Sunday, September 8, 2024

ಕುಂದಾಪುರ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಶಾಸಕರ ಕಛೇರಿ ಉದ್ಘಾಟನೆ


ಕುಂದಾಪುರ, ಜೂ.30: ಕುಂದಾಪುರ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿಯವರ ನೂತನ ಶಾಸಕರ ಕಛೇರಿ ಶುಕ್ರವಾರ ಉದ್ಘಾಟನೆಗೊಂಡಿತು.

ಮಾಜಿ ಶಾಸಕ, ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ದೀಪ ಬೆಳಗಿಸುವ ಮೂಲಕ ಕಛೇರಿ ಉದ್ಘಾಟಿಸಿ, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರ ಒಡನಾಡಿಯಾಗಿ ಅವರ ಉತ್ತರಾಧಿಕಾರಿಯಾಗಿ, ನಮ್ಮೆಲ್ಲರ ಪ್ರತಿನಿಧಿಯಾಗಿ ಕಿರಣ್ ಕೊಡ್ಗಿಯವರು ಇವತ್ತು ಕ್ಷೇತ್ರದ ಶಾಸಕರಾಗಿದ್ದಾರೆ. ಮಿತ ಭಾಷಿ, ಒಳ್ಳೆಯ ಕಾರ್ಯಕರ್ತ, ಜನಸೇವಕ, ಉತ್ತಮ ಜನಸಂಪರ್ಕ ಇರುವುದರಿಂದ ಕ್ಷೇತ್ರದ ಸಮಗ್ರ ಅಭಿವೃದ್ದಿ ಆಗುತ್ತದೆ ಎನ್ನುವ ವಿಶ್ವಾಸವಿದೆ. ಕ್ಷೇತ್ರದಲ್ಲಿ ತಾರತಮ್ಯ, ಪಕ್ಷಪಾತ ಇಲ್ಲದೆ ಎಲ್ಲರನ್ನು ಸಮಾನ ಮನಸ್ಥಿತಿಯಲ್ಲಿ ನೋಡುವ ಮೂಲಕ ಶಾಸಕ ಕಿರಣ್ ಕೊಡ್ಗಿಯವರು ಕ್ಷೇತ್ರವನ್ನು ಅಭಿವೃದ್ದಿಗೊಳಿಸಲಿ. ಅದಕ್ಕೆ ಪೂರಕವಾಗಿ ಶಾಸಕರ ಕಾರ್ಯಾಲಯವು ಕೂಡಾ ಶಾಸಕರು ಮತ್ತು ಜನಸಮಾನ್ಯರ ನಡುವಿನ ಸೇತುವೆಯಾಗಲಿ ಎಂದರು.

ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಎಡವಿದ್ದೇವೆ. ಆದರೆ ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಯನ್ನು ಗೆಲ್ಲಿಸುವ ಮೂಲಕ ಭಾರತೀಯ ಪುರಾತತ್ವ, ಸಂಸ್ಕೃತಿ, ಪರಂಪರೆ ಉಳಿಸುವ ಕೆಲಸವಾಗಬೇಕು ಎಂದರು.

ಇವತ್ತಿನ ದಿನಗಳಲ್ಲಿ ರಾಜಕೀಯ ಎನ್ನುವುದು ಒಂದು ದಂಧೆಯಾಗಿ ಮಾರ್ಪಟ್ಟಿದೆ. ಆದರೆ ಕರಾವಳಿಯ ಜಿಲ್ಲೆಗಳಲ್ಲಿ ಸೇವಾಮನೋಭಾವದ ಶಾಸಕರನ್ನು ಕಾಣಬಹುದಾಗಿದೆ. ನಾನು ಶಾಸಕನಾದ ಸಂದರ್ಭದಲ್ಲಿ ಹೀಗಿರಲಿಲ್ಲ. ಹಣದ ಪಾತ್ರ ಆಗ ಗೌಣವಾಗಿತ್ತು. ಸೇವೆಗೆ ವಿಫುಲವಾದ ಅವಕಾಶವಿತ್ತು. ಇವತ್ತು ಕಾಲ ಬದಲಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಅಭಿವೃದ್ಧಿ ಹಾದಿಯಲ್ಲಿ ಶಾಸಕ ಕಿರಣ ಕೊಡ್ಗಿಯವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕುಂದಾಪುರ ಜನನಿಬಿಡ ಪ್ರದೇಶದಲ್ಲಿ ಶಾಸಕರ ಕಾರ್ಯಾಲಯ ಆರಂಭಿಸಿದ್ದಾರೆ. ಶಾಸಕರನ್ನು ಭೇಟಿ ಮಾಡಲು, ಅಹವಾಲು ಸಲ್ಲಿಸಲು ಶಾಸಕರ ಮನೆಗೇ ಹೋಗಬೇಕಾಗಿಲ್ಲ. ಕಛೇರಿಯಲ್ಲಿ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ. ಈ ಶಾಸಕರ ಕಛೇರಿ ಜನಸಾಮಾನ್ಯರು, ಪಂಚಾಯತ್ ಪ್ರತಿನಿಧಿಗಳು, ಕಾರ್ಯಕರ್ತರಿಗೆ ಅನುಕೂಲವಾಗಲಿ. ಕ್ಷೇತ್ರದ ಅಭಿವೃದ್ದಿಗೆ ಇದು ಪೂರಕವಾಗಿ ರೂಪುಗೊಳ್ಳಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಇದು ಶಾಸಕರ ಕಛೇರಿಯಾದರೂ ಸರ್ಕಾರಿ ಕಛೇರಿ ಇದ್ದಂತೆ. ಜನರು ತಮ್ಮ ಸಮಸ್ಯೆ ಇಲ್ಲಿ ಬಂದು ಪರಿಹಾರ ಕಂಡುಕೊಳ್ಳಬಹುದು. ಪ್ರತಿ ಶನಿವಾರ ನಾನು ಇಲ್ಲಿ ಲಭ್ಯವಿರುತ್ತೇನೆ. ಉಳಿದ ದಿನಗಳಲ್ಲಿ ಇಬ್ಬರು ಆಪ್ತ ಸಹಾಯಕರು ಕಚೇರಿಯಲ್ಲಿದ್ದು ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಕಾಡೂರು ಸುರೇಶ್ ಶೆಟ್ಟಿ, ರಾಜೇಶ್ ಕಾವೇರಿ, ಸುರೇಶ್ ಶೆಟ್ಟಿ ಗೋಪಾಡಿ, ಸತೀಶ್ ಪೂಜಾರಿ ವಕ್ವಾಡಿ, ಭಾಸ್ಕರ ಬಿಲ್ಲವ ಹೇರಿಕುದ್ರು, ಸಂಪತ್ ಕುಮಾರ್ ಶೆಟ್ಟಿ, ಸದಾನಂದ ಬಳ್ಕೂರು, ಅಲ್ತಾರು ಗೌತಮ್ ಹೆಗ್ಡೆ, ಮಡಾಮಕ್ಕಿ ಶಶಿಧರ್ ಶೆಟ್ಟಿ, ಶ್ರೀಲತಾ ಸುರೇಶ್ ಶೆಟ್ಟಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭಾರತಿ, ಕುಂದಾಪುರ ಪುರಸಭೆಯ ಸದಸ್ಯರು ಉಪಸ್ಥಿತರಿದ್ದರು.

ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಸ್ವಾಗತಿಸಿದರು. ರೂಪಾ ಪೈ ವಂದೇ ಮಾತರಂ ಹಾಡಿದರು. ಆಪ್ತ ಸಹಾಯಕ ಮಹಿಮ್ ಶೆಟ್ಟಿ ನಿರೂಪಿಸಿದರು. ಪುರಸಭಾ ಸದಸ್ಯ ಸಂತೋಷ್ ಕುಮಾರ್ ಶೆಟ್ಟಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!