Thursday, November 21, 2024

ಹೆಸಕುತ್ತೂರು ಪ್ರಾಥಮಿಕ ಶಾಲೆಯಲ್ಲಿ ‘ಅಡುಗೆ ಹಬ್ಬ’

ಬೆಂಕಿ ಇಲ್ಲದೆ ಅಡುಗೆ ತಯಾರಿಸಿದ ವಿದ್ಯಾರ್ಥಿಗಳು!

ಕುಂದಾಪುರ: ಫ್ರೂಟ್ ಸಲಾಡ್, ಕೇಕ್, ಅವಲಕ್ಕಿ, ಕೋಸಂಬರಿ, ಬ್ರೆಡ್ ಜಾಮ್, ವಿವಿಧ ರೀತಿಯ ಪಾನೀಯಗಳು, ರಸಾಯನ, ಮಂಡಕ್ಕಿ ಉಪ್ಕರಿ… ಹೀಗೆ ತರಹೇವಾರಿ ಬಾಯಲ್ಲಿ ನೀರೂರಿಸುವ ತಿನಿಸುಗಳ ಜಾತ್ರೆಯೇ ಅಲ್ಲಿ ನೆರೆದಿತ್ತು. ಇವ್ಯಾವುವೂ ಪರಿಣತ ಬಾಣಸಿಗರ ಮೂಲಕ ಸಿದ್ಧಗೊಂಡವುಗಳಲ್ಲ…ಸದಾ ಒಂದಿಲ್ಲೊಂದು ಗುಣಾತ್ಮಕ ಶೈಕ್ಷಣಿಕ ಪ್ರಯೋಗಗಳ ಮೂಲಕ ಗಮನ ಸೆಳೆಯುವ ಹೆಸಕುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪುಟಾಣಿ ಕೈಗಳ ಅಡುಗೆ ಸಾಹಸದ ಒಂದು ಝಲಕ್.

ಬೆಂಕಿ ಉಪಯೋಗಿಸದೆ ಅಡುಗೆ ಸಿದ್ಧಪಡಿಸುವ ನಿಯಮಕ್ಕೆ ಬದ್ಧವಾಗಿ ನೂರಾರು ಪುಟಾಣಿಗಳು 12 ವಿವಿಧ ತಂಡಗಳಾಗಿ ಸೇರಿಕೊಂಡು ತಮ್ಮದೇ ಪರಿಕಲ್ಪನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳಿವು. ಮಕ್ಕಳಿಗೆ ಎಳೆವೆಯಲ್ಲಿಯೇ ಅಡುಗೆ ಕಲೆಯ ಕುರಿತಾದ ಅಭಿರುಚಿ ಬೆಳೆಸುವುದರ ಜೊತೆಗೆ ನಾವು ಸೇವಿಸುವ ಆಹಾರ ಹೇಗಿರಬೇಕು, ಅದನ್ನು ತಯಾರಿಸುವ ಪ್ರಕ್ರಿಯೆ ಹೇಗೆ, ಬಳಸುವ ಸಾಮಗ್ರಿಗಳು ಯಾವುವು, ಪ್ರಮಾಣಬದ್ಧವಾಗಿ ಅವುಗಳನ್ನು ಉಪಯೋಗಿಸುವ ಜ್ಞಾನ, ಅಡುಗೆ ತಯಾರಿಗೆ ಬೇಕಾಗಿ ನಮ್ಮಲ್ಲಿರಬೇಕಾದ ಕೌಶಲಗಳು, ಸ್ವಚ್ಛತೆಯ ಪ್ರಾಮುಖ್ಯ, ಅಡುಗೆ ತಯಾರಿಯ ನಂತರ ಅವುಗಳನ್ನು ಸುಂದರವಾಗಿ ಸಾಲಾಗಿಟ್ಟು ಪ್ರಸ್ತುತ ಪಡಿಸುವ ರೀತಿ ಹೀಗೆ ಒಂದಷ್ಟು ಬಹುಮುಖ್ಯ ಕಲಿಕೆಗಳಿಗೆ ಈ ಅಡುಗೆ ಹಬ್ಬ ಮಕ್ಕಳಿಗೆ ಅವಕಾಶ ಒದಗಿಸಿತ್ತು. ತಾವೇ ಪುಟಾಣಿ ಬಾಣಸಿಗರಾಗಿ ಉಡುಪು ಧರಿಸಿಕೊಂಡು, ಹಿರಿಯ ಕಿರಿಯ ವಿದ್ಯಾರ್ಥಿಗಳೆಲ್ಲ ಒಂದು ತಂಡವಾಗಿ ಸೇರಿಕೊಂಡು ಉತ್ಸಾಹದಿಂದ ಸಂಭ್ರಮದಿಂದ ಈ ಅಡುಗೆ ಹಬ್ಬದಲ್ಲಿ ಅವರು ಭಾಗವಹಿಸಿ ರೀತಿ ಕಾರ್ಯಕ್ರಮದ ಉದ್ದೇಶವನ್ನು ಸಾರ್ಥಕಪಡಿಸಿತ್ತು.

ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ರಚಿಸಿದ ಚಿತ್ರಕಲಾ ಪ್ರದರ್ಶನ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಸಕುತ್ತೂರು ಹಾಗೂ ಜೇಸಿ‌ಐ ಕುಂದಾಪುರದ ಜಂಟಿ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಶ್ರೀ ಗಣೇಶ, ಎಂ ಕೆ ಎಂಟರ್ ಪ್ರೈಸಸ್, ಕಲ್ಮರ್ಗಿ ಇವರು ಒಂದು ಆಹಾರದ ತಿನಿಸನ್ನು ಸಿದ್ಧಪಡಿಸುವ ಮೂಲಕ ಉದ್ಘಾಟಿಸಿದರು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೃಷ್ಣ ಕೆದ್ಲಾಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜೇಸಿ‌ಐ ಕುಂದಾಪುರದ ಅಧ್ಯಕ್ಷರಾದ ಜೇಸಿ ನಾಗರತ್ನ ಜಿ ಹೇರಳೆ, ಜೇಸಿ ವಲಯ ಉಪಾಧ್ಯಕ್ಷರಾದ ಜೇಸಿ ವಿಜಯ ನರಸಿಂಹ ಐತಾಳ್, ಮಹಿಳಾ ಜೇಸಿ ವಿಭಾಗದ ವಲಯ ನಿರ್ದೇಶಕರಾದ ಜೇಸಿ ಅಕ್ಷತಾ ಗಿರೀಶ್ ಉಪಸ್ಥಿತರಿದ್ದರು. ಸಹಶಿಕ್ಷಕರಾದ ಸಂಜೀವ ಎಂ, ಜಯಲಕ್ಷ್ಮಿ ಬಿ, ಜಯರಾಮ ಶೆಟ್ಟಿ, ವಿಜಯಾ ಆರ್, ವಿಜಯ ಶೆಟ್ಟಿ, ಗೌರವ ಶಿಕ್ಷಕಿ ಮಧುರಾ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶೇಖರಕುಮಾರ ಸ್ವಾಗತಿಸಿದರು. ಸಹ ಶಿಕ್ಷಕರಾದ ಅಶೋಕ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ನಾಯಕ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!