spot_img
Wednesday, January 22, 2025
spot_img

ದೇವಲ್ಕುಂದ: ಪತ್ನಿಯನ್ನು ಮನೆಗೆ ಕರೆಸಿ ಕೊಲೆಗೈದು, ವಿಷ ಸೇವಿಸಿ ಪತಿ ಆತ್ಮಹತ್ಯೆ

ಕುಂದಾಪುರ, ಆ.22: ತವರು ಮನೆಯಿಂದ ಶುಭ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಪತ್ನಿಯನ್ನು ತನ್ನ ಮನೆಗೆ ಕರೆಸಿ ಕುಡಿದ ಮತ್ತಿನಲ್ಲಿ ಕೊಲೆಗೈದ ಪತಿ ಬಳಿಕ ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಕಟ್‌ಬೇಲ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಲ್ಕುಂದದ ಕೂಕನಾಡು ಎಂಬಲ್ಲಿ ಆ.21ರ ತಡರಾತ್ರಿ ನಡೆದಿದೆ.

ಸೊರಬ ನಿವಾಸಿ ಪೂರ್ಣಿಮಾ ಆಚಾರ್ಯ(38) ಕೊಲೆಯಾದ ಮಹಿಳೆ. ಕೋಗಾರ್‌ನ ರವಿ ಆಚಾರ್ಯ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಸೋಮವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು ಮನೆಯಲ್ಲಿ ಇಬ್ಬರೇ ಇರುವುದರಿಂದ ಪ್ರಕರಣ ಬೆಳಕಿಗೆ ಬರುವುದು ತಡವಾಗಿದೆ.

ವೃತ್ತಿಯಲ್ಲಿ ಟಿಪ್ಪರ್ ಚಾಲಕನಾಗಿರುವ ರವಿ ಆಚಾರ್ಯ ಬಗ್ವಾಡಿಯ ಪರಿಸರದಲ್ಲಿ ಟಿಪ್ಪರ್ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ. ವಿಪರೀತ ಕುಡಿತದ ಚಟವನ್ನು ಹೊಂದಿದ್ದ. ಕಳೆದ ಹದಿನಾರು ವರ್ಷಗಳ ಹಿಂದೆ ಪೂರ್ಣಿಮಾ ಅವರೊಂದಿಗೆ ರವಿ ಆಚಾರ್ಯನ ಮದುವೆಯಾಗಿತ್ತು. ದೇವಲ್ಕುಂದ ಸಮೀಪ ಬಾಡಿಗೆ ಮನೆ ಮಾಡಿ ಪತಿ ಹಾಗೂ ಪತ್ನಿ ತಮ್ಮ ಎರಡು ಮಕ್ಕಳೊಂದಿಗೆ ನೆಲೆಸಿದ್ದ. ರವಿ ಆಚಾರ್ಯನ ಕುಡಿತ, ಆತ ಕುಡಿದು ಬಂದು ಹೆಂಡತಿಗೆ ನೀಡುತ್ತಿದ್ದ, ಕಿರುಕುಳ, ಗಲಾಟೆ, ಹಲ್ಲೆಗಳಿಂದ ನೊಂದ ಪೂರ್ಣಿಮಾ ವಿಷಯ ತವರು ಮನೆಯವರ ಗಮನಕ್ಕೆ ತಂದಿದ್ದರು. ಪೂರ್ಣಿಮಾ ತವರು ಮನೆಯವರು ಮಾತುಕತೆ ನಡೆಸಿದ ಬಳಿಕ ಪತಿಯಿಂದ ದೂರ ಉಳಿದುಕೊಂಡಿದ್ದ ಪತ್ನಿ ಪೂರ್ಣಿಮಾ ತಮ್ಮ ಇಬ್ಬರು ಮಕ್ಕಳೊಂದಿಗೆ ತಾಯಿಯ ಮನೆ ಸೊರಬದಲ್ಲಿಯೇ ನೆಲೆಸಿದ್ದರು.

ಆದರೆ ಆ.21ರಂದು ಮರವಂತೆಯಲ್ಲಿ ಸಂಬಂಧಿಕರ ಸೀಮಂತ ಕಾರ್ಯಕ್ರಮವಿದ್ದು ಅದಕ್ಕೆ ಬಂದಿದ್ದ ಪತ್ನಿ ಪೂರ್ಣಿಮಾ ಅವರನ್ನು ಪತಿ ರವಿ ಆಚಾರ್ಯ ಕರೆ ಮಾಡಿ ದೇವಲ್ಕುಂದದಲ್ಲಿರುವ ಬಾಡಿಗೆ ಮನೆಗೆ ಬರುವಂತೆ ಕೇಳಿಕೊಂಡಿದ್ದ. ಪತಿ ಬದಲಾಗಿರಬಹುದು ಎಂದು ನಂಬಿದ ಪತ್ನಿ ಪೂರ್ಣಿಮಾ ಕಾರ್ಯಕ್ರಮ ಮುಗಿದ ಬಳಿಕ ಪತಿ ನೆಲೆಸಿದ್ದ ಬಾಡಿಗೆ ಮನೆಗೆ ಬಂದಿದ್ದರು. ಈ ವಿಚಾರವನ್ನು ಪೂರ್ಣಿಮಾ ಅಗಲೇ ತನ್ನ ತಾಯಿಗೆ ಪೋನ್ ಮೂಲಕ ತಿಳಿಸಿದ್ದರು.

ಭಾನುವಾರ ರಾತ್ರಿಯಿಂದ ಸೊರಬದಲ್ಲಿ ನೆಲೆಸಿರುವ ಮಕ್ಕಳು ತಾಯಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ಅನುಮಾನಗೊಂಡ ಪೂರ್ಣಿಮಾ ಅವರ ತಾಯಿ ಹೆಮ್ಮಾಡಿಯಲ್ಲಿರುವ ತಮ್ಮ ಸಂಬಂಧಿಕರಿಗೆ ಕರೆ ಮಾಡಿ ಮನೆಗೆ ಹೋಗಿ ನೋಡಿ ಬರುವಂತೆ ತಿಳಿಸಿದ್ದರು. ಸಂಬಂಧಿಕರು ರಾತ್ರಿ ಹೋಗಿ ನೋಡಿದಾಗ ಮನೆಯ ಲೈಟ್ ಆಫ್ ಇದ್ದ ಕಾರಣ ಮಲಗಿರಬಹುದು ಎಂದು ಅಂದಾಜಿಸಿ ವಾಪಾಸಾಗಿದ್ದರು. ಆದರೆ ಬೆಳಿಗ್ಗೆಯೂ ಕರೆ ಸ್ವೀಕರಿಸದ ಹಿನ್ನೆಲೆ ಮತ್ತೆ ಹೋಗಿ ನೋಡಿದಾಗ ಬಾಗಿಲು ಹಾಕಲ್ಪಟ್ಟದ್ದು ಅನುಮಾನಗೊಂಡು ಕಿಟಕಿಯಿಂದ ನೋಡಿದಾಗ ಪೂರ್ಣಿಮಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂತು.

ರಾತ್ರಿ ಮನೆಗೆ ಬಂದ ಪತಿ ರವಿ ಆಚಾರ್ಯ ಕುಡಿತದ ಮತ್ತಿನಲ್ಲಿ ಜಗಳ ತಗೆದಿರುವ ಸಾಧ್ಯತೆಗಳಿವೆ. ಮಾರಕಾಯುಧಗಳಿಂದ ಪತ್ನಿಗೆ ತಲೆಗೆ ಹೊಡೆದು ಸಾಯಿಸಿದ್ದಾನೆ ಎನ್ನಲಾಗಿದೆ. ಬಳಿಕ ತಾನೂ ವಿಷ ಸೇವಿಸಿ ಅಲ್ಲಿಯೇ ಬಿದ್ದು ಸಾವನ್ನಪ್ಪಿದ್ದಾನೆ ಎನ್ನುವುದಾಗಿ ಅಂದಾಜಿಸಲಾಗಿದೆ. ಘಟನೆಯ ಸಮಗ್ರ ಮಾಹಿತಿ ಪೊಲೀಸ್ ತನಿಖೆಯಿಂದಷ್ಟೇ ಹೊರ ಬರಬೇಕಾಗಿದೆ.

ಘಟನಾ ಸ್ಥಳಕ್ಕೆ ಕುಂದಾಪುರ ಡಿವೈ‌ಎಸ್ಟಿ ಶ್ರೀಕಾಂತ್ ಕೆ, ಸಿಪಿ‌ಐ ಗೋಪಿಕೃಷ್ಣ, ಠಾಣಾಧಿಕಾರಿ ಪವನ್ ನಾಯ್ಕ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!