19 C
New York
Monday, June 14, 2021

Buy now

spot_img

ಸೌಕೂರು ಮೇಳದಲ್ಲಿ ರಂಜಿಸುತ್ತಿರುವ ‘ಪುಷ್ಪಚಂದನ’


ಬಯಲಾಟ ಮೇಳಗಳು ವ್ಯವಸಾಯಿಕ ತಿರುಗಾಟದ ಅವಧಿಯಲ್ಲಿ ಹೆಚ್ಚಾಗಿ ಪೌರಾಣಿಕ ಪ್ರಸಂಗಗಳನ್ನೆ ಆಡುತ್ತಾರೆ. ಪ್ರಸಕ್ತ ವಿದ್ಯಮಾನಗಳ ಸಾಮಾಜಿಕ ಪ್ರಸಂಗಗಳನ್ನು ಆಡುವ ಮನಸ್ಸು ಮಾಡಿದರೂ ದಕ್ಕಿಸಿಕೊಳ್ಳುವುದು ಕಷ್ಟ. ಹಾಗಾಗಿ ಬಯಲಾಟದ ಹೆಚ್ಚಿನ ಸಾಮಾಜಿಕ ಪ್ರಸಂಗಗಳು ನಾಲ್ಕಾರು ಅಣಿ ವೇಷ , ಭೂತ ಕೋಲದ ವೇಷಗಳ ಆಕರ್ಷಣೆಗೆ ಮೊರೆ ಹೋಗಿದ್ದು ವಿಷಾಧನೀಯ. ಆದರೆ ಡೇರೆ ಮೇಳದ ಶುದ್ಧ ಸಾಮಾಜಿಕ ಪ್ರಸಂಗಕ್ಕೆ ಸೌಕೂರು ಮೇಳದ ಕಲಾವಿದರು ನ್ಯಾಯ ಒದಗಿಸುವಲ್ಲಿ ಯಶಸ್ವಿ ಆಗಿದ್ದಾರೆ. ಆ ಪ್ರಸಂಗದ ಹೆಸರು “ಪುಷ್ಪ ಚಂದನ”


ಕಥೆಯೊಂದು ಪ್ರೇಕ್ಷಕನ ಮನದೊಳಗೆ ಅಚ್ಚಾಗಲು ಶುರುವಿನಿಂದ ಹರವಿಕೊಳ್ಳುವ ಪ್ರಸಂಗ ಆರಂಭದಲ್ಲಿ ತುಸು ನಿಧಾನವೇ ಅನಿಸಿಬಿಟ್ಟಿತು. ಹೆತ್ತವರಿಗೆ ಹೆಗ್ಗಣವೇ ಮುದ್ದು ಎಂಬ ಮಾತಿದೆ. ಆದರೆ ತುಂಬು ಗರ್ಭಿಣಿ ಚಂದನ ತಾನು ಹೆತ್ತ ಮಗು ಶಿಖಂಡಿ ಎಂಬ ಕಾರಣಕ್ಕೆ ಚೀಚು ಬೀಚೂ ಎಂಬವರ ಮೂಲಕ ಅರಣ್ಯದಲ್ಲಿ ಎಸೆಯಲು ಹೇಳುತ್ತಾಳೆ. ನಿಷ್ಠಾವಂತನಾದ ಮಂತ್ರಿ ನಾಗಭೂಷಣ ಮಹಾರಾಜ ಆರ್ಯವರ್ಧನನ ತಂಗಿಯನ್ನೆ ಮಾನ ಹರಣಕ್ಕೆ ಮುಂದಾಗುತ್ತಾನೆ. ವಿಚಾರಣೆಯ ಕೊನೆಗೆ ಪಶ್ಚಾತ್ತಾಪಗೊಂಡ ನಾಗಭೂಷಣನನ್ನು ಮಹಾರಾಜ ಕ್ಷಮಿಸುತ್ತಾನೆ. ಆದರೆ ರಾಜಸಭೆಯಲ್ಲಿ ಅದನ್ನು ಮಹಾರಾಣಿ ಚಂದನ ವಿರೋಧಿಸುತ್ತಾಳೆ, ಶಿಕ್ಷೆ ಆಗಬೇಕೆಂದು ಒತ್ತಾಯಿಸುತ್ತಾಳೆ. ಅದು ಸಾಧ್ಯವಿಲ್ಲ ಎಂದಾಗ ಸಭಾತ್ಯಾಗ ಮಾಡಿದ ಮಹಾರಾಣಿ ತಾನೇ ಖಡ್ಗ ಹಿಡಿದು ನಾಗಭೂಷಣನನ್ನು ಕೊಲ್ಲಲು ಮುಂದಾಗುತ್ತಾಳೆ. ಇನ್ನೆನ್ನು ಮಂತ್ರಿಯ ಎದೆಗೆ ಕೂರಸಿ ಇರಿಯುತ್ತಾಳೆ ಎಂಬಲ್ಲಿಗೆ ಆತನನ್ನೆ ತಬ್ಬಿ ಮುದ್ದಾಡುತ್ತಾಳೆ. ಅಲ್ಲಿಗೆ ಅವರ ಗುಪ್ತ ಪ್ರೇಮ ಅನಾವರಣಗೊಂಡು, ನಾಟಕ ಎಂಬುದು ಪ್ರೇಕ್ಷಕರಿಗೆ ಅರ್ಥವಾಗುತ್ತದೆ . ಮಾತ್ರವಲ್ಲ ಮಹಾರಾಣಿ ಮತ್ತು ಮಂತ್ರಿಯ ಪ್ರೇಮ ಕಥೆಗೊಂದು ಹೊಸ ತಿರುವು ನೀಡುತ್ತದೆ. ಅಲ್ಲಿಂದ ಕಥೆಯ ಹೂರಣದಲ್ಲಿ ಮಾರಿಗೊಂದು ತಿರುವು ಕಾಣುತ್ತಲೆ ಸಾಗುತ್ತದೆ.


ವರ್ತಮಾನ ಜಗತ್ತಿನ ವಿಧ್ಯಮಾನಗಳು, ಯಾವುದನ್ನು ಯಾರನ್ನು ನಂಬಿಕೆಗೆ ಯೋಗ್ಯವಲ್ಲ ಎನ್ನುವಷ್ಟು ಸಂಬಂಧಗಳು ರೋಸಿ ಹೋಗಿದೆ. ಹಟಕ್ಕೆ, ಚಟಕ್ಕೆ, ಹಣ, ಅಧಿಕಾರದ ಆಸೆಗಾಗಿ ಅಕ್ರಮ ಸಂಬಂಧಗಳನ್ನು ಕಾಣುತ್ತೇವೆ. ತಾನು ತನ್ನವರು ತನ್ನ ಮಕ್ಕಳು ಎಂಬ ಸ್ವಾರ್ಥತೆಗೆ ಅತಿಕ್ರಮಣತೆ ಕಾಣುತ್ತೇವೆ. ತಾನೊಬ್ಬನೆ ಏಕಮೇವ ಅದ್ವಿತೀಯ ಆಗಬೇಕೆಂದು ಅನ್ಯಾಯದ ಹಾದಿ ಕಾಣುತ್ತೇವೆ. ತನ್ನ ಹಾದಿಯಲ್ಲಿ ಎಲ್ಲವನ್ನು ಸಾಧಿಸಿಕೊಳ್ಳಲು ಅಧಿಕಾರದ ಮದ ಕಾಣುತ್ತೇವೆ. ಕೊನೆಗೆ ತಾನೆಲ್ಲ ಮಾಡಿದ್ದು ತನ್ನನ್ನೆ ಸುತ್ತಿಕೊಳ್ಳಲು ಆರಂಭಿಸಿದಾಗ ಕಾಲನ ಹೊಸ್ತಿಲು ದಾಟಿರುತ್ತೇವೆ. ಹಿಂದೆಲ್ಲ ನಾವು ಮಾಡಿದ ಪಾಪ ನನ್ನ ಮಕ್ಕಳ ಕಾಲಕ್ಕೆ ಎನ್ನುವಂತಿತ್ತು, ಈಗೆಲ್ಲ ಹಾಗಲ್ಲ ಅಲ್ಲೆ ಡ್ರಾ ಅಲ್ಲೆ ಬಹುಮಾನ ಎನ್ನುವುದು ಸತ್ಯ. ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿ ಎನ್ನುವ ತಾತ್ಪರ್ಯದ ಸುತ್ತ ಹೆಣದು ಎಲ್ಲಿಯೂ ಎಲ್ಲೆ ಮೀರದ ಸಾಮಾಜಿಕ ಸಂದೇಶ ಹೊಂದಿರುವ ಕಥಾನಕ – “ಪುಷ್ಪ ಚಂದನ”.


ಗಂಡನಿಗೆ ವಿಷ ಇಟ್ಟು, ಸರ್ವಾಧಿಕಾರಿಣಿ ಆಗಬೇಕೆಂಬ ಆಸೆಯ ಚಂದನ ತನ್ನ ಮಕ್ಕಳಿಂದಲೇ ತಿರಸ್ಕಾರಗೊಂಡು ಹುಚ್ಚಿ ಅನಿಸಿಕೊಳ್ಳುತ್ತಾಳೆ. ಒಂದೇ ಪಾತ್ರದಲ್ಲಿ ಮಹಾರಾಣಿಯಾಗಿ, ಗರತಿಯಾಗಿ ಕೊನೆಗೆ ಹುಚ್ಚಿಯಾಗಿ ಕಾಣಿಸಿಕೊಳ್ಳುವ ಆನಂದ ರಾವ್ ಉಪ್ಪಿನಕುದ್ರು ಪಾತ್ರ ಗೆಲ್ಲಿಸುವಲ್ಲಿ ಸಫಲರಾಗುತ್ತಾರೆ. ಪಾತ್ರದ ದುಷ್ಟತೆ, ಭಂಡತೆ, ಪ್ರಣಯತೆ ಸಮ್ಮಿಶ್ರಣದ ನಾಗಭೂಷಣ ಪಾತ್ರವನ್ನು ಕೋಡಿ ವಿಶ್ವನಾಥ ಗಾಣಿಗರು ಮತ್ತು ಶ್ರೀಧರ ಭದ್ರಾಪುರ ಸಮರ್ಥವಾಗಿ ನಿರ್ವಹಿಸಿದರು. ಶೌರ್ಯವರ್ಧನ ಮತ್ತು ಉಮಾಶಂಕರ ಉಭಯ ಪಾತ್ರಗಳಿಗೂ ಅತ್ಯುತ್ತಮ ನ್ಯಾಯ ಒದಗಿಸಿದ ಹರೀಶ ಮೊಗವೀರ ಜಪ್ತಿಯವರ ಕಲಿಕೆ ಅವರನ್ನು ಈ ರಂಗದಲ್ಲಿ ಇನ್ನಷ್ಟು ಎತ್ತರಕ್ಕೆ ಏರಿಸಲಿದೆ. ಜಯಕೀರ್ತಿ ಪಾತ್ರ ನಿರ್ವಹಿಸಿದ ಕೆಮ್ಮಣ್ಣು ಪ್ರವೀಣ ಗಾಣಿಗರ ಬಾಗಿದ ದೇಹದಲ್ಲೂ ರಂಗದ ಕಸುವೇ ಬೀಗುತ್ತದೆ. ‘ಬಡ ಕಲಾವಿದ ನೀನು’ ಎಂಬ ಬೆಗಡೆ ಏಕ ತಾಳದ ಪದ್ಯದಲ್ಲಿನ ಎತ್ತುಗಡೆ, ತತ್ಕಾರಗಳೊಂದಿಗೆ ಸೃಷ್ಟಿಸುವ ಸನ್ನಿವೇಷದ ಕಾವು, ತಾಯಿಯೊಂದಿಗೆ ಎರಡೇ ಮಾತಿನಲ್ಲಿನ ಕುಹಕ ಹೀಗೆ ವಿಶೇಷ ಗಮನ ಸೆಳೆಯುತ್ತಾರೆ. ಸಪ್ತಮಿಯಾದ ಮಂಜುನಾಥ ಹೆಬ್ಬಾಡಿ ಅವರಲ್ಲಿ ಭಾವನಾತ್ಮಕ ಅಭಿನಯವಿದೆ, ನಾಟ್ಯವಿದೆ, ಬೆಳಗುವ ಪ್ರತಿಭೆಯಿದೆ, ಒಟ್ಟಿನಲ್ಲಿ ಪ್ರಧಾನ ಸ್ತ್ರಿವೇಷಧಾರಿ ಪುಷ್ಪವಲ್ಲಿಯಾದ ರವೀಂದ್ರ ಹಕ್ಲಾಡಿ, ಭರತ್ ರಾಜ ಪರ್ಕಳ, ಉಪ್ಪುಂದ ಕೃಷ್ಣ, ಪೆರ್ನಾಂಡಿಸ್ ಪಾತ್ರಗಳಿಗೆ ನ್ಯಾಯ ಒದಗಿಸಿದರು. ಇಡಿ ಪ್ರಸಂಗದಲ್ಲಿ ಗೋವಿಂದ ಬೀಜೂರು ರತೀಶ ಹಳ್ಳಾಡಿ ಚೀಚೂ ಬೀಚೂವಾಗಿ ಅಶ್ಲೀಲವಿಲ್ಲದೆ ಪ್ರಬುದ್ಧ ಮತ್ತು ಕ್ರಿಯಾಶೀಲ ಹಾಸ್ಯವಾಗಿ ಬಹಳ ಇಷ್ಟವಾಗುತ್ತಾರೆ. ಸಂಗೀತಗಾರರಾದ ದರ್ಶನ್ ಭಟ್ ಮತ್ತು ಸಹ ಭಾಗವತರಾದ ಸೀತರಾಮ ಹೆಬ್ಬಾರ್ ಇಬ್ಬರು ಪ್ರತಿಭಾಸಂಪನ್ನರು. ಮುಖ್ಯ ಭಾಗವತಿಕೆಯಲ್ಲಿ ಡಾ. ರವಿ ಸೂರಾಲು ಆಟ ಉಠಾವ್ ಮಾಡುತ್ತಾರೆ. ಒಟ್ಟಾರೆ ಹಿಮ್ಮೇಳ ಯಾವುದೇ ಪ್ರಸಂಗ ಆಡುವುದಕ್ಕೂ ಗಟ್ಟಿ ಎನಿಸಿಕೊಳ್ಳುತ್ತದೆ.


ಶೃಂಗಾರದ ಸನ್ನಿವೇಷ ತುಸು ಹೆಚ್ಚೆ ಅನಿಸಿತು. ಬಯಲಾಟದ ಪ್ರದರ್ಶನಕ್ಕೆ ಇಷ್ಟು ಅಗತ್ಯ ಇರಲಿಲ್ಲ. ಕೊಂಚ ಕಡಿಮೆಗೊಳಿಸಿದರೆ ಆರಂಭದ ಪ್ರೇಕ್ಷಕರು ಕೊನೆಯ ತನಕ ಉಳಿಯುತ್ತಾರೆ . ಬಯಲಾಟದಲ್ಲಿ ಶೃಂಗಾರದ ಪದ್ಯಗಳು ಕೂಡ ಅರ್ಧತಾಸು ಆವರಿಸಿಕೊಂಡರೆ ಆಕಳಿಕೆ ಬಾರದಿರುವುದು ಕಷ್ಟ. ಹಾಗೆ ಚೀಚೂ ಬೀಚೂ ಮತ್ತು ಕಳ್ಳರ ನಡುವಿನ WWF ಈ ರಂಗದಲ್ಲಿ ಬೇಡ ಅನಿಸಿತು ಹಾಗಾಗಿ ಇಷ್ಟವಾಗಲಿಲ್ಲ.


ಕಥೆಯ ಸಂದೇಶ ಸಾರುವ ಪ್ರಸಂಗದ ಕೊನೆಯ ಸನ್ನಿವೇಷದಲ್ಲಿ ನಾಗಭೂಷಣನ ಪಾತ್ರ ಮತ್ತು ತನ್ನದೇ ಕೃತ್ಯಗಳಿಂದ ಹುಚ್ಚಿಯಾಗುವ ಚಂದನಳ ಪಾತ್ರದಿಂದಲೇ ಕ್ರೂರಕೃತ್ಯದ ಪರಿಣಾಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಿಳಿಸಬಹುದಿತ್ತು. ಸುನಿಲ್ ಹೊಲಾಡು ತಾಳಮದ್ದಳೆ ಅರ್ಥದಾರಿಯಾದ ಕಾರಣಕ್ಕೆ, ಎರಡೇ ಪ್ರವೇಶ ಕಾಣುವ ಅವರ ಗುರು ಪಾತ್ರದಿಂದ ಇನ್ನೊಂದಿಷ್ಟು ಮಾತು ಜನರಿಗೆ ನಿರೀಕ್ಷೆಯಿದೆ.


ಅಲ್ತಾರು ನಂದೀಶ ಶೆಟ್ಟಿ ಕಥಾ ರಚನೆಯ (ಪದ್ಯ ರಚನೆ:ವಿಷ್ಣುಮೂರ್ತಿ ನಾಯಕ್ ಬೇಳೂರು) ‘ಪುಷ್ಟ ಚಂದನ’ ಸಾಲಿಗ್ರಾಮ ಮೇಳದ ಸುವರ್ಣ ಸಂಭ್ರಮದ ಪ್ರಸಂಗ. ಸಾಲಿಗ್ರಾಮ ಮೇಳದಲ್ಲಿ ತೊಂಭತ್ತಕ್ಕೂ ಹೆಚ್ಚು ಪ್ರಯೋಗಗಳನ್ನು ಕಂಡಿದೆ. ಸೌಕೂರು ಮೇಳದಲ್ಲೂ ಹಲವಾರು ಪ್ರಯೋಗ ಕಂಡಿದೆ. ಸಾಮಾಜಿಕ ಪ್ರಸಂಗದ ಪಾತ್ರ ನಿರ್ವಹಣೆ ಒಬ್ಬ ಕಲಾವಿದರು ಮಾಡಿದ ನಂತರ ಇನ್ನೊಂದು ಮೇಳ ಅಥವಾ ಕಲಾವಿದರು ಪ್ರದರ್ಶನ ಮಾಡುವಾಗ ಹಿಂದಿನ ಮೇಳ ಅಥವಾ ಕಲಾವಿದರೇ ಚೆಂದ ಮಾಡಿದ್ದಾರೆ ಅನಿಸಿಬಿಡುವುದು ಸಹಜ. ಇಲ್ಲಿ ಆ ಕೊರತೆ ಕಾಣಿಸದೆ ಯಶಸ್ಸು ಆಗುತ್ತಿದೆ ಎಂದರೆ ಇಡಿ ಟೀಮ್ ಸೌಕೂರು ಮೇಳದ ಶ್ರಮ ಕಾಣುತ್ತದೆ.


(ಬರೆಹ: ನಾಗರಾಜ ಶೆಟ್ಟಿ ನೈಕಂಬ್ಳಿ)

Related Articles

Stay Connected

21,961FansLike
2,812FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!