Sunday, September 8, 2024

‘ಅಭಿಮನ್ಯು’ವಿನಲ್ಲಿ ವಾಕ್ ಶೌರ್ಯ ಮೆರೆದ ವಿದ್ಯಾರ್ಥಿಗಳು

ಆಲೂರು ಸರ್ಕಾರಿ ಶಾಲೆಯಲ್ಲೊಂದು ವಿಭಿನ್ನ ಪ್ರಯತ್ನ

ಯಕ್ಷಗಾನ ಈ ಭಾಗದ ಮಕ್ಕಳಿಗೆ ಚಿರಪರಿಚಿತ, ಆದರೆ ತಾಳಮದ್ದಲೆ ಬಹುತೇಕ ಮಕ್ಕಳಿಗೆ ಅಪರಿಚಿತ. ತಾಳಮದ್ದಲೆಯ ಪರಿಕಲ್ಪನೆಯೇ ಇಲ್ಲದ ವಿದ್ಯಾರ್ಥಿಗಳಲ್ಲಿ ತಾಳಮದ್ದಲೆ ಪ್ರಸ್ತುತಿ ಮಾಡಿಸುವುದೆಂದರೆ ಅದು ಸುಲಭದ ಸಾಹಸವಲ್ಲ. ಆದರೆ ಬೈಂದೂರು ಶೈಕ್ಷಣಿಕ ವಲಯದ ಆಲೂರು ಸ.ಹಿ.ಪ್ರಾ.ಶಾಲೆಯ ಮಕ್ಕಳು ತಾಳಮದ್ದಲೆಯನ್ನು ಸಮರ್ಥವಾಗಿ ಪ್ರಸ್ತುತ ಪಡಿಸಿದ್ದಾರೆ. ಕವಿ ದೇವಿದಾಸ ವಿರಚಿತ ಅಭಿಮನ್ಯು ಕಾಳಗ ಪ್ರಸಂಗವನ್ನು ಬಾಲ ಅರ್ಥಧಾರಿಗಳು ಪ್ರಭುತ್ವತೆಯಿಂದ ನಿರೂಪಿಸಿದ್ದಾರೆ.

ವಿದ್ಯಾರ್ಥಿನಿ ಅರ್ಥಧಾರಿಗಳು ಬಣ್ಣ ಬಣ್ಣದ ಉಡುಗೆ ತೊಟ್ಟು ವಾಕ್ ಪಟುಭಟರಾದರೆ, ವಿದ್ಯಾರ್ಥಿಗಳು ಸಾಂಪ್ರದಾಯಿಕ ಬಿಳಿ ಪಂಚೆ ಮತ್ತು ಬಿಳಿ ಅಂಗಿ ತೊಟ್ಟು ವಾಕ್ ಪ್ರೌಢಿಮೆ ಮೆರೆದಿದ್ದಾರೆ.

ಸೂಕ್ತ ತರಬೇತಿ, ನಿರ್ದೇಶನದ ಹಿನ್ನೆಲೆ, ಪಾತ್ರದ ಮುನ್ನೆಲೆ, ವಾಕ್ ಚಕಮಕಿಯ ಸಂದರ್ಭ ಭಾವಾಭಿವ್ಯಕ್ತಿ, ಹಸ್ತ, ನೇತ್ರ, ಮುಖಮುದ್ರೆಯಲ್ಲಿ ಪ್ರೌಢ ಅರ್ಥಧಾರಿಗಳಂತೆ ಮೂಡಿಬಂದರು. ಸಿದ್ದ ಸಂಭಾಷಣೆಯಾದರೂ ಕೂಡಾ ಅದನ್ನು ಸಮರ್ಥವಾಗಿ ರಂಗದಲ್ಲಿ ಆತ್ಮವಿಶ್ವಾಸದಿಂದ ಬಿಂಬಿಸಿದ ರೀತಿ ಮೆಚ್ಚುವಂತಹದ್ದು.
ಈ ವಿದ್ಯಾರ್ಥಿಗಳಿಗೆ ಆಟದ ಪರಿಕಲ್ಪನೆ ಇದ್ದರೂ ಕೂಡಾ ಕೂಟದ ಬಗ್ಗೆ ಅರಿವೇ ಇಲ್ಲ. ಆಲೂರು ಭಾಗದಲ್ಲಿ ತಾಳಮದ್ದಲೆಯೂ ಅಪರೂಪ. ಇದ್ದರೂ ಇವತ್ತಿನ ಪೋಷಕರು ಮಕ್ಕಳನ್ನು ಕೂಟಗಳಿಗೆ ಕರೆದುಕೊಂಡು ಹೋಗುವುದು ವಿರಳ. ಹಾಗಾಗಿ ವಿದ್ಯಾರ್ಥಿಗಳಿಗೆ ತಾಳಮದ್ದಲೆಯ ಪರಿಚಯ ಇಲ್ಲ. ಇಲ್ಲಿನ ಪೂರ್ವ ತರಬೇತಿಯನ್ನು ಪಡೆದುಕೊಂಡು ಮಾತುಗಾರಿಕೆಯಲ್ಲಿ ಮೃದು, ಸ್ವರಭಾರ, ಅಕ್ರೋಶ, ಚಿಂತೆ, ಶೌರ್ಯದ ಕೆಚ್ಚನ್ನು ಕೇವಲ ಹಾವಭಾವ ಮಾತಿನ ಮೂಲಕ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟರು.

ಹಿಮ್ಮೇಳದಲ್ಲಿ ಭಾಗವತರಾಗಿ ಭಾಸ್ಕರ ಆಚಾರ್ಯ, ಮದ್ದಲೆಯಲ್ಲಿ ಪ್ರಭಾಕರ ಆಚಾರ್ಯ, ಚಂಡೆಯಲ್ಲಿ ಚೇತನ್ ಆಚಾರ್ಯ ಸಹಕರಿಸಿದರು. ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಅಭಿಮನ್ಯುವಾಗಿ ನಿಧಿಶ್ರೀ, ಚಿರಂತನ್ ಜೋಯ್ಸ್, ಸಿಂಚನಾ ಶೆಟ್ಟಿ ಶೌರ್ಯದ ಮಾತುಗಳಿಂದ ಗಮನ ಸಳೆದರು. ಸುಭದ್ರೆಯಾಗಿ ಪ್ರೀತಿ ಮಾತೃವಾತ್ಸಲ್ಯ, ಯುದ್ಧದ ಆತಂಕವನ್ನು ಹೊರಹೊಮ್ಮಿಸಿದರೆ, ಧರ್ಮರಾಯನಾಗಿ ಗ್ರೀಷ್ಮಾ, ಕೌರವನ ಪಾತ್ರದಲ್ಲಿ ಶಿವಮಣಿ, ದ್ರೋಣನಾಗಿ ನಿಶ್ಮಿತಾ, ಶಲ್ಯನ ಪಾತ್ರದಲ್ಲಿ ಅನುಶ್ರಿ, ಕರ್ಣನಾಗಿ ಪ್ರೀತಂ ಎನ್., ದುಶ್ಯಾಶನನಾಗಿ ಶಶಾಂಕ ಎಸ್ ಪಾತ್ರಗಳಿಗೆ ಜೀವ ತುಂಬಿದರು. ವಿಶೇಷವೆಂದರೆ ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಪಾತ್ರ ನಿರ್ವಹಿಸಿದ್ದರು.

ಅರ್ಥಗಾರಿಕೆಯನ್ನು ಕಂಠಸ್ಥಾಯಿ ಮಾಡಿಕೊಂಡು ಅದಕ್ಕೆ ಪೂರಕ ಅಭಿವ್ಯಕ್ತಿಯೊಂದಿಗೆ ಸಾದರ ಪಡಿಸುವ ರೀತಿ ಮೆಚ್ಚುವಂತಾಹದ್ದು. ಎದುರು ಪಾತ್ರಧಾರಿ ತನ್ನ ಪಾತ್ರವನ್ನು ಗರಿಷ್ಠ ಹಂತಕ್ಕೆ ತಗೆದುಕೊಂಡು ಹೋಗಲು ಪಡುವ ಪರಿಶ್ರಮ, ಬಾಲಭಾಷೆಯನ್ನು ಮೀರಿದ ಪ್ರೌಢ ಮಾತುಗಳು, ಪಾತ್ರದ ಹಿರಿಮೆಯನ್ನು ಎತ್ತಿ ಹಿಡಿಯುವ ಗತ್ತುಗಾರಿಕೆಯನ್ನು ವ್ಯಕ್ತ ಪಡಿಸಿದರು.

ಕಾರ್ಯಕ್ರಮದ ಒಟ್ಟಂದಕ್ಕೆ ಕಾರಣವಾಗಿದ್ದು ಶಾಲೆಯ ಶಿಕ್ಷಕಿ, ಹವ್ಯಾಸಿ ಯಕ್ಷಗಾನ ಕಲಾವಿದೆ ನಾಗರತ್ನ ಹೇರ್ಳೆ. ಅವರ ದಕ್ಷ ನಿರ್ದೇಶನ. ಅವರು ಒಂದು ಸಾಹಸವನ್ನೆರಿಲ್ಲಿ ಮಾಡಿದ್ದಾರೆ. ತಾಳಮದ್ದಲೆಯ ಅರಿವಿಲ್ಲದ ವಿದ್ಯಾರ್ಥಿಗಳಿಂದಲೇ ತಾಳಮದ್ದಲೆ ಮಾಡಿಸುವುದೆಂದರೆ ಸುಲಭದ ಮಾತಲ್ಲ. ಅವರ ತಾಳ್ಮೆ, ಸಂಯಮ, ಪರಿಶ್ರಮ ಸ್ತುತ್ಯರ್ಹ.

ಈ ತಾಳಮದ್ದಳೆ ಯಶಸ್ಸಿನಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಯಕ್ಷಗಾನ, ರಂಗಭೂಮಿಯ ಹವ್ಯಾಸಿ ಕಲಾವಿದರೂ ಆಗಿರುವ ಶಶಿಧರ ಶೆಟ್ಟಿಯವರ ಮಾರ್ಗದರ್ಶನ. ಸಹಕಾರ, ಪ್ರೊತ್ಸಾಹವೂ ಪೂರಕಾಂಶ. ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರ ಸಂಪೂರ್ಣ ಬೆಂಬಲ, ಶಾಲೆಯ ಸಹಶಿಕ್ಷಕರ ಸಹಕಾರ, ಪೋಷಕರ ಧನಾತ್ಮಕ ಬೆಂಬಲ ಶ್ಲಾಘನಾರ್ಹ. ಒಟ್ಟಾರೆಯಾಗಿ ವಿದ್ಯಾರ್ಥಿಗಳಲ್ಲಿ ಹೊಸದೊಂದು ಸಾಂಸ್ಕೃತಿಕ ಜಾಗೃತಿ, ಸಂಚಲನ ಈ ತಾಳಮದ್ದಲೆಯಿಂದ ಆಗಿದೆ.

ಕೊರೋನಾದಿಂದಾಗಿ ಮಕ್ಕಳಿಗಾಗಿ ನಡೆಯುತ್ತಿದ್ದ ವಾರ್ಷಿಕೋತ್ಸವ, ಪ್ರತಿಭಾ ಕಾರಂಜಿ, ಕ್ರೀಡೋತ್ಸವ ಮುಂತಾದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಶಾಲೆಯಲ್ಲಿ ಆಗದಿರುವ ಕಾರಣಕ್ಕೆ ಇಲ್ಲಿನ ಶಿಕ್ಷಕರು ಮಕ್ಕಳಿಗೆ ವಿಭಿನ್ನವಾದ ಅನುಭವವನ್ನು ಮಕ್ಕಳಿಗೆ ಕೊಡಬೇಕೆಂದು ತೀರ್ಮಾನಿಸಿದ್ದರು. ತಾಳಮದ್ದಲೆಯಂತಹ ಕಾರ್ಯಕ್ರಮ ಮಕ್ಕಳು ಮಾಡುವುದು ಕಡಿಮೆ. ಇದನ್ನೇ ಪ್ರಯೋಗ ಮಾಡಿದರೆ ಹೇಗೆ ಎಂಬ ಆಲೋಚನೆ ಮಾಡಿ ತಯಾರಿ ನಡೆಸಿದರು. ಮಕ್ಕಳು ಕೂಡ ಆಸಕ್ತಿಯಿಂದ ಮುಂದೆ ಬಂದರು. ಆದರೆ ಮೊದಲಿಗೆ ತಾಳಮದ್ದಲೆ ಎಂದು ಹೇಳಲೂ ಬಾರದೆ ನಾಟಕ ಪ್ರಾಕ್ಟೀಸ್ ಎನ್ನುತ್ತಿದ್ದಂತೆ. ಅವರಿಗೆ ತಾಳಮದ್ದಲೆ ಬಗ್ಗೆ ಏನೂ ತಿಳಿದಿಲ್ಲ ಎಂಬುದನ್ನು ಅರಿತು ಯೂಟ್ಯೂಬ್‌ನಲ್ಲಿ ಒಂದಷ್ಟು ತಾಳಮದ್ದಲೆ ತೋರಿಸಿ ಕಲ್ಪನೆ ಮೂಡಿಸಲಾಯಿತು.

-ನಾಗರಾಜ್ ವಂಡ್ಸೆ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!