9.3 C
New York
Thursday, May 13, 2021

Buy now

spot_img

ಹೊಸವರುಷದ ಹೊಸತನ ಯಾರಿಗೆ? ಎಲ್ಲಿಯವರೆಗೆ?

2020ನೇ ಕ್ಯಾಲೆಂಡರ್ ವರುಷ ಕಳೆದು 2021ನೇ ವರುಷ ಬರುತ್ತಿದೆ. ಜಗದ ಮನೆಗಳ ಕೋಟ್ಯಾಂತರ ಗೋಡೆಗಳಲ್ಲಿ ಹೊಸ ಹೊಸ ಕ್ಯಾಲೆಂಡರ್‍ಗಳು ಗೋಡೆಯೇರಿ ಕುಳಿತುಕೊಳ್ಳತೊಡಗಿವೆ. ಹೊಸ ವರುಷ ಬಂತೆನ್ನುವ ಸಂಭ್ರಮ ಕೆಲವರದ್ದಾದರೆ ‘ಅಯ್ಯೋ ಬಿಡ್ರೀ! ಹೊಸ ವರುಷದಲ್ಲೇನಿದೆ?’ ಎನ್ನುವ ನಿರಾಸಕ್ತ ಮನೋಭಾವ ಮತ್ತಷ್ಟು ಜನರದ್ದು. ‘ಹೊಸ ವರುಷ ಬಂದರೆ ಸಾಕಾಗಲ್ಲ ನಾವು ಬದಲಾಗಬೇಕು ಕಣ್ರೀ.’ ಎನ್ನುವ ಚರ್ವಿತ ಚರ್ವಣ ಆದರೆ ಅವಶ್ಯಕ ಮತ್ತು ಗಂಭೀರವಾಗಿ ಪರಿಗಣಿಸಬೇಕಾದ ಮಾತು ಮಗದಷ್ಟು ಜನರ ಬಾಯಲ್ಲಿ ನಲಿಯಲಾರಂಭಿಸುತ್ತದೆ.


ಪತ್ರಿಕೆಗಳು, ಸಲಹೆಗಾರರು, ಲೇಖಕರು ಹೊಸ ವರುಷಕ್ಕೆಂದೇ ಒಂದಷ್ಟು ಸಿದ್ಧ ಸೂತ್ರಗಳನ್ನು ಹೊಸ ಸಲಹೆಗಳನ್ನು, ಸಂಕಲ್ಪಗಳ ಪಟ್ಟಿಯನ್ನು ಮುಂದಿಡತೊಡಗುತ್ತಾರೆ. ಅಸಲಿಗೆ ಹಾಗೆ ಬರೆದವರು ಉಪದೇಶಿಸಿದವರೆಲ್ಲಾ ಅದನ್ನೆಲ್ಲಾ ಎಷ್ಟು ಪಾಲಿಸುತ್ತಾರೊ ಗೊತ್ತಿಲ್ಲ. ಒಮ್ಮೆ ಅದರತ್ತ ಕಣ್ಣೂಹಾಯಿಸಿದರೆ ಹೌದಲ್ವಾ ಹೀಗೆಲ್ಲಾ ಮಾಡಬಹುದಲ್ವಾ ಅಂತನ್ನಿಸತೊಡಗುತ್ತದೆ. ನಾನು ಬದಲಾಗಭೇಕು ಅಂತಾನೂ ಅನಿಸುತ್ತದೆ. ಒಂದಷ್ಟು ಹೊಸ ಯೋಚನೆಗಳೊಂದಿಗೆ ಒಂದೆರಡು ಸಂಕಲ್ಪಗಳನ್ನು ಕೆಲವರು ಮಾಡಿಕೊಂಡೂ ಬಿಡುತ್ತಾರೆ. ಯೋಗ, ವ್ಯಾಯಾಮ, ಬೆಳಗಿನ ವಾಕ್, ಹೊಸ ಪುಸ್ತಕ ಓದುವುದು , ವಾರಕ್ಕೊಂದು ದಿನದ ಉಪವಾಸ, ಮನೆಗೆಲಸ, ತೋಟಗಾರಿಕೆ, ಹೀಗೆ ನಾನಾ ತರಹದ ಸಂಕಲ್ಪಗಳನ್ನು ಬಹಳ ಉತ್ಸಾಹದಿಂದಲೇ ಆರಂಭಿಸಿದ್ದು ವಾರ ತಿಂಗಳೊಂದು ಕಳೆಯುವಷ್ಟರಲ್ಲೇ ಸಂಕಲ್ಪಕ್ಕೆ ಕಲ್ಲು ಬಿದ್ದು, ಬಾಲಸುಟ್ಟ ಬೆಕ್ಕಿನಂತಾಗಿ ಬಾಗಿಲು ಹಾಕಿಕೊಂಡು ಮನದ ಮೂಲೆಯಲ್ಲಿ ಮಲಗಿಬಿಟ್ಟಿರುತ್ತದೆ. ಅದು ಹಾಗೆ ಮಲಗಿಕೊಳ್ಳುತ್ತಲೇ ನಾನೇಕೆ ಅದನ್ನು ನಿಲ್ಲಿಸಿದ್ದು ಎಂದು ಉಳಿದವರು ಕೇಳಿದರೆ ಹೇಳಲೆಂದೇ ಕಳ್ಳ ಮನಸು ಕಾರಣಗಳನ್ನು ಸಿದ್ಧ ಮಾಡಿಕೊಳ್ಳತೊಡಗುತ್ತದೆ. ಅಲ್ಲಿಗೆ ಹೊಸ ವರುಷದ ಪಯಣ ಮತ್ತೆ ಹಳತಿನಂತೆ ಮುಂದುವರೆಯುತ್ತದೆ.
ಹಾಗೆಂದು ಎಲ್ಲರ ಬದುಕು ಹೀಗೆಯೇ ಎನ್ನುವಿರಾ! ಖಂಡಿತಾ ಇಲ್ಲ. ಹೊಸ ವರುಷಕ್ಕೆಂದೇ ಒಂದು ಹೊಸ ಯೋಜನೆ ಹಾಕಿಕೊಂಡು ಅದಕ್ಕೊಂದು ಟೈಮ್ ಲಿಮಿಟ್ ಅಂತ ಮಾಡಿಟ್ಟುಕೊಂಡು ಸರಿಯಾದ ಸಿದ್ಧತೆ ಮತ್ತು ಹಿಮಾಲಯದೆತ್ತರದ ದೃಢತೆಯೊಂದಿಗೆ ಹಿಡಿದ ಕೆಲಸವನ್ನು ಪಟ್ಟು ಬಿಟದೆ ಸಾಧಿಸಿ ಯಶಸ್ಸಿನ ನಿಜವಾದ ಆನಂದವನ್ನು ಸಂಭ್ರಮಿಸುವ ಅನೇಕ ಜನರು ನಮ್ಮ ನಡುವೆಯೇ ಇರುತ್ತಾರೆ. ಅಂತವರೇ ನಮಗೆ ಅದರ್ಶವಾಗಬೇಕು. ಅವರ ಜೀವನಗಳೇ ನಮಗೆ ಮಾರ್ಗದರ್ಶಕವಾಗುವಂತಾದ್ದು.


ಹಾಗಿದ್ದರೆ ಬಹುತೇಕ ಜನ ಈ ಸಂಕಲ್ಪಗಳನ್ನು ಪಾಲಿಸುವುದರಲ್ಲಿ ಸೋಲುವುದೇಕೆ ಎಂದರೆ ಅದಕ್ಕೆ ಕಾರಣ ಅವರ ದುರ್ಬಲ ಮನಸು. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಅದರ ಹಿಂದೊಂದು ಬಲವಾದ ಆಶಯ, ಅನಿವಾರ್ಯತೆ ಅಥವಾ ಬೆಳೆಯಬೇಕೆಂಬ ಹಂಬಲ ಯಾವುದಾದರೊಂದು ಇರಬೇಕು. ಯಾರದ್ದೋ ನಿರ್ಧಾರಗಳ ಮೇಲೆ ಬದುಕು ಕಟ್ಟಿಕೊಳ್ಳ ಹೊರಟರೇ ಎಡವಿ ಬಿಳವುದು ಶತಸಿದ್ಧ.
ಅಸಲಿಗೆ ಬದಲಾಗುವುದೆಂದರೆ ಏನು? ಬದಲಾವಣೆಯ ಅಗತ್ಯ ಏನು? ಅದರಿಮದ ಸಿಗುವ ಪ್ರಯೋಜನಗಳೇನು ಇತ್ಯಾದಿ ವಿಚಾರಗಳ ಬಗೆಗೆ ನಿರ್ಧಾರ ತೆಗೆದುಕೊಳ್ಳುವವನಿಗೆ ಸ್ಪಷ್ಟತೆಯಿರಬೇಕಾಗುತ್ತದೆ.


ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು
ಹೊಸ ಯುಕ್ತಿ ಹಳೆತತ್ವದೊಡಗೂಡೆ ಧರ್ಮ.
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ
ಆಸವು ಜನ ಜೀವನಕೆ ಮಂಕುತಿಮ್ಮ.


ಎನ್ನುವ ಡಿ.ವಿ.ಜಿಯವರ ಮಾತುಗಳಲ್ಲಿ ಅಡಗಿರುವ ಸಾರವನ್ನು ಸರಿಯಾಗಿ ಗ್ರಹಿಸಿ ಅಳವಡಿಸಿಕೊಳ್ಳುವ ಪ್ರಯತ್ನ ಮೊದಲು ನಮ್ಮಿಂದಾಗಬೇಕಿದೆ. ಬದಲಾವಣೆಯೆಂದರೆ ಹಳೆಯದನ್ನೆಲ್ಲಾ ತಿರಸ್ಕರಿಸುವುದಲ್ಲ. ಹೊಸತನ್ನೆಲ್ಲಾ ಅಪ್ಪಿಕೊಳ್ಳುವುದೂ ಅಲ್ಲ ಎನ್ನುವ ಸತ್ಯ ಅರಿವಾಗಬೇಕಿದೆ. ನಮ್ಮ ಅಪೂರ್ವವಾದ ದಿವ್ಯ ಸಂಸ್ಕøತಿಯ ಭದ್ರ ತಳಹದಿಯ ಮೇಲೆ ಹೊತಸನಗಳನ್ನು ಅಳವಡಿಸಿಕೊಳ್ಳುವ ಅಗತ್ಯ ಇಂದಿನದು. ಬೆಳವಣಿಗೆಯನ್ನು ಒಪ್ಪಿಕೊಳ್ಳದ ಯಾವುದೇ ವಿಚಾರ ತತ್ವ ಸಿದ್ಧಾಂತಗಳು ಶ್ರೇಷ್ಠ ಎನಿಸಿಕೊಳ್ಳಲು ಸಾಧ್ಯವಿಲ್ಲ. ಅದರಂತೆಯೇ ಮನುಷ್ಯ ಕೂಡ. ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಬೆಳವಣಿಗೆಯ ಹಾದಿಯಲ್ಲಿ ನಿರಂತರವಾಗಿ ನಡೆಯಲು ಪ್ರಯತ್ನಿಸಬೇಕಿದೆ. ತನ್ನಲ್ಲಿ ಬದಲಾವಣೆ ಬಯಸದವನ ಪಾಲಿಗೆ ಯಾವ ಹೊಸ ವರುಷವೂ ಹೊಸತನ್ನು ತರಲು ಖಂಡಿತಾ ಸಾಧ್ಯವಿಲ್ಲ. ಅಸಲಿಗೆ ಬೆಳೆಯುವ ಮನಸಿರುವವನು ಯಾವ ವರುಷಕ್ಕೂ ಕಾದು ಕುಳಿತುಕೊಳ್ಳುವುದಿಲ್ಲ.


ಬಹಳಷ್ಟು ಜನ ಕೊರೊನಾ ಎನ್ನುವ ಖಾಯಿಲೆ ತಂದಿಟ್ಟ ಸಂಕಷ್ಟಗಳ ಸರಮಾಲೆಯನ್ನು ಪಟ್ಟಿ ಮಾಡುತ್ತಾ, ಕವಿತೆಗಳನ್ನು ಕಟ್ಟುತ್ತಾ 2020 ಅತ್ಯಂತ ಕೆಟ್ಟ ವರುಷ ಇನ್ನು ಮುಂದೆ ಯಾವತ್ತೂ ಬರದಿರಲಿ ಎನ್ನುತ್ತಾ ವರುಷವೆನ್ನುವ ಅಗೋಚರವನ್ನು ಬೈಯ್ದುಕೊಳ್ಳುತ್ತಾ ಹೊಸ ವರುಷ ಹೀಗಿರುವುದು ಬೇಡ ದೇವರೆ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ನೆನಪಿರಲಿ. ಕೆಟ್ಟದ್ದು ಎಷ್ಟಾಯಿತು ಎನ್ನುವುದಕ್ಕಿಂತ ಕೊರೊನಾ ಕಲಿಸಿದ ಜೀವನದ ಅತ್ಯದ್ಭುತ ಪಾಠಗಳನ್ನಷ್ಟೇ ಜತನದಿಂದ ನೆನಪಿಟ್ಟುಕೊಂಟು ಮತ್ತಷ್ಟು ಹೊಸ ಹುಮ್ಮಸ್ಸಿನೊಂದಿಗೆ ಈಗಿಂದೀಗಲೇ ಎದ್ದು ನಿಲ್ಲುವ ನಿತ್ಯ ನಿರಂತರ ಪ್ರಯತ್ನ ಮಾಡುವಂತಹ ಬಲವಾದ ಮಾನಸಿಕತೆ ನಮ್ಮೊಡನೆ ಇದ್ದಾಗ ಮಾತ್ರ ಹೊಸ ವರುಷ ಹೊಸತನ ಎನ್ನುವುದಕ್ಕೆ ಅರ್ಥ. ಹೊಸ ವರುಷದ ನೆಪದಲ್ಲಿ ಇನ್ನು ಕೂಡ ಎಣ್ಣೆ ಹೊಡೆದು ಮೋಜು ಮಸ್ತಿ ಮಾಡುವ ಜನರಿಂದ ಹೊಸತನ್ನು ನಿರೀಕ್ಷೆ ಮಾಡಲಾಗದು. ಎಲ್ಲರಿಗೂ ಶುಭವಾಗಲಿ.

ನರೇಂದ್ರ ಎಸ್ ಗಂಗೊಳ್ಳಿ.
ವಾಣಿಜ್ಯಶಾಸ್ತ್ರ ಉಪನ್ಯಾಸಕರು.
ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು.
ಗಂಗೊಳ್ಳಿ.
ಮೊಬೈಲ್ ; 92421273ಂ7

Related Articles

Stay Connected

21,925FansLike
2,763FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!