spot_img
Sunday, July 19, 2026
spot_img

ಉದ್ಯಮಿ ಜಯಪ್ರಕಾಶ ಶೆಟ್ಟಿಯವರಿಂದ ನವೀಕರಣಗೊಂಡ ಸ.ಹಿ.ಪ್ರಾ.ಶಾಲೆ ಬೆಳ್ಳಾಲ (ನಂದ್ರೊಳ್ಳಿ) ಶಾಲಾ ಕಟ್ಟಡ ಉದ್ಘಾಟನೆ

ಸರಕಾರಿ ಶಾಲೆ ಉಳಿಸಿಕೊಳ್ಳುವ ಯಜ್ಞದಲ್ಲಿ ಎಲ್ಲರೂ ಕೈ ಜೋಡಿಸಬೇಕು-ಶಾಸಕ ಗುರುರಾಜ ಗಂಟಿಹೊಳೆ

ಕುಂದಾಪುರ: ಊರಿನ ಸರ್ಕಾರಿ ಶಾಲೆ ಉಳಿಸಿ ಬೆಳೆಸುವುದು ಊರಿನವರ ಜವಬ್ದಾರಿಯಾಗಬೇಕು. ದಾನಿಗಳು, ಹಳೆ ವಿದ್ಯಾರ್ಥಿಗಳ ಸಹಭಾಗಿತ್ವ, ಊರವರ ಬೆಂಬಲವಿದ್ದರೆ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿದೆ. ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಶ್ರೇಷ್ಠವಾದ ಯಜ್ಞದಲ್ಲಿ ಎಲ್ಲರೂ ಜೊತೆಯಾಗಬೇಕು ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಅವರು ಬೈಂದೂರು ಶೈಕ್ಷಣಿಕ ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಾಲ (ನಂದ್ರೊಳ್ಳಿ) ಇಲ್ಲಿ ಶ್ರೀ ಕೃಷ್ಣಕೃಪಾ ಕ್ಯಾಶ್ಯೂಸ್ ಪ್ರೈ., ಲಿ ಜಪ್ತಿ ಉಳ್ಳೂರು ಕುಂದಾಪುರ, ಇದರ ಆಡಳಿತ ನಿರ್ದೇಶಕರಾದ ಶ್ರೀಮತಿ ಶ್ರೀ ಜಯಪ್ರಕಾಶ್ ಶೆಟ್ಟಿ ಅವರ ಸಹಕಾರದೊಂದಿಗೆ ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಶಾಲಾ ಕಟ್ಟಡ ಉದ್ಘಾಟಿಸಿ, ದಾನಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.

ತನ್ನೂರಿನ ಶಾಲೆಯ ಬಗ್ಗೆ ಅಭಿಮಾನದಿಂದ ತಾನು ಕಲಿತ ಶಾಲೆಯ ಪುನರ್ ನಿರ್ಮಾಣಕ್ಕೆ ಮುಂದಾದ ಜಯಪ್ರಕಾಶ್ ಶೆಟ್ಟಿಯಂತಹ ದಾನಿಗಳು, ಹಳೆವಿದ್ಯಾರ್ಥಿಗಳು ಗ್ರಾಮದ ಆಸ್ತಿಯಾಗುತ್ತಾರೆ. 1500ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವುದರೊಂದಿಗೆ ಯಶಸ್ವಿ ಉದ್ಯಮಿಯಾಗಿ ಊರಿನ ಶಾಲೆಯ ಉಳಿಸುವಿಕೆಗೆ ಅವರು ತೋರುವ ಕಾಳಜಿ ಮಾದರಿಯಾದುದು. ಜಯಪ್ರಕಾಶ್ ಶೆಟ್ಟಿಯವರಂತಹ ಶಿಕ್ಷಣಾಭಿಮಾನಿ ದಾನಿಗಳು ಸಿಕ್ಕಾಗ ಎಲ್ಲಾ ಸರಕಾರಿ ಶಾಲೆಗಳು ಅಭಿವೃದ್ಧಿ ಹೊಂದಲು ಸಾಧ್ಯ. ಬೈಂದೂರು ಕ್ಷೇತ್ರದಲ್ಲಿ ೩೦೦ ಸರಕಾರಿ ಶಾಲೆಗಳ ಅಭಿವೃದ್ಧಿ ಗುರಿಯಿದೆ. ಅದಕ್ಕೆ ಜೆ.ಪಿ ಶೆಟ್ಟಿಯಂತಹ ದಾನಿಗಳ ಅಗತ್ಯವಿದೆ ಎಂದರು.

ಇವತ್ತು ಕೆಲವೊಂದು ಖಾಸಗಿ ಶಾಲೆಗಳು 10ನೇ ತರಗತಿಯಲ್ಲಿ ಅನುತೀರ್ಣರಾಗುವ ಸಂಭವ ಇರುವ ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗೆ ಕಳುಹಿಸಿಕೊಡುತ್ತಾರೆ. ಹಾಗಾಗಿ ಸರಕಾರಿ ಪ್ರೌಢಶಾಲೆಗಳಲ್ಲಿ ಫಲಿತಾಂಶ ಹಿನ್ನೆಡೆ ಕಾಣುತ್ತದೆ. ಸರಕಾರಿ ವ್ಯವಸ್ಥೆಯಲ್ಲಿ ದಾಖಲಾತಿ ಎನ್ನುವಂತಿಲ್ಲ. ಈ ಬಗ್ಗೆ ಸರಕಾರ ಕಠಿಣ ಕ್ರಮ ಕೈಗೊಂಡು ಖಾಸಗಿ ಶಾಲೆಯಲ್ಲಿ ಓದುತ್ತಿರುವ ಮಗು ಕಲಿಕೆಯಲ್ಲಿ ಹಿಂದೆ ಇದ್ದರೂ ಕೂಡಾ ಆ ಮಗು ಅದೇ ಶಾಲೆಯಲ್ಲಿ ಪರೀಕ್ಷೆ ಬರೆಯಬೇಕು ಎಂದರು.

ನನ್ನ ಕರ್ತವ್ಯ ನಾನು ಮಾಡಿದ್ದೇನೆ-ಜಯಪ್ರಕಾಶ ಶೆಟ್ಟಿ
ಸಾರ್ವಜನಿಕ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಉದ್ಯಮಿ ಜಯಪ್ರಕಾಶ ಶೆಟ್ಟಿ ಹೆಟ್ನಬೈಲು ಮಾತನಾಡಿ, ಸರಕಾರಿ ಶಾಲೆಗಳು ಆ ಊರಿನ ಆಸ್ತಿ. ಆ ಶಾಲೆಗಳನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರಕಬೇಕು. ಶಿಕ್ಷಣದಲ್ಲಿ ಅಂಕ ಗಳಿಕೆಯೊಂದೇ ಗುರಿಯಾಗದೇ ಮೌಲ್ಯಗಳು, ಉತ್ತಮ ಸಂಸ್ಕಾರವನ್ನು ನೀಡುವ ಶಿಕ್ಷಣ ಇವತ್ತಿನ ಅಗತ್ಯ. ಜೀವನ ಮೌಲ್ಯಗಳನ್ನು ವಿದ್ಯಾರ್ಥಿದಿಸೆಯಲ್ಲಿಯೇ ಅಳವಡಿಸಿಕೊಂಡಾಗ ಜೀವನದಲ್ಲಿ ಮುಂದೇ ಯಶಸ್ಸು ಸಾಧಿಸಲು ಸಾಧ್ಯ. ಶತಮಾನವನ್ನು ಕಂಡ ಈ ಶಾಲೆ ಈ ಭಾಗದ ದೇವಸ್ಥಾನದಷ್ಟೇ ಪವಿತ್ರವಾದುದು. ಕಲಿತ ಶಾಲೆಯನ್ನು ಎಂದೂ ಯಾರೂ ಮರೆಯಬಾರದು. ಹುಟ್ಟೂರಿನ ಮಮಕಾರದಂತೆ ಕಲಿತ ಶಾಲೆಯ ಬಗ್ಗೆ ಅಭಿಮಾನ ಶಾಶ್ವತವಾಗಿ ಇರಿಸಿಕೊಳ್ಳಬೇಕಾಗುತ್ತದೆ ಎಂದರು.

ನಾನು ಇಲ್ಲಿ ಕಲಿತ ಪ್ರಾಥಮಿಕ ಶಿಕ್ಷಣ, ಆಗಿನ ವಾತಾವರಣ, ಅಂದಿನ ಗುರುಗಳು ಇಂದೂ ಹಾಗೆಯೇ ಹಸಿರಾಗಿದೆ. ಈ ಶಾಲೆ ನನಗೆ ಜೀವನ ಸಂಸ್ಕಾರವನ್ನು ಕಲಿಸಿದೆ. ಬದುಕನ್ನು ಎದುರಿಸುವ ತಾಳ್ಮೆ, ಧೈರ್ಯವನ್ನು ಕಲಿಸಿದೆ. ಮುಂದೆ ನಾನು ಪಿಯುಸಿ ತನಕವೂ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿಯೇ ವ್ಯಾಸಂಗ ಮಾಡಿದೆ. ಉದ್ಯೋಗ ನಿಮಿತ್ತ ಮುಂಬಯಿಗೆ ಹೋಗಿ ಅಲ್ಲಿ ಹೋಟೆಲ್ ಮ್ಯಾನೇಜ್ ಮೆಂಟ್ ಡಿಪ್ಲೋಮಾ ಮಾಡಿದೆ. ಬಳಿಕ ವಿದೇಶದಲ್ಲಿದಲ್ಲಿಯೂ ಕೆಲಸ ಮಾಡಿ ತಾಯ್ಮಾಡಿಗೆ ಮರಳಿ ಉದ್ಯಮ ಆರಂಭಿಸಿದೆ. ಪ್ರಸ್ತುತ 1500 ಹೆಚ್ಚು ಮಂದಿಗೆ ಕೆಲಸ ನೀಡಿದ ತೃಪ್ತಿ ಇದೆ ಎಂದರು.

ವಂಡ್ಸೆ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶತಮಾನೋತ್ಸವವನ್ನು ಆಚರಿಸಿಕೊಂಡಿರುವ ಗ್ರಾಮೀಣ ಪ್ರದೇಶದ ಶಾಲೆಗೆ ಈ ಭಾಗದ ಮಕ್ಕಳನ್ನು ಸೇರಿಸುವ ಮೂಲಕ ಶಾಲೆಯ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು. ಶಾಲೆಗೆ ಹೆಚ್ಚು ಮಕ್ಕಳು ದಾಖಲಾತಿಯಾದಾಗ ದಾನಿಗಳಿಗೂ ಸಾರ್ಥಕತೆ ಮೂಡುತ್ತದೆ. ನಮ್ಮೂರಿನ ಶಾಲೆಯನ್ನು ನಾವು ಉಳಿಸಿ ಬೆಳೆಸಿಕೊಳ್ಳೋಣ ಎಂದರು.

ಈ ಸಂದರ್ಭದಲ್ಲಿ ಶಾಲಾ ಕಟ್ಟಡ ಪುನರ್ ನಿರ್ಮಾಣ ಮಾಡಿಕೊಟ್ಟಿರುವ ಉದ್ಯಮಿ ಜಯಪ್ರಕಾಶ ಶೆಟ್ಟಿ ಹೆಟ್ನಬೈಲು, ಅವರ ಪತ್ನಿ ಶೃತಿ ಜಯಪ್ರಕಾಶ್ ಶೆಟ್ಟಿ, ತಾಯಿ ಸಿಂಗಾರಿ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.

ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ವಿಶೇಷ ಕೊಡುಗೆ ಘೋಷಣೆ:
ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ಪ್ರೊ.ರಘುರಾಮ ಶೆಟ್ಟಿ ಊರುಬೈಲು ಮಾತನಾಡಿ, ಈ ಶಾಲೆಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಸಂಕಲ್ಪ ಮಾಡಬೇಕು. ಈ ಶೈಕ್ಷಣಿಕ ಸಾಲಿನಿಂದ ಈ ಶಾಲೆಯಲ್ಲಿ ಕಲಿತು ಮುಂದೆ ಪದವಿ ಶಿಕ್ಷಣಕ್ಕೆ ಹೋಗುವ ಸಂದರ್ಭದಲ್ಲಿ ಯಾರಿಗಾದರೂ ಆರ್ಥಿಕ ಸಮಸ್ಯೆ ಎದುರಾದರೆ ಅಂತಹ ವಿದ್ಯಾರ್ಥಿಗಳು ಜಯಪ್ರಕಾಶ್ ಶೆಟ್ಟಿಯವರ ಮೂಲಕ ಆರ್ಥಿಕ ಸಹಕಾರ ಒದಗಿಸಿಕೊಡಲಾಗುವುದು, ಹಾಗು ಮುಂದಿನ ಶೈಕ್ಷಣಿಕ ವರ್ಷದಿಂದ ಈ ಶಾಲೆಯಲ್ಲಿ ಒಂದನೇ ತರಗತಿಗೆ ದಾಖಲಾಗುವ ಪ್ರತಿಮಗುವಿನ ಹೆಸರಿನಲ್ಲಿ ಬ್ಯಾಂಕಿನಲ್ಲಿ 5 ಸಾವಿರ ರೂಪಾಯಿ ಠೇವಣಿ ಇರಿಸಲಾಗುವುದು. ಆ ಮಗು ಏಳನೇ ತರಗತಿ ತನಕ ಓದನ್ನು ಈ ಶಾಲೆಯಲ್ಲಿಯೇ ಮುಗಿಸಿಬೇಕು. 18 ವರ್ಷವಾದಾಗ ಆ ಹಣ ಸಿಗುವಂತೆ ಮಾಡುವ ಯೋಜನೆ ರೂಪಿಸಲಾಗುವುದು ಎಂದರು.

ಗುತ್ತಿಗೆದಾರರಾದ ಕರುಣಾಕರ ಶೆಟ್ಟಿ ಹರ್ಜಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್, ಕೆರಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುದರ್ಶನ ಶೆಟ್ಟಿ ಕೆರಾಡಿ, ನಾರಾಯಣ ಶೆಟ್ಟಿ ಸಬ್ಲಾಡಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ ಶೆಟ್ಟಿ, ವಿದ್ಯಾರ್ಥಿ ನಾಯಕ ಸ್ವಜಿತ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಸಮವಸ್ತ್ರ ವಿತರಿಸಲಾಯಿತು. ಶಾಲೆಗೆ ಐದು ಬೆಂಚ್ ಡೆಸ್ಕ್ ಕೊಡುಗೆಯಾಗಿ ನೀಡಿದ ಗಣೇಶ ಶೆಟ್ಟಿ, ಸಮವಸ್ತ್ರದ ಕೊಡುಗೆ ನೀಡಿದ ಪ್ರಶಾಂತ ನಾಯ್ಕ ಸಾಮಾಜಿಕೊಡ್ಲು ಅವರನ್ನು ಗೌರವಿಸಲಾಯಿತು. ಶಾಲೆಯ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿರುವ ಗ್ರಾ.ಪಂ ಮಾಜಿ ಸದಸ್ಯ ನಾರಾಯಣ ಶೆಟ್ಟಿ ಸಬ್ಲಾಡಿ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ ಕ್ಷೇತ್ರಪಾಲ ಅವರನ್ನು ಗೌರವಿಸಲಾಯಿತು.

ಶಾಲೆಯ ಮುಖ್ಯೋಪಾಧ್ಯಾಯರಾದ ಕರುಣಾಕರ ಶೆಟ್ಟಿ ಸ್ವಾಗತಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕೃಷ್ಣಯ್ಯ ಆಚಾರ್ಯ ಕ್ಷೇತ್ರಪಾಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಅಂಬಿಕಾ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ಸ್ವಾತಿ ಭಟ್ ವಂದಿಸಿದರು. ಆತ್ಮರಾಜ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!