ್ದೆಯಿಲ್ಲದೇ ಉರಿಯುತಿದ್ದ ಕಂಗಳನ್ನು ಅರ್ಧ ತೆರೆದು ಸ್ಪೂರ್ತಿಯ ಮಾತುಗಳನ್ನು ಗೀಚುತಿದ್ದ ನನ್ನೊಳಗೆ ಸಾವಿರ ನೋವುಗಳಿತ್ತು. ಒಮ್ಮೆ ಮಲಗಿದರೆ ಮತ್ತೆ ಎಚ್ಚರವಾಗದು ಎಂದು ರಾತ್ರಿ ಸಾಧರಣ ಮೂರುವರೆಯವರೆಗೂ ಕಣ್ಣು ತೆರೆದೇ ಮೊಬೈಲ್ ಹಿಡಿದು ಕುಳಿತಿದ್ದವಳು. ನಾಲ್ಕರ ಆಸುಪಾಸಿನಲ್ಲಿ ಒರಗಿದೊಡನೆ ನಿದ್ದೆ ಹತ್ತಿತ್ತು. ಮತ್ತೆ ಆರರ ಹೊತ್ತಿಗೆ ಎಚ್ಚರವಾದಾಗ, ತಲೆ ಸರಿ ಇರದಿದ್ದರೂ ಏನೋ ಒಂದು ಮನಸ್ಸಿಗೆ ಬಂದಂತೆ ಗೀಚಿ ನನ್ನ ಸಾಲುಗಳನ್ನು ದಿನಾ ಓದುವ ಕೆಲ ಹೃದಯಗಳಿಗೆ ಕಳುಹಿಸಿ, ಮತ್ತೆ ಮೌನವಾಗಿ ಕುಳಿತುಬಿಟ್ಟೆ.

ಎರಡು ದಿನಗಳ ಹಿಂದೆ ಎರಡೆರಡು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಎದ್ದೇಳಲು, ಹೊರಳಾಡಲು ಆಗದೇ ಮೌನವಾಗಿ ಕಣ್ಣು ಮಾತ್ರವೇ ಚಲಿಸುತಿದ್ದ ತಮ್ಮನ ಆರೋಗ್ಯದ ಮುಂದೆ ಏಕೆ ಈ ಸಾಲುಗಳಿಗೆ ಮಹತ್ವ ಎಂದು ತುಂಬಾ ಜನರು ಅಂದುಕೊಂಡಿರಬಹುದು!! ಅಥವಾ ಆ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಒಂದು ಜೀವಕ್ಕಿಂತ ಈ ಬರವಣಿಗೆಯೇ ಮುಖ್ಯವೇ ಎಂದು ಬೈದುಕೊಂಡವರೂ ಇರಬಹುದು!! ಇದೆಲ್ಲವೂ‌ಆ ಕ್ಷಣ ನೆನಪಾಗಲಿಲ್ಲ ಎಂದಲ್ಲ, ಅದಕ್ಕಿಂತ ಆಚೆಗೆ ನಾನೊಮ್ಮೆ ಬಂದು ಜೀವಿಸಲೇಬೇಕಾದ ಅನಿವಾರ್ಯತೆ ಸ್ವಲ್ಪವಲ್ಲ ಹೆಚ್ಚೇ ಇತ್ತು. ನಾನು ಇದೆಲ್ಲವನ್ನೂ ತೊರೆದು ಪ್ರೀತಿ ಸ್ನೇಹಗಳನ್ನು ತೊರೆದ ಬ್ರಹ್ಮಚಾರಿ ಎಂದಲ್ಲ, ಪ್ರೀತಿ ನನ್ನೊಳಗೂ ಬೆಟ್ಟದಷ್ಟಿತ್ತು, ಎಲ್ಲಾ ಸವಾಲುಗಳು ಬರಿಯ ಕಲಾವಿದರಿಗೇ ಏಕೆಂದು ಆಗ ಪಕ್ಕ ಕುಳಿತು ಯೋಚಿಸುತ್ತಿದ್ದವಳ ಕಂಗಳು ತೇವವಾಗಲು ಹವಣಿಸಿದರೂ, ಮನಸ್ಸು ಧೈರ್ಯವಾಗಿರು ಎಂದು ಹೇಳಿ ಸುಮ್ಮನಾಗಿಸಿತು.

ಇದು ನನ್ನೊಬ್ಬಳದಲ್ಲ ಪ್ರತಿಯೊಬ್ಬ ಕಲಾವಿದರ ಬದುಕಿನ ಆಳವಾದ ಸಂಕಟ. ಇಷ್ಟಕ್ಕೂ ಕಲಾವಿರದ ಬದುಕೇಕೆ ಹೀಗೆ ಎಂದು ಸಾವಿರ ಬಾರಿ ಅನ್ನಿಸಿದ್ದರೂ, ಇಂದು ಅನುಭವಿಸುತಿದ್ದ ನೋವಿನ ಮುಂದೆ ಪ್ರತಿಯೊಂದು ಪ್ರಶ್ನೆಗಳಿಗೂ ಉತ್ತರ ದೊರೆಯತೊಡಗಿತು. ಆ ಹಳೆಯ ಕಬ್ಬಿಣದ ಮಂಚ, ಮೈಮೇಲೆಲ್ಲಾ ಹಾಕಿದ್ದ ರಾಶಿ ವಯರ್’ಗಳು, ಕಿತ್ತು ತಿನ್ನುತ್ತಿರುವ ನೋವು, ಕೊಯ್ದಿದ್ದ ಎರಡೆರಡು ಗಾಯಗಳು, ಅನ್ನಕ್ಕಾಗಿ ಒದ್ದಾಡಿ ಗಂಜಿ ಬೇಕೆಂದು ಅಳುತಿದ್ದ ಆ ಅಳು ಒಟ್ಟಿನಲ್ಲಿ ಪ್ರೀತಿಪಾತ್ರರ ದುಃಖವನ್ನು ನೋಡುವ ಕರ್ಮ ಯಾರಿಗೂ ಬರದಿರಲಿ ಎಂದು ಆಗ ಹೃದಯದಿಂದ ಪ್ರಾರ್ಥಿಸಿದೆ.

ಕಲಾವಿದನೇಕೆ ಪ್ರತೀ ಬಾರಿ ನೋವಿನೊಳೇ ಇರುತ್ತಾನೆ?? ಹೀಗೊಮ್ಮೆ ಅಂದುಕೊಂಡಾಗ ಸಿಗುವ ಉತ್ತರವೊಂದೇ ಅನಿವಾರ್ಯತೆ!! ಇಲ್ಲಿ ನಾವು ನಗಲೇಬೇಕಾದ ಅನಿವಾರ್ಯತೆ ತುಂಬಾ ಇದೆ. ಕಾರಣ ಇಷ್ಟೇ!! ನಮಗಾಗಿ ಅಲ್ಲ, ನಮ್ಮ ಪ್ರೀತಿಸುವ ಹೃದಯಗಳಿಗಾಗಿ, ಒಬ್ಬ ಕಲಾವಿದನಿಗೆ ಕೊನೇಪಕ್ಷ ಒಬ್ಬ ಗೌರವಿಸುವ, ಅಭಿಮಾನದಿಂದ ಕಾಣುವ ಹೃದಯವಾದರೂ ಇರುತ್ತದೆ, ನಾವು ಹೇಗಿದ್ದೆವೆಯೋ ಆದರೆ ನಮ್ಮನ್ನು ಪ್ರೀತಿಸುವವರಿಗಾಗಿ ನಾವು ನಗುವಿನ ಮುಖವಾಡ ಹಾಕಲೇಬೇಕು!! ಇಲ್ಲಿ ಕಷ್ಟ ಸುಖಗಳ ಪ್ರಶ್ನೆಯಲ್ಲ, ನಾವು ಹೇಗಿದ್ದೇವೆ ಅನ್ನುವುದು ನಮ್ಮನ್ನು ಅನುಸರಿಸುತ್ತಿರುವವರ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ನಾವು ನೋವಿನಲ್ಲಿದ್ದಾಗ ಅವರೂ ನಮ್ಮ ನೋವುಗಳಲ್ಲಿ ಪಾಲು ಪಡೆಯಲು ಕರೆ, ಸಂದೇಶ ಕಳುಹಿಸುವುದನ್ನು ಕಂಡು ಕಂಗಾಲಾಗುವ ನಾನು, ಈಗೀಗ ಭಾವನೆಗಳಿಂದ ಹೊರಬಂದು ಬದುಕುವುದನ್ನು ಕಲಿತುಬಿಟ್ಟೆ, ಕಾರಣ ಅದೇ ಅನಿವಾರ್ಯತೆ!! ಇತ್ತೀಚೆಗೆ ಹೀಗಾದಾಗ, ಏನೂ ತೋಚದೇ, ಚೂರು ಆಲೋಚಿಸಿದೆ, ಸಂಬಂಧಿಗಳು, ಮನೆಯವರು ಏನೆನ್ನುವರೋ ಎಂದುಕೊಳ್ಳುತ್ತಲೇ ಏನೋ ಸಾಲುಗಳು ಗೀಚಿದೆ!! ಕಳುಹಿಸಿಬಿಟ್ಟೆ, ನನಗೆ ನನ್ನ ನೋವಿಗಿಂತ ಆ ಕ್ಷಣದಲ್ಲಿ ನನ್ನ ಪ್ರೀತಿಸುವ ಹೃದಯಗಳ ನಗು ಮುಖ್ಯವಾಗಿತ್ತು. ಹಾಗಾಗಿ ಜಗದ ಚಿಂತೆಯಾಚೆಗೆ ಬಂದು ಬದುಕುವುನ್ನು ಕಲಿಯಬೇಕೆಂದು ನಿರ್ಧರಿಸಿದೆ. ಬದುಕಲು ಆರಂಭಿಸಿದೆ ಕೂಡಾ.

ಕಲಾವಿದರು ಭಾವನೆಗಳಿಲ್ಲದ ಕಲ್ಲು ಹೃದಯಗಳಲ್ಲ, ನಾವು ಭಾವನೆಗಳೊಂದಿಗೆ, ಸಮಸ್ಯೆಗಳನ್ನು ಸರಿದೂಗಿಸಿ, ಎಲ್ಲವನ್ನೂ ತಕ್ಕಡಿಗಳಲ್ಲಿ ಅಳೆದು ತೂಗಿ ಸಮನಾಗಿಸಿ, ಅನುಕ್ಷಣವೂ ಒಂದೊಂದು ಸಮಸ್ಯೆಗಳಿಂದ ಪಾರಾಗುತ್ತಾ, ಸಿಕ್ಕಿಹಾಕಿಕೊಳ್ಳುತ್ತಾ, ಜಗದಾಚೆಗೊಂದು ಹೊಸ ಬದುಕ ಕಾಣುವ ಕನಸಿನಲ್ಲೇ ಬದುಕ ಕಳೆವವರು. ಇಲ್ಲಿ ನಮ್ಮ ಬಳಿ ಏನಿಲ್ಲ ಅಂದರೂ ಎಲ್ಲವನ್ನೂ ಕನಸಿನಲ್ಲಿ ಕಂಡು ಸಮಧಾನಗೊಳ್ಳುತ್ತಾ, ಕಳೆದುಹೋದ ನೆನ್ನೆಯ ನಗುವ ನೆನದು ಮತ್ತೆ ಮಂದಹಾಸ ಬೀರಿ ಜಗದ ಮುಂದೆ ಅಳುವೇ ಬರದವರಂತೆ ನಟಿಸುವವರು. ನಾವು ನೋವಿನೊಳಗೂ ನಗುವ ಬೀರುತ್ತೇವೆ ಅಂದ ಮಾತ್ರಕ್ಕೇ, ನಾವು ಈ ಸಂಬಂಧಗಳ ಪ್ರೀತಿಯನ್ನು ತೊರೆದವರು ಎಂದಲ್ಲ, ನಮಗೂ ಒಂದು ಬದುಕಿದೆ, ಅದರೊಳಗೆ ಕನಸಿದೆ, ಅದರೊಳಗೂ ಭಾವನೆಗಳಿವೆ. ಆದರೆ ನಿಮ್ಮಂತೆ ಅದನ್ನು ತೋರ್ಪಡಿಸಿ ಹಗುರಾಗಲು ಸಾಧ್ಯವಿಲ್ಲವಷ್ಟೇ!! ಕಾರಣ ನಾವು ಕಲಾವಿದರು!! ಜಗದ ಚಿಂತೆಯಾಚೆಗೆ ಬದುಕಲು ಹೊರಟವರು. ಹಾಗಾಗಿ ಸಾಧ್ಯವಾದರೆ ಗೌರವಿಸಿ, ಇಲ್ಲವೇ ಬಿಟ್ಟುಬಿಡಿ, ಚುಚ್ಚು ಮಾತುಗಳಿಂದ ಕೊಲ್ಲದಿರಿ!!!

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!