spot_img
Sunday, March 22, 2026
spot_img

ಏನಿದು ಸೂತಕ ವಾಯು ಅಥವಾ ಬಾಣಂತಿ ಸನ್ನಿ?

ಬಾಣಂತಿಯರಲ್ಲಿ ಬರುವ ಮಾನಸಿಕ ಸಮಸ್ಯೆಗಳ ಬಗ್ಗೆ ಚರ್ಚೆ ಅಗತ್ಯ. ಹಿಂದಿನ ಕಾಲದಲ್ಲಿ ಇದನ್ನು ಸೂತಕ ವಾಯು ಅಂತ ನಮ್ಮ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಕರೆಯುತ್ತಿದ್ದರು. ವೈಜ್ಞಾನಿಕವಾಗಿ ನೋಡಿದರೆ ಮೂರು ಬಗೆಯ ಮಾನಸಿಕ ಸಮಸ್ಯೆಗಳನ್ನು ಬಾಣಂತಿಯರಲ್ಲಿ ನಾವು ಮನೋವೈದ್ಯರು ಕಾಣುತ್ತೇವೆ.

1)”ಪೋಸ್ಟ್ ಪಾರ್ಟಮ್ ಬ್ಲೂಸ್.”2)”.ಪೋಸ್ಟ್ ಪಾರ್ಟಮ್ ಡಿಪ್ರೆಷನ್.”3) “ಪೋಸ್ಟ್ ಪಾರ್ಟಮ್ ಸೈಕೊಸಿಸ್”.

ಮಗು ಹುಟ್ಟಿದ ಸಮಯ ತಾಯಿಯಲ್ಲಿ ಬಹಳ ಖುಷಿ ತರಬೇಕಾದ ಸಮಯ. ಆದರೆ ನೂರರಲ್ಲಿ ಮೂರು ತಾಯಿಯಂದಿರು ಈ ಸಮಯದಲ್ಲಿ ಆತಂಕ ಖಿನ್ನತೆ ಕೆಲವೊಮ್ಮೆ ಚಿತ್ತವಿಕಲತೆ ಅನುಭವಿಸುತ್ತಾರೆ. ಮಗುವಿನ ಆರೈಕೆಯನ್ನು ಮಾಡಲು ಮರೆಯುತ್ತಾರೆ, ಮಗುವಿನ ಮೇಲೆ ಸಿಟ್ಟು ಮಾಡಿಕೊಳ್ಳುತ್ತಾರೆ, ತಾವೇ ಆತ್ಮಹತ್ಯೆಯ ಪ್ರಯತ್ನ ಮಾಡಬಹುದು ಕೆಲವೊಮ್ಮೆ ಮಗುವಿನ ಜೀವಕ್ಕೆ ಅಪಾಯ ತಂದು ಒಡ್ಡಬಹುದು.

ಪೋಸ್ಟ್ ಪಾರ್ಟಮ್ ಬ್ಲೂಸ್. ನೀಲಿ ಬಣ್ಣವನ್ನು ಖಿನ್ನತೆಯೊಂದಿಗೆ ಜೊಡಿಸಲಾಗಿದೆ. ಮಗು ಹುಟ್ಟಿದ ಎರಡು ಮೂರು ದಿನಗಳಲ್ಲಿ ತಾಯಿ ಅಳುವುದು ದುಃಖ ಪಡುವುದು ಆತಂಕಗೊಳ್ಳುವುದು ಹೆದರುವುದು ಮುಂತಾದವು ಆಗುತ್ತದೆ. ಶೇ 10-15 ಬಾಣಂತಿ ಮಹಿಳೆಯರಲ್ಲಿ ಉಂಟಾಗುತ್ತದೆ. ಪ್ರಸವದ ನಂತರ ಉಂಟಾಗುವ ರಸದೂತಗಳ ಬದಲಾವಣೆಗಳು ಇದಕ್ಕೆ ಕಾರಣ ಎಂದು ವೈದ್ಯರುಗಳು ಹೇಳುತ್ತಾರೆ. ತನ್ನಷ್ಟಕ್ಕೇ ಅಮ್ಮನ ಸಾಂತ್ವನ ಅಥವಾ ವೈದ್ಯರೊಂದಿಗೆ ಮಾತುಕತೆಯಿಂದ ಇದು ಕಡಿಮೆಯಾಗುತ್ತಾ ಒಂದು ವಾರದಲ್ಲಿ ನಿಂತು ಹೋಗುತ್ತದೆ. ಹೆಚ್ಚಿನ ಮಹಿಳೆಯರಿಗೆ ಇದಕ್ಕೆ ಚಿಕಿತ್ಸೆ ಬೇಕಾಗಿಲ್ಲ.

ಪೋಸ್ಟ್ ಪಾರ್ಟಮ್ ಡಿಪ್ರೆಷನ್. ಇದು ಬಾಣಂತಿಯಾಗಿ ಮೂರು ತಿಂಗಳ ಒಳಗೆ ಯಾವಾಗ ಬೇಕಾದರೂ ಪ್ರಾರಂಭವಾಗಬಹುದು. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದಿದ್ದರೆ ಆತ್ಮಹತ್ಯೆ ಅಥವಾ ಮಗುವಿನ ಕೊಲೆ ಮುಂತಾದವು ನಡೆಯುವ ಸಾಧ್ಯತೆ ಇದೆ.
ಇದು ಹೆಚ್ಚಾಗಿ ಹಿಂದೆ ಖಿನ್ನತೆಯಿಂದ ಬಳಲುತ್ತಿದ್ದ ತಾಯಿಯರಲ್ಲಿ, ಬಾಣಂತಿ ಆಗುವ ಸಮಯದಲ್ಲಿ ಮನೆಯ ವಾತಾವರಣದಲ್ಲಿ ಒತ್ತಡ, ಗರ್ಭಿಣಿಯಾದ ಸಮಯದಲ್ಲಿ ಖಿನ್ನತೆ, ಗರ್ಭಿಣಿಯಾವಸ್ಥೆ ಬೇಡ ಅಂದುಕೊಂಡು ಗರ್ಭಿಣಿಯಾದ ತಾಯಂದಿರು, ಒಂಟಿ ತಾಯಂದಿರು, ಪ್ರಸವದ ಸಮಯದಲ್ಲಿ ದೈಹಿಕ ಸಮಸ್ಯೆ ಅಥವಾ ಪ್ರಸವದ ಸಮಯದಲ್ಲಿ ಸಂಧಿಗ್ದತೆಗಳೆನಾದರೂ ಆದಲ್ಲಿ ಇಂಥವರಲ್ಲಿ ಖಿನ್ನತೆ ಉಂಟಾಗುವ ಸಂಭವ ಹೆಚ್ಚು.

ಇದ್ದಕ್ಕಿದ್ದಂತೆ ಮೌನವಾಗಿ ಬಿಡುವುದು, ಊಟ ತಿಂಡಿ ಮಾಡದೆ ಇರುವುದು, ನಿದ್ರಾಹೀನತೆ, ಅತಿಯಾದ ಸುಸ್ತು, ಮನಸ್ಸಿನಲ್ಲಿ ತಾನೂ ಎನೋ ತಪ್ಪು ಮಾಡಿದ್ದೇನೆ ಅನ್ನುವ ಯೋಚನೆಗಳು, ಏಕಾಗ್ರತೆಯ ಕೊರತೆ, ಸಾಯುವ ಆಲೋಚನೆ, ಕಾರಣವಿಲ್ಲದೆ ಹೆದರಿಕೆ. ಮಗುವನ್ನು ನೋಡಿಕೊಳ್ಳಲು ಆಸಕ್ತಿ ಕಡಿಮೆ, ಕಾರಣವಿಲ್ಲದೆ ಅಳುತ್ತಾ ಇರುವುದು ಮುಂತಾದವುಗಳು ಉಂಟಾಗಬಹುದು.

ಈ ಖಿನ್ನತೆ ಉಂಟಾದಾಗ ಅತಿ ಅಗತ್ಯವಾಗಿ ಖಿನ್ನತೆ ನಿವಾರಕ ಮಾತ್ರೆಗಳನ್ನು ಕೊಡಬೇಕಾಗುತ್ತದೆ. ಖಿನ್ನತೆಯಿಂದ ಬಳಲುತ್ತಿರುವ ತಾಯಿ ಮಗುವಿಗೆ ಹಾಲು ಕೊಡುವುದರಿಂದ ಅದನ್ನು ಕೂಡ ಗಮನದಲ್ಲಿಟ್ಟುಕೊಂಡು ಸುರಕ್ಷಿತ ಖಿನ್ನತೆ ನಿವಾರಕ ಮಾತ್ರೆಗಳನ್ನು ವೈದ್ಯರು ನಿರ್ಧರಿಸುತ್ತಾರೆ. ಆತ್ಮಹತ್ಯೆಯ ಆಲೋಚನೆ ಇದ್ದಂತಹ ಸಂದರ್ಭದಲ್ಲಿ ವಿದ್ಯುತ್ ಕಂಪನ ಚಿಕಿತ್ಸೆ ಕೊಡಲು ಕೂಡ ವೈದ್ಯರು ನಿರ್ಧರಿಸಬಹುದು. ಈ ಚಿಕಿತ್ಸೆಯಿಂದ ಆತ್ಮಹತ್ಯೆಯ ಯೋಚನೆಗಳು ಸಂಪೂರ್ಣವಾಗಿ ನಿಂತು ಹೋಗುತ್ತದೆ ಎಂದು ಸಂಶೋಧನೆಗಳು ತಿಳಿಸುತ್ತವೆ.

ಪೋಸ್ಟ್ ಪಾರ್ಟಮ್ ಸೈಕೋಸಿಸ್ ಅಥವಾ ಚಿತ್ತವಿಕಲತೆ. ಇದು ಮಗು ಹುಟ್ಟಿ ಆರು ತಿಂಗಳ ಒಳಗೆ ಪ್ರಾರಂಭಿಸಿ ಚಿಕಿತ್ಸೆ ಇಲ್ಲದಿದ್ದರೆ ಹಲವು ಸಂದಿಗ್ಧತೆಗಳು ಇಲ್ಲಿ ಉಂಟಾಗುತ್ತದೆ. ಇದನ್ನು ಗುರುತಿಸುವುದು ಬಹಳ ಕಷ್ಟ. ಈ ಕಾಯಿಲೆಯಲ್ಲಿ ಹಲವು ಬಗೆಯ ಭ್ರಮೆಗಳು, ತನ್ನದೇ ಮಗುವಿನ ಬಗ್ಗೆ ಸಂಶಯಗಳು, ಮಗುವನ್ನು ಸಾಯಿಸಬೇಕು ಎಂಬ ಆಲೋಚನೆ, ಗಂಡನ ಮೇಲೆ ಸಂಶಯ, ನಿದ್ರಾಹೀನತೆ, ತೀವ್ರ ಬಗ್ಗೆ ಸಿಟ್ಟು ಮುಂತಾದವುಗಳು ಉಂಟಾಗುತ್ತದೆ. ಈ ಸಮಸ್ಯೆಯಲ್ಲಿ ಹಲವು ಸಾರಿ ತಾಯಿಯ ಹುಟ್ಟಿದ ಮಗುವನ್ನು ಕೊಂದದ್ದು ಇದೇ. ಈ ಕೊಲೆ ಕೆಲವೊಮ್ಮೆ ತಾಯಿಯ ಮನಸ್ಸಿನಲ್ಲಿ ಇರುವ ಭ್ರಮೆಗಳಿಂದ ಉಂಟಾಗುತ್ತದೆ.

ಈ ಕಾಯಿಲೆಗೆ ಚಿತ್ತವಿಕಲತೆ ನಿವಾರಕ ಮಾತ್ರೆಗಳನ್ನು ಹಾಗೂ ತೀವ್ರತೆ ಹೆಚ್ಚಾಗಿದ್ದರೆ ವಿದ್ಯುತ್ ಕಂಪನ ಚಿಕಿತ್ಸೆಯನ್ನು ಕೊಡಲಾಗುತ್ತದೆ. ಈ ಮಾತ್ರೆಗಳನ್ನು ಕೊಡುವಾಗ ಎದೆ ಹಾಲು ಕೊಡುವ ತಾಯಿಗೆ ಮಾತ್ರೆಗಳನ್ನು ತೆಗೆದುಕೊಂಡು ಮೊದಲ ಮೂರು ಗಂಟೆ ಎದೆಹಾಲು ಕೊಡಬಾರದೆಂದು ತಿಳಿಸಲಾಗಿರುತ್ತದೆ. ಈ ಸಮಸ್ಯೆ ಒಂದು ವೈದ್ಯಕೀಯ ತುರ್ತು ಪರಿಸ್ಥಿತಿ.ಇದನ್ನು ನಿಭಾಯಿಸುವಾಗ ಮಗುವಿನ ಆರೋಗ್ಯ ಮತ್ತು ತಾಯಿಯ ಆರೋಗ್ಯ ಎರಡನ್ನೂ ಕೂಡ ವೈದ್ಯರು ಮನಸ್ಸಿನಲ್ಲಿಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ .ಹಲವೊಮ್ಮೆ ಈ ತಾಯಿಯೊಟ್ಟಿಗೆ ಮಗುವನ್ನು ಇಡಕೂಡದು ಎಂಬ ನಿರ್ಧಾರವನ್ನು ಕೂಡ ವೈದ್ಯರು ಮಾಡುತ್ತಾರೆ.

ಹಾಗೆಯೇ ಬಾಣಂತಿಯರಲ್ಲಿ ಗೀಳು ಮನೋರೋಗ. ಮಗು ಸ್ವಚ್ಛವಾಗಿಲ್ಲ. ಮಗು ಹಾಲು ಕುಡಿಯುತ್ತಿಲ್ಲ. ತನಗೆ ಎದೆ ಹಾಲು ಉತ್ಪತ್ತಿ ಆಗುತ್ತಿಲ್ಲ. ಮಗು ಏನೋ ನುಂಗಿಬಿಟ್ಟಿದೆ. ಮುಂತಾದ ಆಲೋಚನೆಗಳು ಪದೇ ಪದೇ ಬರುವುದು. ಅದೇ ಗೀಳಿನಲ್ಲಿ ತಾಯಿ ಮಗುವನ್ನು ನೋಡಿಕೊಳ್ಳದೇ ಇರುವುದು ಮುಂತಾದವು ಕೂಡ ಸಂಭವಿಸಬಹುದು. ಈ ಗೀಳು ಮನೋರೋಗಕ್ಕೆ ಗೀಳು ನಿವಾರಕ ಮಾತ್ರೆಗಳನ್ನು ವೈದ್ಯರು ಕೊಡುತ್ತಾರೆ.

ಕೆಲವು ತಾಯಂದಿರಿಗೆ ಬಾಣಂತಿ ಯಾದ ನಂತರ ಕಾರಣವಿಲ್ಲದೆ ಹೆದರಿಕೆ, ತಾನು ಸತ್ತು ಹೋಗಿ ಬಿಡಬಹುದು, ಹೃದಯ ಬಡಿತ ನಿಂತು ಹೋಗಬಹುದು. ಮಗು ಸರಿಯಾಗಿ ಉಸಿರಾಡುತ್ತಿಲ್ಲ ಎಂಬ ಹೆದರಿಕೆ. ಕೆಲವೊಮ್ಮೆ ಈ ಹೆದರಿಕೆಗಳು ಜಾಸ್ತಿಯಾಗಿ ಇದ್ದ ಕೊಠಡಿಯಿಂದ ಈ ಗೃಹಿಣಿ ಹೊರಗೆ ಬರಲಿಕ್ಕಿಲ್ಲ. ಹಲವು ಬಾಣಂತಿಯರು ಪ್ಯಾನಿಕ್ ಡಿಸಾರ್ಡರ್ ಎಂಬ ಈ ಆತಂಕದ ತೊಂದರೆಗೆ ಬಲಿಯಾಗುತ್ತಾರೆ. ಅವರಿಗೆ ಅಗತ್ಯವಾಗಿ ಮನಸ್ಸಿಗೆ ಆರಾಮ ತರುವಂತಹ ರಿಲ್ಯಾಕ್ಸೇಷನ್ ಎಕ್ಸಸೈಸ್‌ಗಳು, ಕೆಲವೊಮ್ಮೆ ಆತಂಕ ನಿವಾರಕ ಮಾತ್ರೆಗಳು, ಇವರ ಮನಸ್ಸಿನಲ್ಲಿ ಏನೋ ಆಗಬಾರದ್ದು ಆಗುತ್ತದೆ ಎಂಬ ಹೆದರಿಕೆ ಇರುವಾಗ ಆ ಯೋಚನೆಗಳನ್ನು ಬದಲು ಮಾಡುವ ಕೆಲವು ಯೋಚನಾ ವರ್ತನ ಚಿಕಿತ್ಸೆಗಳು. cognitive behaviour therapy ವೈದ್ಯರುಗಳು ಇವುಗಳನ್ನು ಉಪಯೋಗಿಸುತ್ತಾರೆ.

ಒಟ್ಟಿನಲ್ಲಿ ಮಗು ಹುಟ್ಟಿದಾಗ ಖುಷಿಯಲ್ಲಿ ಇರಬೇಕಾದ ಹಲವು ತಾಯಂದಿರು ಮಾನಸಿಕ ಸಮಸ್ಯೆಗಳಿಂದ ಬಳಲಿ, ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದಿದ್ದರೆ ತಮಗೆ ತಾವು ತೊಂದರೆ ಮಾಡಿಕೊಳ್ಳುವುದು ಅಥವಾ ಮಗುವಿಗೆ ಏನಾದರೂ ತೊಂದರೆ ಮಾಡುವುದು ಮಾಡುತ್ತಾರೆ. ಹಿಂದಿನ ಕಾಲದಲ್ಲಿ ಈ ಬಗ್ಗೆ ಸಾಕಷ್ಟು ಮೂಢನಂಬಿಕೆಗಳು ಇತ್ತು. ಈ ಕಾಯಿಲೆಗಳು ಗುಣವಾಗುವುದು ಇಲ್ಲ ಜೀವನ ಪರ್ಯಂತ ಎಂಬ ನಂಬಿಕೆಯೊಂದು ಇತ್ತು. ಆದರೆ ಈಗ ಈ ಕಾಯಿಲೆಗಳು ಕ್ಲಪ್ತ ಸಮಯದಲ್ಲಿ ಮಾತ್ರೆಗಳು ಸಿಕ್ಕಲ್ಲಿ ದಿನಕ್ಕೆ ಒಂದು ಎರಡು ಮಾತ್ರೆಗಳಲ್ಲಿ ಗುಣವಾಗಿ ಹೋಗುತ್ತದೆ ಹಾಗೆಯೇ ಈ ಕಾಯಿಲೆಯ ಚಿಕಿತ್ಸೆಯಾದ ಮೇಲೆ ಜನಸಾಮಾನ್ಯರಂತೆ ಇವರು ಕೂಡ ಸಂಪೂರ್ಣ ಗುಣಮುಖರಾಗಿ ಜೀವನವನ್ನು ನಡೆಸಬಹುದು. ಈ ಮಾಹಿತಿಗಳನ್ನು ಜನಸಾಮಾನ್ಯರು ತಿಳಿದುಕೊಳ್ಳುವ ಅಗತ್ಯತೆ ಬಹಳಷ್ಟು ಇದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!