19 C
New York
Monday, June 14, 2021

Buy now

spot_img

ಭಾರತ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಟೆಸ್ಟ್ ಗೆಲುವು ತಂದುಕೊಟ್ಟ ನಾಯಕ-ಲಾಲಾ ಅಮರ್ ನಾಥ್

♦ಜಗದೀಶ್ಚಂದ್ರ ಅಂಚನ್, ಸೂಟರ್ ಪೇಟೆ

ಕ್ರಿಕೆಟ್ ಮೈದಾನದಲ್ಲಿ ಕಲಾತ್ಮಕತೆಯ ಆಟಕ್ಕೆ ಹೆಸರುವಾಸಿಯಾಗಿದ್ದ ಲಾಲಾ ಅಮರ್‍ನಾಥ್ ಭಾರತದ ಕ್ರಿಕೆಟ್ ತಂಡದಲ್ಲಿ ಮೊಟ್ಟ ಮೊದಲ ಟೆಸ್ಟ್ ಶತಕ ಗಳಿಸಿದ ಮೊದಲ ಭಾರತೀಯ ಕ್ರಿಕೆಟಿಗ. ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ತಮ್ಮ ಹೆಗ್ಗುರುತನ್ನು ತಲುಪುವಲ್ಲಿ ಯಶಸ್ವಿಯಾದ ಇವರ ಸಾಧನೆ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಅಜಾರಾಮರ. ಭಾರತ ಕ್ರಿಕೆಟ್ ತಂಡದ ಒಬ್ಬ ಶ್ರೇಷ್ಠ ಆಲ್ರೌಂಡರ್, ಭಾರತ ಕ್ರಿಕೆಟ್ ತಂಡಕ್ಕೆ ಮೊದಲ ಟೆಸ್ಟ್ ಗೆಲುವು ದೊರಕಿಸಿ ಕೊಟ್ಟ ಮೊದಲ ನಾಯಕರಾಗಿ ಹಾಗೂ ಭಾರತದ ಕ್ರಿಕೆಟ್ ಆಯ್ಕೆ ಸಮಿತಿಯ ಅಧ್ಯಕ್ಷರಾಗಿಯೂ ಲಾಲಾ ಅಮರ್ ನಾಥ್ ಅವರ ಸೇವೆ ಅನುಪಮವಾದುದು.

ಭಾರತದ ಕ್ರಿಕೆಟ್ ಇತಿಹಾಸವನ್ನು ಅವಲೋಕಿಸಿದಾಗ ಲಾಲಾ ಅಮರ್‍ನಾಥ್ ಅವರು ಭಾರತ ತಂಡದ ನಾಲ್ಕನೇ ಟೆಸ್ಟ್ ಕ್ಯಾಪ್ಟನ್. ಅತ್ಯಂತ ವರ್ಣರಂಜಿತ, ವಿವಾದಾತ್ಮಕ ಮತ್ತು ವರ್ಚಸ್ವಿ ನಾಯಕರಾಗಿ ಭಾರತದ ಕ್ರಿಕೆಟ್ ರಂಗದಲ್ಲಿ ಕಾಣಿಸಿಕೊಂಡ ಪ್ರಮುಖರು. 1911ರ ಸಪ್ಟೆಂಬರ್ -11ರಂದು ಪಂಜಾಬ್ ಕಪುರ್ಥಳನಲ್ಲಿ ಜನಿಸಿದ ಇವರು ಬಲಗೈ ಬ್ಯಾಟ್ಸ್ ಮನ್ ಹಾಗೂ ಬಲಗೈ ಮಧ್ಯಮ ವೇಗದ ಬೌಲರ್. ಇವರು ಪ್ರತಿಭಾನ್ವಿತ ಆಟಗಾರರು ಹಾಗೂ ಆರಂಭದಲ್ಲಿ ವಿಕೆಟ್ ಕೀಪರ್ ಆಗಿದ್ದರು.

ಚೊಚ್ಚಲ ಪಂದ್ಯದಲ್ಲೇ ಶತಕ: ಭಾರತದಲ್ಲಿ ನಡೆದ ಪ್ರಪ್ರಥಮ ಟೆಸ್ಟ್ ಪಂದ್ಯದಲ್ಲೇ ಲಾಲಾ ಅಮರ್‍ನಾಥ್ ಅವರಿಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿತ್ತು.

ಬಾಂಬೆಯ ಜಿಮ್ಖಾನಾ ಕ್ರೀಡಾಂಗಣದಲ್ಲಿ 1933ರ ಡಿಸೆಂಬರ್-15 ರಂದು ಇಂಗ್ಲೆಂಡ್ ವಿರುದ್ಧ ಆರಂಭಗೊಂಡ ಮೊದಲ ಟೆಸ್ಟ್ ಪಂದ್ಯಕ್ಕೆ ಇವರು ಭಾರತದ ಪರ ಪಾದಾರ್ಪಣೆಗೈದರು. ಸಿ.ಕೆ.ನಾಯ್ಡು ನಾಯಕತ್ವದಲ್ಲಿ ತಮ್ಮ ಟೆಸ್ಟ್ ಕ್ರಿಕೆಟ್ ಬಾಳ್ವೆಯನ್ನು ಆರಂಭಿಸಿದ ಇವರು ವನ್ ಡೌನ್ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿದು ಮೊದಲ ಇನ್ನಿಂಗ್ಸ್ ನಲ್ಲಿ 38ರನ್ ಗಳಿಸಿದರು. ಆದರೆ, ಎರಡನೇ ಇನ್ನಿಂಗ್ಸ್ ನಲ್ಲಿ ತಮ್ಮ ಬುದ್ಧಿವಂತಿಕೆಯ ಸ್ಟ್ರೋಕ್ ಪ್ಲೇಯೊಂದಿಗೆ ಕ್ಲಾಸಿ ಬ್ಯಾಟಿಂಗ್ ಪ್ರದರ್ಶನ ಮಾಡಿದ ಲಾಲಾ ಅಮರ್‍ನಾಥ್ 21 ಬೌಂಡರಿಗಳ 118 ರನ್‍ಗಳ ಅದ್ಭುತ ಶತಕವನ್ನು ದಾಖಲಿಸಿಕೊಂಡು ಇತಿಹಾಸ ನಿರ್ಮಿಸಿದರು. ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತರೂ ಕೂಡ ಲಾಲಾ ಅಮರ್ ನಾಥ್ ಅವರ ಬ್ಯಾಟಿಂಗ್ ವೈಭವವನ್ನು ನೋಡಿ ಎಲ್ಲರೂ ಸಂಭ್ರಮಿಸಿದರು. ಪ್ರಶಂಸೆ, ಅಭಿನಂದನೆಗಳ ಜೊತೆಗೆ ನಗದು ಬಹುಮಾನಗಳನ್ನು ಲಾಲಾಅಮರ್‍ನಾಥ್ ಪಡೆದುಕೊಂಡಿದ್ದರು. ಮೊದಲ ಟೆಸ್ಟ್ ಪಂದ್ಯದ ಆ ಸ್ಟ್ರೋಕ್ ಪ್ಲೇ ಆಟ ಉಳಿದ ಎರಡು ಟೆಸ್ಟ್ ಪಂದ್ಯಗಳಲ್ಲಿ ಇವರಿಂದ ಬಂದಿಲ್ಲ. ಕಲ್ಕತ್ತಾ ಟೆಸ್ಟ್ ಪಂದ್ಯದಲ್ಲಿ 0 ಮತ್ತು 9ರನ್, ಮದ್ರಾಸ್ ಟೆಸ್ಟ್ ನಲ್ಲಿ 12ರನ್ ಮತ್ತು ಅಜೇಯ 26 ರನ್ ಗಳಿಸಲು ಮಾತ್ರ ಇವರು ಶಕ್ತರಾದರು.
ಅಶಿಸ್ತಿನ ಆರೋಪ: ಲಾಲಾ ಅಮರ್ ನಾಥ್ ಅವರ ಕ್ರಿಕೆಟ್ ಸಾಮರ್ಥ್ಯದ ಬಗ್ಗೆ ಯಾರಿಗೂ ಅನುಮಾನವಿರಲಿಲ್ಲ. 1935ರಲ್ಲಿ ವಿಜ್ಜಿ ನಾಯಕತ್ವದಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸಗೈದ ಸಂದರ್ಭದಲ್ಲಿ ಇವರು ಆಡಿದ ಎರಡು ಅಭ್ಯಾಸ ಪಂದ್ಯಗಳಲ್ಲಿ 3 ಶತಕ ಬಾರಿಸಿ ತಾನೊಬ್ಬ ಪರಿಪೂರ್ಣ ಬ್ಯಾಟ್ಸ್ ಮನ್ ಎನ್ನುವುದನ್ನು ತೋರಿಸಿ ಕೊಟ್ಟರು. ಎಸೆಕ್ಸ್ ತಂಡದ ವಿರುದ್ದ ಎರಡೂ ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿದ ಇವರು ನಾರ್ಥಾಂಪ್ಟನ್ ಶೈರ್ ವಿರುದ್ದದ ಪಂದ್ಯದಲ್ಲಿ ಮತ್ತೊಂದು ಶತಕ (114ರನ್)ಸಿಡಿಸಿದರು. ಬೌಲಿಂಗ್‍ನಲ್ಲೂ ಮಿಂಚಿದ ಇವರು 20.87ರ ಸರಾಸರಿಯಲ್ಲಿ 32 ವಿಕೆಟ್ ಪಡೆದಿದ್ದರು. ಆದರೆ, ನೇರ ನಡೆಯ ಲಾಲಾ ಅಮರ್ ನಾಥ್ ಆಡಿದ ಪಂದ್ಯಗಳಲ್ಲಿ ಅಶಿಸ್ತು ಪ್ರದರ್ಶಿಸಿದರು ಎನ್ನುವ ಆಪಾದನೆ ನಾಯಕ ವಿಜ್ಜಿ ಹಾಗೂ ಟೀಂ ಮೆನೇಜರ್ ಬ್ರಿಟನ್ ಜೋನ್ಸ್ ಅವರಿಂದ ಬಂತು. ಈ ಹಿನ್ನೆಲೆಯಲ್ಲಿ ಅಮರ್‍ನಾಥ್ ಅವರನ್ನು ಪ್ರವಾಸದ ಮಧ್ಯದಲ್ಲೇ ಭಾರತಕ್ಕೆ ವಾಪಾಸು ಕಳುಹಿಸಲಾಯಿತು. ಈ ಪ್ರಕರಣ ಭಾರತದಲ್ಲಂತೂ ಎಲ್ಲರಿಗೂ ಬೇಸರ ತಂದಿತು. ಭಾರತದಲ್ಲಿ ಕ್ರಿಕೆಟ್ ನಿಯಂತ್ರಣ ಮಂಡಳಿ ನಡೆಸಿದ ವಿಚಾರಣೆಯಲ್ಲಿ ಲಾಲಾ ಅಮರ್‍ನಾಥ್ ತಪ್ಪಿತಸ್ಥರಲ್ಲ ಎನ್ನುವುದು ಸಾಬೀತಾಯಿತು. ಆದರೂ ಈ ಪ್ರಕರಣ ಭಾರತೀಯ ಕ್ರಿಕೆಟ್ ಇತಿಹಾಸದ ಕರಾಳ ಅಧ್ಯಾಯವಾಗಿ ದಾಖಲಾಯಿತು.

ಲಾಲಾ ಅಮರ್‍ನಾಥ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ನಂತರ ಮತ್ಯಾವ ಟೆಸ್ಟ್ ಪಂದ್ಯಗಳಲ್ಲಿ ಶತಕ ಬಾರಿಸುವಲ್ಲಿ ವಿಫಲರಾದರು. ಅವರು ಪ್ರಥಮ ದರ್ಜೆ ಪಂದ್ಯಗಳಲ್ಲಿ ತೋರ್ಪಡಿಸಿದ ಆಟ ಟೆಸ್ಟ್ ಪಂದ್ಯಗಳಲ್ಲಿ ತೋರಿಸಲಿಲ್ಲ. ಪ್ರಥಮ ದರ್ಜೆ ಪಂದ್ಯಗಳಲ್ಲಿ ಶತಕದ ಮೇಲೆ ಶತಕಗಳನ್ನು ಇವರು ಬಾರಿಸಿದ್ದಾರೆ. 1937-38ರಲ್ಲಿ ಲಾರ್ಡ್
ಟೆನ್ನಿಸನ್ ತಂಡದ ವಿರುದ್ದ ವಿಜಯ್ ಮರ್ಚೆಂಟ್ ನಾಯಕತ್ವದಲ್ಲಿ ಲಾಲಾ ಅಮರ್ ನಾಥ್ ಭಾರತ ತಂಡದ ಪರ ಆಡಿದರು. ಉತ್ತಮ ಫಾರ್ಮ್ ನಲ್ಲಿದ್ದ ಇವರು ಮೂರು ಶತಕ ಬಾರಿಸಿದರು. ಬಾಂಬೆ ಪೆಂಟಾಂಗ್ಯುಲರ್‍ನಲ್ಲಿ ಆಡಿದ 10 ಪಂದ್ಯಗಳಲ್ಲಿ ಇವರು 40.88ರ ಸರಾಸರಿಯಲ್ಲಿ 695 ರನ್ ಗಳಿಸಿ ಮಿಂಚಿದರು.

ನವಾಬ್ ಇಫ್ತಿಕರ್ ಅಲಿ ಖಾನ್ ಪಟೌಡಿ ನಾಯಕತ್ವದಲ್ಲಿ ಭಾರತ ತಂಡ 1946ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗಲೂ ಲಾಲಾ ಅಮರ್ ನಾಥ್ ತಂಡದಲ್ಲಿದ್ದರು. ಇಂಗ್ಲೀಷ್ ಪ್ರವಾಸದಲ್ಲೂ ಇವರ ಆಟ ಉತ್ತುಂಗತೆಯಲ್ಲಿತ್ತು. ಬ್ಯಾಟಿಂಗ್ ನಲ್ಲಿ ವಿಫಲರಾದ ( 13.80ರ ಸರಾಸರಿಯಲ್ಲಿ 69ರನ್ ) ಇವರು, ಬೌಲಿಂಗ್ ನಲ್ಲಿ ಮಾತ್ರ ಅಸಾಧಾರಣ ಪ್ರದರ್ಶನ ನೀಡಿದರು. ಇವರ ಮಧ್ಯಮ ವೇಗದ ಬೌಲಿಂಗ್ ಹಾಗೂ ಇನ್ ಸ್ವಿಂಗ್ ಎಸೆತಗಳು ಇಂಗ್ಲೆಂಡಿನಲ್ಲಿ ಹೆಚ್ಚು ಜನಪ್ರಿಯವಾಯಿತು. ಈ ಪ್ರವಾಸದಲ್ಲಿ 25.33ರ ಸರಾಸರಿಯಲ್ಲಿ ಇವರು 13 ವಿಕೆಟ್ ಪಡೆದರು.

ನಾಯಕ ಪಟ್ಟ : ಭಾರತ ತಂಡ 1947-48ರ ಆಸ್ಟ್ರೇಲಿಯಾ ಪ್ರವಾಸವನ್ನು ಲಾಲಾ ಅಮರ್‍ನಾಥ್ ನಾಯಕತ್ವದಲ್ಲಿ ಆರಂಭಿಸಿತು . ಸ್ವಾತಂತ್ರ್ಯ ಪಡೆದ ನಂತರ ಭಾರತ ತಂಡ ಆಡಿದ ಮೊದಲ ಟೆಸ್ಟ್ ಸರಣಿ ಇದು . ಹಾಗೆಯೇ ಸ್ವಾತಂತ್ರ್ಯ ನಂತರದ ಮೊದಲ ಟೆಸ್ಟ್ ನಾಯಕ ಕೂಡ ಲಾಲಾ ಅಮರ್‍ನಾಥ್. ಆಸ್ಟ್ರೇಲಿಯಾ ಪ್ರವಾಸ ಲಾಲಾ ಅಮರ್‍ನಾಥ್ ಪಾಲಿಗೆ ವಿವರಿಸಲಾಗದ ಪ್ರವಾಸವಾಗಿತ್ತು. ಟೆಸ್ಟ್ ಕ್ರಿಕೆಟ್ ಸರಣಿ ಆರಂಭಗೊಳ್ಳುವ ಮೊದಲು ಪ್ರಥಮ ದರ್ಜೆ ಪಂದ್ಯಗಳಲ್ಲಿ ಅಮರ್ ನಾಥ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.ಸೌತ್ ಆಸ್ಟ್ರೇಲಿಯಾ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಅವರು 144 ರನ್ ಮತ್ತು 94 ರನ್ ಗಳನ್ನು ಕ್ರಮವಾಗಿ ಎರಡು ಇನ್ನಿಂಗ್ಸ್ ನಲ್ಲಿ ಗಳಿಸಿದರೆ, ವಿಕ್ಟೋರಿಯಾ ತಂಡದ ವಿರುದ್ಧದ ಪಂದ್ಯದಲ್ಲಿ ಅಮರ್ ನಾಥ್ ಅಜೇಯ 228ರನ್ ಬಾರಿಸಿದರು.

ಆದರೆ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಲಾಲಾ ಅಮರ್ ನಾಥ್ ಮತ್ತೊಮ್ಮೆ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡರು. ಈ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ನಾಲ್ಕೂ ಪಂದ್ಯಗಳಲ್ಲೂ ಭಾರತ ಸೋಲನ್ನು ಕಂಡಿತು . ಸರಣಿ ಸೋತರೂ ಲಾಲಾ ಅಮರ ನಾಥ್ ಬಗ್ಗೆ ಯಾರೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಹೀಗಾಗಿ ಅವರು ಮುಂದಿನ ವೆಸ್ಟ್ ಇಂಡೀಸ್ ವಿರುದ್ಧದ ಕ್ರಿಕೆಟ್ ಸರಣಿಗೂ ಭಾರತ ತಂಡವನ್ನು ಮತ್ತೆ ಮುನ್ನಡೆಸಿದರು. ಸ್ವದೇಶದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಲಾಲಾ ಅಮರ್‍ನಾಥ್ ಅವರು ನಾಯಕತ್ವದಲ್ಲಿ ಸಮಬಲದ ಪ್ರದರ್ಶನ ನೀಡಿದರು. 5 ಟೆಸ್ಟ್ ಪಂದ್ಯಗಳ ಈ ಟೆಸ್ಟ್ ಸರಣಿಯಲ್ಲಿ ವೆಸ್ಟ್ ಇಂಡೀಸ್ 1-0 ಅಂತರದ ಗೆಲುವು ಪಡೆಯಿತು. ನಾಲ್ಕು ಟೆಸ್ಟ್ ಪಂದ್ಯಗಳು ಡ್ರಾದಲ್ಲಿ ಮುಕ್ತಾಯಗೊಂಡಿವೆ. ದೆಹಲಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅಮರ್ ನಾಥ್ 62ರನ್ ಮತ್ತು 36 ರನ್ ಗಳಿಸಿದರು. ಇವರು ಈ ಟೆಸ್ಟ್ ಸರಣಿಯಲ್ಲಿ 36.75ರ ಸರಾಸರಿಯಲ್ಲಿ 294 ರನ್ ಗಳಿಸಿದರು. ವೆಸ್ಟ್ ಇಂಡೀಸ್ ವಿರುದ್ಧದ ಈ ಟೆಸ್ಟ್ ಸರಣಿಯಲ್ಲಿ ಲಾಲಾ ಅಮರ್ ನಾಥ್ ನಾಯಕತ್ವದ ಬಗ್ಗೆ ವಿಶೇಷ ಪ್ರಶಂಸೆಗಳು ಎಲ್ಲೆಡೆಯಿಂದ ಬಂದಿತ್ತು.

 

ನಾಯಕತ್ವದ ಮೊದಲ ಗೆಲುವು :
ಲಾಲಾ ಅಮರ್‍ನಾಥ್ ಅವರ ನಾಯಕತ್ವದಲ್ಲಿ ಭಾರತ ತಂಡಕ್ಕೆ ಮೊದಲ ಟೆಸ್ಟ್ ಗೆಲುವು ದೊರೆತದ್ದು 1952-53 ಕ್ರಿಕೆಟ್ ಸರಣಿಯಲ್ಲಿ. ಪಾಕಿಸ್ತಾನ ತಂಡದ ವಿರುದ್ಧ ದೆಹಲಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅಮರ್ ನಾಥ್ ಅವರ ಚಾಣಾಕ್ಷ ನಾಯಕತ್ವ ಭಾರತ ತಂಡದ ಗೆಲುವಿಗೆ ಕಾರಣವಾಯಿತು. ಮುಂದೆ ಬಾಂಬೆ ಟೆಸ್ಟ್ ಪಂದ್ಯದಲ್ಲೂ ಅಮರ್ ನಾಥ್ ಸಾರಥ್ಯದ ಭಾರತ ತಂಡಕ್ಕೆ ನಾಲ್ಕು ವಿಕೆಟ್ ಅಂತರದ ಗೆಲುವು ಪ್ರಾಪ್ತವಾಯಿತು. ಸುಮಾರು ಐದು ವರ್ಷಗಳ ಕಾಯುವಿಕೆಯ ನಂತರ ಲಾಲಾ ಅಮರ್ ನಾಥ್ ನಾಯಕತ್ವಕ್ಕೆ ಪಾಕಿಸ್ತಾನ ವಿರುದ್ಧ ಗೆಲುವು ದೊರೆಯಿತು. ಈ ಸರಣಿಯಲ್ಲಿ ಭಾರತ ತಂಡ 2-1 ಅಂತರದಲ್ಲಿ ಗೆಲುವು ಪಡೆದು ಸರಣಿಯನ್ನು ಕೈವಶ ಮಾಡಿಕೊಂಡಿತು .ಹಾಗಾಗಿ ಲಾಲಾ ಅಮರ್ ನಾಥ್ ಪಾಲಿಗೆ ಇದು ಸ್ಮರಣೀಯ ಟೆಸ್ಟ್ ಸರಣಿ.

ಹೀಗೆ , ಲಾಲಾ ಅಮರ್ ನಾಥ್ 1933-34 ರಿಂದ 1952-53ರ ಅವಧಿಯಲ್ಲಿ ಇದುವರೆಗೆ 24 ಟೆಸ್ಟ್ ಪಂದ್ಯಗಳನ್ನು ಆಡಿದ್ದು , ಈ ಪೈಕಿ ಆಡಿದ 40 ಇನ್ನಿಂಗ್ಸ್ ಗಳಲ್ಲಿ 24.38ರ ಸರಾಸರಿಯಲ್ಲಿ 878 ರನ್ ಗಳಿಸಿದ್ದಾರೆ. 1 ಶತಕ ,4 ಅರ್ಧ ಶತಕಗಳು ಇದರಲ್ಲಿ ಸೇರಿವೆ. ಬೌಲಿಂಗ್ ನಲ್ಲೂ ಶ್ರೇಷ್ಠ ಪ್ರದರ್ಶನ ನೀಡಿರುವ ಇವರು 32.91ರ ಸರಾಸರಿಯಲ್ಲಿ 45 ವಿಕೆಟ್ ಪಡೆದಿದ್ದಾರೆ. ನಾಯಕರಾಗಿಯೂ ಲಾಲಾ ಅಮರ್ ನಾಥ್ ಭಾರತ ತಂಡವನ್ನು ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ ತಂಡಗಳ ವಿರುದ್ಧ ಮುನ್ನಡೆಸಿದ್ದಾರೆ . ಇವರು ಒಟ್ಟು 15 ಟೆಸ್ಟ್ ಪಂದ್ಯಗಳಲ್ಲಿ ನಾಯಕರಾಗಿದ್ದು, ಈ ಪೈಕಿ 2 ಟೆಸ್ಟ್ ಪಂದ್ಯಗಳಲ್ಲಿ ಗೆಲುವು, 6ರಲ್ಲಿ ಸೋಲು ಹಾಗೂ 7 ಟೆಸ್ಟ್ ಪಂದ್ಯಗಳು ಡ್ರಾ ಆಗಿವೆ . 184 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಇವರು 41.37ರ ಸರಾಸರಿಯಲ್ಲಿ 10,426 ರನ್ ಬಾರಿಸಿರುವರು. 31 ಶತಕ ಹಾಗೂ 59 ಅರ್ಧ ಶತಕಗಳು ಇದರಲ್ಲಿ ಸೇರಿವೆ. ಬೌಲಿಂಗ್ ನಲ್ಲಿ ಇವರು 22.98ರ ಸರಾಸರಿಯಲ್ಲಿ 463 ವಿಕೆಟ್ ಪಡೆದಿದ್ದಾರೆ.

ಬಹುಮುಖ ವ್ಯಕ್ತಿತ್ವ :
ಲಾಲಾ ಅಮರ್ ನಾಥ್ ಅವರದ್ದು ಬಹುಮಖ ವ್ಯಕ್ತಿತ್ವ. 1952ರಲ್ಲಿ ಇವರು ಪಾಕಿಸ್ತಾನ ತಂಡದ ವಿರುದ್ಧ ಕೊನೆಯ ಟೆಸ್ಟ್ ಸರಣಿಯನ್ನು ಆಡಿದ ಬಳಿಕ ಕ್ರಿಕೆಟಿಗೆ ಸಂಬಂಧಿಸಿದ ಅನೇಕ ಜವಾಬ್ದಾರಿಯುತ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.
1954-55ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡ ಮೊದಲ ಭಾರತೀಯ ತಂಡದ ವ್ಯವಸ್ಥಾಪಕರಾಗಿ ಇವರು ಕಾರ್ಯನಿರ್ವಹಿಸಿರುವರು. ಮುಂದೆ 1955ರಲ್ಲಿ ಭಾರತ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾದ ಲಾಲಾ ಅಮರ್‍ನಾಥ್ ಅನೇಕ ಪ್ರತಿಭಾನ್ವಿತ ಆಟಗಾರರನ್ನು ಭಾರತೀಯ ಕ್ರಿಕೆಟ್ ರಂಗಕ್ಕೆ ಪರಿಚಯಿಸಿರುವರು. ಇವರಿಗೆ ಮೂವರು ಪುತ್ರರು. ಮೊಹಿಂದರ್ ಅಮರ್ ನಾಥ್, ಸುರಿಂದರ್ ಅಮರ್‍ನಾಥ್ ಹಾಗೂ ರಾಜಿಂದರ್ ಅಮರ್‍ನಾಥ್. ಈ ಪೈಕಿ ಮೊಹಿಂದರ್ ಅಮರ್‍ನಾಥ್ ಮತ್ತು ಸುರಿಂದರ್ ಅಮರ್‍ನಾಥ್ ಭಾರತ ಕ್ರಿಕೆಟ್ ತಂಡದಲ್ಲಿ ಆಡಿದ್ದರೆ, ರಾಜಿಂದರ್ ಪ್ರಥಮ ದರ್ಜೆ ಕ್ರಿಕೆಟಿನಲ್ಲಿ ಆಡಿದ್ದರು. ಇವರು ಅದ್ಭುತ ಕ್ರಿಕೆಟ್ ಕೆರಿಯರನ್ನು ಗಮನಿಸಿ ಭಾರತ ಸರಕಾರ 1991ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಲಾಲಾ ಅಮರ್‍ನಾಥ್ ಕ್ರಿಕೆಟ್ ಜೀವಿತದ ದಿನಗಳಲ್ಲಿ ಅವರ ಕ್ರಿಕೆಟ್ ಆಟದ ಜನಪ್ರಿಯತೆಯು ರಾಷ್ಟ್ರೀಯ ಗಡಿಗಳನ್ನು ಮೀರಿತ್ತು ಮತ್ತು ವಿಭಜನೆಯ ತೀವ್ರತೆಯನ್ನು ಹೊಂದಿತ್ತು. ವಿಭಜನೆಗೆ ಮುಂಚಿನ ದಿನಗಳನ್ನು ಲಾಹೋರ್ ನಲ್ಲಿ ಕಳೆದ ಲಾಲಾ ಅಮರ್ ನಾಥ್ ಪಾಕಿಸ್ತಾನದಲ್ಲೂ ಜನಪ್ರಿಯರಾಗಿದ್ದರು. 2000ರ ಆಗಸ್ಟ್- 5ರಂದು ನವದೆಹಲಿಯ ನಿವಾಸದಲ್ಲಿ ಲಾಲಾ ಅಮರ್ ನಾಥ್ ನಿಧಾನರಾದರು. ಇವರು ಭಾರತೀಯ ಕ್ರಿಕೆಟ್ ರಂಗದ ಆರಂಭಿಕ ದಿನಗಳಲ್ಲಿ ಪ್ರೇರಕ ಶಕ್ತಿಯಾಗಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ.

Related Articles

Stay Connected

21,961FansLike
2,812FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!