9.3 C
New York
Thursday, May 13, 2021

Buy now

spot_img

ಭಾರತ ಚೊಚ್ಚಲ ಟೆಸ್ಟ್ ಕ್ರಿಕೆಟ್‍ನ ಕ್ಯಾಪ್ಟನ್ ಯಾರು ಗೊತ್ತಾ? ನಾಯಕತ್ವಕ್ಕೆ ಇಬ್ಬರು ಮಹಾರಾಜರ ಸ್ಪರ್ಧೆಯಲ್ಲಿ ಲಾಭವಾಗಿದ್ದು ಯಾರಿಗೆ ?

 

   ♦ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ.


ಕ್ರಿಕೆಟ್ ಬಹು ಸೊಗಸಾದ ಆಟ. ಈ ಆಟವನ್ನು ಭಾರತಕ್ಕೆ ಪರಿಚಯಿಸಿದರು ಬ್ರಿಟಿಷರು. ಕ್ರಿಕೆಟ್ ಆಟವನ್ನು ಕಲಿಸಿದ ಬ್ರಿಟಿಷರ ವಿರುದ್ಧವೇ ಭಾರತ ತಂಡ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದು ಕೂಡ ಅಷ್ಟೇ ಕುತೂಹಲ. 19ನೇ ಶತಮಾನದ ಕೊನೆಯಲ್ಲಿ  ಜಾಗತಿಕವಾಗಿ ಒಂದು ಚೌಕಟ್ಟಿನೊಳಗೆ ಬಂದ ಕ್ರಿಕೆಟ್,  ಭಾರತದಲ್ಲಿ ಪರಿಚಯಿಸಲ್ಪಟ್ಟಿದ್ದು 20ನೇ ಶತಮಾನದ ನಾಲ್ಕನೇ ದಶಕದಲ್ಲಿ. ಹೌದು, ದೇಶಕ್ಕೆ ಸ್ವಾತಂತ್ರ್ಯ  ಬರುವುದಕ್ಕೆ 15 ವರ್ಷಗಳ ಮೊದಲೇ ಅಂದರೆ 1932ರಲ್ಲಿ ಭಾರತದಲ್ಲಿ ಟೆಸ್ಟ್ ಕ್ರಿಕೆಟ್ ಆರಂಭವಾಯಿತು.

ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ನಡುವೆ ಅವರ ಅಧೀನದಲ್ಲಿದ್ದ ರಾಜ ಮಹಾರಾಜರ ಹಿಡಿತ ಕೂಡ ಕ್ರಿಕೆಟ್ ನಲ್ಲಿ ಜೋರಾಗಿತ್ತು . ಕ್ರಿಕೆಟಿನ ಗಂಧಗಾಳಿಯೂ ಗೊತ್ತಿಲ್ಲದ ರಾಜಮನೆತನದ ಮಹಾರಾಜರು ಇತಿಹಾಸದ ಮೊದಲ ಟೆಸ್ಟ್ ಪಂದ್ಯವನ್ನು ಮುನ್ನಡೆಸುವ ಭಾರತ ತಂಡದ ನಾಯಕರಾಗಲು ಬಯಸಿದರು. ಮಹಾರಾಜಾ ಆಫ್ ಪೆÇೀರ್ ಬಂದರ್ ಹಾಗೂ ಘನಶ್ಯಾಮ ಸಿಂಹ ಆಫ್ ಲಿಂಬ್ಡಿ  ನಾಯಕತ್ವಕ್ಕೆ ಸ್ಪರ್ಧಿಗಳಾಗಿದ್ದರು. ಆದರೆ ಇಬ್ಬರ ಜಗಳ ಮೂರನೇಯವರಿಗೆ ಲಾಭ ಎಂಬ ಗಾದೆ ಮಾತಿನಂತೆ  ಇಬ್ಬರು ಮಹಾರಾಜರು ನಾಯಕತ್ವಕ್ಕೆ ನಡೆಸಿದ ಸ್ಪರ್ಧೆಯಿಂದ ಕೊನೆಗೆ ಲಾಭವಾದದ್ದು ಮೂರನೇ ವ್ಯಕ್ತಿ  ಕೊಟಾರಿ ಕನಕಯ್ಯ ನಾಯ್ಡು (ಸಿ.ಕೆ.ನಾಯ್ಡು) ಅವರಿಗೆ.

ಹೌದು, ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸ ಸಿ.ಕೆ.ನಾಯ್ಡು ಅವರ ನಾಯಕತ್ವದಿಂದ ಆರಂಭಗೊಂಡಿತು. ಹಾಗಾಗಿ ಸಿ.ಕೆ.ನಾಯ್ಡು ಭಾರತದ ಚೊಚ್ಚಲ ಟೆಸ್ಟ್ ಕ್ರಿಕೆಟ್ ತಂಡದ ಕ್ಯಾಪ್ಟನ್.   1932ರ  ಜೂನ್-25ರಂದು ‘ಕ್ರಿಕೆಟ್ ಕಾಶಿ’ ಲಾರ್ಡ್ಸ್ ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡಿತ. ಈ ಟೆಸ್ಟ್ ಪಂದ್ಯದಲ್ಲಿ  ಸಿ.ಕೆ.ನಾಯ್ಡು ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ ಜೊತೆಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿ ಇತಿಹಾಸ ಬರೆದರು. ಆಗ ಸಿ.ಕೆ.ನಾಯ್ಡು ಅವರಿಗೆ 37 ವರ್ಷ. ಆದರೆ, ಅವರಲ್ಲಿ ಫಿಸಿಕಲ್ ಫಿಟ್ ನೆಸ್ ಅಸಾಧಾರಣವಾಗಿತ್ತು.  ಈ ಟೆಸ್ಟ್ ಪಂದ್ಯದಲ್ಲಿ ಕೈಗೆ ಪೆಟ್ಟು ಮಾಡಿಕೊಂಡರೂ ಕೂಡ ಸಿ.ಕೆ.ನಾಯ್ಡು 40ರನ್ ಗಳಿಸಿ ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮಾತ್ರವಲ್ಲ ಈ ಮೊದಲ ಟೆಸ್ಟ್ ಪಂದ್ಯದಲ್ಲೇ ಅವರೊಬ್ಬ ಪಕ್ಕಾ ಆಲ್ರೌಂಡರ್ ಎನ್ನುವುದು ಕೂಡ ಕ್ರಿಕೆಟ್ ಜಗತ್ತಿಗೆ  ಸಾಬೀತಾಯಿತು. ಅವರು ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಎರಡು ವಿಕೆಟ್ ಪಡೆದು ಮಿಂಚಿದರು.

ಅದ್ಭುತ ಪ್ರತಿಭೆ :

ರಾಜ ಮಹಾರಾಜರಿಂದಾಚೆ ಬೆಳೆದ ಭಾರತದ ಟೆಸ್ಟ್ ಕ್ರಿಕೆಟಿನ ನಾಯಕತ್ವದ ಪರಂಪರೆಗೆ ನಾಂದಿಯಾಡಿದ ಸಿ.ಕೆ.ನಾಯ್ಡು ಅದ್ಭುತ ಪ್ರತಿಭೆಯ ಆಟಗಾರ. ಇವರು ಕರ್ನಲ್ ಶ್ರೇಣಿಯ ಆರ್ಮಿ ಆಫೀಸರ್ ಆಗಿದ್ದವರು. ಇವರದ್ದು ಬಹುಮುಖ ಪ್ರತಿಭೆ . ಟೆನಿಸ್, ಟೇಬಲ್ ಟೆನಿಸ್, ಬಿಲಿಯರ್ಡ್ಸ್ ಗಳಲ್ಲದೆ ಹಾಕಿಯಲ್ಲೂ ಇವರು ಫಾರ್ವರ್ಡ್ ಆಟಗಾರರಾಗಿದ್ದರು. ಇವರು ಚೊಚ್ಚಲ ಟೆಸ್ಟ್ ಕ್ರಿಕೆಟ್  ನಾಯಕತ್ವದ  ಪಂದ್ಯದಲ್ಲಿ  ಸೋಲನ್ನು ಕಂಡರೂ ಕೂಡ ಅವರ ವೈಯಕ್ತಿಕ ಆಟ ಕ್ರಿಕೆಟ್ ಪಂಡಿತರಿಂದ ಭಾರೀ ಪ್ರಶಂಸೆಗೆ ಪಾತ್ರವಾಯಿತು. ಮುಖ್ಯವಾಗಿ ಸಿ.ಕೆ.ನಾಯ್ಡು ಪ್ರಥಮ ದರ್ಜೆ ಕ್ರಿಕೆಟಿನಲ್ಲಿ ಹೆಚ್ಚು  ಜನಪ್ರಿಯ ಆಟಗಾರರಾಗಿದ್ದರು. ನಾಗ್ಪುರದ ಶಿಕ್ಷಣ ಹಾಗೂ ಕ್ರೀಡಾ ಪ್ರಿಯ ಕುಟುಂಬದಲ್ಲಿ 1895ರ ಅಕ್ಟೋಬರ್-31ರಂದು ಜನಿಸಿದ ಇವರು ಬಾಲ್ಯದಲ್ಲೇ ಉತ್ತಮ  ಕ್ರೀಡಾ ಮನೋಭಾವದ ಬಾಲಕರಾಗಿದ್ದರು.

ಶಾಲಾ ದಿನಗಳಲ್ಲಿ ಬೆಳೆದ ಕ್ರಿಕೆಟ್ ಹುಚ್ಚು ಮುಂದೆ ಸಿ.ಕೆ.ನಾಯ್ಡು ಅವರನ್ನು ಭಾರತ ತಂಡದ ಖ್ಯಾತ ಆಟಗಾರರನ್ನಾಗಿ ರೂಪಿಸಿತು. ಇವರು ಆಕ್ರಮಣಕಾರಿ ಬ್ಯಾಟ್ಸ್ ಮನ್ ಆಗಿ ಗುರುತಿಸಿ ಕೊಂಡವರು. ಇದಕ್ಕೆ ಉತ್ತಮ ಉದಾಹರಣೆ ಅವರು ಪ್ರಥಮ ದರ್ಜೆ ಕ್ರಿಕೆಟ್ ಜೀವನದ ಪ್ರಥಮ ರನ್ ಬಾರಿಸಿದ್ದು ಸಿಕ್ಸರ್ ಮೂಲಕ. ಬಲಗೈ ಬ್ಯಾಟ್ಸ್ ಮನ್ ಹಾಗೂ ಬಲಗೈ ಸ್ಲೋ ಮೀಡಿಯಂ  ಬೌಲರ್ ಆಗಿದ್ದ ಇವರು ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದು 1916ರಲ್ಲಿ. ಉತ್ತಮ ಟೈಮಿಂಗ್ ನಲ್ಲಿ ಲೇಟ್ ಕಟ್, ಲೆಗ್ ಗ್ಲಾನ್ಸ್ ಹಾಗೂ ಶಕ್ತಿಯುತ ಮುಂಗೈ ಹೊಡೆತಗಳು ಅಂದು ಅವರನ್ನು ಕ್ರಿಕೆಟಿನ ಉನ್ನತ ಶಿಖರಕ್ಕೇರಲು ಸಹಕಾರಿಯಾಯಿತು. 1916ರಿಂದ 1932ರ ಅವಧಿಯಲ್ಲಿ ಇವರು ಪ್ರಥಮ ದರ್ಜೆ ಕ್ರಿಕೆಟಿನಲ್ಲಿ ರನ್ ಗುಡ್ಡೆಯನ್ನೇ ನಿರ್ಮಿಸಿದ್ದರು.

1932ರಲ್ಲಿ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆಗೈದು ನಾಯಕತ್ವವನ್ನು ವಹಿಸಿದ್ದ ಸಿ.ಕೆ.ನಾಯ್ಡು ಅವರಿಗೆ  ಮುಂದೆ 1933-34ರಲ್ಲಿ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡಾಗ ಭಾರತ ತಂಡವನ್ನು  ಮತ್ತೆ ಮುನ್ನಡೆಸುವ ಅವಕಾಶ ದೊರೆಯಿತು. 40ರ ಅಂಚಿನಲ್ಲಿದ್ದ ನಾಯ್ಡು ಅವರಿಗೆ ಮತ್ತೆ ನಾಯಕತ್ವ ನೀಡಿದ್ದು ತಂಡದೊಳಗೆ ಅಸಮಾಧಾನದ ಹೊಗೆಯಾಡಿತು. ಇದರಿಂದಾಗಿ ಭಾರತ ತಂಡ  ಈ ಸರಣಿಯಲ್ಲಿ  ಆಡಿದ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಸೋಲು ಹಾಗೂ ಒಂದು ಪಂದ್ಯವನ್ನು ಡ್ರಾ ಗೊಳಿಸಿ 2-1 ರ ಸರಣಿ ಸೋಲನ್ನು ಕಂಡಿತ್ತು.  ಈ ಸರಣಿಯಲ್ಲಿ ಸಿ.ಕೆ. ನಾಯ್ಡು ರನ್ ಗಳಿಕೆಯಲ್ಲಿ  ಅಗ್ರಸ್ಥಾನಿಯಾಗಿ ಹೊರ ಹೊಮ್ಮಲು ಸಾಧ್ಯವಾಗಲಿಲ್ಲ. ಕಾರಣ, ಈ ಸರಣಿಯಲ್ಲಿ ಲಾಲಾ ಅಮರ್ ನಾಥ್ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆಗೈದು ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ (ಬಾಂಬೆ ಟೆಸ್ಟ್) ಶತಕ ಬಾರಿಸಿ ವಿಜೃಂಭಿಸಿದರು. ಈ ಸರಣಿಯಲ್ಲಿ ನಾಯ್ಡು 26.66ರ ರನ್ ಸರಾಸರಿಯೊಂದಿಗೆ 160 ರನ್ ಗಳಿಸಿ, 3 ವಿಕೆಟ್ ಪಡೆದಿದ್ದರು.

ಒಲಿದು ಬಂದ ‘ವಿಸ್ಡನ್’ ಪ್ರಶಸ್ತಿ:

ಸಿ.ಕೆ. ನಾಯ್ಡು ನಾಯಕತ್ವದಲ್ಲಿ1932ರಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ
ಸಿ.ಕೆ. ನಾಯ್ಡು ನಾಯಕತ್ವದಲ್ಲಿ1932ರಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ

ಸಿ.ಕೆ. ನಾಯ್ಡು ಪಾಲಿಗೆ 1933ನೇ ವರ್ಷ  ಸ್ಮರಣೀಯ ವರ್ಷ. ಆ ಕ್ರಿಕೆಟ್ ಋತುವಿನಲ್ಲಿ ಅವರು ಆಡಿದ ಟೆಸ್ಟ್ ಹಾಗೂ ಪ್ರಥಮ ದರ್ಜೆ ಕ್ರಿಕೆಟಿನಲ್ಲಿ 1000ರನ್ ಪೂರೈಸಿದ್ದು  ಮಾತ್ರವಲ್ಲ 51ವಿಕೆಟ್ ಕಬಳಿಸುವಲ್ಲೂ ಯಶಸ್ವಿಯಾಗಿದ್ದರು. ಸಿ.ಕೆ.ನಾಯ್ಡು ಅವರ ಈ ಆಲ್ರೌಂಡರ್ ಆಟ ಭಾರತದಲ್ಲಷ್ಟೇ ಅಲ್ಲ , ಇಂಗ್ಲೆಂಡ್ ಕ್ರಿಕೆಟ್ ಪ್ರೇಮಿಗಳ ಮನಸ್ಸನ್ನು ಸೂರೆಗೊಂಡಿತ್ತು. ಅವರ ಆಕ್ರಮಣಕಾರಿ ಬ್ಯಾಟಿಂಗ್, ಅಟ್ಯಾಕಿಂಗ್ ಬೌಲಿಂಗ್,  ಚುರುಕಿನ ಫೀಲ್ಡಿಂಗ್ ಹಾಗೂ ಚಾಕಚಕ್ಯತೆಯ ನಾಯಕತ್ವಕ್ಕೆ  ಕ್ರಿಕೆಟ್ ಜನಕರು ‘ಫಿದಾ’ ಆದರು. ಇವರ ಅದ್ಭುತ ಆಟಕ್ಕೆ ‘ಶಹಬ್ಬಾಸ್’ ಎಂದ ಕ್ರಿಕೆಟ್ ಆಫ್ ಇಂಗ್ಲೆಂಡ್ ಪ್ರಖ್ಯಾತ ‘ವಿಸ್ಡನ್’  ವಿಶ್ವ ಶ್ರೇಷ್ಠ ಕ್ರಿಕೆಟ್ ಪ್ರಶಸ್ತಿಗೆ ಆಯ್ಕೆ ಮಾಡಿ ಅಭಿನಂದಿಸಿದ್ದು ಸಿ.ಕೆ.ನಾಯ್ಡು ಅವರಿಗೆ ದೊರೆತ ಮಹಾನ್ ಗೌರವ.

1933-34ರಲ್ಲಿ ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ಧದ ನಡೆದ ಟೆಸ್ಟ್ ಸರಣಿ ಸೋಲು ಸಿ.ಕೆ.ನಾಯ್ಡು ಅವರ ನಾಯಕತ್ವವನ್ನು ಪ್ರಶ್ನಿಸುವಂತಾಯಿತು. ಆಗಲೇ ಭಾರತ ತಂಡದಲ್ಲಿ ಗುಂಪುಗಾರಿಕೆ ಶುರುವಾಯಿತು. ‘ಭೋಪಾಲ್ ಗುಂಪು’, ‘ಪಾಟಿಯಾಲಾ ಗುಂಪು’ ಹಾಗೂ ‘ಕಾಥೇವಾರ್ ಗುಂಪು’ ಗಳೆಂಬ ಲಾಬಿಯ ನಡುವೆ ಸಿ.ಕೆ.ನಾಯ್ಡು ನಾಯಕತ್ವ ಸೊರಗಿತು. ಇದರಿಂದಾಗಿ 1936ರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಿ.ಕೆ. ನಾಯ್ಡು  ಬದಲಿಗೆ ಮಹಾರಾಜಾ ಆಫ್ ವಿಜಯನಗರಂ ಭಾರತ ತಂಡದ ನಾಯಕರಾದರು. ಆದರೆ, ತಂಡದಲ್ಲಿ ಸ್ಥಾನ ಪಡೆದಿದ್ದ ಸಿ.ಕೆ.ನಾಯ್ಡು ಇಂಗ್ಲೆಂಡ್ ಪ್ರವಾಸದಲ್ಲಿ ಆಡಿದ 3 ಟೆಸ್ಟ್ ಪಂದ್ಯಗಳಲ್ಲಿ 23.33ಸರಾಸರಿಯಲ್ಲಿ 140 ರನ್ ಗಳಿಸಿದರು. ಈ ಸರಣಿಯಲ್ಲಿ ನಾಯ್ಡು ಆಟದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿತ್ತು. ಟೀಕೆಗಳ ನಡುವೆಯೂ ಅವರು 1936ರ ಸಾಲಿನಲ್ಲೂ ಇಂಗ್ಲೆಂಡಿನಲ್ಲಿ  ಪ್ರಥಮ ದರ್ಜೆ ಪಂದ್ಯಗಳು ಸೇರಿ ಒಟ್ಟಾರೆಯಾಗಿ ಎರಡನೇ ಬಾರಿ 1000 ರನ್ ಪೂರೈಸಿದ ಸಾಧನೆಗೈದರು.

ರಾಜಕೀಯಕ್ಕೆ ಬಲಿ:

ತಂಡದ ರಾಜಕೀಯ ಪರಾಕಾಷ್ಟೇವನ್ನೇರಿದ ಹೊತ್ತಿನಲ್ಲಿ ಸಿ.ಕೆ.ನಾಯ್ಡು ತಂಡಕ್ಕೆ ಬೇಡವಾದರು. ಬಾಂಬೆಯಲ್ಲಿ ನಡೆದ ಲಾರ್ಡ್ಸ್ ಇಲೆವೆನ್ ಪಂದ್ಯದಲ್ಲಿ ನಾಯ್ಡು ಅವರಿಗೆ ಭಾರತ ತಂಡದಲ್ಲಿ ಆಡುವ ಅವಕಾಶ ನೀಡಿದ್ದರೂ ಪಂದ್ಯದ ದಿನ ಅವರನ್ನು ಕೈ ಬಿಡಲಾಯಿತು. ಇದರಿಂದ ಬೇಸರಗೊಂಡ ಅವರು ಮುಂದೆಂದೂ ಭಾರತ ತಂಡದ ಪರ ಆಡಲಿಲ್ಲ. ಆದರೆ, ಪ್ರಥಮ ದರ್ಜೆ ಕ್ರಿಕೆಟಿನಲ್ಲಿ ಅವರ ಆಟ ನಿರಂತರವಾಗಿ ಮುಂದುವರಿಯಿತು.  ಅವರ ಫಿಸಿಕಲ್ ಫಿಟ್ ನೆಸ್ ಬಗ್ಗೆ ಮಾತನಾಡಿದವರಿಗೆ ಅವರು ತಮ್ಮ 50ನೇ ವರ್ಷದಲ್ಲಿ ರಣಜಿ ಪಂದ್ಯವೊಂದರಲ್ಲಿ 200ರನ್ ಬಾರಿಸಿ ತಕ್ಕ  ಉತ್ತರ ನೀಡಿದರು.

57ನೇ ವರ್ಷದ ವರೆಗೆ ಪ್ರಥಮ ದರ್ಜೆ ಕ್ರಿಕೆಟಿನಲ್ಲಿ ನಿರಂತರವಾಗಿ ಕಾಣಿಸಿಕೊಂಡಿದ್ದ ಇವರು 1956-57ನೇ ಸಾಲಿನಲ್ಲಿ ಪ್ರಥಮ ದರ್ಜೆ ಕ್ರಿಕೆಟಿಗೆ ವಿದಾಯ ಹೇಳಿದಾಗ 61 ವರ್ಷ. ಇವರು 207 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿ  35.94ರ ಸರಾಸರಿಯಲ್ಲಿ 11825ರನ್ ಗಳಿಸಿರುವ ಇವರು 26 ಶತಕ ಹಾಗೂ 58 ಅರ್ಧಶತಕಗಳನ್ನು  ದಾಖಲಿಸಿರುವರು. ಬೌಲಿಂಗ್ ನಲ್ಲೂ ಉತ್ತಮ ಸಾಧನೆಗೈದಿರುವ ಇವರು 29.28ರ ಸರಾಸರಿಯಲ್ಲಿ 411 ವಿಕೆಟ್ ಪಡೆದಿದ್ದರು.

ಹೀಗೆ,  ‘ಕ್ರಿಕೆಟ್ಟೇ ನನ್ನ ಜೀವನ’ ಎನಿಸಿಕೊಂಡು ಬದುಕಿದ ಸಿ.ಕೆ.ನಾಯ್ಡು  ಕ್ರೀಡಾ ಬದುಕಿನ ನಿವೃತ್ತಿಯ ನಂತರ ಭಾರತೀಯ ಕ್ರಿಕೆಟ್ ತಂಡದ ಸೆಲೆಕ್ಷನ್ ಕಮಿಟಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಪಡೆದಿದ್ದರು. ಇವರು ಹಲವು ಪ್ರತಿಭಾನ್ವಿತ  ಆಟಗಾರರನ್ನು ಭಾರತೀಯ ಕ್ರಿಕೆಟ್ ರಂಗಕ್ಕೆ ಪರಿಚಯಿಸಿದರು. ಇವರಲ್ಲಿ ಮುಷ್ತಾಕ್ ಅಲಿ,  ವಿಜಯ್ ಮರ್ಚೆಂಟ್, ವಿಜಯ ಹಜಾರೆ , ಬಿ.ಬಿ. ನಿಂಬಾಳ್ಕರ್ ಪ್ರಮುಖರಾಗಿದ್ದರು. ಸಿ.ಕೆ.ನಾಯ್ಡು  ಭಾರತೀಯ  ಕ್ರಿಕೆಟ್ ರಂಗಕ್ಕೆ ನೀಡಿದ ಅನುಪಮ ಸೇವೆಯನ್ನು ಗುರುತಿಸಿ ಭಾರತ ಸರಕಾರ ಅವರಿಗೆ 1956ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಪುರಸ್ಕರಿಸಿದೆ . ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದ ಮೊದಲ ಕ್ರಿಕೆಟ್ ಆಟಗಾರ ಸಿ.ಕೆ.ನಾಯ್ಡು. ಭಾರತೀಯ ಕ್ರಿಕೆಟ್ ರಂಗದ ಅಭಿಜಾತ ಪ್ರತಿಭೆಯಾಗಿ ಗುರುತಿಸಿಕೊಂಡ ಇವರು 1967ರ ನವೆಂಬರ್-14ರಂದು ನಿಧನ ಹೊಂದಿದರು.

ಭಾರತದ ಕ್ರಿಕೆಟ್ ರಂಗದಲ್ಲಿ ಸಿ.ಕೆ.ನಾಯ್ಡು ಹೆಸರು ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದೆ. ಭಾರತವೇ ಗುರುತಿಸಿದ ಮೊತ್ತ ಮೊದಲ ‘ರಾಷ್ಟ್ರೀಯ- ಅಂತಾರಾಷ್ಟ್ರೀಯ ಆಟಗಾರ’ನೆನ್ನುವ ನೆಲೆಯಲ್ಲಿ  ಇವರ ಹೆಸರಿನಲ್ಲಿ 1973ರಿಂದ ಅಂಡರ್-25 ತಂಡಗಳ ನಡುವಿನ ರಾಷ್ಟ್ರೀಯ  ಸಿ.ಕೆ.ನಾಯ್ಡು  ಕ್ರಿಕೆಟ್ ಟೂರ್ನಿಯನ್ನು ಬಿಸಿಸಿಐ ವತಿಯಿಂದ ಪ್ರತಿ ವರ್ಷವೂ ನಡೆಸುತ್ತಿದೆ.  ಕ್ರಿಕೆಟನ್ನು ಪರಿಪೂರ್ಣವಾಗಿ ಒಂದು ಕ್ರೀಡೆಯನ್ನಾಗಿ ನೋಡಿದ  ಸಿ.ಕೆ.ನಾಯ್ಡು ಅವರಂತಹ ಮಹಾನ್ ಆಟಗಾರನಿಗೆ ಭಾರತೀಯ ಕ್ರಿಕೆಟ್ ರಂಗ ಸಮರ್ಪಿಸುತ್ತಿರುವ ಗೌರವ ಇದಾಗಿದೆ.

 

 

 

Related Articles

Stay Connected

21,925FansLike
2,763FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!