21.3 C
New York
Friday, September 17, 2021

Buy now

spot_img

ಹೊಸ ಪ್ರೇಕ್ಷಕರನ್ನು ಯಕ್ಷಗಾನ ತಲುಪಲಿ-ಸುಜಯೀಂದ್ರ ಹಂದೆ

ರಾಜ್ಯ ಮಟ್ಟದ ಅಂತರ್ಜಾಲ ವಿಚಾರಸಂಕಿರಣ ಬಡಗಿನ ಹೆಜ್ಜೆ ಗೆಜ್ಜೆಯ ಸತ್ವ ಸಂಪದ ಯಕ್ಷ ದರ್ಪಣಂ ಪ್ರಾತ್ಯಕ್ಷಿಕೆ

ತೆಕ್ಕಟ್ಟೆ :ಯಕ್ಷಗಾನವು ಮನೋರಂಜನೆಯೊಂದಿಗೆ ಬೌದ್ಧಿಕವಾಗಿ ನಮ್ಮನ್ನು ಬೆಳೆಸಬಲ್ಲ ಕಲೆ. ಇದು ನೃತ್ತ-ನೃತ್ಯಗಳ ಆಂಗಿಕ, ಬೆರಗು ಹುಟ್ಟಿಸುವ ಆಹಾರ್ಯ, ಪ್ರತ್ಯುತ್ಪನ್ನಮತಿಯ ವಾಚಿಕ ಹಾಗೂ ಸಾತ್ವಿಕಾಭಿನಯಗಳಿಂದ ಕೂಡಿದ ಶ್ರೀಮಂತ ಕಲೆ. ಹಿಮ್ಮೇಳ ಮುಮ್ಮೇಳಗಳ ಅನುಪಮ ಸಾಂಗತ್ಯದಿಂದ ಮೇಳೈಸುವ ರಂಗಪ್ರಕಾರ. ಕರ್ನಾಟಕದ ರಾಜ್ಯ ಕಲೆಯಾಗಿ ಗುರುತಿಸಿಕೊಳ್ಳುವಲ್ಲಿ ಯಕ್ಷಗಾನವು ಅಂತಃಸತ್ವವನ್ನು ಹೊಂದಿದ ಸಶಕ್ತ ರಂಗಕಲೆ ಎಂಬುದರಲ್ಲಿ ಸಂಶಯವಿಲ್ಲ. ನೋಡಿದ ಕಣ್ಣುಗಳೆ ಮತ್ತೆ ಮತ್ತೆ ನೋಡುವುದಕ್ಕಿಂತ ರಾಜ್ಯದ ಹೊಸ ಪ್ರೇಕ್ಷರನ್ನು ಯಕ್ಷಗಾನ ತಲುಪಬೇಕಾಗಿದೆ. ಆ ನಿಟ್ಟಿನಲ್ಲಿ ಹಾವೇರಿಯ ಕೆ. ಎಲ್. ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿ ಕೇರಿ ಮಹಾ ವಿದ್ಯಾಲಯದ ಕನ್ನಡ ವಿಭಾಗ ಆಯೋಜಿಸಿರುವ ರಾಜ್ಯಮಟ್ಟದ ಯಕ್ಷದರ್ಪಣ ಪ್ರಾತ್ಯಕ್ಷಿಕಾ ವಿಚಾರ ಸಂಕಿರಣವು ಮಹತ್ವದ ಹೆಜ್ಜೆ ಎಂದು ಯಕ್ಷಗಾನ ಕಲಾವಿದ, ಉಪನ್ಯಾಸಕ ಸುಜಯೀಂದ್ರ ಹಂದೆ ಎಚ್ ಹೇಳಿದರು.


ಸೆಪ್ಟಂಬರ್ 6 ರಂದು ಹಾವೇರಿಯ ಕೆ. ಎಲ್. ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿ ಕೇರಿ ಮಹಾ ವಿದ್ಯಾಲಯದ ಕನ್ನಡ ವಿಭಾಗವು ಐಕ್ಯೂ‌ಎಸಿ ನೇತೃತ್ವದದೊಂದಿಗೆ, ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಬಲ್ಮಠ-ಮಂಗಳೂರು, ಡಾ| ಶಿವರಾಮ ಕಾರಂತ ಹುಟ್ಟೂರ ಪ್ರತಿಷ್ಠಾನ ಕೋಟ, ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ, ಪಂಚವರ್ಣ ಯುವಕ ಮಂಡಲ(ರಿ)ಕೋಟ, ಮಲ್ಯಾಡಿ ಲೈವ್ ಸಂಸ್ಥೆಗಳೊಂದಿಗೆ ಜಂಟಿಯಾಗಿ ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಅಂತರ್ಜಾಲ ವಿಚಾರಸಂಕಿರಣ ಬಡಗಿನ ಹೆಜ್ಜೆ ಗೆಜ್ಜೆಯ ಸತ್ವ ಸಂಪದ ಯಕ್ಷ ದರ್ಪಣಂ ಪ್ರಾತ್ಯಕ್ಷಿಕೆಯಲ್ಲಿ ಸುಜಯೀಂದ್ರ ಹಂದೆ ಮಾತನಾಡಿದರು.

ನಿಟ್ಟೂರು ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ ಯಲ್ಲಾಪುರ, ಸುದೀಪ ಉರಾಳರ ಹಿಮ್ಮೇಳದಲ್ಲಿ ನವೀನ್ ಕೋಟ, ಸುಹಾಸ ಕರಬರೊಂದಿಗೆ ಸುಜಯೀಂದ್ರ ಹಂದೆಯವರು ಯಕ್ಷಗಾನದ ವಿವಿಧ ರಸ, ಭಾವ, ಪಾತ್ರಗಳ ನೃತ್ತ, ನೃತ್ಯ, ಹಸ್ತಾಭಿನಯ, ಒಡ್ಡೋಲಗ, ಪ್ರಯಾಣ, ಯುದ್ಧ ಕುಣಿತಗಳ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಲೇಜು ಒಕ್ಕೂಟಗಳ ಅಧ್ಯಕ್ಷರಾದ ಪ್ರೊ. ಡಿ.ಎ. ಕೊಲ್ಲಾಪುರೆ ಮಾತನಾಡಿ ಅತಿ ಕಡಿಮೆ ಅವಧಿಯಲ್ಲಿ ಸುಂದರ ಪ್ರಾತ್ಯಕ್ಷಿಕೆಯ ಮೂಲಕ ಕರಾವಳಿಯ ಮಣ್ಣಿನ ಕಲೆ ಯಕ್ಷಗಾನದ ಪರಿಚಯವನ್ನು ಮಾಡಿಸಿಕೊಟ್ಟ ಕಲಾವಿದರು ಅಭಿವಂದನೀಯರು. ವಿದ್ಯಾರ್ಥಿಗಳಿಗೆ ಕಲೆಯ ಪರಿಚಯವನ್ನು ಮಾಡಿಕೊಡುತ್ತಿರುವ ಇಂತಹ ವಿಚಾರಸಂಕಿರಣಗಳು ಅರ್ಥಪೂರ್ಣ ಎಂದರು.

ಹಾವೇರಿ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಡಾ| ಸಂಧ್ಯಾ ಆರ್. ಕುಲಕರ್ಣಿ, ಸಂಘಟನಾ ಕಾರ್ಯದರ್ಶಿ ಡಾ| ಸಂಜೀವ ಆರ್. ನಾಯಕ್, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಜಗದೀಶ್ ಎಫ್ ಹೊಸಮನಿ, ನ್ಯಾಕ್ ಸಂಯೋಜಕ ವಾಸುದೇವ ನಾಯ್ಕ್, ಐಕ್ಯೂ‌ಎಸಿ ಸಂಯೋಜಕರಾದ ಡಾ| ಎಲ್. ಸಿ. ಕುಲಕರ್ಣಿ, ಕಾರಂತ ಪ್ರತಿಷ್ಠಾನದ ಆನಂದ ಸಿ. ಕುಂದರ್, ಬಲ್ಮಠ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ| ಜಗದೀಶ ಬಾಳ, ಯಶಸ್ವಿ ಕಲಾವೃಂದದ ಮಲ್ಯಾಡಿ ಸೀತಾರಾಮ ಶೆಟ್ಟಿ, ಕಾರ್ಯದರ್ಶಿ ವೆಂಕಟೇಶ ವೈದ್ಯ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ ಉಪಸ್ಥಿತರಿದ್ದರು.


ಕಾರ್ಯಕ್ರಮ ಸಂಯೋಜಕ ಕನ್ನಡ ಉಪನ್ಯಾಸಕ ಶಮಂತ್ ಕುಮಾರ್ ಕೆ.ಎಸ್. ಸ್ವಾಗತಿಸಿ, ನಿರ್ವಹಿಸಿದರು. ಕಿರಣ್ ಕುಮಾರ್ ದೊಡ್ಮನಿ ವಂದಿಸಿದರು.

Related Articles

Stay Connected

21,961FansLike
2,941FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!