spot_img
Wednesday, January 22, 2025
spot_img

ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ರೂ. 65.09 ಲಾಭ| ಶೇ 20 ಡಿವಿಡೆಂಡ್

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಸಂಘಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಆರ್ಥಿಕ ಶಕ್ತಿಯಾಗಿ 1931ರಲ್ಲಿ ಅಸ್ತಿತ್ವಕ್ಕೆ ಬಂದಿರುವ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘವು ಸದಸ್ಯರೆಲ್ಲರ ಸಂಪೂರ್ಣ ಸಹಕಾರದಿಂದ ಉತ್ತಮ ಪ್ರಗತಿಯನ್ನು ಕಂಡಿದೆ. 2021-22ನೇ ಸಾಲಿನಲ್ಲಿ ಸಂಘವು ರೂ.65.09 ಲಕ್ಷ ಲಾಭ ಗಳಿಸಿ, ತನ್ನ ಸದಸ್ಯರಿಗೆ ಶೇ.20 ಡಿವಿಡೆಂಡ್ ನೀಡಿದೆ ಎಂದು ಸಂಘದ ಅಧ್ಯಕ್ಷರಾದ ಎಸ್. ಜಗದೀಶ್ಚಂದ್ರ ಅಂಚನ್ ತಿಳಿಸಿದ್ದಾರೆ.

ನಗರದ ಕೊಡಿಯಾಲ್ ಬೈಲ್ ಪಿವಿ‌ಎಸ್ ಕಲಾಕುಂಜದ ಬಳಿ ಇರುವ ಸಂಘದ ಪ್ರಧಾನ ಕಛೇರಿಯ ಸಪ್ತವರ್ಣ ಸಭಾಂಗಣದಲ್ಲಿ ಶನಿವಾರ ನಡೆದ 91ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಎಸ್. ಜಗದೀಶ್ಚಂದ್ರ ಅಂಚನ್ ಮಾತನಾಡಿದರು.

ರೂ.132.28 ಕೋಟಿ ವ್ಯವಹಾರ : ಸಹಕಾರ ಸಂಘಗಳ ನೌಕರ ಸದಸ್ಯರುಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಹಾಗೂ ಠೇವಣಿಗಳಿಗೆ ಆಕರ್ಷಕ ಬಡ್ಡಿಯನ್ನು ನೀಡಿಯೂ ಸಂಘವು ವರದಿ ವರ್ಷದಲ್ಲಿ ಅಧಿಕ ಲಾಭವನ್ನು ಗಳಿಸಿದೆ. ಸಂಘವು 1095 ಮಂದಿ ಸದಸ್ಯರನ್ನು ಹೊಂದಿದೆ . ವರದಿ ವರ್ಷದಲ್ಲಿ ಸಂಘವು ರೂ.34.32 ಲಕ್ಷ ಪಾಲು ಬಂಡವಾಳವನ್ನು ಹೊಂದಿದ್ದು, ರೂ. 4.08 ಕೋಟಿ ವಿವಿಧ ನಿಧಿಗಳನ್ನು ಹೊಂದಿದೆ. ಠೇವಣಿ ಸಂಗ್ರಹಣೆಯಲ್ಲೂ ಸಂಘವು ಗಮನಾರ್ಹ ಸಾಧನೆಗೈದಿದೆ. ಕಳೆದ ವರ್ಷಾಂತ್ಯಕ್ಕೆ ಠೇವಣಿ ರೂ.61.56ಕೋಟಿಯಿಂದ ವರದಿ ವರ್ಷದಲ್ಲಿ ರೂ.74.19 ಕೋಟಿಗೆ ಏರಿಕೆಯಾಗಿದೆ. ಸಾಲ ಮುಂಗಡದಲ್ಲೂ ಏರಿಕೆಯಾಗಿದ್ದು ರೂ.48.54 ಕೋಟಿಯಿಂದ ರೂ. 58.09 ಕೋಟಿಗೆ ಹೆಚ್ಚಳವಾಗಿದೆ. ಸಂಘದ ಒಟ್ಟು ವ್ಯವಹಾರವೂ ಕೂಡ ರೂ.110.10 ಕೋಟಿಯಿಂದ ರೂ. 132.28 ಕೋಟಿಗೆ ಏರಿಕೆಯಾಗಿದೆ ಎಂದು ಜಗದೀಶ್ಚಂದ್ರ ಅಂಚನ್ ತಿಳಿಸಿದರು.

ಸ್ವಂತ ಕಟ್ಟಡ : ಸಂಘವು ನಗರದ ಕೊಡಿಯಾಲ್ ಬೈಲ್ ಪಿವಿ‌ಎಸ್ ಕಲಾಕುಂಜದ ಬಳಿ 10 ಸೆಂಟ್ಸ್ ಸ್ಥಳದಲ್ಲಿ ಎರಡು ಮಹಡಿಯ ‘ಉನ್ನತಿ ’ ಸ್ವಂತ ಕಟ್ಟಡವನ್ನು ಹೊಂದಿದ್ದು, ಈ ಸುಸಜ್ಜಿತ ಕಟ್ಟಡದಲ್ಲಿ ಕೇಂದ್ರ ಕಚೇರಿ , ಕೊಡಿಯಾಲ್ ಬೈಲ್ ಶಾಖೆ, ಆಡಳಿತ ಮಂಡಳಿ ಸಭಾಂಗಣ ಸೇರಿದಂತೆ ಸಪ್ತವರ್ಣ ಸಭಾಭವನವೂ ಇದೆ. ಸಂಘದ ಸದಸ್ಯರಿಗೆ ಶುಭ ಸಮಾರಂಭಗಳಿಗೆ ಈ ಸಭಾಭವನವನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದು ಇದರ ಪ್ರಯೋಜನವನ್ನು ಸದಸ್ಯರು ಪಡೆದುಕೊಳ್ಳಬೇಕೆಂದರು.

ನಾಲ್ಕು ಶಾಖೆಗಳು : ವ್ಯವಹಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂಘವು ನಾಲ್ಕು ಶಾಖೆಗಳನ್ನು ಹೊಂದಿದ್ದು, ಈ ಪೈಕಿ ಮಂಗಳೂರುನಲ್ಲಿ ಎರಡು, ಉಡುಪಿ ಹಾಗೂ ಪುತ್ತೂರುನಲ್ಲಿ ತಲಾ ಒಂದು ಶಾಖೆ ಕಾರ್ಯ ನಿರ್ವಹಿಸುತ್ತಿದೆ . ಈ ಎಲ್ಲಾ ಶಾಖೆಗಳು ಸದಸ್ಯರೆಲ್ಲರ ಸಹಕಾರ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಸೇವೆಯಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದೆ ತಾಲೂಕುವಾರು ಶಾಖೆಗಳನ್ನು ತೆರೆಯಲು ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ಸತತ 5ನೇ ಬಾರಿ ಎಸ್ ಸಿಡಿಸಿಸಿ ಬ್ಯಾಂಕ್ ಪ್ರಶಸ್ತಿ: ಸಂಘದ ಪ್ರಗತಿಯನ್ನು ಗುರುತಿಸಿ ಎಸ್ ಸಿಡಿಸಿಸಿ ಬ್ಯಾಂಕ್ ಕಳೆದ 4ವರ್ಷಗಳಿಂದ ( 2017-18, 2018-19, 2019-20, 2020-21) ಸಾಧನಾ ಪ್ರಶಸ್ತಿಯನ್ನು ನೀಡುತ್ತಿದೆ. 2021-22ನೇ ಸಾಲಿನಲ್ಲೂ ಸಂಘವು ಎಸ್ಸಿಡಿಸಿಸಿ ಬ್ಯಾಂಕ್ ಪ್ರಶಸ್ತಿಗೆ ಪಾತ್ರವಾಗಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸತತ ಐದನೇ ಬಾರಿಗೆ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಅವರು ತಿಳಿಸಿದರು.

ಡಾ.ಎಂಎನ್‌ಆರ್ ಮಾರ್ಗದರ್ಶಕರು : ಸಂಘವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಸಹಕಾರ ರಂಗದ ಅದ್ವೀತಿಯ ನಾಯಕರಾದ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಕಾರಣವಾಗಿದ್ದು ಅವರಿಗೆ ಸರ್ವ ಸದಸ್ಯರ ಮಹಾಸಭೆಯಲ್ಲಿ ಕೃತಜ್ಞತೆಯನ್ನು ಸಲ್ಲಿಸಲಾಯಿತು.

ಸನ್ಮಾನ: ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರು, ಎಸ್ ಸಿಡಿಸಿಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿದ್ದ ರವೀಂದ್ರ ಬಿ. ಸೇವಾ ನಿವೃತ್ತಿ ಹೊಂದಿದ್ದು ಅವರನ್ನು ಮಹಾಸಭೆಯಲ್ಲಿ ಸನ್ಮಾನಿಸಲಾಯಿತು. ಹಾಗೆಯೇ ಎಸ್ ಸಿಡಿಸಿಸಿ ಬ್ಯಾಂಕಿನ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿಕೊಂಡ ಕೆ.ಗೋಪಾಲಕೃಷ್ಣ ಭಟ್ ಅವರನ್ನು ಸನ್ಮಾನಿಸಲಾಯಿತು.

ಪ್ರತಿಭಾ ಪುರಸ್ಕಾರ :ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಅಧಿಕ ಅಂಕಗಳೊಂದಿಗೆ ತೇರ್ಗಡೆಯಾದ ಸಂಘದ ಸದಸ್ಯರ 30 ಪ್ರತಿಭಾನ್ವಿತ ಮಕ್ಕಳಿಗೆ ಸಂಘದಿಂದ ಮೊದಲ ಬಾರಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರೋತ್ಸಾಹ ಧನವನ್ನು ನೀಡಿ ಪುರಸ್ಕರಿಸಲಾಯಿತು.

ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ದಿವಾಕರ ಶೆಟ್ಟಿ, ನಿರ್ದೇಶಕರುಗಳಾದ ಪುಷ್ಪರಾಜ್ ಎಂ.ಎಸ್. ರಾಘವ ಆರ್ . ಉಚ್ಚಿಲ್, ಶ್ರೀಮತಿ ಶುಭಲಕ್ಷ್ಮಿ ವಿ.ರೈ, ವಿಶ್ವೇಶ್ವರ ಐತಾಳ್, ಜಯಪ್ರಕಾಶ್ ರೈ ಸಿ, ವಿಶ್ವನಾಥ ಕೆ ಟಿ, ಶಿವಾನಂದ ಪಿ, ಗಿರಿಧರ್, ಅರುಣ್ ಕುಮಾರ್, ವಿಶ್ವನಾಥ್ ಅಮೀನ್ , ಮೋಹನ್ ಎನ್, ಶ್ರೀಮತಿ ಚಂದ್ರಕಲಾ, ಶ್ರೀಮತಿ ಗೀತಾಕ್ಷಿ ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸತೀಶ್ ಪೂಜಾರಿ ವರದಿ ಮಂಡಿಸಿದರು. ಉಪಾಧ್ಯಕ್ಷರಾದ ದಿವಾಕರ ಶೆಟ್ಟಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!