spot_img
Wednesday, March 18, 2026
spot_img

ಸಮಾಜಮುಖಿ ಬದುಕಿಗೆ ಸುರೇಶ ಎಸ್.ಪೂಜಾರಿ ನಿದರ್ಶನ-ವಿನಯ ಕುಮಾರ್ ಸೊರಕೆ | ಕುಂದಾಪುರದಲ್ಲಿ ಸುರೇಶ ಎಸ್ ಪೂಜಾರಿ ಅವರಿಗೆ ಶ್ರದ್ದಾಂಜಲಿ ಸಭೆ

ಜನಪ್ರತಿನಿಧಿ ವಾರ್ತೆ] ಕುಂದಾಪುರ, ಜೂ.17: ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ, ಈ ನಡುವಿನ ಅವಧಿಯಲ್ಲಿ ಯಾವ ರೀತಿ ಜೀವನ ನಡೆಸಬೇಕು ಎನ್ನುವುದು ಪ್ರಾಮುಖ್ಯ ಪಡೆಯುತ್ತದೆ. ಸಮಾಜಮುಖಿಯಾಗಿ ಬದುಕುವ ಮೂಲಕ ಬದುಕು ಹೇಗಿರಬೇಕು ಎಂದು ತೋರಿಸಿಕೊಟ್ಟವರು ಸುರೇಶ ಎಸ್.ಪೂಜಾರಿ ಅವರು. ಕಠಿಣವಾದ ಪರಿಶ್ರಮದ ಮೂಲಕ ಸಾಧನೆಯ ಮೈಲಿಗಲ್ಲನ್ನು ಸ್ಥಾಪಿಸಿ ಜನಮಾನಸದಲ್ಲಿ ಸ್ಥಿರವಾಗಿ ಉಳಿದವರು ಎಂದು ಮಾಜಿ ಸಂಸದ ವಿನಯ ಕುಮಾರ್ ಸೊರಕೆ ಹೇಳಿದರು.

ಜೂ.೪ರಂದು ಅಗಲಿದ ಸುಖ ಸಾಗರ ಗ್ರೂಫ್ ಆಪ್ ಹೋಟೆಲ್ಸ್ ಮುಂಬಯಿ, ಕುಂದಾಪುರ ಬಿಲ್ಲವ ಸಂಘದ ಗೌರವಾಧ್ಯಕ್ಷರಾದ ಸುರೇಶ ಎಸ್.ಪೂಜಾರಿ ಅವರಿಗೆ ಕುಂದಾಪುರದ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಬಿಲ್ಲವ ಸಮಾಜ ಸೇವಾ ಸಂಘ ರಿ., ಕುಂದಾಪುರ, ಶ್ರೀ ನಾರಾಯಣಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಕುಂದಾಪುರ, ಶ್ರೀನಾರಾಯಣ ಗುರು ಯುವಕ ಮಂಡಲ ಕುಂದಾಪುರ, ಬಿಲ್ಲವ ಮಹಿಳಾ ಘಟಕ ಕುಂದಾಪುರ ಆಯೋಜಿಸಿದ ಸಾರ್ವಜನಿಕ ಶ್ರದ್ದಾಂಜಲಿ ಸಭೆಯಲ್ಲಿ ಅವರು ನುಡಿ ನಮನ ಸಲ್ಲಿಸಿದರು.

ಸುರೇಶ ಎಸ್.ಪೂಜಾರಿ ಅವರ ಸದ್ಗುಣ, ಸಾಮಾಜಿಕ ಕಳಕಳಿ, ದೂರದೃಷ್ಟಿಯ ಯೋಚನೆಗಳಿಂದಾಗಿ ಅವರನ್ನು ಜನ ಗೌರವಿಸುತ್ತಾರೆ. ಅವರ ವ್ಯಕ್ತಿತ್ವ ಸಮಾಜಕ್ಕೆ ಅವರು ನೀಡಿದ ಸೇವೆಯಿಂದ ಅವರು ಸದಾ ಉಳಿಯುತ್ತಾರೆ. ಬಿಲ್ಲವ ಸಮಾಜ ಮಾತ್ರವಲ್ಲ ಇತರ ಸಮಾಜದ ಬಗ್ಗೆಯೂ ಅವರು ಕಾಳಜಿ ಹೊಂದಿದ್ದರು. ಬಡತನ ತಾಂಡವಾಡುತ್ತಿದ್ದ ಸಂದರ್ಭದಲ್ಲಿ ಅವರು ತನ್ನ ಉದ್ಯಮದ ಮೂಲಕ ಅದೆಷ್ಟೋ ದುಡಿಯುವ ಕೈಗಳಿಗೆ ಉದ್ಯೋಗ ಕೊಟ್ಟವರು. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಆದರ್ಶವನ್ನು ತನ್ನ ಜೀವನದಲ್ಲಿ ಪಾಲನೆ ಮಾಡಿಕೊಂಡು ಬಂದವರು. ಇಂಥಹ ಮೇರು ವ್ಯಕ್ತಿಯ ಹೆಸರು ಶಾಶ್ವತವಾಗಿ ಉಳಿಯುವ ಕೆಲಸ ಬಿಲ್ಲವ ಸಂಘದ ಮೂಲಕ ಆಗಲಿ ಎಂದರು.

ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ ಅಧ್ಯಕ್ಷರಾದ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ, ಸುರೇಶ ಪೂಜಾರಿಯವರ ಜೀವನಾದರ್ಶನ ಸ್ಪೂರ್ತಿದಾಯಕವಾದುದು. ಪರಿಶ್ರಮ, ಸಾಹಸಿ ಪ್ರವೃತ್ತಿ, ಉದ್ಯಮ ಕ್ಷೇತ್ರದ ಅಪಾರವಾದ ಅನುಭವ ಹೊಂದಿದ್ದ ಸುರೇಶ ಪೂಜಾರಿಯವರು ಮುಂಬಯಿಯಂತಹ ಮಹಾನಗರಕ್ಕೆ ಹೋಗಿ, ಅಲ್ಲಿ ಕೆಲಸದೊಂದಿಗೆ ರಾತ್ರಿ ಶಿಕ್ಷಣ ಮುಂದುವರಿಸಿ, ಚೌಪಟಿಯಲ್ಲಿ ಸಣ್ಣ ಮಟ್ಟದ ಸುಖಸಾಗರ್ ಹೋಟೆಲ್ ಆರಂಭಿಸಿ, ಇವತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿವೆ. ಸಾಗರ ಹೋಟೆಲ್ ಉದ್ಯಮದಲ್ಲಿ ಕ್ರಾಂತಿಯನ್ನೇ ಮಾಡಿದೆ. ಕರಾವಳಿ ಭಾಗದ ಅದೆಷ್ಟೋ ಹೋಟೆಲ್ ಉದ್ಯಮಿಗಳಿಗೆ ಸುಖಸಾಗರ ಸ್ಪೂರ್ತಿ ಹಾಗೂ ಪ್ರೇರಣೆಯಾಗಿದೆ. ಸಮಾಜ, ಸಂಘಟನೆ, ಧಾರ್ಮಿಕ, ಶಿಕ್ಷಣದ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದ ಅವರು ಹೆಮ್ಮಾಡಿಯಲ್ಲಿ ನಿವೇಶನ ಖರೀದಿಸಿ, ಅಲ್ಲಿ ಶಿಕ್ಷಣ ಚಟುವಟಿಕೆಗಳನ್ನು ಆರಂಭಿಸಬೇಕು ಎನ್ನುವ ಕನಸು ಕಂಡಿದ್ದರು. ಈ ಬಗ್ಗೆ ನನ್ನಲ್ಲೂ ಹೇಳಿಕೊಂಡಿದ್ದರು. ಸುರೇಶ ಪೂಜಾರಿ ಅವರಂತಹ ಸರ್ವಸಮಾಜವನ್ನು ಗೌರವಿಸುವ, ಎಲ್ಲರನ್ನು ತನ್ನವರೆಂದು ಭಾವಿಸಿ ಅಪರೂಪದ ಮೇರು ವ್ಯಕ್ತಿತ್ವ ಅವರದ್ದಾಗಿತ್ತು ಎಂದರು.

ನುಡಿ ನಮನ ಸಲ್ಲಿಸಿ ಮಾತನಾಡಿದ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ, ಸುರೇಶ ಪೂಜಾರಿ ಅವರಂತಹ ಸಾಧಕರು ಕರಾವಳಿಯಲ್ಲಿ ಎಂದೂ ಮರೆಯದ ಛಾಪು ಮೂಡಿಸಿದ್ದಾರೆ. ಅವರು ದುಡಿಮೆಯ ಜೊತೆಯಲ್ಲಿ ಸಾಮಾಜಿಕ ಕಾಳಜಿ ಒಂದು ಜನಾಂಗಕ್ಕೆ ಕೇಂದ್ರೀಕರಿಸಿಕೊಳ್ಳದೆ ಎಲ್ಲ ಸಮಾಜವನ್ನು ಸಮಾನವಾಗಿ ಕಂಡು ಪ್ರೋತ್ಸಾಹಿಸಿದ್ದಾರೆ. ಎಲ್ಲ ಕಡೆ ಅವರ ಬಗ್ಗೆ ಜನ ಸ್ಮರಿಸುವುದನ್ನು ಕಂಡಾಗ ಈ ಭಾಗಕ್ಕೆ ಅವರ ಕೊಡುಗೆ ಎಷ್ಟೆಂಬುದು ಸ್ಪಷ್ಟವಾಗುತ್ತದೆ. ಇಂಥಹ ಶ್ರೇಷ್ಠ ವ್ಯಕ್ತಿಯ ಅಗಲಿಗೆ ತುಂಬಲಾರದ ನಷ್ಟ ಎಂದರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಉದ್ಯಮ ರಂಗದಲ್ಲಿ ದೊಡ್ಡ ಸಾಧನೆ ಮಾಡಿದ ಸುರೇಶ ಪೂಜಾರಿಯವರು ಉದ್ದಿಮೆಶೀಲತೆ ವಿಶೇಷವಾದುದು, ಅವರು ಗ್ರಾಹಕರ ಜೊತೆ ಇಟ್ಟುಕೊಂಡ ಆತ್ಮೀಯ ಬಾಂಧವ್ಯ, ಉದ್ಯಮದಲ್ಲಿ ಅಳವಡಿಸಿಕೊಂಡ ಗ್ರಾಹಕಸ್ನೇಹಿ ಗುಣಗಳು ಅದ್ವುತವಾದುದು.ಯಶಸ್ವಿ ಹೋಟೆಲ್ ಉದ್ಯಮಿ ಹೇಗಾಗಬಹುದು ಎನ್ನುವುದನ್ನು ಅವರು ತೋರಿಸಿಕೊಟ್ಟವರು. ನಾವು ಕೂಡಾ ಅವರ ಆ ಗುಣಗಳನ್ನು ಉದ್ಯಮದಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಿದ್ದೇವೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಅವರು ಅಗಾಧವಾದ ಕೊಡುಗೆ ನೀಡಿದ್ದಾರೆ. ಪಡುಕೋಣೆಯಿಂದ ಮುಂಬಯಿಗೆ ತೆರಳಿ ತನ್ನ ಸಾಧನೆಯ ಮೂಲಕ ಪ್ರಸಿದ್ಧಿ, ಗೌರವವನ್ನು ಪಡೆದುಕೊಂಡ ಸುರೇಶ ಪೂಜಾರಿಯವರ ಚಿಂತನೆ, ಯೋಚನೆ, ಯೋಜನೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ಸುರೇಶ ಪೂಜಾರಿಯವರು ಮತ್ತೆ ಅದೇ ಕುಟುಂಬದಲ್ಲಿ ಹುಟ್ಟಿ ಬರಬೇಕು ಎಂದರು.

ಶಾಸಕ ಕಿರಣ್ ಕುಮಾರ್ ಕೊಡ್ಗಿ, ಉದ್ಯಮಿ ದಿನೇಶ ಹೆಗ್ಡೆ ಮೊಳಹಳ್ಳಿ, ಜಾನಪದ ತಜ್ಞ, ಉದ್ಯಮಿ ಬಾಬು ಶಿವ ಪೂಜಾರಿ, ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೋ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಕಲಾಕ್ಷೇತ್ರದ ಅಧ್ಯಕ್ಷ ಬಿ.ಕಿಶೋರ್ ಕುಮಾರ್, ರಾಜೇಶ ಕಾವೇರಿ, ಡಾ.ಪ್ರೇಮಾನಂದ, ಕಟಪಾಡಿ ಕ್ಷೇತ್ರದ ದರ್ಮದರ್ಶಿ ಶಂಕರ ಪೂಜಾರಿ, ಉದ್ಯಮಿ ಅರುಣ್ ಕುಮಾರ್ ಶೆಟ್ಟಿ, ಗುಣರತ್ನ, ತಾ.ಪಂ.ಮಾಜಿ ಅಧ್ಯಕ್ಷ ಭಾಸ್ಕರ ಬಿಲ್ಲವ, ಸುರೇಶ ಎಸ್ ಪೂಜಾರಿ ಅವರ ಪುತ್ರರು, ಬಿಲ್ಲವ ಸಮುದಾಯದ ಮುಂದಾಳುಗಳು, ನಾರಾಯಣಗುರು ಯುವಕ ಮಂಡಲದ ಅಧ್ಯಕ್ಷ ಸಂದೇಶ ಪೂಜಾರಿ, ಗಿರಿಜಾ ಮಾಣಿಗೋಪಾಲ್ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ಸತೀಶ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!