19 C
New York
Monday, June 14, 2021

Buy now

spot_img

ಯಾಂತ್ರೀಕೃತ ಭತ್ತ ಬೇಸಾಯ ಹೊಸ ಆಶಾಕಿರಣ-ಡಾ|ಎಲ್.ಎಚ್.ಮಂಜುನಾಥ್


ಕಾಳಾವರ: ಯಂತ್ರಶ್ರೀಗೆ ಟ್ರೆ ಮಾದರಿ ಭತ್ತದ ಸಸಿಮಡಿ ನರ್ಸರಿ ಉದ್ಘಾಟನೆ


(ಜನಪ್ರತಿನಿಧಿ ವಾರ್ತೆ) ಕುಂದಾಪುರ, ಜೂ.11:

ಭತ್ತ ಬೇಸಾಯದಲ್ಲಿ ಸಂಪೂರ್ಣ ಯಾಂತ್ರೀಕರಣ, ಕ್ರಮಬದ್ಧವಾಗಿ ಮಾಡಿದರೆ ಲಾಭದಾಯಕವಾಗುತ್ತದೆ. ಆ ಹಿನ್ನೆಲೆಯಲ್ಲಿ ಯಾಂತ್ರಿಕರಣ ಭತ್ತ ಬೇಸಾಯ ವಿಧಾನವಾದ ಯಂತ್ರಶ್ರಿ ಕಾರ್ಯಕ್ರಮಕ್ಕೆ ರೈತರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು ಈ ವರ್ಷ 32 ಸಾವಿರ ಎಕ್ರೆ ಯಂತ್ರಶ್ರೀ ಗುರಿ ಹೊಂದಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಯಂತ್ರಶ್ರೀ ಭತ್ತ ಬೇಸಾಯಕ್ಕೆ ಕಾಯಕಲ್ಪವಾಗುವುದಲ್ಲದೇ ಹೊಸ ಆಶಾಕಿರಣವಾಗಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್ ಮಂಜುನಾಥ್ ಹೇಳಿದರು.


ಅವರು ಕುಂದಾಪುರದ ಕಾಳಾವರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ರಿ., ಕೃಷಿ ವಿಭಾಗದ ಶ್ರೀ ಸಿದ್ಧವನ ನರ್ಸರಿ ಉಜಿರೆ ಇದರ ಸಂಯುಕ್ತ ಆಶ್ರಯದೊಂದಿಗೆ 50,000 ನರ್ಸರಿ ಟ್ರೇ ಸಸಿ ಮಡಿ ಸಾಮರ್ಥ್ಯದ ಶ್ರೀ ಸಿದ್ಧವನ ಉಪ ನರ್ಸರಿ ಉದ್ಘಾಟಿಸಿ, ಯಂತ್ರಶ್ರೀ ನಾಟಿಗೆ ಚಾಲನೆ ನೀಡಿ ಮಾತನಾಡಿದರು.


ಭತ್ತ ಬೇಸಾಯದಲ್ಲಿ ಕೂಲಿಯಾಳುಗಳ ಸಮಸ್ಯೆ, ದುಬಾರಿ ನಿರ್ವಹಣಾ ವೆಚ್ಚಕ್ಕೆ ಕಡಿವಾಣ ಹಾಕಲು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಹತ್ವಕಾಂಕ್ಷಿ ಕಾರ್ಯಕ್ರಮ ಯಂತ್ರಶ್ರೀ ಅನುಕೂಲವಾಗುತ್ತದೆ. ಈ ವಿಧಾನದಲ್ಲಿ ಸಂಪೂರ್ಣ ಯಂತ್ರಗಳ ಬಳಕೆ, ವೈಜ್ಞಾನಿಕರ ಕ್ರಮಗಳ ಬಳಕೆಯಿಂದ ಹೆಚ್ಚಿನ ಇಳುವರಿ ಮತ್ತು ಲಾಭ ಪಡೆಯಲು ಸಾಧ್ಯವಿದೆ ಎಂದರು.
ಈ ಹಿಂದಿನ ಶ್ರೀ ಪದ್ದತಿ ಸ್ವಲ್ಪ ಸಂಕೀರ್ಣತೆಯಿಂದ ಅಷ್ಟೊಂದು ಯಶಸ್ಸು ಪಡೆಯಲಿಲ್ಲ. ಸಿ.ಎಚ್.ಸಿ ಮತ್ತು ಶ್ರೀ ಪದ್ದತಿಯನ್ನು ಜೋಡಣೆ ಮಾಡಿಕೊಂಡು ಯಂತ್ರಶ್ರೀಯನ್ನು ರೂಪಿಸಲಾಗಿದೆ. ಇದು ರೈತರಿಗೆ ಅತ್ಯಂತ ಸುಲಭ ಹಾಗೂ ಸರಳ ವಿಧಾನವಾಗಿದೆ. ಭತ್ತ ಸಸಿಗಳ ಸಿದ್ಧ ಪಡಿಸುವುದು ರೈತರಿಗೆ ಕಷ್ಟವಾಗುತ್ತದೆ ಎನ್ನುವುದನ್ನು ಮನಗಂಡು ಸಸಿಮಡಿಗಳನ್ನು ತಯಾರಿಸಿ ರೈತರಿಗೆ ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ. ಸಸಿಮಡಿ ನರ್ಸರಿ ತಯಾರಿಗೆ ನಬಾಡ್ ಮೂಲಕ ತರಬೇತು ನೀಡಲಾಗಿದೆ. ಇದರಿಂದ ಉದ್ಯೋಗ ಸೃಷ್ಟಿಯೂ ಆಗುತ್ತದೆ. ರೈತರಿಗೆ ಸಮಯ, ಖರ್ಚು ಕಡಿಮೆಯಾಗುತ್ತದೆ ಎಂದರು.


ಉಡುಪಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ರೈತರಿಗೆ ಟ್ರೆ ಭತ್ತದ ಸಸಿಮಡಿ ಹಸ್ತಾಂತರಿಸಿ ಮಾತನಾಡಿ, ಭತ್ತದ ಬೇಸಾಯ ಪುನಶ್ಚೇತನಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಂತಹ ಸಂಸ್ಥೆಗಳು ಮುಂದಾಗಿರುವುದರಿಂದ ಜಿಲ್ಲೆಯಲ್ಲಿ ೧೦ಸಾವಿರ ಎಕ್ರೆ ಕೃಷಿ ಕ್ಷೇತ್ರ ವಿಸ್ತರಣೆ ಆಗಲಿದೆ. ಇದು ರಾಜ್ಯದಲ್ಲಿಯೇ ಹೆಚ್ಚು ಕ್ಷೇತ್ರ ವಿಸ್ತರಣೆ. ರೈತರು ಭತ್ತ ಬೇಸಾಯದ ಬಗ್ಗೆ ಒಲವು ಮೂಡಿಸುವ ಕೆಲಸಗಳು ಆಗುತ್ತಿವೆ. ವರ್ಷದಿಂದ ವರ್ಷಕ್ಕೆ ಭತ್ತ ಕೃಷಿಕ್ಷೇತ್ರ ವಿಸ್ತರಣೆ ಕಾಣುತ್ತಿದೆ. ಸಂಘ ಸಂಸ್ಥೆಗಳು ಹಡಿಲು ಭೂಮಿ ಅಭಿವೃದ್ದಿ ಇತ್ಯಾದಿಗಳ ಮೂಲಕ ಭತ್ತ ಬೇಸಾಯಕ್ಕೆ ಉತ್ಸುಕವಾಗಿವೆ. ಇವತ್ತಿನ ಕಾಲಘಟ್ಟಕ್ಕೆ ಅನುಗುಣವಾಗಿ, ವ್ಯವಸ್ಥಿತವಾಗಿ ಭತ್ತ ಬೇಸಾಯ ಮಾಡಿದರೆ ಲಾಭದಾಯಕವಾಗಲಿದೆ ಎಂದರು.


ಕುಂದಾಪುರ ಸಹಾಯಕ ಕೃಷಿ ನಿರ್ದೇಶಕಿ ರೂಪ ಜೆ. ಮಾಡ, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಕೃಷಿ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೆಜಸ್, ಯಾಂತ್ರಿಕರಣ ಪ್ರಾದೇಶಿಕ ನಿರ್ದೇಶಕ ಅಬ್ರಹಾಂ, ಕರಾವಳಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಉಡುಪಿ ಜಿಲ್ಲಾ ನಿರ್ದೇಶಕ ಗಣೇಶ್ ಬಿ., ಯಂತ್ರ ಶ್ರೀ ಯೋಜನಾಧಿಕಾರಿ ಸುಧೀರ್ ಜೈನ್, ತಾಲ್ಲೂಕು ಯೋಜನಾಧಿಕಾರಿ ಮುರಳೀಧರ್ ಕೆ ಶೆಟ್ಟಿ , ಸಿದ್ದವನ ನರ್ಸರಿ ಯೋಜನಾಧಿಕಾರಿ ದಯಾನಂದ, ಯಾಂತ್ರಿಕರಣ ಯೋಜನಾಧಿಕಾರಿ ಹರೀಶ್, ಸುಭಾಸ್, ಕುಂದಾಪುರ ತಾಲೂಕು ಕೃಷಿ ಅಧಿಕಾರಿ ಚೇತನ್ ಕುಮಾರ್, ವಲಯ ಮೇಲ್ವಿಚಾರಕ ನಾಗರಾಜ್ ಎಚ್., ಕೃಷಿಕ ಸುಜಿತ್ ಕುಮಾರ್ ಶೆಟ್ಟಿ, ಸಿದ್ದವನ ನರ್ಸರಿ ಸಹಾಯಕರಾದ ವಾಸು, ಸೇವಾ ಪ್ರತಿನಿಧಿ ಶೇಖರ್ ದೇವಾಡಿಗ. ಯಂತ್ರ ಶ್ರೀ ಯೋಧರಾದ ನರಸಿಂಹ ಕುಲಾಲ್, ಅಶೋಕ್, ಮಾಧವಾಚಾರ್ಯ, ರಾಜಶೇಖರ್ ಉಪಸ್ಥಿತರಿದ್ದರು.


ಉಡುಪಿ ವಿಭಾಗೀಯ ಸಿ.ಎಚ್.ಎಸ್.ಸಿ ಯೋಜನಾಧಿಕಾರಿ ಅಶೋಕ್ ಸ್ವಾಗತಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಇಲ್ಲಿ 500 ಎಕ್ರೆಗೆ ಆಗುವಷ್ಟು 50,000 ನರ್ಸರಿ ಟ್ರೇ ಸಸಿಮಡಿ ಸಿದ್ಧ ಪಡಿಸಲಾಗಿದ್ದು ನಾಟಿಗೆ ಚಾಲನೆ ನೀಡಲಾಗುತ್ತಿದೆ. ಒಟ್ಟು ಮೂರು ಕಡೆಗಳಲ್ಲಿ ನರ್ಸರಿ ಸಿದ್ಧ ಮಾಡಿಕೊಳ್ಳಲಾಗಿದ್ದು, 22 ರೈತರು ಈಗಾಗಲೇ ಸಸಿಗಳನ್ನು ಖರೀದಿ ಮಾಡಿದ್ದಾರೆ. ಹಂತ ಹಂತವಾಗಿ ಸಸಿ ಮಡಿ ತಯಾರಿಸಲಾಗುತ್ತದೆ ಎಂದರು. ಉಡುಪಿ ಜಿಲ್ಲಾ ನಿರ್ದೇಶಕ ಗಣೇಶ್ ಬಿ ವಂದಿಸಿದರು.

ಕೊರೋನಾ ನಿಯಮಾವಳಿ ಅನುಸಾರ ಅತ್ಯಂತ ಸರಳವಾಗಿ ಕಾರ್ಯಕ್ರಮ ನಡೆಯಿತು.

Related Articles

Stay Connected

21,961FansLike
2,812FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!