spot_img
Wednesday, January 22, 2025
spot_img

ಬೀಜಾಡಿ ಮಿತ್ರ ಸಂಗಮಕ್ಕೆ ರಜತ ಮಹೋತ್ಸವದ ಸಂಭ್ರಮ : ಫೆ.3ರಂದು ನಾಡೋಜ ಡಾ.ಜಿ.ಶಂಕರ್ ಅವರಿಂದ ರಜತ ಮಹೋತ್ಸವ ಉದ್ಘಾಟನೆ


ಕುಂದಾಪುರ: ಜಿಲ್ಲಾ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ ಪುರಸ್ಕೃತ ಬೀಜಾಡಿ ಗೋಪಾಡಿ ಮಿತ್ರ ಸಂಗಮದ ರಜತ ಮಹೋತ್ಸವವು ಫೆ.3ರಿಂದ ಫೆ.5 ತನಕ ಮೂರು ದಿನಗಳ ಕಾಲ ಬೀಜಾಡಿ ಮಿತ್ರಸೌಧದ ವಠಾರದಲ್ಲಿ ಸಂಭ್ರಮದಿಂದ ಜರುಗಲಿದೆ.

25 ಸಾರ್ಥಕ ವಸಂತಗಳ ಸಂಭ್ರಮಾಚರಣೆ “ರಜತಪಥ” ನೆರಳು-ಬೆಳಕಿನ ಸಹಯಾನವನ್ನು ಫೆ.3ರಂದು ಶುಕ್ರವಾರ ಬೆಳಿಗ್ಗೆ 10.30ಕ್ಕೆ ನಾಡೋಜ ಡಾ.ಜಿ.ಶಂಕರ್ ಉದ್ಘಾಟಿಸಲಿದ್ದು, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ರಜತ ಮಹೋತ್ಸವದ ನೆನಪಿಗಾಗಿ ಸ್ವ‌ಉದ್ಯೋಗಕ್ಕಾಗಿ ಗೋ(ದನ) ಒಂದನ್ನು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿತರಣೆ ಮಾಡಲಿದ್ದಾರೆ. ರಾಜ್ಯ ಆಹಾರ ನಿಗಮ ಉಪಾಧ್ಯಕ್ಷ ಕಿರಣ್‌ಕುಮಾರ್ ಕೊಡ್ಗಿ ಸಂಸ್ಥೆಯ ವೆಬ್‌ಸೈಟ್ ಲೋಕಾರ್ಪಣೆಗೊಳಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಂಸ್ಥೆಯ ಆರಾಧ್ಯ ದೇವರಾದ ಮಠದಕೆರೆ ಶ್ರೀ ಗೋಪಾಲಕೃಷ್ಣ ದೇವರಿಗೆ ಬೆಳ್ಳಿಯ ಕವಚ ಮತ್ತು ಪ್ರಭಾವಳಿ ಸಮರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಾಯಕರಾದ ಸುಷ್ಮಾ ಆಚಾರ್ಯ, ಮಾಧವ ಬೀಜಾಡಿ ಇವರಿಂದ ಸಂಗೀತ ಸುಧೆ ನಡೆಯಲಿದೆ.

ಫೆ.4ರಂದು ಶನಿವಾರ ಸಂಜೆ 6.30ಕ್ಕೆ ನಡೆಯುವ 2ನೇ ದಿನ ಸಮಾರಂಭದಲ್ಲಿ 25 ಮಂದಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 25 ಮಂದಿ ಸಾಧಕರಿಗೆ ಸನ್ಮಾನ, ರಜತಪಥ ಸ್ಮರಣ ಸಂಚಿಕೆ ಬಿಡುಗಡೆ, ವಿಕಲಚೇತನರಿಗೆ ಗಾಲಿಕುರ್ಚಿ ವಿತರಣೆ ನಡೆಯಲಿದ್ದು, ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ, ಮಾಜಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ, ಬರಮಸಾಗರ ಡಿ.ವಿ.ಎಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಪ್ರದೀಪ್ ಡಿವಿ‌ಎಸ್, ಉದ್ಯಮಿಗಳಾದ ಗೋಪಾಡಿ ಶ್ರೀನಿವಾಸ ರಾವ್, ಸುಗ್ಗಿ ಸುಧಾಕರ ಶೆಟ್ಟಿ, ಪ್ರಗತಿಪರ ಕೃಷಿಕರು ರಾಮಕೃಷ್ಣ ಬಾಯರಿ ಮೊದಲಾದವರು ಆಗಮಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕೋಟ ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ ಸಿ.ಕುಂದರ್ ವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀಜಾಡಿ ಮೂಡು ಮತ್ತು ಅಂಗನವಾಡಿ ಪುಟಾಣಿಗಳಿಂದ ವಿವಿಧ ವಿನೋದಾವಳಿ ಹಾಗೂ ಉಡುಪಿಯ ಅಭಿನಯ ಕಲಾವಿದರಿಂದ ನಾಟಕ ಶಾಂಭವಿ ಜರುಗಲಿದೆ.

ಫೆ.5ರಂದು ಸಂಜೆ 6.30ಕ್ಕೆ ರಜತ ಮಹೋತ್ಸವ ಸಮರೋಪ, ಅಶಕ್ತರಿಗೆ ಸಹಾಯಧನ ವಿತರಣೆ, ಸ್ವ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ, ಊರ ಗೌರವದ ನಮ್ಮೂರ ಪ್ರಶಸ್ತಿ ಪ್ರದಾನ, ಸಾಧಕ ಸಂಸ್ಥೆಗಳಿಗೆ ಪುರಸ್ಕಾರ, ಸಂಸ್ಥೆಯ 26ನೇ ವಾರ್ಷಿಕೋತ್ಸವ ಜರುಗಲಿದ್ದು, ಸಚಿವರಾದ ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಆಗಮಿಸಲಿದ್ದಾರೆ.

ಅಧ್ಯಕ್ಷತೆಯನ್ನು ಕೋಟೇಶ್ವರ ಶ್ರೀ ಕೋಟಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಸುರೇಶ್ ಬೆಟ್ಟಿನ್ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೋಟೆಲ್ ಉದ್ಯಮಿಗಳಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರ, ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಕೋಟೇಶ್ವರದ ವೈದ್ಯ ಡಾ.ಶ್ರೀಪಾದ ಹೆಗ್ಡೆ ಅವರಿಗೆ ಊರ ಗೌರವದ ನಮ್ಮೂರ ಪ್ರಶಸ್ತಿ ಪ್ರದಾನ ನಡೆಯಲಿದೆ. ಅಲ್ಲದೇ ಶ್ರೀ ರಾಮ ಭಜನಾ ಮಂಡಳಿ, ಬೀಜಾಡಿ-ಗೋಪಾಡಿ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ಹೆಲ್ಪಿಂಗ್‌ಹ್ಯಾಂಡ್ ಕುಂದಾಪುರ ಈ ಮೂರು ಸಾಧಕ ಸಂಸ್ಥೆಗಳಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ಬೀಜಾಡಿ ಮೂಡು ಇಲ್ಲಿನ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು, ಕೆ.ನವೀನಚಂದ್ರ ಕೊಪ್ಪ ನೇತ್ವತ್ವದ ಶಿವಾನಿ ಮ್ಯೂಸಿಕಲ್ಸ್ ಆರ್ಕೆಸ್ಟ್ರಾ ಇವರಿಂದ ಅದ್ದೂರಿಯ ಸಂಗೀತ ರಸಮಂಜರಿ ನಡೆಯಲಿದೆ.

1997ರಲ್ಲಿ ಬೀಜಾಡಿ ಪರಿಸರದಲ್ಲಿ ಸುಮ್ಮನೆ ಸರಿದು ಹೋಗುತ್ತಿದ್ದ ಸಂಜೆಗಳನ್ನು ಫಲಪ್ರದಗೊಳಿಸಬೇನ್ನುವ ಉದ್ದೇಶದಿಂದ ಬೀಜಾಡಿ-ಗೋಪಾಡಿಯಲ್ಲಿ ಆಟವಾಡುತ್ತಾ ಕಳೆಯುತ್ತಿದ್ದ ಸಮಾನ ಮನಸ್ಕರ ತರುಣ ಮನಸ್ಸುಗಳು ಮಿತ್ರ ಸಂಗಮವಾಗಿ ರೂಪಗೊಂಡ ಬೆರಗಿಗೆ ಇದೀಗ 25 ವರ್ಷಗಳು ತುಂಬಿದೆ! ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಸಂಗತಿಗಳಿಂದಾಗಿ ಪರಿಸರದ ಜನಮಾನಸದಲ್ಲಿ ಜಾಗ ಪಡೆದು ತನ್ನ ಧ್ಯೇಯೋದ್ದೇಶಗಳಿಗೆ ಕಟಿಬದ್ದವಾಗಿ ಈ ಸತ್ಪರತೆಯನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಉತ್ಸುಕವಾಗಿದೆ. ಸಂಸ್ಥೆಯ ದಶಮಾನೋತ್ಸವದ ಸಂದರ್ಭದಲ್ಲಿ ಸುಂದರವಾದ ದಶಮಾನೋತ್ಸವ ಭವನ ಮಿತ್ರಸೌಧವನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಲಾಗಿದ್ದು, ಇದೀಗ ಮಿತ್ರಸೌಧ ಊರಿನ ಸಾಂಸ್ಕೃತಿಕ ಕೇಂದ್ರವಾಗಿ ರೂಪಗೊಂಡಿರುವುದು ನಮಗೆ ಹೆಮ್ಮೆ ಎನಿಸಿದೆ. ಜಿಲ್ಲಾ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ, ಜಿಲ್ಲಾ ಕಸಾಪದಿಂದ ವಿಶೇಷ ಸನ್ಮಾನ ಸಹಿತ ಅನೇಕ ಪ್ರಶಸ್ತಿಗಳು ಸಂಸ್ಥೆಗೆ ಸಂದಿದೆ. ಬೃಹತ್ ಆಧರ್ ಕಾರ್ಡ್ ಅಭಿಯಾನ, ಆರೋಗ್ಯ ಶಿಬಿರ ಸಹಿತ ವರ್ಷಪೂರ್ತಿ ಸಮಾಜಪರ ಕಾರ್ಯಕ್ರಮಗಳನ್ನು ಸಂಘಟಿಸಿ ಸೈ ಎನಿಸಿಕೊಂಡ ಸಂಸ್ಥೆಯಾಗಿದ್ದು, ಇದೀಗ ಸಂಸ್ಥೆ ಎರಡೂವರೆ ದಶಕಗಳನ್ನು ಹಾದು ಹೋದ ಹಾದಿಯ ಸಾರ್ಥಕತೆಯನ್ನು ಅರ್ಥಪೂರ್ಣವಾಗಿ ಸಂಭ್ರಮಿಸುವರೆ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿದ್ದು, ಎಲ್ಲರ ಸಹಕಾರ ಬಯಸಿದೆ. ಈಗ ಮಿತ್ರ ಸಂಗಮದ ಗೌರವಾಧ್ಯಕ್ಷರಾಗಿ ಬಿ.ವಾದಿರಾಜ ಹೆಬ್ಬಾರ್, ಅಧ್ಯಕ್ಷರಾಗಿ ಚಂದ್ರಶೇಖರ ಬೀಜಾಡಿ, ಉಪಾಧ್ಯಕ್ಷ ನಾಗರಾಜ ಬೀಜಾಡಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಆಚಾರ್ಯ ಬೀಜಾಡಿ, ಜೊತೆ ಕಾರ್ಯದರ್ಶಿ ಪ್ರದೀಪ್ ದೇವಾಡಿಗ, ಕೋಶಾಧಿಕಾರಿ ರಾಜೇಶ್ ಆಚಾರ್ಯ ಗೋಪಾಡಿ, ಹಾಗೂ ರಜತ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾಗಿ ಶಂಕರನಾರಾಯಣ ಬಾಯರಿ, ಗೌರವಾಧ್ಯಕ್ಷರಾಗಿ ವಿಶ್ವನಾಥ ಹೆಗ್ಡೆ, ಅಧ್ಯಕ್ಷರಾಗಿ ದೀಪಾನಂದ ಉಪಾಧ್ಯ, ಉಪಾಧ್ಯಕ್ಷರಾಗಿ ಅನುಪಕುಮಾರ್ ಬಿ.ಆರ್, ಪ್ರಧಾನ ಕಾರ್ಯದರ್ಶಿ ಚಂದ್ರ ಬಿ.ಎನ್, ಕೋಶಾಧಿಕಾಧಿ ಬಿ.ಜಿ.ನಾಗರಾಜ ಕಾರ್ಯನಿರ್ವಹಿಸುತ್ತಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!