11 C
New York
Thursday, May 13, 2021

Buy now

spot_img

ರಾಜ ಸಂಸ್ಥಾನದ ರಾಜಕುಮಾರ:ವಿಜಯ ಆನಂದ ವಿಜಯನಗರಂ (ವಿಜ್ಜಿ)ಗೆ ‘ನಾಯಕ ಪಟ್ಟ’

 

♦ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ.

ಭಾರತಕ್ಕೆ ಕ್ರಿಕೆಟ್ ಪರಿಚಯ ಇಂಗ್ಲೀಷರಿಂದಾದರೂ ಅದನ್ನು  ಬೆಳೆಸಿದ ಕೀರ್ತಿ ನಮ್ಮ ದೇಶದ ವಿವಿಧ ಸಂಸ್ಥಾನಗಳ ರಾಜ ಮಹಾರಾಜರುಗಳಿಗೆ ಸಲ್ಲುತ್ತದೆ. ಆರಂಭದಲ್ಲಿ ಕ್ರಿಕೆಟ್ ಆಟ ನೇರವಾಗಿ ಜನ ಸಾಮಾನ್ಯರಿಗೆ ತಲುಪಲಿಲ್ಲ . ಬ್ರಿಟಿಷರು ಪರಿಚಯಿಸಿದ ಕ್ರಿಕೆಟ್ ರಾಜ ಮಹಾರಾಜರ ಹಿಡಿತದೊಂದಿಗೆ ಭಾರತದಲ್ಲಿ ಹಂತ ಹಂತವಾಗಿ ಬೆಳವಣಿಗೆ ಸಾಧಿಸಿತು. 1932ರಲ್ಲಿ ಭಾರತೀಯ ಕ್ರಿಕೆಟ್ ತಂಡ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದಾಗ ತಂಡದ ನಾಯಕತ್ವ ವಹಿಸಲು ರಾಜಮನೆತನದ ರಾಜಕುಮಾರರು ತೀವ್ರ ಪೈಪೋಟಿ ನಡೆಸಿದ್ದರು. ಆದರೆ, ಅನಿರೀಕ್ಷಿತವಾಗಿ ನಡೆದ ವಿದ್ಯಮಾನದಿಂದ ಸಿ.ಕೆ.ನಾಯ್ಡು ಚೊಚ್ಚಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡರು.

ರಾಜ ಸಂಸ್ಥಾನಗಳ ರಾಜಕುಮಾರರ ರಾಜಕೀಯದ ದಾಳಕ್ಕೆ ಬಲಿಯಾದ ಸಿ.ಕೆ.ನಾಯ್ಡು ಬರೀ ನಾಲ್ಕು ಟೆಸ್ಟ್ ಪಂದ್ಯಗಳ ನಂತರ ಭಾರತ ತಂಡದ ನಾಯಕ ಪಟ್ಟದಿಂದ ಕೆಳಗಿಳಿಯ ಬೇಕಾಯಿತು. ಇದರ ಪರಿಣಾಮವಾಗಿ 1936ರ ಇಂಗ್ಲೆಂಡ್ ವಿರುದ್ಧದ ವಿದೇಶಿ ಟೆಸ್ಟ್ ಸರಣಿಗೆ ನಾಯಕನ ಆಯ್ಕೆಯ ವಿಷಯದಲ್ಲಿ ಬ್ರಿಟಿಷ್ ಸರ್ಕಾರ ತನ್ನ ಅಲ್ಪ ಬುದ್ದಿ, ಜೊತೆಗೆ ರಾಜಕೀಯ ಬುದ್ದಿಯನ್ನು ತೋರಿಸಿ ಕ್ರಿಕೆಟಿನ ಗಂಧಗಾಳಿಯನ್ನೇ ತಿಳಿಯದಿದ್ದ ವಿಜಯನಗರಂ ಸಂಸ್ಥಾನದ ರಾಜಕುಮಾರ ವಿಜಯ ಆನಂದ ವಿಜಯನಗರಂ (ವಿಜ್ಜಿ) ಅವರಿಗೆ ಭಾರತ ಕ್ರಿಕೆಟ್ ತಂಡದ ನಾಯಕ ಪಟ್ಟ ನೀಡಿತು. ಹೀಗೆ ವಿಜಯ ಆನಂದ ವಿಜಯನಗರಂ ಭಾರತ ಟೆಸ್ಟ್ ಕ್ರಿಕೆಟ್ ನಾಯಕರ ಪರಂಪರೆಯ ಎರಡನೇ ನಾಯಕ ಎನ್ನುವ ದಾಖಲೆ ಪಟ್ಟಿಗೆ ಸೇರ್ಪಡೆಗೊಂಡರು.

ಭಾರತ ಕ್ರಿಕೆಟ್ ಇತಿಹಾಸದಲ್ಲಿ ಪ್ರಪ್ರಥಮ ಎಂಬಂತೆ ಚಿತ್ರವಿಚಿತ್ರ ಸನ್ನಿವೇಶವೊಂದು ವಿಜಯ ಆನಂದ್ ನಾಯಕ ಪಟ್ಟಕ್ಕೇರಿದಾಗ ದಾಖಲಾಯಿತು. ವಿಚಿತ್ರವೆಂದರೆ ಇಂಗ್ಲೆಂಡಿಗೆ ಹೊರಟ 21 ಸದಸ್ಯರ ಭಾರತ ತಂಡದಲ್ಲಿ ಉಪನಾಯಕನಾಗಲಿ, ಆಯ್ಕೆ ಮಂಡಳಿಯಾಗಲಿ ಅಥವಾ ಸಲಹಾ ಮಂಡಳಿಯಾಗಲಿ ಯಾವುದೂ ಇರದೆ , ಎಲ್ಲ ನಿರ್ಣಯವೂ ನಾಯಕ ವಿಜಯ ಆನಂದ ವಿಜಯನಗರಂ ಅವರ ನಿರ್ಧಾರಕ್ಕೆ ಒಳಪಟ್ಟಿತ್ತು. ಮತ್ತೂ ವಿಶೇಷವೆಂದರೆ ‘ವಿಜ್ಜಿ ‘ ಅವರಿಗೆ ಕ್ರಿಕೆಟ್ ಆಡುವುದಿರಲಿ, ಮೈದಾನದಲ್ಲಿ ಆಟಗಾರರನ್ನು ಯಾವ ಸ್ಥಾನದಲ್ಲಿ ನಿಲ್ಲಿಸಬೇಕು , ಬ್ಯಾಟ್ಸ್ ಮನ್ ಅಥವಾ ಬೌಲರುಗಳನ್ನು ಯಾವ ಕ್ರಮಾಂಕದಲ್ಲಿ ಆಡಿಸಬೇಕು ಎನ್ನುವ ತೀರ ಅಗತ್ಯವಾದ ಪ್ರಾಥಮಿಕ ಸಂಗತಿಗಳೂ ಕೂಡ ನಾಯಕ ‘ ವಿಜ್ಜಿ ‘ ಅವರಿಗೆ ತಿಳಿದಿರಲಿಲ್ಲ. ಹಾಗಾಗಿ ಭಾರತಕ್ಕಾಗಿ ಆಡಿದ ಅತ್ಯಂತ ವಿವಾದಾತ್ಮಕ ಕ್ರಿಕೆಟಿಗ ಹಾಗೂ ಒಬ್ಬ ವಿವಾದಾತ್ಮಕ ಭಾರತೀಯ ನಾಯಕರಾದರು.

ಮೂಲತಃ ಆಂಧ್ರ ಪ್ರದೇಶದ ವಿಜಯನಗರಂ ಸಂಸ್ಥಾನದ ರಾಜಕುಮಾರರಾಗಿದ್ದ ‘ವಿಜ್ಜಿ’ ಜನಿಸಿದ್ದು 1905ರ ಡಿಸೆಂಬರ್-25ರಂದು . ಆಂಧ್ರದಲ್ಲೇ ತನ್ನ ಬಾಲ್ಯ ಹಾಗೂ ಪ್ರೌಢ ಜೀವನವನ್ನು ಕಳೆದ ‘ವಿಜ್ಜಿ’ ಒಬ್ಬ ಕ್ರಿಕೆಟ್ ಪ್ರೇಮಿ. ತುಂಬಾ ಶ್ರೀಮಂತರಾಗಿದ್ದ ಇವರು ಕ್ರಿಕೆಟ್ ಪೋಷಣೆರು ಆಗಿದ್ದರು. ತಮ್ಮ ವಿಜಯನಗರಂ ಸಂಸ್ಥಾನದಲ್ಲಿ ತಮ್ಮ ಸೋದರರ ಮಕ್ಕಳಿಂದ ತೊಂದರೆಗೆ ಸಿಲುಕಿದ ಇವರು ವಾರಣಾಸಿಗೆ ಹೋಗಿ ನೆಲೆಸಿದರು. ನಂತರ ಬ್ರಿಟಿಷ್ ಅಧಿಕಾರಿಗಳೊಂದಿಗೆ ಸ್ನೇಹ ಸಂಪಾದಿಸಿ ತಮ್ಮ ಶಕ್ತಿ ಹಾಗೂ ಪ್ರಭಾವವನ್ನು ಬಳಸಿಕೊಂಡು ಭಾರತ ತಂಡದ ನಾಯಕತ್ವ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದರು.

ಭಾರತದಲ್ಲಿ ಆಗ ವೈಸರಾಯ್ ಆಗಿದ್ದ ಲಾರ್ಡ್ ವಿಲ್ಲಿಂಗ್ಟನ್ ಬೆಂಬಲ ಹಾಗೂ ಸ್ನೇಹದಿಂದ ಭಾರತದ ನಾಯಕರಾದ ‘ ವಿಜ್ಜಿ’ ತುಂಬಾ ಒರಟು ಸ್ವಭಾವದವರು. ಯಾರ ಮಾತು ಅವರಿಗೆ ನಗಣ್ಯ. ಹಾಗಾಗಿ ‘ವಿಜ್ಜಿ’ ನಾಯಕತ್ವದಲ್ಲಿ ಭಾರತ ತಂಡದ 1936ರ ಇಂಗ್ಲೆಂಡ್ ಪ್ರವಾಸ ಭಾರತದ ಪಾಲಿಗೆ ಅತ್ಯಂತ ಕಹಿ ಅನುಭವವನ್ನು ನೀಡಿದ್ದು ಮಾತ್ರವಲ್ಲ ನಗೆಪಾಟಲಿಗೆ ಗುರಿಯಾಯಿತು. ಸಿ.ಕೆ.ನಾಯ್ಡು, ಲಾಲಾ ಅಮರ್ ನಾಥ್ ಅವರಂತಹ ಶ್ರೇಷ್ಠ ಆಟಗಾರರು ತಂಡದಲ್ಲಿದ್ದರೂ ಒಂದೇ ಒಂದು ಪ್ರಥಮ ದರ್ಜೆ ಪಂದ್ಯದಲ್ಲೂ ನಾಯಕನಾಗಲೂ ಅರ್ಹತೆ ಹೊಂದಿರದ ‘ವಿಜ್ಜಿ’ ನಾಯಕತ್ವದಲ್ಲಿ ಆಡುವ ದುರ್ಗತಿ ಭಾರತ ತಂಡದ್ದು ಆಗಿತ್ತು. ಇವರ ನಾಯಕತ್ವದಲ್ಲಿ ಭಾರತ ತಂಡ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರ ಪೈಕಿ ಎರಡರಲ್ಲಿ ಸೋಲು ಹಾಗೂ ಒಂದು ಟೆಸ್ಟ್ ‘ಡ್ರಾ’ ದಲ್ಲಿ ಮುಕ್ತಾಯಗೊಂಡಿತ್ತು.
1936ರ ಇಂಗ್ಲೆಂಡ್ ಪ್ರವಾಸದಲ್ಲಿ ನಾಯಕ ವಿಜ್ಜಿ ತಂಡದ ಆಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲೂ ವಿಫಲರಾಗಿದ್ದರು. ತಂಡದ ಸಹ ಆಟಗಾರರೊಂದಿಗೆ ಜಗಳವಾಡಿದ್ದು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕಠೋರವಾಗಿದೆ. ‘ವಿಜ್ಜಿ’ ಅವರ ಕ್ರಿಕೆಟಿಂಗ್ ಕುಶಾಗ್ರಮತಿ ಲಾಲಾ ಅಮರ್ ನಾಥ್ ಮತ್ತು ಸಿ.ಕೆ ನಾಯ್ಡು ಅವರಿಗಿಂತ ಕೆಳಮಟ್ಟದ್ದಾಗಿತ್ತು.

ಅವರು ಲಾಲಾ ಅಮರ್ ನಾಥ್ ಅವರನ್ನು ಅಶಿಸ್ತಿಗಾಗಿ ಇಂಗ್ಲೆಂಡ್ ಪ್ರವಾಸದ ಮಧ್ಯೆದಲ್ಲೇ ಸ್ವದೇಶಕ್ಕೆ ಕಳುಹಿಸಿದ್ದರು. ಇನ್ನು ಸಿ.ಕೆ.ನಾಯ್ಡು ಅವರೊಂದಿಗೆ ಜಗಳವಾಡಿ ಅವರನ್ನು ತಂಡದಿಂದ ಬೇರ್ಪಡಿಸಲು ವಿಜ್ಜಿ ಪ್ರಯತ್ನಿಸಿದರು. ಇದು ಇಂಗ್ಲೆಂಡ್ ಪ್ರವಾಸದಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ನಡೆದ ಕಹಿ ಘಟನೆ.
ಕ್ರೀಡಾ ಪ್ರೇಮಿ :
ವಿಜಯ ಆನಂದ ವಿಜಯನಗರಂ ಅವರ ಸ್ವಭಾವ ಏನೇ ಆದರೂ ಅವರೊಬ್ಬ ಪಕ್ಕಾ ಕ್ರೀಡಾ ಪ್ರೇಮಿಯಾಗಿದ್ದರು. ಅವರು ಇಂಗ್ಲೆಂಡಿನ ಇಂಪೀರಿಯಲ್ ಸರ್ವಿಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಟೆನಿಸ್ ಹಾಗೂ ಕ್ರಿಕೆಟ್ ಬಗ್ಗೆ ಬಹು ಒಲವು ಬೆಳೆಸಿಕೊಂಡವರು. ವಿದ್ಯಾಭ್ಯಾಸ ಮುಗಿಸಿ ಸ್ವದೇಶಕ್ಕೆ ಬಂದ ನಂತರ 1922ರಲ್ಲಿ ಅವರು ಕ್ರಿಕೆಟ್ ತಂಡವೊಂದನ್ನು ಸಂಘಟಿಸಿ, ತನ್ನ ಸಂಸ್ಥಾನಕ್ಕೆ ಒಳಪಟ್ಟ ಸ್ಥಳದಲ್ಲೇ ಒಂದು ಕ್ರಿಕೆಟ್ ಮೈದಾನವನ್ನು ಕೂಡ ‘ ವಿಜ್ಜಿ ‘ ನಿರ್ಮಿಸಿದ್ದರು. ಮಾತ್ರವಲ್ಲ ತನ್ನ ತಂಡದಲ್ಲಿ ಆಗಿನ ಇಂಗ್ಲೆಂಡಿನ ಹೆಸರಾಂತ ಆಟಗಾರರಾದ ಜಾಕ್ ಹಾಬ್ಸ್ ಹಾಗೂ ಹರ್ಬಟ್ ಸಟ್ ಕ್ಲಿಫ್ ಅವರನ್ನು ಸದಸ್ಯರನ್ನಾಗಿ ಮಾಡಿಕೊಂಡಿದ್ದರು.

‘ವಿಜ್ಜಿ’ ಅವರೊಬ್ಬ ಸಮರ್ಥ ಆಟಗಾರನಾಗಿ ಮತ್ತು ನಾಯಕನಾಗಿ ಗುರುತಿಸಿಕೊಳ್ಳಲು ವಿಫಲರಾದರೂ ಕೂಡ ಒಬ್ಬ ಕ್ರಿಕೆಟ್ ಪ್ರೇಮಿಯಾಗಿ ಅವರು ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಗುರುತಿಸಿಕೊಂಡರು . ಹಲವು ಯುವ ಕ್ರಿಕೆಟ್ ಪ್ರತಿಭೆಗಳಿಗೆ ಪೆÇ್ರೀತ್ಸಾಹ ನೀಡಿದ್ದು ಮಾತ್ರವಲ್ಲ ಅವರುಗಳ ಉನ್ನತ ತರಬೇತಿಗೆ ವಿಜ್ಜಿ ನೆರವಾಗಿದ್ದರು.1934ರಲ್ಲಿ ರಾಷ್ಟ್ರೀಯ ಕ್ರಿಕೆಟ್ ಚಾಂಪಿಯನ್ ಶಿಪ್ ಆರಂಭವಾದಾಗ ತನ್ನ ಸ್ನೇಹಿತ ಲಾರ್ಡ್ ವಿಲ್ಲಿಂಗ್ಟನ್ ಹೆಸರಿನಲ್ಲಿ ಚಿನ್ನದ ಟ್ರೋಫಿಯನ್ನು ನೀಡಿ ಕ್ರಿಕೆಟನ್ನು ಷಿಸಿದರು.

ಭಾರತೀಯ ಕ್ರಿಕೆಟ್ ತಂಡದ ನಾಯಕತ್ವದಿಂದ ನಿರ್ಗಮಿಸಿದ ನಂತರ ವಿಜ್ಜಿ ಅವರು ಕ್ರಿಕೆಟ್ ಆಡಳಿತಗಾರರಾಗಿ ಪುನರಾಗಮನ ಮಾಡಿದರು. 1949-50ರ ವರೆಗೆ ಭಾರತದ ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷರಾಗಿ, ನಂತರ 1954 ರಿಂದ 1957ರವರೆಗೆ ಅಧ್ಯಕ್ಷರಾಗಿಯೂ ಅವರು ಕಾರ್ಯ ನಿರ್ವಹಿಸಿದರು. ಕಾನ್ಪುರವನ್ನು ಟೆಸ್ಟ್ ಕೇಂದ್ರವನ್ನಾಗಿ ರೂಪಿಸಿ ಉತ್ತರಪ್ರದೇಶದ ಕ್ರಿಕೆಟ್ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇವರು ಬಿಬಿಸಿ ರೇಡಿಯೋ ಕ್ರಿಕೆಟ್ ಕಾಮೆಂಟೇಟರ್ ಆಗಿಯೂ ಗುರುತಿಸಿ ಕೊಂಡಿದ್ದರು. ಇವರು ಭಾರತದಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಶ್ರಮಿಸಿರವುದನ್ನು ಗುರುತಿಸಿ ಭಾರತ ಸರ್ಕಾರ 1958ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿತು. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಎರಡನೇ ಕ್ರಿಕೆಟಿಗ ಎನ್ನುವ ಶ್ರೇಯಕ್ಕೂ ವಿಜ್ಜಿ ಪಾತ್ರರಾಗಿದ್ದರು.

ವಿಜ್ಜಿ ಅವರು ಭಾರತ ಕ್ರಿಕೆಟ್ ತಂಡದಲ್ಲಿ ಆಡಿದ್ದು ಹಾಗೂ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದು ಬರೀ ಮೂರು ಟೆಸ್ಟ್ ಪಂದ್ಯಗಳಲ್ಲಿ. ಆದರೂ ಅವರ ಹೆಸರು ಭಾರತೀಯ ಕ್ರಿಕೆಟ್ ರಂಗದಲ್ಲಿ ಅಜಾರಾಮರವಾಗಿದೆ. 1965ನೇ ಡಿಸೆಂಬರ್-2ರಂದು ವಿಜ್ಜಿ ಅವರು ನಿಧನರಾದ ಬಳಿಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 1966-67ನೇ ಸಾಲಿನಿಂದ ಇವರ ಹೆಸರಿನಲ್ಲಿ 19ವರ್ಷದ ವಯೋಮಿತಿಯವರಿಗೆ ‘ವಿಜ್ಜಿ ಟ್ರೋಫಿ’ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಿದ್ದು, ಇದು ಈಗಲೂ ನಡೆಯುತ್ತಿದೆ. ಕ್ರಿಕೆಟಿಗರಾಗಿ ಹಾಗೂ ನಾಯಕರಾಗಿ ಅವರು ಭಾರತೀಯ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಮುಜುಗರವನ್ನು ತಂದಿದ್ದರು ಕೂಡ ಕ್ರಿಕೆಟ್ ಪೋಷಣೆ ಯಲ್ಲಿ ಮಾತ್ರ ‘ವಿಜ್ಜಿ’ ಹೆಸರು ಭಾರತದಲ್ಲಿ ಜನಜನಿತ.

Related Articles

Stay Connected

21,925FansLike
2,763FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!