Sunday, September 8, 2024

ಕುಂದನಾಡು ರೈತ ಉತ್ಪಾದಕರ ಕಂಪನಿ: ವಂಡ್ಸೆಯಲ್ಲಿ ರೈತರ ಉತ್ಪನ್ನ ಮಾರಾಟ ಮತ್ತು ಖರೀದಿ ಕೇಂದ್ರ ಉದ್ಘಾಟನೆ

ವಂಡ್ಸೆ:ಯಾಂತ್ರೀಕೃತ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರೈತರ ಆದ್ಯತೆಗಳನ್ನು ಪೂರೈಸುವುದು ಮುಖ್ಯವಾಗಿದೆ. ಭತ್ತ ಕಟಾವು ಯಂತ್ರ, ಟ್ರ್ಯಾಕ್ಟರ್ ಮೊದಲಾದ ಯಂತ್ರಗಳನ್ನು ಬಾಡಿಗೆ ನೀಡುವ ಮೂಲಕ ರೈತರನ್ನು ಪ್ರೋತ್ಸಾಹಿಸುವ ಕಾರ್ಯ ಕುಂದನಾಡು ರೈತ ಉತ್ಪಾದಕರ ಕಂಪನಿ ಮೂಲಕ ಆಗಬೇಕು. ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಗಾಗ ಕಾರ್ಯಗಾರಗಳನ್ನು ಏರ್ಪಡಿಸಿ ರೈತಸ್ನೇಹಿಯಾಗಿ ಕಂಪನಿ ಇರಬೇಕು ಎಂದು ವಿಧಾನಪರಿಷತ್ ಮಾಜಿ ಸಭಾಪತಿ, ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರಕಾರದ ನೆರವಿನೊಂದಿಗೆ ಕೃಷಿ, ತೋಟಗಾರಿಕೆ, ಜಲಾನಯನ ಇಲಾಖೆ ಇವರ ಸಹಭಾಗಿತ್ವದಲ್ಲಿ ಆರಂಭಗೊಂಡ ಕುಂದನಾಡು ರೈತ ಉತ್ಪಾದಕರ ಕಂಪನಿ ವಂಡ್ಸೆ ಹೋಬಳಿ, ಅಂಪಾರು ಇದರ ವತಿಯಿಂದ ವಂಡ್ಸೆಯ ಹಳೆ ಕೃಷಿಕೇಂದ್ರ ಕಟ್ಟಡದಲ್ಲಿ ಆರಂಭಗೊಂಡ ರಸಗೊಬ್ಬರ, ಕೀಟನಾಶಕ, ಮತ್ತು ಕೃಷಿ ಉಪಕರಣಗಳ ಮಾರಾಟ ಕೇಂದ್ರ ಹಾಗೂ ರೈತರ ಉತ್ಪನ್ನ ಮಾರಾಟ ಮತ್ತು ಖರೀದಿ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ರೈತರ ಉತ್ಪನ್ನ ಮಾರಾಟ ಮತ್ತು ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

50 ವರ್ಷಗಳ ಹಿಂದೆ ವ್ಯವಸಾಯ ಸೇವಾ ಸಹಕಾರಿ ಸಂಘಗಳಲ್ಲಿ ರಸಗೊಬ್ಬರ, ಕೀಟನಾಶಕ, ಬಿತ್ತನೆ ಬೀಜ, ಕೃಷಿ‌ಉಪಕರಣಗಳು ಸಿಗುತ್ತಿರುವ ದಿನಗಳಿದ್ದವು. ಕ್ರಮೇಣ ರೈತರಿಗೆ ಅನುಕೂಲವಾಗಿರಬೇಕಾಗಿದ್ದ ವ್ಯವಸಾಯ ಸೇವಾ ಸಹಕಾರಿ ಸಂಘಗಳು ಕೃಷಿ ಸಾಲ ನೀಡುವುದು, ವಸೂಲಿ ಮಾಡುವುದು ಇಷ್ಟಕ್ಕೆ ಸೀಮಿತ ಹಂತ ತಲುಪಿದವು. ಇವತ್ತು ಪಡಿತರ ವ್ಯವಸ್ಥೆ ಸಹಕಾರ ಸಂಘಗಳ ಮೂಲಕ ಯಶಸ್ವಿಯಾಗಿ ನಡೆಯುತ್ತಿದೆ. ಅದೇ ರೀತಿ ಕೃಷಿಕರ ಅವಶ್ಯಕತೆಗಳನ್ನು ಪೂರೈಸುವ ಅವಕಾಶಗಳು ಇದೆ. ಕೃಷಿ ಅನುಕೂಲತೆಗಳನ್ನು ಒದಗಿಸುವ ವಿಚಾರದಲ್ಲಿ ಮುಜುಗರ ಬೇಡ, ರೈತರ ಕೆಲಸ ಮಾಡುವುದು ಪುಣ್ಯದ ಕೆಲಸ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಮಾತನಾಡಿ, ವಂಡ್ಸೆ ಹೋಬಳಿ ಕೇಂದ್ರದಲ್ಲಿ ಕೃಷಿಕರ ಉತ್ಪನ್ನ ಖರೀದಿ ಮತ್ತು ಮಾರಾಟಕ್ಕೆ ಅವಕಾಶವಾಗಿರುವುದು ರೈತರಿಗೆ ಅನುಕೂಲವಾಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ಉತ್ಪಾದಕರ ಕಂಪನಿ ರೈತರಿಗೆ ಅನುಕೂಲವಾಗಿ ಕಾರ್ಯನಿರ್ವಹಿಸಲಿ. ಸ್ಥಳೀಯ ರೈತರ ಅವಶ್ಯಕತೆಗಳು, ಯಾಂತ್ರೀಕೃತ ಕೃಷಿಗೆ ಪೂರಕವಾಗಿ ಯಂತ್ರಗಳನ್ನು ಬಾಡಿಗೆಗೆ ಒದಗಿಸುವ ಕಾರ್ಯವನ್ನು ಮಾಡಲಿ ಎಂದರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ರಸಗೊಬ್ಬರ, ಕೀಟನಾಶಕ ಮತ್ತು ಕೃಷಿ ಉಪಕರಣಗಳ ಮಾರಾಟ ಕೇಂದ್ರ ಉದ್ಘಾಟಿಸಿ, ಸೇವಾ ಮನೋಭಾವದೊಂದಿಗೆ ರೈತರ ಅವಶ್ಯಕತೆಗಳನ್ನು ಸ್ಥಳೀಯವಾಗಿ ಪೂರೈಸುವುದು ಹೆಚ್ಚು ಉಪಯೂಕ್ತವಾಗಲಿದೆ. ರೈತರಿಗೆ ರಸಗೊಬ್ಬರ, ಕೀಟನಾಶಕ, ಕೃಷಿ ಪರಿಕರಗಳು ನ್ಯಾಯೋಚಿತ ದರದಲ್ಲಿ ಸಿಗುತ್ತದೆ. ರೈತರಿಗೆ ಆತ್ಮಸ್ಥೈರ್ಯ ತುಂಬುತ್ತದೆ ಎಂದರು.

ವಂಡ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕುಂದನಾಡು ರೈತ ಉತ್ಪಾದಕರ ಕಂಪನಿ ಗೌರವ ಅಧ್ಯಕ್ಷರಾದ ಉದಯಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಎಚ್., ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ನಿತೇಶ, ಇಡೂರು-ಕುಂಜ್ಞಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಮೀನ್ ಶೆಟ್ಟಿ ಉಪಸ್ಥಿತರಿದ್ದರು.

ಬ್ರಹ್ಮಾವರ ಕೆ.ವಿ.ಕೆಯ ಮಣ್ಣು ವಿಜ್ಞಾನಿ ಡಾ.ಜಯಪ್ರಕಾಶ್ ಆರ್ ರಸಗೊಬ್ಬರ ಹಾಗೂ ಕೀಟನಾಶಕಗಳ ಬಳಕೆ ಮತ್ತು ಉಪಯೋಗದ ಬಗ್ಗೆ ಮಾಹಿತಿ ನೀಡಿದರು.

ಕುಂದನಾಡು ರೈತ ಉತ್ಪಾದಕ ಕಂಪನಿಯ ನಿರ್ದೇಶಕರಾದ ಚಂದ್ರಶೇಖರ ಉಡುಪ, ಕೆಂಚನೂರು, ಸದಾಶಿವ ಶೆಟ್ಟಿ ಶಂಕರನಾರಾಯಣ, ವಿವೇಕ್ ಭಂಡಾರಿ ಗುಲ್ವಾಡಿ, ಶರತ್‌ಚಂದ್ರ ಶೆಟ್ಟಿ ಗುಲ್ವಾಡಿ, ಶರತ್ ಕುಮಾರ್ ಶೆಟ್ಟಿ ದೇವಲ್ಕುಂದ, ಉದಯ ಜಿ.ಪೂಜಾರಿ ಚಿತ್ತೂರು, ಸತೀಶ ಶೆಟ್ಟಿ ಹಕ್ಲಾಡಿ, ಗೋವರ್ದನ ಶೆಟ್ಟಿ ಇಡೂರು, ವಿಜಯ ಶೆಟ್ಟಿಗಾರ್ ಮಚ್ಚಟ್ಟು, ಅನುರಾಧ ಸೇನಾಪುರ, ಮಲ್ಲಿಕಾ ಶೆಟ್ಟಿ ಅಂಪಾರು, ಜ್ಯೋತಿ ಶೆಟ್ಟಿ ಮೂಡುಬಗೆ ಉಪಸ್ಥಿತರಿದ್ದರು.

ವಿನಾಯಕ ಉಡುಪ ಬಲಾಡಿ ಪ್ರಾರ್ಥಿಸಿದರು. ಕುಂದನಾಡು ರೈತ ಉತ್ಪಾದಕರ ಕಂಪನಿ ಕಾರ್ಯದರ್ಶಿ ಉಮೇಶ ಶೆಟ್ಟಿ ಶಾನ್ಕಟ್ ಸ್ವಾಗತಿಸಿ, ಕುಂದನಾಡು ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಸಂತೋಷ ಕುಮಾರ ಶೆಟ್ಟಿ ಬಲಾಡಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಪ್ರಭಾಕರ ಆಚಾರ್ಯ ಚಿತ್ತೂರು ಕಾರ್ಯಕ್ರಮ ನಿರ್ವಹಿಸಿದರು. ಕುಂದನಾಡು ರೈತ ಉತ್ಪಾದಕರ ಕಂಪನಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಜಿತ್ ಆಚಾರ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!