spot_img
Wednesday, January 22, 2025
spot_img

ಬಿಗ್‌ ಬಾಸ್‌ ಎಂಬ ಪರಿಕಲ್ಪನೆ ಮತ್ತು ಸುದೀಪ್‌ ಎಂಬ ಬೆಳ್ಳಿ ಬೆಳಕು

ಸೌಜನ್ಯ ಸಾರ್ವಜನಿಕ ಬದುಕಿಗೆ ಬೇಕಾದ ಜರೂರು !

ಸಾಮಾಜಿಕ ಜಾಲತಾಣಗಳ ನಾಗಾಲೋಟದ ಪ್ರಗತಿ ನಮ್ಮ ನಿಮ್ಮನ್ನು ದಿನನಿತ್ಯ ಅಚ್ಚರಿಗೊಳಿಸುತ್ತಿದೆ. ಇಲ್ಲಿನ ವೈಭವವೇ ಸಾಧನೆ ಎಂದು ಒಪ್ಪುವ ಮನಸ್ಥಿತಿಗೆ ಜಗತ್ತು ಬಂದು ತಲುಪಿದೆ. ಬಹುಶಃ ಮನರಂಜನೆ ಎನ್ನುವುದು ವ್ಯಸನ ಆಗುವಷ್ಟರ ಮಟ್ಟಿಗೆ ತಂದಿರಿಸಿದ ದೊಡ್ಡ ಶ್ರೇಯ ಬಹುಶಃ ಸಲ್ಲಬೇಕಾಗಿರುವುದು ಸಾಮಾಜಿಕ ಜಾಲತಾಣಗಳಿಗೆ ಎಂದು ಅನ್ನಿಸುತ್ತದೆ. ಇದರಾಚೆಗೂ ಜಗತ್ತಿದೆ, ಬದುಕು ಉಳಿದಿದೆಯೇ ಎಂಬ ಪ್ರಶ್ನೆಯನ್ನು ಬಲವಂತವಾಗಿ ನಮ್ಮನ್ನು ನಾವು ಅಥವಾ ನಿಮ್ಮನ್ನು ನೀವು ಕೇಳಿಕೊಳ್ಳಬೇಕಾದ ಮತ್ತು ಉತ್ತರವನ್ನೂ ಹುಡುಕಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಜಗತ್ತು ನಮ್ಮ ನಿಮ್ಮನ್ನು ತಂದಿರಿಸಿದೆ ಎಂದು ಹೇಳಿದರೇ ಬಹುಶಃ ತಪ್ಪಾಗಲಿಕ್ಕಿಲ್ಲ. ಈ ನಡುವೆ ಮನುಷ್ಯ ನಿತ್ಯ ಸಂಕುಚಿತಗೊಳ್ಳುತ್ತಾ ಸಾಗುತ್ತಿದ್ದಾನೆ ಎನ್ನುವುದಕ್ಕೆ ಎಲ್ಲಿ ಹೇಗೆ ವರ್ತಿಸಬೇಕೆಂಬುವುದರಲ್ಲಿ ಕೊರತೆ ಕಾಣುತ್ತಿರುವುದೇ ದೊಡ್ಡ ಸಾಕ್ಷಿಯಾಗಿ ಮುಂದಿದೆ.

ಇಂತಹುದೇ ಹಲವು ಕೌತುಕದ ಆಲೋಚನೆ, ಬದುಕು, ವೇಗ, ಬದಲಾದ ಸಾಧನೆಯ ಮಾನ್ಯತೆಗಳ ಸುತ್ತ ಯೋಚನೆಗೆ ಹಚ್ಚುವ ಚಿಂತನೆಯೊಂದು ನಮ್ಮ ನಡುವೆ ಉಳಿದುಕೊಂಡಿದೆ ಎನ್ನುವುದೇ ಸಮಾಧಾನಕರ.

ಗೆಲ್ಲುವ ತುರ್ತಿನಲ್ಲಿ ಮತ್ತು ಗಳಿಸುವ ಹಪಾಹಪಿಯಲ್ಲಿ ಜ್ಞಾನದ ವಿಸ್ತಾರಕ್ಕೆ ಅಡಿಯಾಗುವ ನಮ್ಮೊಳಗಿನ ಅರಸುವಿಕೆಯ ಗುಣವನ್ನು ಬಲವಂತವಾಗಿ ಅದುಮುತ್ತೇವೋ ಅಲ್ಲಿಂದಲೇ ಮನುಷ್ಯ ಬೌದ್ಧಿಕವಾಗಿ ವಿಕಾರಗೊಳ್ಳುವುದಕ್ಕೆ ಕಾರಣವಾಗುತ್ತದೆ. ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ನಮ್ಮೊಳಗೆಯೇ ಇದೆಯಾದರೂ ಅದನ್ನು ಕಂಡುಕೊಳ್ಳುವುದಕ್ಕೂ ತಯಾರಿಲ್ಲ. ಇದೇ ನಿಜದ ದಾರಿ ಎಂದು ಹೇಳುವ ನಮ್ಮತನವನ್ನೇ ಅಲ್ಲಗಳೆಯುವ ಹೊಸ ದುರಂತವನ್ನು ನಾವು ನಾವಾಗಿಯೇ ಎದುರು ಹಾಕಿಕೊಂಡಿದ್ದೇವೆ. ಇಲ್ಲಿಯೇ ಮಾತು, ನಡೆ, ವ್ಯಕ್ತಿತ್ವ, ಬದುಕು ಸೋಲುತ್ತಿರುವುದು ಎಂದರೆ ತಪ್ಪಿಲ್ಲ‌. ಒಂದು ಬದುಕಿನ ಪೂರ್ತಿ ಇರುವಿಕೆಗೆ ಒಂದು ಸಿದ್ಧ ಮಾದರಿ ‘ಇದೇ ಸರಿಯಾದದ್ದು’ ಎನ್ನುವುದು ಬಹುಶಃ ಇಲ್ಲವೇನೋ. ಆದರೇ, ಎಲ್ಲಿ ಹೇಗೆ ವರ್ತಿಸಬೇಕೆಂಬುವುದಕ್ಕೆ, ಎಲ್ಲಿ ಹೇಗೆ ಇರಬೇಕೆನ್ನುವುದಕ್ಕೆ, ಎಲ್ಲಿ ಹೇಗೆ ಮಾತಾಡಬೇಕೆಂಬುವುದಕ್ಕೆ ಬಹುಶಃ ಒಂದು ಸಿದ್ಧ ಮಾದರಿ ಇದೆ. ಜಗತ್ತು ಇದಕ್ಕೆ ಇನ್ನಷ್ಟು ನಿಖರವಾಗಿ ‘ಸಾರ್ವಜನಿಕ ಬದುಕು’ ಎಂದು ಹೇಳಿದೆ.  ಒಬ್ಬ ವ್ಯಕ್ತಿ ಸಾರ್ವಜನಿಕ ಬದುಕಿನ ಸಿದ್ಧ ಮಾದರಿಯನ್ನು ಮೀರಿದಾಗಲೇ ಭಿನ್ನಾಭಿಪ್ರಾಯ, ವೈಮನಸ್ಸು, ಆಕ್ರೋಶ, ಸಿಟ್ಟು, ಕೋಪ ಎಲ್ಲವೂ ನಮ್ಮೊಳಗೆ ಮೊಳಕೆ ಒಡೆಯುವುದಕ್ಕೆ ಕಾರಣವಾಗುತ್ತದೆ ಅಂತ ಹೇಳಬಹುದೇನೋ.

ನಾವು ನೀವು ಬಹಳ ಪ್ರಮುಖವಾಗಿ ಗಮನಿಸಬೇಕಾಗಿರುವುದು ಏನೆಂದರೆ, ಒಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವದ ಹಿಡಿತದ ಕಾರಣದಿಂದಷ್ಟೇ ಬದುಕಿ ಉಳಿಯುವುದಲ್ಲ. ಅದರ ಹೊರತಾಗಿಯೂ ಕೂಡ ಬದುಕುತ್ತಾನೆ ಮತ್ತು ಉಳಿಯುತ್ತಾನೆ. ಅದು ಹೇಗೆ ಎನ್ನುವುದು ಎರಡನೇ ಹಂತದ ಚರ್ಚೆ ಎಂದು ಪರಿಗಣಿಸಲ್ಪಡುತ್ತದೆ ಇರಬೇಕು. ಒಬ್ಬ ವ್ಯಕ್ತಿ ಬೆಳೆಯುತ್ತಿರುವ  ವಾಸ್ತವತೆಯನ್ನು ಗಮನಿಸಿದರೆ ಜಗತ್ತು ಮನುಷ್ಯನ ಬೆಳವಣಿಗೆಗೆ ತಾಯಿ ಅಷ್ಟೇ ಆಗಿ ಉಳಿದಿಲ್ಲ ಎಂಬುವುದನ್ನು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳಬೇಕಾಗುತ್ತದೆ. ಇಲ್ಲಿ ಜಗತ್ತು ಕೋಟ್ಯಾಂತರ ವ್ಯಕ್ತಿತ್ವಗಳನ್ನು ಕೋಟ್ಯಾಂತರ ಥರಗಳಲ್ಲಿ ಇರಿಸಿಲ್ಲವೇ ? ಅಥವಾ ಅಹಿತವೆನ್ನಿಸಿದಾಗ ತೀರಾ ನಿಕೃಷ್ಟವಾಗಿ ಕೊನೆಗೊಳಿಸಿಲ್ಲವೆ ? ಇಷ್ಟಾಗಿಯೂ ಜಗತ್ತಿನ ಎಲ್ಲಾ ಕಡೆಗಳಲ್ಲಿ ಎಲ್ಲಾ ಥರದ ವ್ಯಕ್ತಿತ್ವಗಳು ಇವೆ ಎಂದಾದರೆ ಅದು ಜಗತ್ತನ್ನು ಕೋಟ್ಯಾಂತರ ವ್ಯಕ್ತಿತ್ವಗಳು ಅಥವಾ ಕೋಟ್ಯಾಂತರ ವ್ಯಕ್ತಿತ್ವಗಳು ಜಗತ್ತನ್ನು ಒಗ್ಗಿಸಿಕೊಂಡಿದ್ದೆಂದೇ ಅರ್ಥೈಸಿಕೊಳ್ಳಬೇಕಲ್ಲವೆ ? ಹಾಗೆಂದಾದಲ್ಲಿ ಜಗತ್ತಿನಲ್ಲಿ ಇರುವುದು ಎಲ್ಲವೂ ಭಿನ್ನವಾಗಿದೆ ಅಥವಾ ಅನನ್ಯವಾಗಿದೆ ಎಂದು ಅರಿಯಬೇಕು. ಹಾಗಾದಾಗ ಮಾತ್ರ ಸಾಧ್ಯವಾದಷ್ಟು ಮಟ್ಟಿಗಾದರೂ ಚೆನ್ನಾಗಿ ಬದುಕುವುದಕ್ಕೆ ಆಗಬಹುದು.

ಇಷ್ಟೆಲ್ಲಾ ಆದಮೇಲೆ, ಒಂದಿಷ್ಟು ವ್ಯಕ್ತಿತ್ವಗಳನ್ನು ಒಂದು ‘ಬಿಗ್ ಬಾಸ್ ಮನೆ’ಯೊಳಗೆ ಕಳುಹಿಸಿ ಅಲ್ಲಿ ಒಂದಿಷ್ಟು ಟಾಸ್ಕ್‌, ಜನಪ್ರಿಯತೆಯ ಆಧಾರದಲ್ಲಿ ಗೆಲ್ಲುವ ವ್ಯಕ್ತಿತ್ವವನ್ನು ಪರಿಪೂರ್ಣ ವ್ಯಕ್ತಿತ್ವ ಎಂದು ಬಿಂಬಿಸುವ ಹಾಗೆ ಮಾಡುವ ಒಂದು ವೇದಿಕೆ ಸೃಷ್ಟಿಯಾಗುವಷ್ಟರ ಮಟ್ಟಿಗೆ ಜಗತ್ತು ಬೆಳೆದಿದೆ ಎಂದರೆ ನಿಜಕ್ಕೂ ಆಶ್ಚರ್ಯವೇ ಸರಿ. ಈ ಪರಿಕಲ್ಪನೆ, ಬಿಗ್‌ ಬಾಸ್‌ ಅಂತಹ ಕಾರ್ಯಕ್ರಮ ತನ್ನ ಸೀಸನ್ ನಲ್ಲಿ ವಯಸ್ಸಿನ ಗಡಿ ಇಲ್ಲದೆ ಇಡೀ ಸಮುದಾಯವನ್ನೇ ಆವರಿಸಿಕೊಳ್ಳುತ್ತದೆ. ಸಾರ್ವಜನಿಕ ಬದುಕು ಹೇಗಿರಬೇಕೆಂಬ ಪಾಠ ಈ ಪರಿಕಲ್ಪನೆಯ ಒಳಗೆ ಅವಿತಿದೆ ಎನ್ನುವುದು ಸತ್ಯ. ಆದರೇ, ಅದು ಎಷ್ಟು ಪರಿಣಾಮಕಾರಿಯಾಗಿ ತಲಪಿದೆ ಅಥವಾ ತಲುಪಬೇಕಿದೆ ಎನ್ನುವುದು ಬಹುಶಃ ಪ್ರಶ್ನೆಯಾಗಿ ಉಳಿದಿದೆ. ಈ ಪರಿಕಲ್ಪನೆ ಬೇರೆ ಯಾವುದೋ ಭಾಷೆಯ ಕಾರ್ಯಕ್ರಮದಿಂದ ಎರವಲು ಪಡೆದುಕೊಂಡಿದ್ದಾದರೂ, ಕನ್ನಡದಲ್ಲಿ ಭಿನ್ನವಾಗಿಯೇ ತಲುಪಿದೆ. ಮಾತು ಸೋತಾಗ, ವ್ಯಕ್ತಿತ್ವ ಸೋತಾಗ, ನಡೆ ಸೋತಾಗ ತಿದ್ದುವ ಕೆಲಸ ಮಾಡುವ, ಉತ್ತೇಜಿಸುವ ಈ ಪರಿಕಲ್ಪನೆ ಅನೇಕ ಆಯಾಮಗಳಲ್ಲಿ ಸಾಮಾಜಿಕವಾಗಿ ಚರ್ಚೆಯಾಗಿದೆ ಎನ್ನುವುದು ಕೂಡ ಸತ್ಯ.

ಜಗತ್ತಿನ ಪ್ರಜ್ಞೆಯನ್ನು ತುಂಬಿರುವ ಸಹನೆ, ಪ್ರೀತಿಯನ್ನೇ ನಾವು ದೂರ ಮಾಡಿಕೊಳ್ಳುತ್ತಿರುವಾಗ ಅಥವಾ ಒಂದು ವ್ಯಕ್ತಿತ್ವ ಅಹಂ ಭಾವದಿಂದಲೇ ಮೆರೆಯುತ್ತಿರುವಾಗ ಅಲ್ಲಲ್ಲಿ ‘ಇಲ್ಲ ಹೀಗಲ್ಲ ಬದುಕು, ಬದುಕುವ ರೀತಿ ಬೇರೆಯೇ ಇದೆ’ ಎಂದು ತಿದ್ದಿ ಮಹತ್ವವಾದದ್ದನ್ನೇ ತಿಳಿಹೇಳುವ ಪರಿಕಲ್ಪನೆ ಸರಿಯಾಗಿದೆ ಎಂದು ಗ್ರಹಿಸಿಕೊಳ್ಳಬಹುದು. ಇನ್ನು, ಈ ಬಿಗ್ ಬಾಸ್ ಎಂಬ ಪರಿಕಲ್ಪನೆಯೊಳಗೆ ಬಿಡುವ ವಿವಾದಿತ ವ್ಯಕ್ತಿತ್ವಗಳ ಬಗ್ಗೆ ಬಹಳ ದೊಡ್ಡ ಚರ್ಚೆ ಸಾಮಾಜಿಕ ವಲಯದಲ್ಲಿ ಆಗಿದೆ. ಅದಕ್ಕೆ ಆಯೋಜಕ ಸಂಸ್ಥೆ ತೆಗೆದುಕೊಂಡ ಸಮಜಾಯಿಷಿಯ ಬಗ್ಗೆಯೂ ಚರ್ಚೆಯಾಗಿದೆ. ಆದರೇ, ನಟ, ನಿರೂಪಕ ಸುದೀಪ್ ನಿರ್ವಹಿಸುವ ರೀತಿಯಲ್ಲೇ ಈ ಒಂದು ಪರಿಕಲ್ಪನೆ  ಜನಪ್ರಿಯವಾಗಿ ಬೆಳೆದಿದೆ.

ಕಳೆದ ಸೀಸನ್‌ ನಲ್ಲಿ ಹೆಣ್ಣು ಮತ್ತು ಬಳೆಯ ವಿಚಾರ ಸಾಮಾಜಿಕವಾಗಿ ವಿವಾದಕ್ಕೆ ಒಳಗಾದಾಗ ಸುದೀಪ್‌ ಬಳೆಗೆ ಕಿಚ್ಚನ ಚಪ್ಪಾಳೆ ನೀಡುವುದರ ಮೂಲಕ ಹೆಣ್ಣನ್ನು ನಿಕೃಷ್ಟವಾಗಿ ಕಾಣುವ ಮನೋಭಾವಕ್ಕೆ ಪಾಠ ಹೇಳುವ ಪ್ರಯತ್ನ ಮಾಡಿದ್ದರು. ಮರುಕ್ಷಣವೇ ಸುದೀಪ್‌ ಅವರೇ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಅದೇ ವಿಚಾರದಲ್ಲಿ ಕಡಿಮೆ ಮಾಡಿ ಮಾತಾಡಿದ್ದ ಪೋಸ್ಟ್‌ ವೈರಲ್‌ ಆಗಿತ್ತು. ಈ ಸೀಸನ್‌ ನಲ್ಲಿ ಕಳೆದ ವಾರ ನಡೆದ ವಾರದ ಕಥೆ ಕಿಚ್ಚನ ಜೊತೆಯಲ್ಲಿಯೂ ದೊಡ್ಡ ಮಟ್ಟದಲ್ಲಿ ಗದ್ದಲ ಎಬ್ಬಿಸಿದ್ದ ಹೆಣ್ಣು, ಗಂಡು ಸ್ಥಾನಮಾನ, ಮರ್ಯಾದೆ, ಘನತೆ, ಭಾಷಾ ಬಳಕೆಗಳ ಬಗ್ಗೆ ಸುದೀಪ್ ಸೂಕ್ತವಾದ ರೀತಿಯಲ್ಲಿ ತಿಳಿಹೇಳುವ ಪ್ರಯತ್ನ ಮಾಡಿದ್ದರು. ಬಹುಶಃ ಸುದೀಪ್‌ ಆ ನೆಲೆಯಲ್ಲಿ ವಿಮರ್ಶಿಸಿ ಪಾಠ ಹೇಳುವ ಕೆಲಸ ಮಾಡದೆ ಇದ್ದಿದ್ದರೆ ಪ್ರೇಕ್ಷಕ ವರ್ಗವೇ ತಿದ್ದುವ ಕೆಲಸ ಮಾಡುತ್ತಿತ್ತೇನೋ. ಹೀಗೆ ನಿರಂತರವಾಗಿ ಈ ಬಿಗ್‌ ಬಾಸ್‌ ಎನ್ನುವ ಪರಿಕಲ್ಪನೆಯು ಒಳಗಿರುವ ಹಾಗೂ ಹೊರಗಿರುವವರಿಗೂ ತಿದ್ದುವ ಕೆಲಸ ಮಾಡುತ್ತಲೇ ಬಂದಿದೆ.

ಈ ಪರಿಕಲ್ಪನೆಯನ್ನು ತಿದ್ದುವ ಕೆಲಸವೂ ಪ್ರೇಕ್ಷಕ ವರ್ಗ ಅಥವಾ ಸಾಮಾಜಿಕ ವರ್ಗದಿಂದಲೂ ಆಗಿದೆ ಎನ್ನುವುದಕ್ಕೆ ಬಹುಶಃ ಇದು ಅನೇಕ ಚರ್ಚೆಗಳ ನಡುವೆಯೂ ಅನನ್ಯವಾಗಿ ಉಳಿದುಕೊಂಡಿದೆ. ತೀರಾ ಏನೂ ಇಲ್ಲ ಎಂಬ ಅಭಿಪ್ರಾಯದ ಜೊತೆಗೆ, ಸುದೀಪ್ ವೀಕೆಂಡ್ ಅಲ್ಲಿ ಮಾಡುವ ಸಮನ್ವಯ ಸಾಮಾಜಿಕ ಬದುಕಿಗೆ ಬೇಕಾದ ತುರ್ತು ಆಪ್ತ ಸಮಾಲೋಚನೆ ಇದು ಎಂಬ ರೀತಿಯಲ್ಲಿಯೂ ಅಭಿಪ್ರಾಯ ವ್ಯಕ್ತವಾಗಿರುವುದು ವಿಶೇಷವೆ ಸರಿ.

ಆದಾಗ್ಯೂ ಸಾರ್ವಜನಿಕ ಬದುಕಿನಲ್ಲಿ ಶಿಸ್ತು, ಒಪ್ಪುವ ಮನಸ್ಥಿತಿಯೇ ಇಲ್ಲದ ಈ ಕಾಲಘಟ್ಟದಲ್ಲಿ ಈ ಪರಿಕಲ್ಪನೆ ಇನ್ನಷ್ಟು ಪರಿಣಾಮಕಾರಿಯಾಗಿ ದಾರಿ ತೋರುವ ವೇದಿಕೆಯಾಗಿ ಬೆಳೆಯಬೇಕಿದೆ. ಬಹುಶಃ ಈ ಕಾರ್ಯಕ್ರಮ ಸುದೀಪ್ ಅವರ ಸಮನ್ವಯದಲ್ಲಿ ಎಂತೆಂಥಹ ವಾಸ್ತವ ಚಿಂತನೆಗಳನ್ನು ಹೊರಹೊಮ್ಮಿಸಬಹುದು ಎಂಬುವುದನ್ನು ತೋರಿಸಿಕೊಟ್ಟಿದೆ. ಬಹುಶಃ ಇದು ಸುದೀಪ್ ಒಬ್ಬರು ಬೆಳ್ಳಿ ಬೆಳಕಾಗಿ, ಅವರ ಸಮನ್ವಯ ಪ್ರಯತ್ನದಿಂದಷ್ಟೇ ಸುದೀರ್ಘ ಕಾಲದವರೆಗೆ ಇದೇ ಅಭಿಪ್ರಾಯವನ್ನೇ ಉಳಿಸಿಕೊಳ್ಳಲು ಸಾಧ್ಯವಿಲ್ಲ ಅನ್ನಿಸುತ್ತದೆ. ಒಂದು ಸೂಕ್ತ ಚಿಂತನೆ ಆಯೋಜನೆಯ ಸಂದರ್ಭದಲ್ಲಿ ಬಹು ಆಯಾಮಗಳಲ್ಲಿ ಆಗಬೇಕಾದ ತುರ್ತನ್ನು ಗುರುತಿಸಿಕೊಂಡರೇ ಜನಪ್ರಿಯ ಕಾರ್ಯಕ್ರಮವಷ್ಟೇ ಅಲ್ಲ, ಜನಪ್ರೀತಿಯ ಕಾರ್ಯಕ್ರಮ ಅಥವಾ ಪರಿಕಲ್ಪನೆಯಾಗಿ ಬೆಳೆಯಬಹುದು.

ಈ ಪರಿಕಲ್ಪನೆ ಸಾಮಾಜಿಕ ಜಾಲತಾಣಗಳ ನಡುವೆ ಸಮೂಹಸನ್ನಿಯಾಗದೆ ಒಂದು ವ್ಯಕ್ತಿತ್ವ ಕಲಿಯುವ, ತಿಳಿಯುವ ಪರಿಕಲ್ಪನೆಯಾಗಿ ಬೆಳೆಯಬೇಕಿದೆ.  ವ್ಯಕ್ತಿತ್ವ ಮತ್ತು ಬೆಳವಣಿಗೆಯ ನಡುವೆ ಕಾಣೆಯಾಗಿರುವ ಸೌಜನ್ಯ ವೃದ್ದಿಸಿಕೊಳ್ಳುವಂತಾಗಿ ಸಾರ್ವಜನಿಕ ಬದುಕಿನ ಸವಾಲುಗಳಿಗೂ ಪರಿಹಾರ ತೋರಿಸುವ ಪರಿಕಲ್ಪನೆಯಾದರೆ ಇನ್ನಷ್ಟು ಜನ ಒಪ್ಪಬಹುದು.

-ಶ್ರೀರಾಜ್‌ ವಕ್ವಾಡಿ 

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!