spot_img
Wednesday, January 22, 2025
spot_img

ಪ.ಪೂ ಕಾಲೇಜುಗಳಲ್ಲಿ ಸರ್ಕಾರ ಕ್ರೀಡೆಗೆ ಒತ್ತು ನೀಡಬೇಕು-ಎಸ್.ಎಲ್.ಭೋಜೆ ಗೌಡ

ಸುಣ್ಣಾರಿ ಎಕ್ಸಲೆಂಟ್ ಕಾಲೇಜು ಆವರಣದಲ್ಲಿ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ ಪಂದ್ಯಾಟಕ್ಕೆ ವರ್ಣರಂಜಿತ ಚಾಲನೆ

ಕುಂದಾಪುರ : ಶಿಕ್ಷಣ ಕ್ಷೇತ್ರದಲ್ಲಿ ಎಲ್ಲಾ ವಿಭಾಗಗಳಲ್ಲಿಯೂ ಶಿಕ್ಷಕರ ನೇಮಕ ಆಗಬೇಕು. ಅಕ್ಷರ ಕಲಿಕೆ ಮಾತ್ರವಲ್ಲ, ಕ್ರೀಡೆ, ಚಿತ್ರಕಲೆ, ಕಲೆ, ಸಂಗೀತ ಎಲ್ಲ ವಿಭಾಗಗಳಿಗೂ ಆದ್ಯತೆ ಸಿಗಬೇಕು. ಕ್ರೀಡೆಗೆ ಉತ್ತೇಜನ ನೀಡುವ ಕಾರ್ಯ ಇವತ್ತು ಸಾರ್ವಜನಿಕ ವಲಯದಿಂದ ಆಗುತ್ತಿದೆ. ಅದು ಸರ್ಕಾರ ಮಟ್ಟದಿಂದ ಆಗಬೇಕು, ಸಾರ್ವತ್ರಿಕವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೆ ಗೌಡ ಹೇಳಿದರು.

ಅವರು ಸುಣ್ಣಾರಿಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಸುಣ್ಣಾರಿ ಸುಜ್ಞಾನ್ ಎಜುಕೇಶನ್ ಟ್ರಸ್ಟ್ ಹಾಗೂ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಡಿ.8 ರಿಂದ 10 ರವರೆಗೆ ನಡೆಯಲಿರುವ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಪಥ ಸಂಚಲನದ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು.

ಸರಕಾರದಿಂದ ಕ್ರೀಡೆಗೆ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ. ಗ್ರಾಮೀಣ ಪ್ರದೇಶದ ಕ್ರೀಟಾಪಟುಗಳನ್ನು ಪ್ರೋತ್ಸಾಹಿಸುವಲ್ಲಿ ವಿಫಲವಾಗಿದ್ದೇವೆ. ಇವತ್ತು ರಾಜ್ಯದ ೧೫೮೦ ಪದವಿಪೂರ್ವ ಕಾಲೇಜುಗಳಲ್ಲಿ ರಾಮನಗರ ಹೊರತು ಪಡಿಸಿ ಉಳಿದ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರಿಲ್ಲ. ಎಲ್ಲಾ ಕಾಲೇಜುಗಳಲ್ಲಿಯೂ ದೈಹಿಕ ಶಿಕ್ಷಣ ಉಪನ್ಯಾಸಕ ನೇಮಕ ಮಾಡಬೇಕು. ಇಂಥಹ ಪಂದ್ಯಾಟಗಳನ್ನು ಸರ್ಕಾರ, ಇಲಾಖೆಯೇ ಮುಂದೆ ನಿಂತು ಆಯೋಜಿಸಬೇಕು ಎಂದರು.

ಪಂದ್ಯಾಟವನ್ನು ಉದ್ಘಾಟಿಸಿದ ಉಡುಪಿಯ ಪೇಜಾವರ ಮಠದ ಯತಿಗಳಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ವಾಲಿಬಾಲ್ ಆಟದಂತೆ ಮನುಷ್ಯನ ಜೀವನ. ಹೊಡೆತಗಳಿಗೆ ಕುಗ್ಗದೆ, ಮೇಲೇರುವಿಕೆ ಜೀವನದ ಯಶಸ್ಸನ್ನು ಸೂಚಿಸುತ್ತದೆ. ಜೀವನದಲ್ಲಿ ಹೊಡೆತಗಳಿಗೆ ಕುಗ್ಗದೆ ಮೇಲೇರಬೇಕು. ಆಟದ ಜೊತೆಗೆ ಪಾಠವು ಇದೆ. ಎತ್ತರಕ್ಕೆ ಏರಿಸುವ ಪ್ರಯತ್ನ ನಮ್ಮಲ್ಲಿ ಬೆಳೆಯಬೇಕು. ಸವಾಲುಗಳನ್ನು ಸ್ವೀಕರಿಸಿ ಮುನ್ನೆಡೆಯಬೇಕು. ಆಗಲೇ ಯಶಸ್ಸು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು, ವಿದೇಶದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಇರುವ ಪ್ರೋತ್ಸಾಹ ಹಾಗೂ ಅನುದಾನ ನಮ್ಮ ದೇಶದಲ್ಲಿ ಇಲ್ಲ ಎನ್ನುವುದು ನೋವಿನ ಸಂಗತಿ. ರಾಜ್ಯದಲ್ಲಿ ಕ್ರೀಡಾ ನೀತಿಯನ್ನು ಜಾರಿಗೆ ತರಲಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಇರುವ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ಕೊಡುವ ನಿರ್ಧಾರಗಳಾಗಬೇಕು. ಉದ್ಯೋಗದಲ್ಲಿ ಕ್ರೀಡಾ ಸಾಧಕರಿಗೆ ಅವಕಾಶ ದೊರಕುತ್ತಿರುವುದು ಸ್ವಾಗತಾರ್ಹ ಎಂದರು.

ಎಂ.ಎಂ ಹೆಗ್ಡೆ ಎಜುಕೇಶನ್ ಎಂಡ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮಹೇಶ ಹೆಗ್ಡೆ ಮೊಳಹಳ್ಳಿ, ಧ್ವಜಾರೋಹಣ ನೆರವೇರಿಸಿದರು. ಎಕ್ಸಲೆಂಟ್ ಕಾಲೇಜಿನ ವಾಲಿಬಾಲ್ ಆಟಗಾರ ಅನುಜ್ ಕುಮಾರ್ ಪ್ರತಿಜ್ಞಾವಿಧಿ ಭೋದಿಸಿದರು. ಕ್ರೀಡಾ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ರಾಷ್ಟ್ರೀಯ ವಾಲಿಬಾಲ್ ಆಟಗಾರ ರೈಸನ್ ಬೆನೆಟ್ ರೆಬೆಲ್ಲೋ ಅವರನ್ನು ಸನ್ಮಾನಿಸಲಾಯಿತು.

ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಸ್ರೂರು ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಾರುತಿ, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ, ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ರಾಷ್ಟ್ರೀಯ ವಾಲಿಬಾಲ್ ಆಟಗಾರ ರೈಸನ್ ಬೆನೆಟ್ ರೆಬೆಲ್ಲೋ, ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ, ಹೊಂಬಾಡಿ-ಮಂಡಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಮಡಿವಾಳ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಜೀವನ್ ಶೆಟ್ಟಿ ಹರ್ಕೂರು, ಪಂದ್ಯಾಟದ ವೀಕ್ಷಕ ಮಹಾಂತೇಶ, ಕ್ರೀಡಾ ನಿರ್ದೇಶಕ ದಿನೇಶ್ ಶೆಟ್ಟಿ, ಟ್ರಸ್ಟ್ ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ, ಉದ್ಯಮಿಗಳಾದ ಜಯಶೀಲ ಶೆಟ್ಟಿ ಘಟಪ್ರಭ, ಉದಯ್ ಕುಮಾರ್ ಶೆಟ್ಟಿ ಬೈಲೂರು ಉಪಸ್ಥಿತರಿದ್ದರು.

ಸುಣ್ಣಾರಿ ಸುಜ್ಞಾನ್ ಎಜುಕೇಶನ್ ಟ್ರಸ್ಟ್ ಕೋಶಾಧಿಕಾರಿ ಭರತ್ ಶೆಟ್ಟಿ ಸ್ವಾಗತಿಸಿದರು, ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ.ರಮೇಶ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸತೀಶ್ ಶೆಟ್ಟಿ ಪಿತ್ರೋಡಿ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!